ಒಮ್ಮೆ ಒಬ್ಬ ಸೈನಿಕ ಒಬ್ಬ ಗುರುವನ್ನು ಭೇಟಿಯಾಗಿ-
“ಸ್ವರ್ಗ-ನರಕಗಳಿವೆಯೇ? ಅವು ಹೇಗಿವೆ?” ಎಂದು ಕೆಳುತ್ತಾನೆ.
ಆಗ ಗುರು-“ನಿನ್ನ ಉದ್ಯೋಗವೇನು?”ಎಂದು ಕೇಳುತ್ತಾನೆ.
ಅದಕ್ಕೆ ಅವನು-
“ನಾನೊಬ್ಬ ಸೈನಿಕ; ಯುದ್ಧ ಮಾಡುವುದೇ ನನ್ನ ಕಾಯಕ” ಎನ್ನುತ್ತಾನೆ.
ಆಗ ಆ ಗುರು-
“ನೀನು ಸೈನಿಕನಂತೆ ಕಾಣುವುದಿಲ್ಲ; ಒಬ್ಬ ಭಿಕ್ಷುಕನಂತೆ ಕಾಣುತ್ತೀಯ” ಎಂದುಬಿಡುತ್ತಾನೆ.
ಆಗ ಸೈನಿಕನಿಗೆ ಅತಿಯಾದ ಕೋಪ ಉಂಟಾಗಿ ಮೈಯೆಲ್ಲಾ ಬಿಸಿಯಾಗಿ, ಮುಖವೆಲ್ಲ ಕೆಂಪಾಗಿ, ಬಾಹುಗಳು ಹುರಿಗಟ್ಟುತ್ತವೆ. ಅವನು ಕೋಪ ತಡೆಯಲಾರದೇ ಒರೆಯಿಂದ ಖಡ್ಗ ತೆಗೆದು ಆ ಗುರುವನ್ನು ಸಂಹರಿಸಲು ಕೈಯೆತ್ತುತ್ತಾನೆ.
ಆಗ ಗುರು ನಗುತ್ತಾ-
“ಇದೇ ನರಕ; ನೀನು ನರಕದ ದಾರಿಯಲ್ಲಿ ಸಾಗುತ್ತಿದ್ದಿಯ” ಎನ್ನುತ್ತಾನೆ.
ಆಗ ಸೈನಿಕನಿಗೆ ತನ್ನ ತಪ್ಪಿನ ಅರಿವಾಗುತ್ತದೆ. “ಅಯ್ಯೋ! ಎಂತಹ ಪ್ರಮಾದ ಎಸಗಿಬಿಡುತ್ತಿದ್ದೆ!” ಎಂದು ಅರೆಘಳಿಗೆ ಚಿಂತಿಸಿ, ತನ್ನ ತಪ್ಪನ್ನು ಅರಿತು ಖಡ್ಗ ಒರೆಯಲ್ಲಿಟ್ಟು ಗುರುವಿಗೆ ಕೈ ಜೋಡಿಸಿ ನಮಸ್ಕಾರ ಮಾಡುತ್ತಾನೆ.
ಹೌದು, ಸ್ವರ್ಗ ನರಕಗಳ ಗೊಡವೆ ಇಲ್ಲದೆ ನಮ್ಮ ಸುತ್ತಮುತ್ತಲೂ ಇರುವವರೊಂದಿಗೆ ಪ್ರೀತಿಯಿಂದ, ಸಂತೋಷದಿಂದ, ಮಾತನಾಡುತ್ತಾ ಇತರರಿಗೆ ನಮ್ಮಿಂದಾದಷ್ಟು ಉಪಕಾರ ಮಾಡುತ್ತ ಬೇರೆಯವರಿಗೆ ಸಂತೋಷ ಕೊಡುವುದೇ ಸ್ವರ್ಗ. ಅದೇ ಇತರರನ್ನು ಕೀಳಾಗಿ ನೋಡುತ್ತಾ, ಅವರಿಗೆ ಮಾನಸಿಕವಾಗಿ, ದೈಹಿಕವಾಗಿ ಹಿಂಸೆ, ತೊಂದರೆ, ನೋವನ್ನು ಕೊಡುವುದೇ ನರಕ. ನಮ್ಮ ಬದುಕನ್ನು ನರಕವಾಗಿಸದೇ ಸ್ವರ್ಗವಾಗಿರಿಸಲು ಪ್ರಯತ್ನ ಮಾಡೋಣ.