ಅದೊಂದು ಭೂಗೋಳಶಾಸ್ತ್ರದ ತರಗತಿ. ಒಂದು ದಿನ ಅಧ್ಯಾಪಕರು ವಿದ್ಯಾರ್ಥಿಗಳ ಹತ್ತಿರ
“ಪ್ರಪಂಚದ ಏಳು ಅದ್ಭುತಗಳನ್ನು ಪಟ್ಟಿ ಮಾಡಿ” ಎನ್ನುತ್ತಾರೆ. ಆಗ ವಿದ್ಯಾರ್ಥಿಗಳು ಸರಸರನೆ ಪಿರಮಿಡ್, ಚೀನಾದ ಮಹಾಗೋಡೆ, ತಾಜ್ ಮಹಲ್, ಪೀಸಾ ವಾಲುಗೋಪುರ ಇತ್ಯಾದಿ ಬರೆದು ಅಧ್ಯಾಪಕರಿಗೆ ತಂದು ತೋರಿಸುತ್ತಾರೆ.
ಆದರೆ ಒಂದು ಪುಟ್ಟ ಹುಡುಗಿ ಮಾತ್ರ ಖಾಲಿ ಹಾಳೆಯನ್ನು ತಂದು ಕೊಡುತ್ತಾಳೆ. ಆಶ್ಚರ್ಯಗೊಂಡು ಅಧ್ಯಾಪಕರು- “ಇದೇಕೆ?” ಎಂದು ಕೇಳುತ್ತಾರೆ.
ಆಗ ಆ ಹುಡುಗಿ- “ಪ್ರಪಂಚದಲ್ಲಿ ಸಾಕಷ್ಟು ಅದ್ಭುತಗಳಿವೆ; ಯಾವುದನ್ನು ಬರೆಯುವುದು? ಎಂದೇ ನನಗೆ ಗೊತ್ತಾಗುತ್ತಿಲ್ಲ” ಎನ್ನುತ್ತಾಳೆ.
ಅದೇನೆಂದು ಗುರುಗಳು ಕೇಳಿದಾಗ, ಅವಳು-
“ನಾನು ನೋಡಬಲ್ಲೆ, ನಾನು ಕೇಳಬಲ್ಲೆ, ನಾನು ಆಲೋಚಿಸಬಲ್ಲೆ, ನಾನು ಮಾತನಾಡಬಲ್ಲೆ, ನಾನು ನಡೆಯಬಲ್ಲೆ, ಓಡಬಲ್ಲೆ, ನಾನು ಅನುಭವಿಸಬಲ್ಲೆ. ಎಲ್ಲಕಿಂತ ಹೆಚ್ಚಾಗಿ ನಾನು ಈ ಜಗತ್ತನ್ನು ಪ್ರೀತಿಸಬಲ್ಲೆ. ಇದಕ್ಕಿಂತ ಅದ್ಭುತ ಇನ್ನಾವುದಿದೆ!” ಎನ್ನುತ್ತಾಳೆ.
ಇದರ ನೀತಿಯೆಂದರೆ ನಮ್ಮ ಹತ್ತಿರ ಎಲ್ಲವೂ ಇದೆ. ಅದರ ಅರಿವು ನಮಗಿಲ್ಲ. ನಾವೇ ನಮಗೆ ಒಂದು ಸೋಜಿಗ. ಇದೇ ಈ ಪ್ರಪಂಚದ ಅದ್ಭುತ.
ಅರಿಯಲಾಗದ ಅದ್ಭುತವಾದ ಈ ದೇಹದಲ್ಲಿ ಮನಸೆಂಬ ಪರಮಾದ್ಬುತವನ್ನು ರೂಪಿಸಿದ ಆನಂದಾದ್ಭುತನಿಗಿದೋ ನಮನ.