ಪ್ರಾಯ-ಅಭಿಪ್ರಾಯಗಳಲ್ಲಿ ಆದರ್ಶಪ್ರಾಯರಾದ ಪಕ್ವಜೀವಿಗಳಿಗೆ ಪರಿಪಕ್ವವಾದ ಕಾರ್ಯ ‘ಸಂಧ್ಯಾಮಂಗಲ’ : ಶ್ರೀಸಂಸ್ಥಾನದವರಿಂದ ವಿಶೇಷ ಆಶೀರ್ವಾದ

ಉಪಾಸನೆ ಸಮಾರಂಭ ಸುದ್ದಿ

ಬೆಂಗಳೂರು: ಜೀವನದ ಸಂಧ್ಯಾಕಾಲದಲ್ಲಿರುವ ಹಿರಿಯ ಜೀವಗಳ ಶೇಷಾಯುಷ್ಯವು ಮಂಗಲಕರವಾಗಿರಲಿ ಎಂಬ ಸದುದ್ದೇಶದೊಂದಿಗೆ ಬೆಂಗಳೂರಿನ ಶ್ರೀರಾಮಾಶ್ರಮದಲ್ಲಿ 21.11.2018ರ ಬುಧವಾರದಂದು ಸಂಧ್ಯಾಮಂಗಲ ಎಂಬ ವಿಶೇಷ ಕಾರ್ಯಕ್ರಮವನ್ನು ನಡೆಸಲಾಯಿತು. ಹವ್ಯಕ ಮಹಾಮಂಡಲದ ನೇತೃತ್ವದಲ್ಲಿ ನಡೆದ ಸಂಧ್ಯಾಮಂಗಲದಲ್ಲಿ 60 ವರ್ಷ, 70 ವರ್ಷ, 80 ವರ್ಷಗಳನ್ನು ಪೂರೈಸಿದ ಒಟ್ಟು 70 ಹಿರಿಯ ದಂಪತಿಗಳು ಪಾಲ್ಗೊಂಡು, ಶ್ರೀಸಂಸ್ಥಾನದವರ ಅಮೃತಹಸ್ತಗಳಿಂದ ವಿಶೇಷ ದಿವ್ಯಾಶೀರ್ವಾದಗಳನ್ನು ಪಡೆದರು.

 

ಸಂಧ್ಯಾಮಂಗಲ ಕಾರ್ಯಕ್ರಮದ ಧರ್ಮಸಭೆಯ ದಿವ್ಯಸಾನ್ನಿಧ್ಯವನ್ನು ವಹಿಸಿದ್ದ ಶ್ರೀಸಂಸ್ಥಾನದವರು, ಬಹುಕಾಲ ಬದುಕಿ ಬಾಳಿ ಸಮಾಜವನ್ನು ಬೆಳಗಿದ, ಪ್ರಾಯ-ಅಭಿಪ್ರಾಯಗಳೆರಡರಲ್ಲಿಯೂ ಪಕ್ವರಾಗಿ ಸಮಾಜಕ್ಕೆ ಆದರ್ಶಪ್ರಾಯರಾದ ಪುಣ್ಯಚೇತನರಿಗಾಗಿ ಶ್ರೀಪೀಠವೇ ನೆರವೇರಿಸಿದ ಪರಿಪಕ್ವ ಕಾರ್ಯವೇ ಸಂಧ್ಯಾಮಂಗಲ ಎಂದು ಅಭಿಪ್ರಾಯಪಟ್ಟರು. ಅಲ್ಲದೆ, ಜೀವನದ ಸಂಧ್ಯಾಕಾಲದಲ್ಲಿರುವ ಹಿರಿಯ ಜೀವಗಳ ಅಮಂಗಲಗಳೆಲ್ಲ ಕಳೆದು ಅವರ ಶೇಷಾಯುಷ್ಯವು ವಿಶೇಷ ಮಂಗಲವನ್ನು ಹೊಂದಲಿ ಎಂಬ ಪರಿಕಲ್ಪನೆಯ ಹಿನ್ನಲೆಯಲ್ಲಿ ಈ ಸಂಧ್ಯಾಮಂಗಲ ಕಾರ್ಯಕ್ರಮವು ಆಯೋಜಿಸಲ್ಪಟ್ಟಿರುವುದು ಸಂತಸಕರ ವಿಚಾರ. ಸಂಧ್ಯಾಮಂಗಲದಲ್ಲಿ ಭಾಗಿಯಾದ ಸಮಾಜದ ಹಿರಿಯ ದಂಪತಿಯನ್ನು ಶ್ರೀಕರಾರ್ಚಿತ ದೇವರು ಹಾಗೂ ಶ್ರೀಗುರುಪರಂಪರೆ ಸದಾಕಾಲ ಅನುಗ್ರಹಿಸಲಿ ಎಂದು ಆಶೀರ್ವಚನಗೈದರು.

 

ಸಂಧ್ಯಾಮಂಗಲ ಕಾರ್ಯಕ್ರಮದ ಅಂಗವಾಗಿ ವೇದಮೂರ್ತಿ ಹುಲಿಮನೆ ಶ್ರೀ ಮಂಜುನಾಥ ಭಟ್ಟರ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಉಗ್ರರಥ, ಭೀಮರಥ ಹಾಗೂ ಸಹಸ್ರಚಂದ್ರದರ್ಶನ ಶಾಂತಿಗಳು ವಿಧಿವತ್ತಾಗಿ ಸಂಪನ್ನಗೊಂಡವು.

 

ಶ್ರೀಮಠದ ಪದ್ಧತಿಯಂತೆ ಆರಂಭಗೊಂಡ ಧರ್ಮಸಭೆಯಲ್ಲಿ ಈ ಕಾರ್ಯಕ್ರಮದ ಸಂಚಾಲಕರಾದ ಹವ್ಯಕ ಮಹಾಮಂಡಲದ ವೈದಿಕ ವಿಭಾಗದ ಸಹಪ್ರಧಾನರಾದ ಡಾ. ರಾಘವೇಂದ್ರ ಭಟ್ಟ ಕ್ಯಾದಗಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅನಂತರ ಹವ್ಯಕ ಮಹಾಮಂಡಲದ ಅಧ್ಯಕ್ಷರಾದ ಶ್ರೀಮತಿ ಈಶ್ವರೀ ಬೇರ್ಕಡವು ಅವರು ಕಾರ್ಯಕ್ರಮದ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡರು. ಹವ್ಯಕ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀ ಹರಿಪ್ರಸಾದ ಪೆರಿಯಪ್ಪು ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸುಮಾರು 500ಕ್ಕೂ ಹೆಚ್ಚು ಶಿಷ್ಯಭಕ್ತರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

 

ಶ್ರೀ ರಾಮಾಶ್ರಮ ಸೇವಾಸಮಿತಿ, ಬೆಂಗಳೂರು ದಕ್ಷಿಣ ಮಂಡಲ ಹಾಗೂ ಬೆಂಗಳೂರು ಉತ್ತರ ಮಂಡಲಗಳ ಎಲ್ಲ ಪದಾಧಿಕಾರಿಗಳ ಅಪೂರ್ವ ಸಹಕಾರದೊಂದಿಗೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

 

Author Details


Srimukha

Leave a Reply

Your email address will not be published. Required fields are marked *