ರಾಮಾಶ್ರಮದಲ್ಲಿ ರಾಮದೇವರ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಸಂಪನ್ನ

ಉಪಾಸನೆ ಸಮಾರಂಭ ಸುದ್ದಿ


ಬೆಂಗಳೂರು : ಶ್ರೀರಾಮಚಂದ್ರಾಪುರಮಠದ‌ ಶಾಖಾಮಠವಾದ ಬೆಂಗಳೂರು ಗಿರಿನಗರದ ರಾಮಾಶ್ರಮದಲ್ಲಿ ಸಪರಿವಾರ ಶ್ರೀರಾಮಚಂದ್ರದೇವರ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಕಾರ್ಯಕ್ರಮವು ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಾಗಿ ನಡೆಯಿತು.

ಶ್ರೀಸಂಸ್ಥಾನದವರ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ವಿಲಂಬ ಸಂವತ್ಸರದ ಅಶ್ವಯುಜ ಕೃಷ್ಣ ಷಷ್ಠಿ ಹಾಗೂ ಸಪ್ತಮಿಯಂದು ಹಲವು ಧಾರ್ಮಿಕ‌ ಕಾರ್ಯಕ್ರಮಗಳು ನಡೆದವು.
(ದಿನಾಂಕ 30.10.2018 ಹಾಗೂ 31.10.2018) ಮಂಗಳವಾರದಂದು ಗುರುದೇವತಾ ಪ್ರಾರ್ಥನೆಯೊಂದಿಗೆ ಆರಂಭಗೊಂಡ‌ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಗಣಪತಿ ಪೂಜೆ, ದೇವನಾಂದಿ, ಪುಣ್ಯಾಹ, ಕೌತುಕ ಬಂಧನ, ಧ್ವಜಾರೋಹಣ, ಬಲಿ ವಿಧಾನಗಳನ್ನು ನೆರವೇರಿಸಲಾಯಿತು. ಸಂಜೆ ರಂಗಪೂಜೆ, ಪಲ್ಲಕ್ಕಿ ಉತ್ಸವ, ಅಷ್ಟಾವಧಾನ ಸೇವೆ ನಡೆಯಿತು. ನೂರಾರು ಭಕ್ತರು ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡು ಕೃತಾರ್ಥರಾದರು.

ಅಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತ ವಿರಚಿತ ‘ಗೋಮಯೇ ವಸತೇ ಲಕ್ಷ್ಮೀ’ ಯಕ್ಷಗಾನ ತಾಳಮದ್ದಲೆ ಜರುಗಿತು.‌ ನೆಬ್ಬೂರು ನಾರಾಯಣ ಭಾಗವತರ ಭಾಗವತಿಕೆ, ಎ.ಪಿ.ಪಾಠಕರ ಮದ್ದಲೆ, ವಿದ್ವಾನ್ ಜಗದೀಶ ಶರ್ಮಾ, ಮೋಹನ ಭಾಸ್ಕರ ಹೆಗಡೆಯವರ ಅರ್ಥಗಾರಿಕೆಯಲ್ಲಿ ತಾಳಮದ್ದಲೆ‌ ನೆರವೇರಿತು.

ಇನ್ನು‌ ಬುಧವಾರ ಶ್ರೀರಾಮತಾರಕ‌ ಹವನ, ಕಲಶಾಭಿಷೇಕ, ಬಲಿ, ಮಹಾಮಂಗಳಾರತಿ ನೆರವೇರಿತು.
ಎರಡು ದಿನದ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಪರಿವಾರಸಹಿತ ಶ್ರೀರಾಮಚಂದ್ರ‌ ದೇವರು ಹಾಗೂ ಶ್ರೀಸಂಸ್ಥಾನದ ಕೃಪೆಗೆ ಪಾತ್ರರಾದರು.

Author Details


Srimukha

Leave a Reply

Your email address will not be published. Required fields are marked *