ನಂತೂರು: ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಗುರುವಾರ ರಕ್ಷಾ ಬಂಧನ ಕಾರ್ಯಕ್ರಮ ಜರುಗಿತು.
ಆರೆಸ್ಸೆಸ್‌ನ ಮಂಗಳೂರು ಮಹಾನಗರ ಸೇವಾ ಪ್ರಮುಖ್ ಪ್ರಶಾಂತ್ ಹೆಗಡೆ ಅವರು ರಕ್ಷಾ ಬಂಧನದ ಮಹತ್ವದ ಬಗ್ಗೆ ಮಾತನಾಡಿ, ಭಾರತೀಯ ಸಂಸ್ಕೃತಿ ಮತ್ತು ಆಚರಣೆಗಳನ್ನು ನಾವು ಅರ್ಥೈಸಿಕೊಂಡಾಗ ನಮ್ಮಲ್ಲಿ ದೇಶ ಸೇವೆಯ ಭಾವನೆ ಜಾಗೃತವಾಗುತ್ತದೆ. ವಿದ್ಯಾರ್ಥಿಗಳು ಈ ಭಾವನೆಯನ್ನು ಮೈಗೂಡಿಸಿಕೊಂಡು ಸಂಸ್ಕಾರಯುತ ಭಾರತೀಯರಾಗಬೇಕು ಎಂದರು.
ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಜೀವನ್‌ದಾಸ್ ಅವರು ಮಾತನಾಡಿ, ಒಗ್ಗಟ್ಟು ಮತ್ತು ಧೈರ್ಯದಲ್ಲಿ ಬಲವಿದೆ. ಆದ್ದರಿಂದ ವಿದ್ಯಾರ್ಥಿಗಳು ಒಟ್ಟಾಗಿ ದೇಶ ರಕ್ಷಣೆಯಲ್ಲಿ ಪಾಲ್ಗೊಳ್ಳಬೇಕು ಎಂದರು. ಶ್ರೀ ಭಾರತೀ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿದ್ಯಾ ಭಟ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಮಂಗಳೂರು ಶಕ್ತಿನಗರ ಸಹಕಾರ್ಯವಾಹ ಯತೀಶ್ ಮತ್ತು ಮಂಗಳೂರು ಅಂಬೇಡ್ಕರ್ ಶಾಖೆಯ ಮುಖ್ಯ ಶಿಕ್ಷಕ ಹರ್ಷಿತ್, ಪದವಿ ಕಾಲೇಜಿನ ಉಪಪ್ರಾಂಶುಪಾಲರಾದ ಗಂಗಾರತ್ನ ಮುಗುಳಿ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿ ನಾಯಕ ಕೌಶಿಕ್ ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕ ಪ್ರತಿಮ್ ಕುಮಾರ್ ವಂದಿಸಿದರು. ಉಪನ್ಯಾಸಕ ಅನಂತನಾರಾಯಣ ಪದಕಣ್ಣಾಯ ನಿರೂಪಿಸಿದರು. ರಕ್ಷಾಬಂಧನದ ಸಂದೇಶವನ್ನು ವಿದ್ಯಾರ್ಥಿ ನಾಯಕ ಕೌಶಿಕ್ ವಾಚಿಸಿದರು. ವಿದ್ಯಾರ್ಥಿ ಮಿಥುನ್‌ರಾಜ್ ಅಮೃತವಾಣಿ ವಾಚಿಸಿದರು. ವಿದ್ಯಾರ್ಥಿಗಳು ಪರಸ್ಪರ ರಕ್ಷೆಯನ್ನು ಕಟ್ಟಿಕೊಂಡರು.