ಬದಿಯಡ್ಕ: ನವೆಂಬರ್ 23ರಂದು ಇಲ್ಲಿನ ಶ್ರೀಭಾರತೀ ವಿದ್ಯಾಪೀಠ ಶಾಲೆಯಲ್ಲಿ ಮಾತಾಪಿತೃ ಪೂಜೆಯು ಭಕ್ತಿ-ಶ್ರದ್ಧೆಗಳಿಂದ ನೆರವೇರಿತು.
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಪೂಜಾ ವಿಧಾನಗಳ ಬಗ್ಗೆ ತಿಳಿಸಿ ಮಕ್ಕಳಿಂದ ಪಾಲಕರ ಪಾದ ಪೂಜೆ ನೆರವೇರಿಸಿ, ಪ್ರತಿಜ್ಞಾವಿಧಿ ಬೋಧಿಸಿದರು.
ಪ್ರತಿಜ್ಞಾವಿಧಿಯಲ್ಲಿ ಮಕ್ಕಳು
‘ತಂದೆ-ತಾಯಿ ನಮ್ಮ ಕಣ್ಣಿಗೆ ಕಾಣುವ ದೇವರು. ಅವರ ಆಶೀರ್ವಾದದಿಂದ ಜೀವನದಲ್ಲಿ ಏನು ಬೇಕಾದರೂ ಸಾಧಿಸಲು ಸಾಧ್ಯ. ನಾವು ಹೆತ್ತವರನ್ನು ವೃದ್ಧಾಪ್ಯದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೇವೆ.’ ಎಂದು ಹೆತ್ತವರ ಪಾದಸ್ಪರ್ಶಿಸಿ ಪ್ರತಿಜ್ಞೆಗೈದರು.
ಈ ಸಂದರ್ಭದಲ್ಲಿ ಹೆತ್ತವರು ಭಾವುಕರಾಗಿ ಮಕ್ಕಳನ್ನು ಹರಸಿದರು.
ಶಾಲಾ ಆಡಳಿತ ಮಂಡಳಿ ಸದಸ್ಯ ಶ್ರೀ ಶ್ಯಾಮ ಭಟ್ ಬೇರ್ಕಡವು ಮಾತನಾಡಿ ಇಂತಹ ಅಪರೂಪದ ಕ್ಷಣದಲ್ಲಿ ಭಾಗಿಯಾಗಿದ್ದು ಮನಸ್ಸಿಗೆ ಸಂತೋಷವಾಗಿದೆ. ಮಕ್ಕಳು ಹೆತ್ತವರಿಗೆ ಹಾಗೂ ಶಾಲೆಗೆ ಕೀರ್ತಿ ತರುವಂತಹ ಕಾರ್ಯಗಳನ್ನು ಮಾಡಿ ಸಲಹೆ ನೀಡಿದರು.
ಹತ್ತನೆಯ ತರಗತಿಯ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಸಂಯೋಜಿಸಿದರು.