ಒಮ್ಮೆ ಒಬ್ಬ ಪುಟ್ಟ ಹುಡುಗಿ ತನ್ನ ತಂದೆಯೊಂದಿಗೆ ಒಂದು ಸೇತುವೆಯನ್ನು ದಾಟಿ ಹೋಗಬೇಕಿತ್ತು. ಸೇತುವೆ ತುಂಬ ದುರ್ಬಲವಾಗಿತ್ತು. ಅಲ್ಲದೇ ತುಂಬ ಉದ್ದವಾಗಿಯೂ ಇತ್ತು. ತಂದೆಗೆ ಆತಂಕ ಶುರುವಾಯಿತು.
‘ಸೇತುವೆ ಎಲ್ಲಿಯಾದರೂ ಮುರಿದು ಬಿದ್ದರೆ ಏನು ಮಾಡುವುದು? ನನ್ನ ಮಗಳಿಗೆ ಕಷ್ಟವಾಗುವುದಲ್ಲ!’ ಎಂದು ಅಂದುಕೊಂಡು-
“ನನ್ನ ಕೈ ಹಿಡಿದು ನಿಧಾನವಾಗಿ ಬಾ” ಎನ್ನುತ್ತಾನೆ.
ಆಗ ಆ ಪುಟ್ಟಮಗು ತಂದೆಯ ಹತ್ತಿರ-
“ನೀನೇ ನನ್ನ ಕೈಹಿಡಿದುಕೊ” ಎನ್ನುತ್ತದೆ.
ತಂದೆ ಆಶ್ಚರ್ಯದಿಂದ-
“ಅದರಲ್ಲೇನು ವ್ಯತ್ಯಾಸ; ನಾನು ಹಿಡಿದುಕೊಂಡರೂ ನೀನು ಹಿಡಿದುಕೊಂಡರೂ ಒಂದೇ ಅಲ್ಲವೇ?” ಎಂದು ಕೇಳುತ್ತಾನೆ.
ಅದಕ್ಕೆ ಮಗು-
“ತುಂಬಾ ವ್ಯತ್ಯಾಸವಿದೆ; ನೀನೇ ಹಿಡಿದು ಕೊಂಡರೆ ಯಾವ ಸಂದರ್ಭದಲ್ಲೂ ನೀನು ನನ್ನ ಕೈಬಿಡುವುದಿಲ್ಲ. ಆದರೆ ನಿನಗಿಂತ ದುರ್ಬಲಳಾದ ನಾನು ಯಾವುದೇ ಸಂದರ್ಭದಲ್ಲೂ ನಿನ್ನ ಕೈ ಬಿಡಬಹುದು” ಎನ್ನುತ್ತಾಳೆ.
ಹೌದು, ಭಗವಂತನೇ ನಮ್ಮ ಕೈ ಹಿಡಿಯುವ ಹಾಗೆ ನಾವು ಪರಮಪದದಲ್ಲಿ ನಮ್ಮನ್ನು ಅರ್ಪಿಸಿಕೊಂಡಾಗ ಎಂತಹ ಕಷ್ಟವೂ ನಮಗೆ ಶ್ರಮವಾಗುವುದಿಲ್ಲ. ನಾವು ಶಿವನ ಭಕ್ತ ಎಂದುಕೊಂಡರೆ ಸಾಕಾಗುವುದಿಲ್ಲ. ಶಿವನೇ ನಮ್ಮನ್ನು ಭಕ್ತ ಎಂದು ಒಪ್ಪಿಕೊಳ್ಳಬೇಕು. ಹಾಗೆ ನಮ್ಮ ನಡವಳಿಕೆ ಇರಬೇಕು. ಇದು ನಮ್ಮೆಲ್ಲರ ಧ್ಯೇಯವಾಗಬೇಕು.