ಒಮ್ಮೆ ಒಂದು ಗುಂಪಿನಲ್ಲಿದ್ದ ಸೊಳ್ಳೆಯೊಂದು ಬೆಳಗ್ಗೆ ಏಕಾಂಗಿಯಾಗಿ ಹಾರಾಟವನ್ನು ಆರಂಭಿಸುತ್ತದೆ. ಆ ಸೊಳ್ಳೆಯನ್ನು ಕಂಡ ಜನರೆಲ್ಲ ಚಪ್ಪಾಳೆ ತಟ್ಟುತ್ತಿದ್ದರು. ಆಗ ಆ ಸೊಳ್ಳೆ ಅದನ್ನು ತನಗೆ ಸಿಕ್ಕ ಗೌರವ ಎಂದು ಸಂತೋಷಗೊಂಡು ಮತ್ತಷ್ಟು ಹಾರಾಟ ನಡೆಸಿ ಹಿಂತಿರುಗಿ ಬಂದಾಗ ಗುಂಪಿನಲ್ಲಿದ್ದ ಸೊಳ್ಳೆಗಳೆಲ್ಲ ಸಂತೋಷದಿಂದ ಮಂದಹಾಸ ಬೀರುತ್ತಿರುವ ಸೊಳ್ಳೆಯನ್ನು ಕಂಡು-
“ಹೇಗಾಯಿತು ಹಾರಾಟ? ಇದೇನು ಇಷ್ಟು ಸಂತೋಷವಾಗಿರುವೆ?” ಎಂದು ಕೇಳುತ್ತವೆ.
ಆಗ ಸೊಳ್ಳೆ- “ನಾನು ಹೋದಲ್ಲೆಲ್ಲ ಜನರು ಕೈ ಚಪ್ಪಾಳೆ ತಟ್ಟಿ ಸಂತೋಷದಿಂದ ಸ್ವಾಗತಿಸಿದರು” ಎನ್ನುತ್ತದೆ.
ಜೀವನದಲ್ಲಿಯೂ ಅಷ್ಟೇ ಹೊಗಳಿಕೆಗೆ ಮನಸೋಲದವರೇ ಇಲ್ಲ. ಹಿಂದೆಲ್ಲ ರಾಜ ಮಹಾರಾಜರುಗಳು ಹೊಗಳುಭಟರನ್ನೇ ಇಟ್ಟುಕೊಳ್ಳುತ್ತಿದ್ದರು. ಜನಸಾಮಾನ್ಯರಿಗಾದರೂ ಐಶ್ವರ್ಯ, ಅಧಿಕಾರ, ಅಂತಸ್ತಿಗಿಂತ ಹೊಗಳಿಕೆ ಎಂಬ ವ್ಯಸನವೇ ಅತ್ಯಂತ ದೊಡ್ಡದು. ಹೊಗಳಿಕೆಯೆಂಬ ಹೊನ್ನಶೂಲಕ್ಕೆ ಸಿಲುಕದವರೇ ಇಲ್ಲ. ಆದ್ದರಿಂದ ಯಾರಾದರೂ ನಮ್ಮನ್ನು ಅತಿಯಾಗಿ ಹೊಗಳಿದಾಗ ನಾವು ತುಂಬ ಎಚ್ಚರಿಕೆಯಿಂದ ಇರಬೇಕು. ನಾವು ಅದಕ್ಕೆ ಅರ್ಹರೇ ಎಂದು ಆಲೋಚಿಸಬೇಕು. ಕೆಲವೊಮ್ಮೆ ಹೊಗಳಿಕೆಗಿಂತಲೂ ತೆಗಳಿಕೆಯೇ ಉಪಕಾರ ಮಾಡುತ್ತವೆ. ಆದ್ದರಿಂದ ಯಾವ ಸಂದರ್ಭದಲ್ಲಿಯೂ ವಿಚಾರಶೂನ್ಯರಾಗಿ ಹೊಗಳಿಕೆಯನ್ನು ನಿಜವೆಂದು ಭಾವಿಸಿ ಮೈಮರೆತರೆ ಅಧೋಗತಿ ತಪ್ಪಿದ್ದಲ್ಲ. ಸೊಳ್ಳೆ ಬಂದಾಗ ಚಪ್ಪಾಳೆ ತಟ್ಟುವುದು ಅದರ ನಾಶಕ್ಕೇ ವಿನಾ ಸ್ವಾಗತಕ್ಕಲ್ಲ. ಆದ್ದರಿಂದ ಹೊಗಳಿಕೆಯೆಂಬ ಹೊನ್ನ ಶೂಲಕ್ಕೆ ಬಲಿಯಾಗಬಾರದು.