ಒಂದು ದೇವಸ್ಥಾನದಲ್ಲಿ ಇಬ್ಬರು ವ್ಯಕ್ತಿಗಳು. ಒಬ್ಬ ಅರ್ಚಕ, ಇನ್ನೊಬ್ಬ ಆಳು. ಅರ್ಚಕನ ಕೆಲಸ ಪೂಜೆ ಮಾಡುವುದು; ಆಳಿನ ಕೆಲಸ ದೇವಸ್ಥಾನ ತೊಳೆದು ಸ್ವಚ್ಛಮಾಡುವುದು. ಒಮ್ಮೆ ಆಳಿಗೆ ಅನಿಸುತ್ತದೆ-
“ನನ್ನ ಹಾಗೇ ಅರ್ಚಕನೂ ಸಾಮಾನ್ಯ ವ್ಯಕ್ತಿ; ಆದರೆ ಅವನಿಗೆ ದೇವರನ್ನು ಮುಟ್ಟುವ ಭಾಗ್ಯ. ನನಗೆ ದೇವಸ್ಥಾನದ ಮೆಟ್ಟಿಲು ತೊಳೆಯುವ ಕೆಲಸ ಏಕೆ?”
ಅದೇ ರೀತಿ ದೇವಸ್ಥಾನದ ಮೆಟ್ಟಿಲಿಗೂ ಅನಿಸುತ್ತದೆ. ಅದು-
“ನಾನು ಕಲ್ಲು; ದೇವರನ್ನು ಕಲ್ಲಿನಿಂದಲೇ ಮಾಡಿದ್ದಾರೆ; ಅವನಿಗೆ ಪೂಜೆಯಾದರೆ, ನನ್ನನ್ನು ಮೆಟ್ಟಿಕೊಂಡು ಹೋಗುವುದರಿಂದ ಮೆಟ್ಟು ಕಲ್ಲಾದೆ; ಯಾಕೆ ಹೀಗೆ?” ಎಂದು ಭಗವಂತನಲ್ಲಿ ಕೇಳುತ್ತದೆ.
ಆಗ ಭಗವಂತ-
“ದೇವರ ಮೂರ್ತಿಯಾಗಬೇಕಾದರೆ ಬಹಳ ಉಳಿ ಪೆಟ್ಟನ್ನು ತಿನ್ನಬೇಕಾಗುತ್ತದೆ. ಒಂದು ಮುಖವನ್ನು ಮಾತ್ರ ಕೆತ್ತಿದ್ದರೆ ಅದು ಮೆಟ್ಟಿಲಾಗುತ್ತದೆ. ಎರಡು ಮುಖ ಕೆತ್ತಿದರೆ ದೇವಸ್ಥಾನದ ಬಾಗಿಲಿನ ದ್ವಾರದ ಚೌಕಟ್ಟು ಆಗುತ್ತದೆ, ಮೂರು ಮುಖ ಕೆತ್ತಿದರೆ ದೇವರ ಪಾಣಿ ಪೀಠವಾಗುತ್ತದೆ. ನಾಲ್ಕು ಬದಿಯಲ್ಲಿ ಕೆತ್ತಿದರೆ ಅದು ದೇವರ ಮೂರ್ತಿಯಾಗುತ್ತದೆ. ಹೀಗೆ ಆಗುವಾಗ ಸಾವಿರಾರು ಉಳಿ ಪೆಟ್ಟುಗಳನ್ನು ತಿಂದು ನೋವನ್ನು ಅನುಭವಿಸಬೇಕಾಗುತ್ತದೆ. ಹಾಗೆ ಅನುಭವಿಸಿದಾಗ ಅದು ಶಿಲ್ಪವಾದರೆ ಉಳಿಪೆಟ್ಟನ್ನು ತಾಳಲಾರದ ನೀನು ಕೇವಲ ಮೆಟ್ಟಿಲಾಗಿಯೇ ಇರುವೆ” ಎಂದು ಭಗವಂತ ಹೇಳುತ್ತಾನೆ.
ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ನೋವು, ಕಷ್ಟಗಳನ್ನು ಅನುಭವಿಸಲೇಬೇಕಾಗುತ್ತದೆ. ನಮಗೆ ಬರುವ ಕಷ್ಟಗಳನ್ನು ನಕಾರಾತ್ಮಕವಾಗಿ ನೋಡದೇ ಸಕಾರಾತ್ಮಕವಾಗಿ ನೋಡಿದಾಗ ನಮ್ಮ ಜೀವನ ಸುಖಮಯವಾಗುತ್ತದೆ. ನಾವು ಕೇವಲ ಶಿಲ್ಪಗಳು, ಮೇಲಿರುವವನು ಶಿಲ್ಪಿ. ನಮ್ಮ ಪ್ರಯತ್ನಗಳಿಗೆ ತಕ್ಕಂತೆ ಅವನು ನಮ್ಮನ್ನು ರೂಪಿಸುತ್ತಾನೆ.
Very nice