ಒಂದು ಊರಿನಲ್ಲಿ ಕಳ್ಳತನವೇ ಕಸುಬಾಗಿದ್ದ ಒಬ್ಬ ವ್ಯಕ್ತಿ ಇದ್ದ. ಅವನಿಗೊಬ್ಬ ಮಗನಿದ್ದ. ಆ ಮಗ ಯುವಕನಾದಾಗ ಆಲೋಚಿಸುತ್ತಾನೆ; ತಂದೆಗೆ ವಯಸ್ಸಾಯಿತು, ನಾನು ಅವನ ಕಸುಬನ್ನು ಮುಂದುವರಿಸಬೇಕು ಎಂದು. ಒಂದು ದಿನ ಅವನ ತಂದೆಯ ಹತ್ತಿರ-
“ಈ ದಿನ ನಾನು ನಿಮ್ಮೊಟ್ಟಿಗೆ ಬರುತ್ತೇನೆ; ನನಗೆ ಕಸುಬನ್ನು ಕಲಿಸಿಕೊಡು” ಎಂದು ಕೇಳುತ್ತಾನೆ.
ಆ ರಾತ್ರಿ ತಂದೆ ಮಗನನ್ನು ಕರೆದುಕೊಂಡು ಕಳ್ಳತನಕ್ಕಾಗಿ ಒಂದು ಮನೆಗೆ ಹೋಗುತ್ತಾನೆ. ಆ ಮನೆಯ ಒಂದು ಕೋಣೆಯೊಳಗೆ ಪ್ರವೇಶಿಸಿದ ಅನಂತರ ತಂದೆ ಮಗನನ್ನು ಒಳಗೆ ಬಿಟ್ಟು ಹೊರಗಡೆಯಿಂದ ಚಿಲಕ ಹಾಕಿ ಮನೆಗೆ ಬಂದು ಬಿಡುತ್ತಾನೆ.
ಮಗನಿಗೆ ಬೇಸರ, ದುಃಖ, ಕೋಪ ಎಲ್ಲವೂ ಏಕ ಕಾಲದಲ್ಲಿ ಉಂಟಾಗುತ್ತದೆ. ಏಕಾಂಗಿಯಾಗಿ ಕುಳಿತ ಮಗ ಆಲೋಚಿಸುತ್ತಾನೆ ‘ಈಗ ತಪ್ಪಿಸಿಕೊಳ್ಳುವುದು ಹೇಗೆ?’ ಆಗ ಅವನಿಗೆ ಒಂದು ಉಪಾಯ ಹೊಳೆಯುತ್ತದೆ. ಅವನು ಬೆಕ್ಕಿನಂತೆ ಮಿಯಾಂ ಮಿಯಾಂ ಎಂದು ಸದ್ದು ಮಾಡುತ್ತಾನೆ. ಅಷ್ಟು ಹೊತ್ತಿಗೆ ಆ ಮನೆಯ ಕೆಲಸದವನಿಗೆ ಎಚ್ಚರವಾಗಿ ಕೋಣೆಯಲ್ಲಿ ಬೆಕ್ಕು ಸಿಕ್ಕಿ ಹಾಕಿಕೊಂಡಿರಬಹುದು ಎಂದು ಒಂದು ಸಣ್ಣ ದೀಪವನ್ನು ಬೆಳಗಿಸಿಕೊಂಡು ಬಂದು ಕೋಣೆಯ ಬಾಗಿಲು ತೆರೆಯುತ್ತಾನೆ. ಆಗ ಅಲ್ಲಿದ್ದ ಕಳ್ಳನ ಪುತ್ರ ಓಡಿ ಈಚೆ ಬರುತ್ತಾನೆ. ಅವನನ್ನು ಹಿಡಿಯಲು ಹತ್ತಾರು ಜನ ಬೆನ್ನಟ್ಟಿ ಬರುತ್ತಾರೆ. ಅದು ಹೇಗೊ ಅವರೆಲ್ಲರಿಂದ ತಪ್ಪಿಸಿಕೊಂಡು ಮನೆಗೆ ಬಂದು ಸೇರುತ್ತಾನೆ. ತಂದೆಯಲ್ಲಿ ತಾನು ತಪ್ಪಿಸಿಕೊಂಡು ಬಂದ ಬಗೆಯನ್ನು ವಿವರಿಸಬೇಕು ಎಂದಿರುವಾಗ,
ತಂದೆ ಹೇಳುತ್ತಾನೆ-
“ಏನೂ ಹೇಳುವುದು ಬೇಡ; ಕೆಲಸ ಕಲಿತಾಯಿತು; ಅಂತೂ ಬಂದೆಯಲ್ಲಾ” ಎಂದು.
ಇದು ಕಳ್ಳನ ಕಥೆಯೇ ಆಗಿರಬಹುದು. ಆದರೆ ಇದರ ಪಾಠ ದೊಡ್ಡದು. ಯಾವುದನ್ನೇ ಆಗಲಿ ಮಾಡಿ ಕಲಿಯಬೇಕು. ಈಜುವುದರ ಬಗ್ಗೆ ಎಷ್ಟು ಓದಿದರೂ ಈಜು ಬರುವುದಿಲ್ಲ. ನೀರಿಗೆ ಇಳಿಯಬೇಕು; ಈಜು ಕಲಿಯಬೇಕು. ಅದೇ ರೀತಿ ಜಿಲೇಬಿಯನ್ನು ಎಷ್ಟು ವರ್ಣಿಸಿದರೂ ಅದನ್ನು ಮಾಡಲು ಬರುವುದಿಲ್ಲ. ಸ್ವತಃ ಮಾಡಿದಾಗ ಅದರ ಅನುಭವ ಆಗುತ್ತದೆ.