ಒಮ್ಮೆ ಅಕ್ಬರ್ ಮತ್ತು ಬೀರಬಲ್ ಕಾಡಿನಲ್ಲಿ ಪ್ರಯಾಣಿಸುತ್ತಿರುತ್ತಾರೆ. ಎಷ್ಟು ದೂರ ಸಾಗಿದರೂ ಯಾವುದೇ ಊರು, ಮನೆ ಸಿಗುವುದಿಲ್ಲ. ಇವರಿಗೆ ತುಂಬಾ ಬಾಯಾರಿಕೆ ಹಾಗೂ ಹಸಿವೆಯಾಗುತ್ತದೆ. ಆಗ ಬೀರಬಲ್ ಒಂದು ಮರದ ಕೆಳಗೆ ಕುಳಿತು- “ರಾಮ! ರಾಮ!” ಎಂದು ರಾಮನ ಜಪ ಮಾಡಲು ಆರಂಭಿಸುತ್ತಾನೆ.
ಆಗ ಅಕ್ಬರ್- “ಜಪ ಮಾಡುವುದರಿಂದ ಊಟ ಸಿಗುವುದಿಲ್ಲ” ಎಂದು ಹೇಳಿ ಮುಂದೆ ಸಾಗುತ್ತಾನೆ.
ಹೀಗೆ ಸ್ವಲ್ಪ ದೂರ ಸಾಗುವಾಗ ಒಂದು ಊರು ಸಿಗುತ್ತದೆ. ಆ ಊರಿನ ಒಂದು ಮನೆಯ ಬಾಗಿಲಿಗೆ ಹೋಗಿ-
“ಏನಾದರೂ ಆಹಾರ ಕೊಡಿ” ಎಂದು ಬೇಡುತ್ತಾನೆ.
ಆಗ ಆ ಮನೆಯವರು ಚಕ್ರವರ್ತಿಯೇ ಮನೆ ಬಾಗಿಲಿಗೆ ಬಂದಿದ್ದಾನೆ ಎಂದು ಅವನನ್ನು ಉಪಚರಿಸಿ ಬಗೆಬಗೆ ಆಹಾರ ತಯಾರಿಸಿ ಮೃಷ್ಟಾನ್ನವನ್ನೇ ಅವನಿಗೆ ಬಡಿಸುತ್ತಾರೆ. ಅದರಲ್ಲಿ ಸ್ವಲ್ಪ ಭಾಗವನ್ನು ಬೀರಬಲ್ಲನಿಗೆ ಕಟ್ಟಿಕೊಂಡು ಹಿಂತಿರುಗಿ ಬರುತ್ತಾನೆ ಅಕ್ಬರ್.
ಬೀರಬಲ್ ಇನ್ನೂ ಜಪದಲ್ಲಿಯೇ ನಿರತನಾಗಿದ್ದ. ಅವನಿಗೆ ಆಹಾರದ ಪೊಟ್ಟಣ ಕೊಡುತ್ತಾ- “ನನ್ನ ಸ್ವಪ್ರಯತ್ನದಿಂದ ಮೃಷ್ಟಾನ್ನ ಸಿಕ್ಕಿತು” ಎನ್ನುತ್ತಾನೆ ಅಕ್ಬರ್.
ಅದಕ್ಕೆ ಬೀರಬಲ್- “ಶ್ರೀರಾಮನ ಕೃಪೆಯಿಂದ ನಾನು ಇದ್ದಲ್ಲಿಯೇ, ಸ್ವತಃ ಚಕ್ರವರ್ತಿಯೇ, ಮೃಷ್ಟಾನ್ನ ತಂದು ಬಡಿಸಿದ್ದಾನೆ” ಎಂದು ಉತ್ತರಿಸುತ್ತಾನೆ.
ಆದ್ದರಿಂದ ಸ್ವಪ್ರಯತ್ನ ಮತ್ತು ದೈವೀಕೃಪೆ ಎರಡಕ್ಕೂ ಸಮಾನವಾದ ಮಹತ್ತ್ವವಿದೆ. ಜೀವನದಲ್ಲಿ ಯಶಸ್ಸು ಗಳಿಸಲು ಸ್ವಪ್ರಯತ್ನವೂ ಬೇಕು. ದೈವೀಕೃಪೆಯೂ ಬೇಕು.
Sari allave