ಒಮ್ಮೆ ಒಬ್ಬ ತಂದೆ ತನ್ನ 25 ವರ್ಷದ ಮಗನೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ಅವರ ಎದುರಿನಲ್ಲಿ ಆಗ ತಾನೇ ಮದುವೆಯಾದ ನವದಂಪತಿಗಳು ಕುಳಿತ್ತಿದ್ದರು. ರೈಲು ಸಾಗುತ್ತಿತ್ತು.
ಸ್ವಲ್ಪ ಸಮಯದ ಅನಂತರ ಯುವಕ ಹೊರಗಡೆ ನೋಡುತ್ತಾ, ತಂದೆಯ ಹತ್ತಿರ-
“ಮರಗಳೆಲ್ಲ ಓಡುತ್ತಿವೆ; ನೋಡು” ಎನ್ನುತ್ತಾನೆ. ಆಗ ತಂದೆ- “ಹೌದು ಹೌದು” ಎನ್ನುತ್ತಾನೆ.
ಇನ್ನು ಸ್ವಲ್ಪ ದೂರ ಸಾಗಿದ ಅನಂತರ ಅಲ್ಲಿ ಕಾಣುವ ಒಂದೊಂದೇ ವಸ್ತುಗಳನ್ನು ನೋಡುತ್ತಾ ಆ ಯುವಕ ಅವೇ ಮಾತುಗಳನ್ನು ಹೇಳುತ್ತಾ ಹೋಗುತ್ತಾನೆ. ತಂದೆ ಹೌದು ಹೌದು ಎನ್ನುತ್ತಿರುತ್ತಾನೆ. ಇದನ್ನು ನೋಡಿ ಆ ಯುವಜೋಡಿಗೆ ಆಶ್ಚರ್ಯವೂ ಅನುಕಂಪವೂ ಏಕಕಾಲದಲ್ಲಿ ಉಂಟಾಗುತ್ತದೆ. ‘ಈ ಯುವಕನಿಗೆ ಏನೋ ನ್ಯೂನತೆಯಿದೆ’ ಎಂದು ಅವರು ತಿಳಿದುಕೊಂಡು, ಆ ಯುವಕನ ತಂದೆಯನ್ನು ಯಾರಾದರೂ ಸರಿಯಾದ ವೈದ್ಯರಲ್ಲಿ ನಿಮ್ಮ ಮಗನನ್ನು ಯಾಕೆ ತೋರಿಸಲಿಲ್ಲ? ಎಂದು ಕೇಳುತ್ತಾರೆ.
ಆಗ ಆ ಯುವಕನ ತಂದೆ ಹೇಳುತ್ತಾನೆ-
“ನಾವು ಇದೀಗ ಆಸ್ಪತ್ರೆಯಿಂದಲೇ ಬರುತ್ತಿದ್ದೇವೆ; ಅವನಿಗೆ ದೃಷ್ಟಿ ಇರಲಿಲ್ಲ; ಇಂದಷ್ಟೇ ಅವನಿಗೆ ದೃಷ್ಟಿ ಬಂದಿದೆ; ವೈದ್ಯರ ಶಸ್ತ್ರಚಿಕಿತ್ಸೆಯಿಂದ ಕಣ್ಣು ಕಾಣುವಂತಾಗಿದೆ; ಹಾಗಾಗಿ ಈಗಷ್ಟೇ ಪ್ರಪಂಚವನ್ನು ನೋಡುತ್ತಿರುವುದರಿಂದ ಎಲ್ಲವೂ ಅವನಿಗೆ ಹೊಸದಾಗಿ ಕಾಣಿಸುತ್ತಿದೆ” ಎಂದು.
ಈ ಮಾತುಗಳನ್ನು ಕೇಳಿದ ಯುವಜೋಡಿ ದಿಗ್ಭ್ರಾಂತರಾಗುತ್ತಾರೆ.
ಎಷ್ಟೋ ಸಂದರ್ಭಗಳಲ್ಲಿ ನಾವೂ ಕೂಡ ಹಿಂದೆ ಮುಂದೆ ಆಲೋಚಿಸದೇ ಘಟನೆಗಳಿಗೆ ಪ್ರತಿಕ್ರಿಯೆ ನೀಡುತ್ತೇವೆ. ಪ್ರತಿಯೊಬ್ಬನ ನಡೆ-ನುಡಿಯಲ್ಲಿ ಒಂದು ಹಿನ್ನಲೆ ಇರಬಹುದು. ನಾವು ಅದನ್ನು ಆಲೋಚಿಸಿ ನಿರ್ಧಾರ ಮಾಡಬೇಕು.