ಮಾತು~ಮುತ್ತು : ಲಕ್ಷ್ಮೀ-ಅಲಕ್ಷ್ಮೀ

ಶ್ರೀಸಂಸ್ಥಾನ

ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಲಕ್ಷ್ಮೀ-ಅಲಕ್ಷ್ಮೀ

ಒಮ್ಮೆ ಲಕ್ಷ್ಮೀ ಮತ್ತು ಅಲಕ್ಷ್ಮಿಯರ ನಡುವೆ ‘ಯಾರು ಹೆಚ್ಚು ಚೆಂದ?’ ಎಂಬ ಬಗ್ಗೆ ಚರ್ಚೆ ಏರ್ಪಡುತ್ತದೆ. ಲಕ್ಷ್ಮೀ ತಾನು ಚೆಂದ ಎಂದರೆ ಅಲಕ್ಷ್ಮೀ ತಾನೇ ಹೆಚ್ಚು ಚೆಂದ ಎಂದು ಹೇಳುತ್ತಾಳೆ.
ಇದನ್ನು ಹೇಗೆ ತೀರ್ಮಾನಿಸುವುದು ಎಂದು ಆಲೋಚಿಸಿ, ಭೂಲೋಕಕ್ಕೆ ಹೋಗಿ ಒಬ್ಬ ಸಿರಿವಂತ ವರ್ತಕನಲ್ಲಿ ‘ನಮ್ಮ ಇಬ್ಬರಲ್ಲಿ ಯಾರು ಹೆಚ್ಚು ಚೆಂದ? ಹೇಳು’ ಎಂದು ಕೇಳುತ್ತಾರೆ.

 

ವರ್ತಕ ಗೊಂದಲದಲ್ಲಿ ಬೀಳುತ್ತಾನೆ. ಯಾರು ಚೆಂದವೆಂದರೂ ತೊಂದರೆ ತಪ್ಪಿದ್ದಲ್ಲ ಎಂದು ಅರಿವಾಗುತ್ತದೆ ಅವನಿಗೆ. ಅವನು ಒಂದು ಉಪಾಯ ಮಾಡಿ,
‘ನಿಮ್ಮ ನಡಿಗೆಯನ್ನು ನೋಡಿ ತೀರ್ಮಾನಿಸಬಹುದು; ಹಾಗಾಗಿ ಲಕ್ಷ್ಮೀ ಮುಂದಾಗಿ ಹತ್ತು ಹೆಜ್ಜೆ ನಡೆದು ಬರಲಿ; ಅಲಕ್ಷ್ಮೀ ಹಿಂತಿರುಗಿ ಹತ್ತು ಹೆಜ್ಜೆ ಹೋಗಲಿ’ ಎನ್ನುತ್ತಾನೆ.

 

ಅವರು ಹಾಗೇ ಮಾಡಲು ವರ್ತಕ ಹೇಳುತ್ತಾನೆ, ‘ಲಕ್ಷ್ಮೀ ಬರುವಾಗ ಚೆಂದ ಅಲಕ್ಷ್ಮೀ ಹೋಗುವಾಗ ಇನ್ನೂ ಚೆಂದ; ಇಬ್ಬರೂ ಚೆಂದದಲ್ಲಿ ಸಮಾನ.’

 

ಆಗ ಇಬ್ಬರಿಗೂ ಸಂತೋಷವಾಗಿ ವರ್ತಕನನ್ನು ಹರಸುತ್ತಾರೆ.

 

ಅದೇ ರೀತಿ ಜೀವನದಲ್ಲಿ ಒಳಿತು ಕೆಡುಕು ಎರಡೂ ಇರುತ್ತವೆ. ಒಳಿತು ಬರುವಾಗ ಸಂತೋಷವಾದರೆ; ಕೆಡುಕು ಹೋಗುವಾಗ ಸಂತೋಷವಾಗುತ್ತದೆ. ರಾತ್ರಿಯೇ ಇಲ್ಲದಿದ್ದರೆ ಬೆಳಕಿಗೆ ಏನು ಮಹತ್ತ್ವ? ಜೀವನದಲ್ಲಿ ಎರಡನ್ನೂ ಅನುಭವಿಸಬೇಕು. ನಾವು ಒಳ್ಳೆಯ ವಿಚಾರಗಳನ್ನು ಸ್ವಾಗತಿಸಿ, ಕೆಟ್ಟವಿಚಾರಗಳಿಗೆ ವಿದಾಯ ಹೇಳಿ, ನಮ್ಮ ಜೀವನವನ್ನು ಸುಗಮ ಮಾಡಿಕೊಳ್ಳಬೇಕು ಎಂಬುದೇ ಈ ಕಥೆಯ ತಿರುಳು.

Leave a Reply

Your email address will not be published. Required fields are marked *