ಒಮ್ಮೆ ಒಬ್ಬ ವ್ಯಕ್ತಿ, ನಿಜವಾದ ಗುರು ಬೇಕು ಎಂದು ಅರಸುತ್ತಿದ್ದ. ಆದರೆ ಅವನಿಗೆ ಯಾರನ್ನು ನೋಡಿದರೂ ಕಪಟಿಗಳು, ಲೋಭಿಗಳು, ನಯವಂಚಕರಾಗಿ ಕಂಡು ಬರುತ್ತಾರೆ. ಒಮ್ಮೆ ಸರಿಯಾದ ಗುರು ಒಬ್ಬ ಸಿಗುತ್ತಾನೆ.
ಅವನನ್ನು ಈ ವ್ಯಕ್ತಿ ನಿಜವಾದ ಗುರು ಎಂದು ಅಂದುಕೊಂಡು ಅವನ ಶಿಷ್ಯಮಿತ್ರರಲ್ಲಿ ಹೇಳುತ್ತಾನೆ-
“ಅಂತೂ ನನಗೆ ನಿಜವಾದ ಗುರು ದೊರಕಿದ್ದಾರೆ” ಎಂದು.
ಆಗ ಮಿತ್ರರು ಕೇಳುತ್ತಾರೆ-
“ಹೇಗೆ ನೀನು ಗುರುವನ್ನು ಅಳೆದೆ? ಯಾವುದಾದರೂ ಮಾನದಂಡ ಬೇಕಲ್ಲವೇ?”
ಅದಕ್ಕೆ ಈ ವ್ಯಕ್ತಿ-
“ಆ ಗುರುವಿನ ಒಂದು ಮಾತಿನಿಂದ ನನಗೆ ಗೊತ್ತಾಯಿತು” ಎಂದ.
ಅದೇನೆಂದು ಕೇಳಿದಾಗ-
“ಆ ಗುರು ‘ನೀನು ನಿಜವಾದ ಪರಿಪೂರ್ಣ ಶಿಷ್ಯ’ ಎಂದು ಹೇಳಿದರು” ಎಂದ.
ಅಲ್ಲಿಯೂ ಮಮತೆಯೇ ಕಾಣುತ್ತದೆ. ಇವನು ನಮ್ಮ ಶಿಷ್ಯ, ಇವರು ನಮ್ಮ ಗುರುಗಳು, ಇದು ನನ್ನ ಕಾರು, ಇದು ನನ್ನ ಮನೆ ಇತ್ಯಾದಿಯಾಗಿ ಎಲ್ಲಡೆಯಲ್ಲಿ ಅಹಂ ಕಾಣುತ್ತದೆ. ಆದರೆ ವಾಸ್ತವಿಕವಾಗಿ ಗುರು ಶಿಷ್ಯರನ್ನು ಆತ್ಮದಿಂದ ಅಳೆಯಬೇಕು. ದರ್ಶನ ಮಾತ್ರದಿಂದಲೇ ಇವರು ನನ್ನ ಗುರು ಎನಿಸಬೇಕು. ಗುರುವಿಗೆ ಇವನು ನಿಜವಾದ ಶಿಷ್ಯ ಎನಿಸಬೇಕು. ಮಮತೆಯನ್ನು ದೂರ ಮಾಡುವವನು, ಆತ್ಮೋದ್ಧಾರದ ದಾರಿ ತೋರುವವನೇ ನಿಜವಾದ ಗುರು ಎಂದೆನಿಸಿಕೊಳ್ಳುತ್ತಾನೆ.