ಒಂದು ದಿನ ಒಂದು ಪುಟ್ಟ ಇರುವೆ ತನಗಿಂತ ಎಷ್ಟೋ ಭಾರವಾದ ಒಂದು ಹುಲ್ಲುಕಡ್ಡಿಯನ್ನು ಬೆನ್ನಿನ ಮೇಲೆ ಹೊರಿಸಿಕೊಂಡು ಪ್ರಯಾಣಿಸುತ್ತಿರುತ್ತದೆ. ಅದು ಭಾರವಾದ್ದರಿಂದ ಬಹಳ ಕಷ್ಟಪಟ್ಟು ಇರುವೆ ಸಾಗುತ್ತಿರುವಾಗ ಅನೇಕ ಅಡೆತಡೆಗಳು ಎದುರಾಗುತ್ತವೆ. ಅವುಗಳನ್ನೆಲ್ಲ ಎದುರಿಸಿ ಹೇಗೂ ಕಷ್ಟಪಟ್ಟು ಒಂದು ಸ್ಥಳಕ್ಕೆ ಬರುವಾಗ ಅಲ್ಲಿ ಒಂದು ದೊಡ್ಡದಾದ ಕಣಿವೆ ಇರುತ್ತದೆ. ಅದನ್ನು ದಾಟಲು ಸಾಧ್ಯವಾಗುವುದಿಲ್ಲ. ಆಗ ಇರುವೆ ತುಂಬಾ ಯೋಚಿಸಿ ತಾನು ತಂದ ಹುಲ್ಲುಕಡ್ಡಿಯನ್ನೇ ಕಾಲುಸಂಕವಾಗಿ ಮಾಡಿಕೊಂಡು ಕಣಿವೆಯನ್ನು ದಾಟಿ ಮತ್ತೊಮ್ಮೆ ಹುಲ್ಲುಕಡ್ಡಿಯನ್ನು ಹೊತ್ತುಕೊಂಡು ತನ್ನ ಮನೆಯ ಸಮೀಪ ಬರುತ್ತದೆ. ಮನೆಯೆಂದರೆ ಭೂಮಿಯೊಳಗಿರುವ ಬಿಲ. ಆ ಬಿಲಕ್ಕೆ ಅತ್ಯಂತ ಸಣ್ಣದಾದ ಬಾಗಿಲುರೂಪದ ಕಿಂಡಿ ಇರುತ್ತದೆ. ಆದರೆ ಆ ಬಿಲದ ಬಾಗಿಲು ಅತ್ಯಂತ ಚಿಕ್ಕದಾದ್ದರಿಂದ ಇರುವೆ ತಂದಿರುವ ಹುಲ್ಲುಕಡ್ಡಿ ಎಷ್ಟೂ ಪ್ರಯತ್ನಿಸಿದರೂ ಒಳಗೆ ಹೋಗುವುದಿಲ್ಲ. ಆಗ ಆ ಇರುವೆ ನಿರಾಶೆಯಿಂದ ಆ ಹುಲ್ಲುಕಡ್ಡಿಯನ್ನು ಅಲ್ಲಿಯೇ ಬಿಟ್ಟು ತಾನು ಮಾತ್ರ ಬಿಲದೊಳಗೆ ಹೋಗುತ್ತದೆ.
ನಮ್ಮೆಲ್ಲರ ಜೀವನದಲ್ಲೂ ಹಾಗೇ ಎಷ್ಟೊ ಕಷ್ಟಪಟ್ಟು ಹೊರಲಾರದ ಹೊರೆಹೊತ್ತು, ಅದೆಷ್ಟೋ ಭೌತಿಕವಸ್ತುಗಳನ್ನು ಸಂಗ್ರಹಿಸುತ್ತೇವೆ. ನಾವು ಆ ಮೇಲಿನ ಮನೆಗೆ ಹೋಗುವಾಗ ಎಲ್ಲವನ್ನೂ ಬಿಟ್ಟು ತೆರಳಬೇಕಾಗುತ್ತದೆ. ಆಗ ನಮಗೆ ‘ಇಲ್ಲಿರುವುದೆಲ್ಲ ಸುಮ್ಮನೇ; ಅಲ್ಲಿರುವುದು ನಮ್ಮ ಮನೆ’ ಎಂಬ ಸತ್ಯದ ಅರಿವಾಗುತ್ತದೆ. ಈ ಎಚ್ಚರಿಕೆಯಿಂದ ನಮ್ಮ ಜೀವನವನ್ನು ನಡೆಸಿದಾಗ ಪ್ರಪಂಚದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ. ಈ ಇರವೆಯ ಕಥೆಯಿಂದ ನಮ್ಮ ಇರುವನ್ನು ನೋಡಿದಾಗ ಸತ್ಯದ ಅರಿವಾಗುತ್ತದೆ.