ಗೋವಿನ ಮೇವಿಗಾಗಿ ಹಲಸಿನ ಮೇಳ ; ಶ್ಲಾಘನೀಯ ಕಾರ್ಯ – ಶ್ರೀಸಂಸ್ಥಾನ

ಶ್ರೀಸಂಸ್ಥಾನ

ಆಲಕ್ಕೋಡು; ಮೇ 20 : ಹಲಸು ಎಂದರೆ ಚಿನ್ನದ ಬಣ್ಣ, ಚಿನ್ನಕ್ಕಿಲ್ಲದ ಪರಿಮಳ, ಚಿನ್ನಕ್ಕಿಲ್ಲದ ರುಚಿಯನ್ನು ಅದು ಹೊಂದಿದೆ. ಗೋಸೇವೆಗಾಗಿ ತನ್ನ ಶ್ರಮವನ್ನು ಸಮರ್ಪಣೆ ಮಾಡುವ ಮೂಲಕ ಶಿಷ್ಯವೃಂದವು ಗೋರಕ್ಷಣೆಗೆ ಬಹುದೊಡ್ಡ ಕೊಡುಗೆಯನ್ನು ನೀಡಿದೆ. ಗೋವಿನ ಮೇವಿಗಾಗಿ ಹಲಸಿನ ಮೇಳವನ್ನೇ ಆಯೋಜಿಸಿದ ಗೋಪ್ರೇಮಿಗಳ ಕಾರ್ಯ ಶ್ಲಾಘನೀಯವಾಗಿದೆ ಎಂದು ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ತಮ್ಮ ಆಶೀರ್ವಚನ ಸಂದೇಶವನ್ನು ನೀಡಿದರು.

 

ಕಾಸರಗೋಡು ಸಮೀಪದ ಪೆರಿಯ ಆಲಕ್ಕೋಡ್ ವಿಷ್ಣುಪ್ರಸಾದ ಹೆಬ್ಬಾರರ `ಗೋಕುಲ’ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವುಗಳ ಮೇವಿಗಾಗಿ ಜೂನ್ 8 ರಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ನಡೆಯಲಿರುವ ` ಹಲಸು ಮೇಳ ‘ ದ ಕರಪತ್ರವನ್ನು ಅವರು ಲೋಕಾರ್ಪಣೆಗೊಳಿಸಿದರು. ಗೋವಿನ ಸೇವೆಗಾಗಿ ನಾನಾ ರೀತಿಯಲ್ಲಿ ಪ್ರಯತ್ನಿಸಬಹುದು. ಹಲಸಿನ ಮೇಳದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹಲಸಿನ ಉತ್ಪನ್ನಗಳನ್ನು ಖರೀದಿಸುವ ಮೂಲಕ ಗೋಸೇವೆಯ ಪುಣ್ಯವನ್ನು ಪಡೆದುಕೊಳ್ಳಬಹುದು. ಬಾಯಿಗೆ ರುಚಿ ದೇಹಕ್ಕೆ ಪುಷ್ಟಿಯನ್ನು ನೀಡುವ ಹಲಸಿನ ಉತ್ಪನ್ನಗಳನ್ನು ಬಳಸಬೇಕು. ಶಿಷ್ಯವೃಂದದವರು, ಗೋಪ್ರೇಮಿಗಳು ಗೋ ಉತ್ಪನ್ನಗಳನ್ನು ತಯಾರಿಸಿದ ಶ್ರಮದ ಫಲವಾಗಿ ಅವರ ಬದುಕು ಚಿನ್ನದ ಬಣ್ಣ, ಚಿನ್ನದ ಪರಿಮಳ, ಚಿನ್ನದ ಸುಗಂಧವನ್ನು ಪಡೆದುಕೊಳ್ಳಲಿ ಎಂದು ಆಶೀರ್ವದಿಸಿದರು.

 

ಇದೇ ಸಂದರ್ಭದಲ್ಲಿ ಹಲಸು ಮೇಳ ಕಾರ್ಯಾಗಾರದಲ್ಲಿ ತಯಾರಿಸಿದ ಹಪ್ಪಳದ ಕಟ್ಟುಗಳನ್ನು ಶ್ರೀಪೀಠಕ್ಕೆ ಸಮರ್ಪಣೆ ಮಾಡಿ, ಆಶೀರ್ವಾದವನ್ನು ಪಡೆದು ಹಪ್ಪಳದ ಪ್ರಥಮ ಮಾರಾಟವನ್ನು ಉದ್ಘಾಟಿಸಲಾಯಿತು. ಪೂಚಕ್ಕಾಡು ವಿಷ್ಣು ಹೆಬ್ಬಾರ್ ದಂಪತಿಗಳು, ಹಿರಿಯ ವಕೀಲರಾದ ಶಂಭು ಶರ್ಮಾ ಬೆಂಗಳೂರು, ಹೊಸದಿಗಂತ ಪತ್ರಿಕೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಪಿ.ಎಸ್. ಮತ್ತಿತರರು ಹಪ್ಪಳದ ಕಟ್ಟುಗಳನ್ನು ಖರೀದಿಸಿ ಪುಣ್ಯಕೋಟಿಯ ಸೇವೆಯಲ್ಲಿ ಭಾಗಿಯಾದರು. ಹಲಸು ಮೇಳದ ಸಂಘಟಕರಾದ ಡಾ| ವೈ.ವಿ.ಕೃಷ್ಣಮೂರ್ತಿ, ಶಿವಪ್ರಸಾದ ವರ್ಮುಡಿ, ಬಾಲಸುಬ್ರಹ್ಮಣ್ಯ ಸರ್ಪಮಲೆ, ಈಶ್ವರಿ ಬೇರ್ಕಡವು, ಕುಸುಮಾ ಪೆರ್ಮುಖ, ಸುಬ್ರಹ್ಮಣ್ಯ ಭಟ್ಟ ಗಬ್ಬಲಡ್ಕ, ವೈ.ಕೆ.ಗೋವಿಂದ ಭಟ್ಟ, ಗೋವಿಂದ ಬಳ್ಳಮೂಲೆ, ಪ್ರೊ.ಶ್ರೀಕೃಷ್ಣ ಭಟ್ಟ ದೇವಕಿ ಪನ್ನೆ, ಕಿರಣಾ ಮೂರ್ತಿ, ಲಕ್ಷ್ಮೀ ವಿ.ಭಟ್ಟ, ಸುಲೋಚನಾ, ಈಶ್ವರ ಭಟ್ಟ ಉಳುವಾನ, ವಿವಿಧ ವಲಯಗಳ ಪದಾಧಿಕಾರಿಗಳು, ಹಲಸು ಮೇಳದ ಸೇವಾಬಿಂದುಗಳು ಜೊತೆಗಿದ್ದರು.

Author Details


Srimukha

Leave a Reply

Your email address will not be published. Required fields are marked *