ಒಮ್ಮೆ ಒಬ್ಬ ತಾಯಿ ತನ್ನ ಏಕೈಕ ಸಂತಾನವಾಗಿದ್ದ ತನ್ನ ಮಗನನ್ನು ಅಸೌಖ್ಯದ ಕಾರಣದಿಂದಾಗಿ ಕಳೆದುಕೊಳ್ಳುತ್ತಾಳೆ. ಆ ತಾಯಿಗೆ ದುಃಖ ತಡೆಯಲಾಗುವುದಿಲ್ಲ. ಅವಳು ಒಬ್ಬ ಸಂತನನ್ನು ಭೇಟಿಯಾಗಿ ತನ್ನ ದುಃಖವನ್ನು ತೋಡಿಕೊಂಡು ತನ್ನ ಮಗನನ್ನು ಬದುಕಿಸಿಕೊಡುವಂತೆ ಪರಿಪರಿಯಾಗಿ ಬೇಡಿಕೊಳ್ಳುತ್ತಾಳೆ. ಯಾವ ರೀತಿ ಸಮಾಧಾನ ಮಾಡಿದರೂ ಈ ತಾಯಿಯ ದುಃಖ ಕಡಿಮೆಯಾಗುವುದಿಲ್ಲ ಎಂದು ಅರಿತ ಸಂತ ಆ ತಾಯಿಯ ಹತ್ತಿರ-
“ಈ ಊರಿನಲ್ಲಿರುವ ಮನೆಗೆ ತೆರಳಿ ಯಾರ ಮನೆಯಲ್ಲಿ ಈವರೆಗೂ ಸಾವು-ನೋವು ಸಂಭವಿಸಿಲ್ಲವೋ ಆ ಮನೆಯಿಂದ ಸ್ವಲ್ಪ ಸಾಸಿವೆಯನ್ನು ತೆಗೆದುಕೊಂಡು ಬಾ, ನಿನ್ನ ಮಗನನ್ನು ಬದುಕಿಸುತ್ತೇನೆ” ಎನ್ನುತ್ತಾನೆ.
ಆ ತಾಯಿ ಲಗುಬಗೆಯಿಂದ ಮೊದಲ ಮನೆಗೆ ಹೋದಾಗ ಅಲ್ಲಿ ಸಾವಾಗಿರುವುದನ್ನು ಕೇಳುತ್ತಾಳೆ. ಅವರನ್ನು ಇವಳೇ ಸಮಾಧಾನ ಮಾಡಬೇಕಾಗುತ್ತದೆ. ಹೀಗೆ ಮನೆಯಿಂದ ಮನೆಗೆ ಹೋದಾಗ ಎಲ್ಲರ ಮನೆಗಳಲ್ಲೂ ಒಂದಲ್ಲ ಒಂದು ಸಾವು ನೋವು ಕಾಣುತ್ತಾಳೆ. ಅವರನ್ನೆಲ್ಲ ಸಮಾಧಾನ ಮಾಡುತ್ತಾ ಇವಳಿಗೆ ದುಃಖವೇ ಮರೆಯಾಗುತ್ತದೆ. ಸಾವಿಲ್ಲದ ನೋವಿಲ್ಲದ ಮನೆ ಈ ಪ್ರಪಂಚದಲ್ಲಿ ಇಲ್ಲ ಎಂಬ ಸತ್ಯ ಅರಿವಾಗುತ್ತದೆ. ಹಿಂತಿರುಗಿ ಬಂದ ತಾಯಿ ಸಂತನಲ್ಲಿ ತನಗೆ ಸತ್ಯದ ಅರಿವಾಗಿದೆ ಎನ್ನುತ್ತಾಳೆ.
ಈ ಕತೆಯ ಸಾರಾಂಶವೆಂದರೆ ಬೇರೆಯವರ ದುಃಖವನ್ನು ನಿವಾರಿಸಲು ಪ್ರಯತ್ನಿಸಿದಾಗ ನಮ್ಮ ದುಃಖವೇ ಇಲ್ಲವಾಗುತ್ತದೆ.