ಒಬ್ಬ ಮಹಾಶಿವಭಕ್ತನಿದ್ದ. ಅವನದೊಂದು ವ್ರತವಿತ್ತು. ಅದೆಂದರೆ ಎಲ್ಲಿ ಶಿವ ದೇವಾಲಯ ಕಾಣುತ್ತದೆಯೋ ಅಲ್ಲಿ ಶಿವನನ್ನು ಪೂಜಿಸುವುದು; ಹಾಗೂ ಯಾವುದೇ ಸಂದರ್ಭದಲ್ಲಿಯೂ ವಿಷ್ಣುವನ್ನು ಪೂಜೆ ಮಾಡಬಾರದು ಎಂಬುದು ಅವನ ಸಂಕಲ್ಪ. ಈ ವ್ರತದಂತೆ ಅವನು ಅನು ದಿನವೂ ಶಿವನನ್ನೇ ಪೂಜಿಸುತ್ತಾ ವಿಷ್ಣುವಿಗೆ ಪೂಜೆಸಲ್ಲದಂತೆ ಎಚ್ಚರವಹಿಸುತ್ತಾ ಬಂದ.
ಒಮ್ಮೆ ಅವನು ಒಂದು ದೇವಸ್ಥಾನಕ್ಕೆ ಬರುತ್ತಾನೆ. ಅದು ಶಂಕರನಾರಾಯಣ ದೇವಸ್ಥಾನವಾಗಿರುತ್ತದೆ. ಅವನಿಗೆ ಈಗ ತುಂಬ ಸಂದಿಗ್ಧವಾಗುತ್ತದೆ. ಏಕೆಂದರೆ ದೇವಾಲಯದಲ್ಲಿ ಶಿವ ವಿಷ್ಣು ಒಂದೇ ವಿಗ್ರಹದಲ್ಲಿ ಇರುತ್ತಾರೆ. ಅರ್ಧ ಶಿವ ಇನ್ನರ್ಧ ವಿಷ್ಣು. ಏನು ಮಾಡಲಿ? ಎಂದು ಚಿಂತಿತನಾಗುತ್ತಾನೆ. ಶಿವನನ್ನು ಪೂಜಿಸದಿದ್ದರೆ ವ್ರತಭಂಗವಾಗುತ್ತದೆ. ಹಾಗೇ ವಿಷ್ಣುವನ್ನು ಪೂಜಿಸಿದರೂ ಸಂಕಲ್ಪ ಭಂಗವಾಗುತ್ತದೆ.
ಕೊನೆಯಲ್ಲಿ ಅವನು ಒಂದು ತೀರ್ಮಾನಕ್ಕೆ ಬಂದು ಏನೇ ಆಗಲಿ ವ್ರತ ಭಂಗ ಮಾಡಬಾರದು ಎಂದು ವಿಗ್ರಹದಲ್ಲಿ ಶಿವನ ಭಾಗಕ್ಕೆ ಮಾತ್ರ ಅಭಿಷೇಕ, ಪುಷ್ಪಾರ್ಚನೆ, ಆರತಿ, ನೈವೇದ್ಯ ಮಾಡುತ್ತಾನೆ. ಧೂಪ, ದೀಪ ವಿಷ್ಣುವಿನ ಭಾಗಕ್ಕೆ ಹೋಗದಂತೆ ಕೈ ಅಡ್ಡ ಇಟ್ಟು ನೆರವೇರಿಸುತ್ತಾನೆ. ಪೂಜೆಯಿಂದ ಕೃತಾರ್ಥನಾಗಿ ಶಿವನಿಗೆ ನಮಸ್ಕಾರ ಮಾಡಿ ಏಳುತ್ತಾನೆ.
ಆಗ ವಿಷ್ಣು ಪ್ರತ್ಯಕ್ಷನಾಗಿ ಬಿಡುತ್ತಾನೆ. ಶಿವಭಕ್ತನಿಗೆ ಪರಮಾಶ್ಚರ್ಯವಾಗಿ, ದಿಗ್ಭ್ರಾಂತನಾಗಿ ನಿಂತಿರುವಾಗ ವಿಷ್ಣು ಹೇಳುತ್ತಾನೆ-
“ನೀನು ಶಿವನನ್ನು ಆರಾಧಿಸುವಾಗ, ವ್ರತಮಾಡುವಾಗಲೆಲ್ಲ ನನಗೆ ಪೂಜೆ ಸಲ್ಲಬಾರದು ಎಂದು ನಿನ್ನ ಗಮನವೆಲ್ಲವೂ ನನ್ನ ಮೇಲೆ ಇತ್ತು. ನಿನ್ನ ಮನದಲ್ಲಿ ಶಿವನು ನೆಲೆಸಿರದೇ ನಾನೇ ನೆಲೆಸಿದ್ದೆ. ಹಾಗಾಗಿ ನಾನೇ ಬಂದೆ” ಎನ್ನುತ್ತಾನೆ.
ಎಲ್ಲಿ ಮನವೊ ಅಲ್ಲಿಯೇ ನಮನ.