ಒಮ್ಮೆ ಒಂದು ಊರಿನಲ್ಲಿ ಕಪ್ಪೆಗಳ ನಡುವೆ ಒಂದು ಎತ್ತರದ ಕಂಬವನ್ನು ಏರುವ ಸ್ಪರ್ಧೆ ಏರ್ಪಡುತ್ತದೆ. ಈ ಸ್ಪರ್ಧೆಯನ್ನು ನೋಡಲು ಸುತ್ತಮುತ್ತಲಿನ ಪ್ರಾಣಿಗಳೆಲ್ಲವೂ ಬಂದು ಸೇರುತ್ತವೆ. ಸ್ಪರ್ಧೆ ಪ್ರಾರಂಭವಾಗುತ್ತದೆ. ಆಗ ಕೆಲವು ಪ್ರಾಣಿಗಳು-
“ಈ ಕಂಬ ತುಂಬ ಎತ್ತರ ಇರುವುದರಿಂದ ಈ ಪುಟ್ಟ ಪುಟ್ಟ ಕಪ್ಪೆಗಳಿಂದ ಅದನ್ನು ಏರಲು ಸಾಧ್ಯವೇ ಇಲ್ಲ” ಎಂದವು.
ಇನ್ನು ಕೆಲವು ಪ್ರಾಣಿಗಳು-
“ಕಂಬ ತುಂಬ ಜಾರುತ್ತಿರುವುದರಿಂದ ಈ ಕಪ್ಪೆಗಳಿಂದ ಕಂಬ ಏರಲು ಸಾಧ್ಯವಿಲ್ಲ” ಎಂದು ಹೇಳಿಕೊಳ್ಳುತ್ತಿದ್ದವು.
ಈ ಮಾತುಗಳನ್ನು ಕೇಳಿದ ಕಪ್ಪೆಗಳು-
“ಸುಮ್ಮನೆ ಶ್ರಮ ಪಡುವುದು ವ್ಯರ್ಥ; ನಮ್ಮಿಂದ ಈ ಕಂಬ ಏರಲು ಸಾಧ್ಯವಿಲ್ಲ” ಎಂದು ತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತವೆ.
ಆದರೆ ಒಂದು ಪುಟ್ಟ ಕಪ್ಪೆ ಮಾತ್ರ ಅತ್ಯಂತ ಶ್ರಮವಹಿಸಿ ಒಂದೇ ಸಮನೆ ಕಂಬ ಏರಲು ಪ್ರಯತ್ನಿಸಿ ತುದಿಯನ್ನು ಮುಟ್ಟಲು ಯಶಸ್ವಿಯಾಗುತ್ತದೆ. ಎಲ್ಲರಿಗೂ ಆಶ್ಚರ್ಯ. ಹಿಂತಿರುಗಿ ಬಂದ ಆ ಕಪ್ಪೆಯನ್ನು ಪ್ರಾಣಿಗಳೆಲ್ಲ
“ಅದು ಹೇಗೆ ನೀನು ಏರಿದೆ?” ಎಂದು ಕೇಳುತ್ತವೆ. “ನನಗೆ ಕಿವಿ ಇಲ್ಲವಾದ್ದರಿಂದ ನೀವು ಹೇಳಿದ ಯಾವ ಮಾತು ನನಗೆ ಕೇಳಿಸಲಿಲ್ಲ” ಎಂದು ಆ ಕಪ್ಪೆಯು ಹೇಳುತ್ತದೆ.
ಇದರಲ್ಲಿ ಎರಡು ಸಂದೇಶಗಳಿವೆ. ಒಂದು ಸಮಾಜಕ್ಕೆ, ಇನ್ನೊಂದು ವ್ಯಕ್ತಿಗೆ. ಸಮಾಜಕ್ಕೆ ಸಂದೇಶವೆಂದರೆ ಯಾವ ಸಂದರ್ಭದಲ್ಲಿಯೂ ನಿರುತ್ಸಾಹದ ಮಾತುಗಳನ್ನು ಆಡಬಾರದು. ವ್ಯಕ್ತಿಗಳಿಗೆ ಸಂದೇಶವೆಂದರೆ ಅಂತಹ ಮಾತುಗಳನ್ನು ಯಾರಾದರೂ ಆಡಿದರೆ ಅದನ್ನು ನೀವು ಕೇಳಿಸಿಕೊಳ್ಳಬೇಡಿ, ಸದಾ ಕ್ರಿಯಾಶೀಲರಾಗಿರಿ ಎಂದು.