ಅದೊಂದು ಆಶ್ರಮ. ಆ ಆಶ್ರಮದಲ್ಲಿ ಗುರುಗಳು, ಶಿಷ್ಯರು ಎಲ್ಲರೂ ಇದ್ದರು. ಪ್ರತಿದಿನ ಗುರುಗಳು ಶಿಷ್ಯರಿಗೆ ಧ್ಯಾನ ಹೇಳಿಕೊಡುತ್ತಿದ್ದರು. ಹೀಗೆ ಧ್ಯಾನ ಮಾಡುತ್ತಿರುವಾಗ ಆಶ್ರಮದಲ್ಲಿರುವ ಒಂದು ಬೆಕ್ಕು ಅಲ್ಲಿ ಆಟವಾಡುತ್ತಾ, ನೆಗೆಯುತ್ತಾ ಶಿಷ್ಯರ ಮತ್ತು ಗುರುಗಳ ತೊಡೆಯ ಮೇಲೆ ಕೂರುತ್ತಾ ಧ್ಯಾನಕ್ಕೆ ಭಂಗ ಮಾಡುತ್ತಿತ್ತು. ಆಗ ಗುರುಗಳು ಧ್ಯಾನದ ಸಮಯದಲ್ಲಿ ಬೆಕ್ಕನ್ನು ಒಂದು ಕಡೆ ಕಟ್ಟಿ ಹಾಕುವಂತೆ ಶಿಷ್ಯರಿಗೆ ಹೇಳುತ್ತಿದ್ದರು.
ಹೀಗೆ ಎಷ್ಟೋ ಕಾಲವಾಯಿತು. ಆ ಗುರುಗಳು ಮುಕ್ತರಾಗಿ ಮತ್ತೊಬ್ಬ ಗುರುಗಳು ಬಂದರು. ಆಶ್ರಮದಲ್ಲಿ ಎಂದಿನಂತೆ ಧ್ಯಾನ, ಬೆಕ್ಕು ಕಟ್ಟಿ ಹಾಕುವುದು ಮುಂದುವರಿಯಿತು.
ಒಮ್ಮೆ ಆಶ್ರಮದಲ್ಲಿದ್ದ ಬೆಕ್ಕು ಸತ್ತು ಹೋಯಿತು. ಬೆಕ್ಕೇ ಇಲ್ಲದಿದ್ದರಿಂದ ಬೇರೆ ಊರಿನಿಂದ ಬೆಕ್ಕನ್ನು ಖರೀದಿ ಮಾಡಿ ತಂದು ಕಟ್ಟಿ ಹಾಕುವ ಸಂಪ್ರದಾಯ ಮುಂದುವರಿಯಿತು. ಆಶ್ರಮದಲ್ಲಿ ಗುರುಪರಂಪರೆಯೊಂದಿಗೆ ಬೆಕ್ಕಿನ ಪರಂಪರೆಯೂ ಮುಂದುವರಿಯಿತು. ಕಾಲಾನಂತರದಲ್ಲಿ ಧ್ಯಾನದ ಸಂದರ್ಭದಲ್ಲಿ ಬೆಕ್ಕನ್ನು ಕಟ್ಟಿ ಹಾಕುವ ಔಚಿತ್ಯದ ಬಗ್ಗೆ ಉದ್ಗ್ರಂಥಗಳೇ ಬಂದವು.
ಹೌದು ನಮ್ಮಲ್ಲಿ ಮತ್ತು ವಿದೇಶಗಳಲ್ಲಿಯೂ ಅದೆಷ್ಟೋ ಸಂಪ್ರದಾಯಗಳು, ಕಂದಾಚಾರಗಳು, ಮೌಢ್ಯಗಳು ಬೆಳೆದು ಬಂದಿವೆ. ಅವುಗಳನ್ನು ಅರ್ಥಮಾಡಿಕೊಳ್ಳದೇ ನಾವು ಕುರುಡರಾಗಿ ಆಚರಿಸುತ್ತಾ ಬಂದಿರುವುದರಿಂದ ಅದಕ್ಕೆ ಮೌಲ್ಯವೇ ಇಲ್ಲದಂತಾಗಿದೆ. ಆದ್ದರಿಂದ ಏನೇ ಮಾಡಿದರೂ ಇದು ಏನು? ಏಕೆ ಮಾಡಬೇಕು? ಇದರ ಅರ್ಥವೇನು? ಎಂದು ತಿಳಿದು ಆಚರಿಸಿದಾಗ ಅದಕ್ಕೊಂದು ಮೌಲ್ಯ ಬರುತ್ತದೆ. ಮೂಢನಂಬಿಕೆಗಳು ದೂರವಾಗುತ್ತವೆ.