ಒಂದು ದಿನ ಒಂದು ಪುಟ್ಟ ಮಗು ತನ್ನ ತಂದೆಯನ್ನು,
“ನಿನಗೆ ಒಂದು ಗಂಟೆಗೆ ಎಷ್ಟು ಆದಾಯ ಬರುತ್ತದೆ?” ಎಂದು ಕೇಳುತ್ತದೆ.
ತಂದೆ ಉತ್ತರ ಹೇಳುವುದಿಲ್ಲ. ಮಗು ಪದೇ ಪದೇ ಅದೇ ಪ್ರಶ್ನೆಯನ್ನು ಕೇಳಿದಾಗ ತಂದೆ,
“ಒಂದು ಗಂಟೆಗೆ ನನ್ನ ಸಂಪಾದನೆ 500 ರೂಪಾಯಿಗಳು” ಎನ್ನುತ್ತಾನೆ.
ಆಗ ಮಗು, “ನನಗೆ 300 ರೂಪಾಯಿ ಕೊಡು” ಎನ್ನುತ್ತದೆ.
ತಂದೆ ಸಿಟ್ಟಿನಿಂದ, “ಇದಕ್ಕಾಗಿಯೇ ನನ್ನನ್ನು ಎಷ್ಟು ಪಗಾರ ಬರುತ್ತದೆ ಎಂದು ಕೇಳಿರುವೆಯಲ್ಲವೆ?” ಎನ್ನುತ್ತಾನೆ.
ಮೊದಲ ಬಾರಿ ಕೇಳಿದಾಗ ತಂದೆ ಕೊಡುವುದಿಲ್ಲ. ಆದರೆ ಮಗು ಪಟ್ಟು ಬಿಡದೇ ನನಗೆ ಬೇಕೇಬೇಕು ಎಂದು ಪರಿಪರಿಯಾಗಿ ಕೇಳುತ್ತದೆ. ಆಗ ತಂದೆ 300 ರೂಪಾಯಿ ಕೊಡುತ್ತಾನೆ. ಹಣ ಪಡೆದ ಮಗು ಸೀದಾ ತನ್ನ ರೂಮಿಗೆ ಓಡಿ ಹೋಗುತ್ತದೆ. ತಂದೆಯೂ ಕುತೂಹಲದಿಂದ ಹಿಂಬಾಲಿಸುತ್ತಾನೆ. ಅಲ್ಲಿ ಮಗು ಹಾಸಿಗೆಯ ಅಡಿಯಲ್ಲಿ ಇಟ್ಟಿರುವ 200 ರೂಪಾಯಿಗಳನ್ನು ತೆಗೆಯುತ್ತದೆ.
ತಂದೆ ಆಶ್ಚರ್ಯದಿಂದ “ನಿನ್ನ ಹತ್ತಿರ ಹಣವಿದ್ದರೂ ಏಕೆ ಪುನಃ ನನ್ನಿಂದ ಪಡೆದುಕೊಂಡೆ?!” ಎಂದು ಕೇಳುತ್ತಾನೆ. ಮಗು ಒಟ್ಟಿಗೆ 500 ರೂಪಾಯಿ ಮಾಡಿ ತಂದೆಗೆ ಕೊಟ್ಟು,
“ನಿನ್ನ ಒಂದು ಗಂಟೆಯ ಪಗಾರ ನಾನು ಕೊಡುತ್ತೇನೆ. ನೀನು ಒಂದು ಗಂಟೆ ಮುಂಚಿತವಾಗಿ ಆಫೀಸ್‌ನಿಂದ ಮನೆಗೆ ಬಾ. ಆ ಸಮಯವನ್ನು ನನಗೆ ನೀಡು” ಎನ್ನುತ್ತದೆ. ತಂದೆಗೆ ತನ್ನ ತಪ್ಪಿನ ಅರಿವಾಗುತ್ತದೆ.
ಇದರ ನೀತಿಯೆಂದರೆ ನಮ್ಮ ದುಡಿಮೆಯೊಂದಿಗೆ ಪ್ರತಿದಿನ ಸ್ವಲ್ಪ ಸಮಯವನ್ನು ಮನೆಯವರಿಗೆ ಮೀಸಲಿಡೋಣ. ಹಾಗೂ ಎಲ್ಲದಕ್ಕೂ ಸಮಯ ಕೊಡೋಣ. ತನ್ಮೂಲಕ ನೆಮ್ಮದಿ ಪಡೆಯೋಣ.