ಮಾತು~ಮುತ್ತು : ಸ್ವರ್ಗ ಸುಖ – ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು

ಶ್ರೀಸಂಸ್ಥಾನ

 

ಒಂದು ಊರಿನಲ್ಲಿ ಇಬ್ಬರು ಸ್ನೇಹಿತರಿದ್ದರು. ಒಬ್ಬ ಜನೋಪಕಾರಿಯಾಗಿ ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದರೆ ಮತ್ತೊಬ್ಬ ಪರರ ಕಂಟಕನಾಗಿ ದುಷ್ಟ ಎನಿಸಿಕೊಂಡಿದ್ದ. ಒಳ್ಳೆಯ ವ್ಯಕ್ತಿ ತನ್ನ ಸ್ನೇಹಿತನ ಕೆಟ್ಟತನವನ್ನು ಕಡಿಮೆ ಮಾಡಲು ಇನ್ನಿಲ್ಲದಂತೆ ಶ್ರಮವಹಿಸಿದರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಈ ಒಳ್ಳೆಯ ವ್ಯಕ್ತಿ ಅನಂತರ ಸತ್ತು ಹೋಗುತ್ತಾನೆ. ತನ್ನ ಒಳ್ಳೆಯ ಕೆಲಸಗಳಿಂದ ದೇವಲೋಕದಲ್ಲಿ ದೇವತ್ವದ ಸ್ಥಾನ ದೊರೆಯುತ್ತದೆ. ಹೀಗಿರುವಾಗ ಒಮ್ಮೆ ಅವನಿಗೆ ಭೂಲೋಕದಲ್ಲಿದ್ದ ಅವನ ಸ್ನೇಹಿತನ ನೆನಪಾಗುತ್ತದೆ. ಅವನನ್ನೂ ಸ್ವರ್ಗಕ್ಕೆ ಕರೆದುಕೊಂಡ ಬರಬೇಕೆಂದು ಆಲೋಚಿಸಿ ಅವನನ್ನು ದೇವಲೋಕದಲ್ಲಿ, ಭೂಲೋಕದಲ್ಲಿ ಎಲ್ಲ ಕಡೆ ಹುಡುಕಾಡಿದಾಗ ಒಂದು ತಿಪ್ಪೆಗುಂಡಿಯಲ್ಲಿ ಆ ಸ್ನೇಹಿತ ಹುಳುವಾಗಿ ಇರುವುದನ್ನು ನೋಡುತ್ತಾನೆ.
ಅದರ ಹತ್ತಿರ ಹೋಗಿ ದೇವತ್ವವನ್ನು ಪಡೆದ ಈ ವ್ಯಕ್ತಿ ಕೇಳುತ್ತಾನೆ-
“ನನ್ನ ಪರಿಚಯವಾಯಿತೇ?”
ಅವನು ಇಲ್ಲ ಎಂದು ಹೇಳಲು, “ನಾನು ಹಿಂದಿನ ಜನ್ಮದಲ್ಲಿ ನಿನ್ನ ಸ್ನೇಹಿತನಾಗಿದ್ದೆ; ಈಗ ಸ್ವರ್ಗ ಸುಖ ಅನುಭವಿಸುತ್ತಿದ್ದೇನೆ; ನಿನ್ನನ್ನೂ ಕರೆದುಕೊಂಡು ಹೋಗುತ್ತೇನೆ ಬಾ” ಎಂದು ಒತ್ತಾಯಿಸುತ್ತಾನೆ.

 

ಆದರೆ ಆ ಹುಳು ಒಪ್ಪುವುದೇ ಇಲ್ಲ.
“ನಾನು ಇಲ್ಲಿಯೇ ಸ್ವರ್ಗ ಸುಖ ಅನುಭವಿಸುತ್ತಿದ್ದೇನೆ” ಎಂದು ಹೇಳುತ್ತದೆ.
ಆಗ ಇವನು ಆ ಹುಳವನ್ನು ಹೇಗಾದರೂ ಮಾಡಿ ಸ್ವರ್ಗಕ್ಕೆ ಕರೆದುಕೊಂಡು ಹೋಗಬೇಕೆಂದು ಕೈಯಿಂದ ಬಲವಾಗಿ ಎಳೆಯುತ್ತಾನೆ. ಆದರೆ ಇವನು ಎಳೆದಷ್ಟೂ ಅದು ಗಟ್ಟಿಯಾಗಿ ತಿಪ್ಪೆಯನ್ನೇ ಆಶ್ರಯಿಸುತ್ತದೆ. ನಿರಾಶನಾಗಿ ಇವನು ಸ್ವರ್ಗಕ್ಕೆ ಹೋಗುತ್ತಾನೆ.

 

ಹೌದು ದುಷ್ಟರನ್ನು ಯಾವ ಉಪದೇಶದಿಂದಲೂ ತಿದ್ದಲು ಸಾಧ್ಯವಿಲ್ಲ. ರಾಮನ ನಡೆಯಾಗಲೀ, ಕೃಷ್ಣನ ಯುಕ್ತಿಯಾಗಲೀ, ಗೌತಮನ ಕ್ಷಮೆಯಾಗಲಿ ಅವರನ್ನು ತಿದ್ದಲಾರದು. ಜನ್ಮಾಂತರದ ಕರ್ಮವನ್ನು ಅವರು ಅನುಭವಿಸಬೇಕಾದ್ದರಿಂದ ಎಲ್ಲ ಉಪದೇಶಗಳೂ ‘ಗೋರ್ಕಲ್ಲ ಮೇಲೆ ಮಳೆ ಸುರಿದಂತೆ’, ‘ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ’ ವ್ಯರ್ಥವೇ ಸರಿ.

Author Details


Srimukha

Leave a Reply

Your email address will not be published. Required fields are marked *