ಮಠದ ಭಕ್ತರಿಗೆ, ಅನುಯಾಯಿಗಳಿಗೆ ಸಂಸ್ಕಾರವೆನ್ನುವುದರ ವಿಸ್ತೃತ ಅರ್ಥವ್ಯಾಖ್ಯಾನ ಬೇಕಾಗದು. ಏಕೆಂದರೆ ಅದು ಅವರಿಗೆಲ್ಲ ಸಿಕ್ಕಿರುತ್ತದೆ. ಮಠಗಳನ್ನು ಕೇವಲ ಧಾರ್ಮಿಕ ಸ್ಥಳವೆಂದು ನೋಡುವವರಿಗೆ ದೇವಾಲಯ ಮತ್ತು ಮಠ ಪ್ರತ್ಯೇಕವಾಗಿ ಕಾಣದು. ನಮಗೆ ಭಕ್ತಿಯಿದೆ, ಆದರೆ ಮಠಕ್ಕೇ ಏಕೆ ಹೋಗಬೇಕು? ದೇವಸ್ಥಾನಕ್ಕೆ ಹೋಗಿ ಕೈ ಮುಗಿಯುತ್ತೇನೆ ಸಾಕು ಎನ್ನುವವರೂ ನಮ್ಮ ನಡುವೆ ಇದ್ದಾರೆ. ದೇವರೂ ಇಲ್ಲ, ಮಠವೂ ಸುಳ್ಳು ನಾನು ನಾಸ್ತಿಕ ಎನ್ನುವವರೂ ಇದ್ದಾರೆ. ಮನುಷ್ಯನ ಬುದ್ಧಿಗೆ ಇಲ್ಲದ್ದರ ಕುರಿತು ತುಡಿಯ ಹೆಚ್ಚು. ಇತ್ತೀಚೆಗೆ ನಾಸ್ತಿಕನೊಬ್ಬನೊಂದಿಗೆ ಮಾತನಾಡುವಾಗ ತನ್ನ ವೈರಿಗೆ ದೇವರೇ ಒಳ್ಳೆಯ ಬುದ್ಧಿ ಕೊಡಲಿ ಎಂದು ಹಾರೈಸಿದ್ದ!
ನಾನು ಧಾರ್ಮಿಕ ಸಂಸ್ಕಾರಗಳ ಕುರಿತು ಚರ್ಚಿಸುತ್ತಿಲ್ಲ. ನಾನೆತ್ತಿಕೊಂಡಿರುವ ವಿಷಯ ಸಾಮಾಜಿಕ ಸಂಸ್ಕಾರ. ಸಮಾಜದಲ್ಲಿ ದಾರಿತಪ್ಪಿದವನ ಕುರಿತು ಮಾತನಾಡುವಾಗ ಆತ ಸಂಸ್ಕಾರವಿಲ್ಲದ ಮನುಷ್ಯ ಎನ್ನುತ್ತೇವಲ್ಲ ಆ ಸಂಸ್ಕಾರ. ನೀವು ತರ್ಕಿಸಬಹುದಾದ ಸಂಗತಿಯೆಂದರೆ ನಾನು ಸಮಾಜಕ್ಕೆ ಹಿತವಾಗುವ ನಡವಳಿಕೆಯನ್ನೇ ಸಂಸ್ಕಾರವೆನ್ನುತ್ತೇನೆ ಮತ್ತು ಆ ಸಂಸ್ಕಾರವನ್ನೇ ಧರ್ಮವೆನ್ನುತ್ತೇನೆ. ಧರ್ಮವನ್ನು ಬಿಡುವುದು ಅಂದರೆ ಸಂಸ್ಕಾರರಹಿತನಾಗುವುದು ಅಥವಾ ಸಂಸ್ಕಾರಹೀನನೇ ಧರ್ಮಹೀನ ಎಂಬುದು ನನ್ನ ನಂಬಿಕೆ. ಸಂಸ್ಕಾರವೆಂದರೆ ಸಾಮಾಜಿಕ ನಡವಳಿಕೆ ಎಂದೂ ಕರೆಯಬಹುದು.
ಬೆಳಗ್ಗೆ ಎದ್ದು ಕರಾಗ್ರೇ ವಸತೇ ಲಕ್ಷ್ಮೀ ಹೇಳುವುದರಿಂದ ಹಿಡಿದು ರಾತ್ರಿ ಅಜ್ಜಿಯ ಹಾಸಿಗೆ ಸಮೀಪ ಒಂದು ಚೊಂಬು ಕುಡಿಯುವ ನೀರಿಟ್ಟು ಮಲಗುವವರೆಗಿನ ಜವಾಬ್ದಾರಿಗಳನ್ನು ಕಲಿಸುವುದೇ ಈ ಸಂಸ್ಕಾರ. ಗುರುಹಿರಿಯರನ್ನು ಗೌರವಿಸಲು ಕಲಿಸುವುದೇ ಈ ಸಂಸ್ಕಾರ. ವಿನಯ, ವಿವೇಕ, ಗೌರವ ಮತ್ತು ಪದ್ಧತಿಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಮಹತ್ತ್ವದ ಕೆಲಸ ಸಂಸ್ಕಾರದಿಂದ ಮಾತ್ರ ಸಾಧ್ಯ.
ಬೆಳಗ್ಗೆ ಎದ್ದು ಮುಖ ತೊಳೆದ ತಕ್ಷಣ ದೇವರ ದೀಪ ಬೆಳಗಿ, ಬಾಗಿಲು ಸಾರಿಸಿ ರಂಗೋಲಿ ಹಾಕಿ, ಪ್ರಧಾನ ಬಾಗಿಲಿನ ಗಿಂಡಿಯಲ್ಲಿರುವ ನೀರು ಬದಲಾಯಿಸುವ, ಹಣೆಗೆ ಕುಂಕುಮವಿಟ್ಟು, ಕೈಯ್ಯಲ್ಲಿ ಬಳೆ ತೊಟ್ಟು ಓಡಾಡುವ ಹೆಣ್ಣುಮಗಳನ್ನೊಮ್ಮೆ ಮಾತನಾಡಿಸಿ ನೋಡಿ. ಅವಳಲ್ಲಿರುವ ಮಾನಸಿಕ ಸ್ಥಿಮಿತ, ವೈಚಾರಿಕತೆ, ವಿಷಯವನ್ನು ಅರ್ಥಮಾಡಿಕೊಳ್ಳುವ ಚಾಕಚಕ್ಯತೆ, ಬೆಳಗ್ಗೆ ಎಂಟಕ್ಕೆ ಎದ್ದು ಅಮ್ಮ ಕೊಟ್ಟ ತಿಂಡಿ ತಟ್ಟೆಯನ್ನು ಹಿಡಿದು ಟಿವಿಯೆದುರು ಕುಳಿತು ತಿಂದು ಹೊರಟಾಗ ಶಾಲೆಯವರೆಗೆ ಕಾರಲ್ಲಿ ಡ್ರಾಪ್ ಮಾಡಿ ಬರುವ ಹೆಣ್ಣುಮಗಳಲ್ಲಿ ಏಕಿರುವುದಿಲ್ಲ ಎಂದು ಯೋಚಿಸಿದಾಗ ಸಂಸ್ಕಾರದ ಮಹತ್ತ್ವ ತಿಳಿಯುತ್ತದೆ. ಇಷ್ಟನ್ನು ಹೇಳಿದರೆ ಮಹಿಳಾಮಣಿಗಳು ಸಿಟ್ಟಾಗಬೇಕಿಲ್ಲ. ಗಂಡು ಹುಡುಗರಿಗೂ ಅವರಿಗೆ ನೀಡಬೇಕಾದ ಸಂಸ್ಕಾರ ಸಿಕ್ಕಾಗ ಮಾತ್ರ ಆತ ಸಮಾಜಕ್ಕೊಂದು ಕೊಡುಗೆಯಾಗಬಲ್ಲ. ನಾವು ಚಿಕ್ಕವರಿರುವಾಗ ಹೊರಗೆ ಹೋಗಿ ಬಂದ ತಕ್ಷಣ ಅಂಗಳದಲ್ಲಿರುವ ನಲ್ಲಿ ನೀರಿನಲ್ಲಿ ಕೈಕಾಲು ತೊಳೆದು ಒಳಗೆ ಹೋಗದಿದ್ದರೆ ದಾಸವಾಳ ಬರಲಲ್ಲಿ ಕಾಲ ಮೇಲೆ ಬಾಸುಂಡೆ ಬಿಡಿಸುತ್ತಿದ್ದರು. ಅದೆಲ್ಲವನ್ನೂ ಮೂಢನಂಬಿಕೆಯ ಸಾಲಿನಲ್ಲೇ ಸೇರಿಸಿಬಿಡುವ ವಿಜ್ಞಾನಿಗಳು ಸಾಕಷ್ಟು ಹುಟ್ಟಿದ್ದಾರೆ, ಏಕೆಂದರೆ ಇಂತಹ ಕ್ರಮದ ಹಿಂದಿನ ವಿಜ್ಞಾನ ಅವರಿಗೆ ಅರ್ಥವಾಗಿರುವುದಿಲ್ಲ. ಅದೇಕೆ ಅರ್ಥವಾಗಿರುವುದಿಲ್ಲವೆಂದರೆ ಅವರಲ್ಲಿರುವ ಸಂಸ್ಕಾರದ ಕೊರತೆಯೇ ಕಾರಣ.
ನಾವು ಕಳೆದು ಬಂದ ಬಾಲ್ಯವನ್ನೊಮ್ಮೆ ಹಿಂದಿರುಗಿ ನೋಡಿ. ಅದೇ ಬಾಲ್ಯವನ್ನು ನಮ್ಮ ಮಕ್ಕಳಿಗೆ ಸಿಗುವಂತೆ ಮಾಡಿದ್ದೇವೆಯೇ? ಶಿಕ್ಷಣ ಮತ್ತು ಸಂಸ್ಕಾರವನ್ನು ನಾವು ಜೊತೆಯಲ್ಲೇ ಕೊಂಡೊಯ್ಯಲು ವಿಫಲರಾಗುತ್ತಿದ್ದೇವೆ ಎನಿಸುವುದಿಲ್ಲವೆ? ಎಲ್ಲರೂ ಹಾಗಿಲ್ಲ ಎಂದು ವಾದಿಸುವವರೂ ಇರಬಹುದು, ಆದರೆ ಹಿಂದಿನಂತಿಲ್ಲ ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ. ಇವತ್ತು ಬಹುತೇಕರು ಎದುರು ಸಿಕ್ಕ ಹಿರಿಯರಿಗೂ ಹಸ್ತಲಾಘವ ಮಾಡುತ್ತಾರೆ. ಆದರೆ ನಾವು ಹಿರಿಯರಿಗೆ ಬಾಗಿ ನಮಿಸುತ್ತಿದ್ದೆವು. ಇದನ್ನು ಪಾಶ್ಚಾತ್ಯ ಪ್ರಭಾವ ಎನ್ನುವುದಕ್ಕಿಂತ ಕೀಳರಿಮೆ ಮತ್ತು ಆಲಸ್ಯವೆಂದು ಭಾವಿಸುತ್ತೇನೆ. ಅತಿಥಿಸತ್ಕಾರ ಹೇಗಿರಬೇಕೆಂಬ ಕುರಿತೂ ನಮ್ಮ ಪರಂಪರೆ ತಿಳಿಸಿಕೊಟ್ಟಿತ್ತು. ಮನೆಗೆ ಬಂದ ಅತಿಥಿಗೆ ಬಿಂದಿಗೆ ನೀರಿಟ್ಟು ನಮಸ್ಕರಿಸುವ ಪದ್ಧತಿಯಿತ್ತು. ಇತ್ತೀಚೆಗೆ ಅದು ಕಾಣೆಯೇ ಆಗಿಹೋಯಿತು. ನಮಗೆ ಅದೆಲ್ಲ ಅನವಶ್ಯಕವೆನಿಸಲು ಕಾರಣ ಆ ಆಚರಣೆಗಳ ವೈಜ್ಞಾನಿಕ ಹಿನ್ನೆಲೆಯನ್ನು ನಾವು ತಿಳಿಯದಿರುವುದು ಮತ್ತು ಅವುಗಳ ಕುರಿತು ಮೂಡಿರುವ ಅಸಡ್ಡೆ.
ತೊಂಭತ್ತರ ದಶಕದ ಕೊನೆಯವರೆಗೂ ಅವಿಭಕ್ತ ಕುಟುಂಬಗಳು ಸುಮಾರಾಗಿದ್ದವು. ಅವಿಭಕ್ತ ಕುಟುಂಬಗಳಲ್ಲಿ ಬೆಳೆದವರಿಗೆ ಜವಾಬ್ದಾರಿಯ ಕಲ್ಪನೆ ಹೆಚ್ಚಿರುತ್ತದೆ. ಏಕೆಂದರೆ ಎಲ್ಲರ ಹೊರೆಯನ್ನೂ ಎಲ್ಲರೂ ಹಂಚಿಕೊಂಡಿರುತ್ತಾರೆ. ಕ್ರಮೇಣ ಅವಿಭಕ್ತ ಕುಟುಂಬಗಳು ಒಡೆದು ಚೂರು ಚೂರಾದಮೇಲೆ ಕುಟುಂಬವ್ಯವಸ್ಥೆ ಸೀಮಿತಗೊಂಡಿತು. ಮನೆಯಲ್ಲಿ ಹಿರಿಯರಿದ್ದರೆ ಮಾತ್ರ ಪರಂಪರೆ ಸಮರ್ಪಕವಾಗಿ ಮುಂದುವರಿಯುವುದು ಸಾಧ್ಯ. ಅದಿಲ್ಲದಿದ್ದರೆ ವಿಜ್ಞಾನದ ಹೆಸರಲ್ಲಿ, ಮೂಢನಂಬಿಕೆಗಳ ಹೆಸರಲ್ಲಿ, ಪರಂಪರೆಯಿಂದ ಬಂದ ಸಂಸ್ಕಾರವನ್ನು ಮುಂದಿನ ಪೀಳಿಗೆ ಕಳೆದುಕೊಳ್ಳುವುದು ಸತ್ಯ.