ಅದೊಂದು ಹಿಮಾಚ್ಛಾದಿತ ಪ್ರದೇಶ. ಅಲ್ಲಿ ಒಂದು ನದೀತೀರ. ಅಲ್ಲಿಗೆ ಒಬ್ಬ ವ್ಯಕ್ತಿ ಬರುತ್ತಾನೆ. ಅಪರಾಹ್ಣವಾಗಿರುತ್ತದೆ. ನದಿ ಹರಿಯುತ್ತಾ ಇರುತ್ತದೆ. ಸೇತುವೆ ಇರುವುದಿಲ್ಲ. ಆದರೆ ನದಿಯ ಮೇಲ್ಭಾಗದಲ್ಲಿ ಮಂಜುಗಡ್ಡೆಗಳಿಂದ ನಿರ್ಮಿತವಾದ ಸೇತುವೆ ಇರುತ್ತದೆ.
ಅವನು ಆಲೋಚಿಸುತ್ತಾನೆ- ‘ಹೇಗೆ ಹೋಗಲಿ? ಕಾಲು ಮಂಜುಗಡ್ಡೆಯಲ್ಲಿ ಹೂತು ಹೋದರೆ ಏನು ಮಾಡಲಿ?’ ಇತ್ಯಾದಿ ಚಿಂತೆ ಆವರಿಸುತ್ತದೆ.
ಅಷ್ಟು ಹೊತ್ತಿಗೆ ಇಳಹೊತ್ತು ಪ್ರಾರಂಭವಾಗಿ ಇನ್ನೇನು ಕತ್ತಲಯೇ ಆಗಿ ಬಿಡುತ್ತದೆ ಎಂದು ಚಿಂತಿಸಿದ ಈ ವ್ಯಕ್ತಿ ಏನಾದರಾಗಲಿ ಎಂದು ಧೈರ್ಯ ಮಾಡಿ ಎರಡೂ ಕೈಗಳನ್ನೂ ಮಡಚಿಕೊಂಡು ತೆವಳುತ್ತಾ ಪ್ರಾಣಿಯಂತೆ ನಿಧಾನವಾಗಿ ಸೇತುವೆಯ ಮೇಲೆ ಸಾಗುತ್ತಾನೆ. ತೆವಳುತ್ತಾ ಸಾಗಿದರೆ ದೇಹದ ಭಾರ ಸಮವಾಗಿರುವುದರಿಂದ ಏನೂ ತೊಂದರೆಯಿಲ್ಲ ಎಂಬುದು ಇವನ ಆಲೋಚನೆ. ಹೀಗೆ ಸಾಗುತ್ತಾ ಸೇತುವೆಯ ಮಧ್ಯಭಾಗಕ್ಕೆ ಬರುವಾಗ ಒಂದು ಹಾಡು ಕೇಳಿಸುತ್ತದೆ. ಇವನು ಹಿಂತಿರುಗಿ ನೋಡುತ್ತಾನೆ.
ಅಲ್ಲಿ ಒಬ್ಬ ವ್ಯಕ್ತಿ ಕುದುರೆ ಗಾಡಿಯಲ್ಲಿ ಕುಳಿತು ಹಾಡುತ್ತಾ ಸಂತೋಷದಿಂದ ಇವನು ಬಂದ ಹಾದಿಯಲ್ಲಿಯೇ ಬರುತ್ತಿರುತ್ತಾನೆ. ಇವನಿಗೆ ಬಹಳ ಆಶ್ಚರ್ಯವಾಗುತ್ತದೆ. ಅನವಶ್ಯಕವಾಗಿ ತಾನು ಎಷ್ಟೆಲ್ಲ ಕಷ್ಟಪಟ್ಟೆ ಎಂದು. ತನ್ನ ಬಗ್ಗೆಯೇ ಮರುಕ ಉಂಟಾಗುತ್ತದೆ.
ಹೌದು ಜೀವನದಲ್ಲಿ ಪ್ರತಿಯೊಬ್ಬರಿಗೂ ಕಷ್ಟಕಾರ್ಪಣ್ಯಗಳು ಬಂದೇ ಬರುತ್ತವೆ. ಅವುಗಳನ್ನು ಧೈರ್ಯದಿಂದ ಎದುರಿಸಿ ಸಂತೋಷದಿಂದ ಮುನ್ನಡೆದಾಗ ಜೀವನ ಸಾರ್ಥಕವಾಗುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಉಂಟಾಗುವ ಕಷ್ಟಕ್ಕಿಂತ ನಮ್ಮ ಚಿಂತೆಯೇ ಹೆಚ್ಚಾಗಿ ಪರಿಹರಿಸುವ ಸುಲಭ ದಾರಿ ಇದ್ದರೂ ಕಾಣದೇ ಅನುಭವಿಸುವಂತೆ ಆಗುತ್ತದೆ. ಆದ್ದರಿಂದ ಏನೇ ಬರಲಿ ಹಾಡುತ್ತಾ, ನಲಿಯುತ್ತಾ ಸಾಗೋಣ.