ಗಂವ್ಹಾರ ಮಠದಲ್ಲಿ ಪಂಚಗವ್ಯ ಪ್ರಶಿಕ್ಷಣ ಶಿಬಿರ ಉದ್ಘಾಟನೆ

ಗೋವು

ಗಂವ್ಹಾರ (ಕಲಬುರ್ಗಿ): ನಮ್ಮ ಸಮೃದ್ಧಿಗಾಗಿ ಹಾಗೂ ಗೋವುಗಳ ಉಳಿವಿಗಾಗಿ ಪಂಚಗವ್ಯ ಬಳಸಿ ಗೋಮಾತೆಯ ಋಣ ತೀರಿಸಬೇಕು ಎಂದು ಗಂವ್ಹಾರದ ತ್ರಿವಿಕ್ರಮಾನಂದ ಸರಸ್ವತಿ ಸ್ವಾಮಿ ಮಠದ ಪರಮಪೂಜ್ಯ ಶ್ರೀಶ್ರೀ ಸೋಪಾನನಾಥ ಮಹಾಸ್ವಾಮಿಗಳು ಹೇಳಿದರು.

 

‘ಭಾರತೀಯ ಗೋಪರಿವಾರ ಕರ್ನಾಟಕ ರಾಜ್ಯ’ ಘಟಕದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪಂಚಗವ್ಯ ಪ್ರಶಿಕ್ಷಣ ಶಿಬಿರವನ್ನು ಗೋಪೂಜೆ ಮಾಡುವ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿದರು.

 

‘ಅನಾದಿ ಕಾಲದಿಂದಲೂ ಗೋಜನ್ಯ ವಸ್ತುಗಳನ್ನು ದಿನನಿತ್ಯದ ಜೀವನದಲ್ಲಿ ಬಳಸಿಕೊಂಡು ಬಂದಿದ್ದು ಈಗ ಅದನ್ನು ಮತ್ತೆ ಹೇಳಿಕೊಡುವ ಸಂದರ್ಭ ಬಂದಿರುವುದು ವಿಷಾದನೀಯ. ಜೀವನದಿಂದ ಗೋವುಗಳು ದೂರವಾದ ಹಾಗೆ ಗವ್ಯೋತ್ಪನ್ನಗಳೂ ದೂರ ಆಗಿವೆ. ಅವುಗಳನ್ನು ನಾವು ಮರೆತಿದ್ದೇವೆ. ಆದರೆ ಇದೀಗ ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ದೇಶಾದ್ಯಂತ ಗೋಜಾಗೃತಿ ಮೂಡಿಸುವಲ್ಲಿ ಅವಿರತ ಶ್ರಮಿಸುತ್ತಿದ್ದು ಅದರ ಭಾಗವಾಗಿ ಈ ಗವ್ಯೋತ್ಪನ್ನ ತರಬೇತಿ ಶಿಬಿರ ಏರ್ಪಡಿಸಿದ್ದು ಶ್ಲಾಘನೀಯ’ ಎಂದರು.

 

ದಿವ್ಯ ಸಾನ್ನಿಧ್ಯ ವಹಿಸಿದ್ದ ಕರ್ನಾಟಕ ರಾಜ್ಯ ಗೋಪರಿವಾರದ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಪಾಂಡುರಂಗ ಮಹಾರಾಜರು ಮಾತನಾಡಿ ‘ಗೋವುಗಳಿಂದ ವಿಮುಖರಾದ ನಾವು ಗೋವುಗಳ ಮಹತ್ವವನ್ನು ಅರಿಯಲು ವಿಫಲರಾಗುತ್ತಿದ್ದೇವೆ. ಗೋವು ಪರೋಪಕಾರಕ್ಕಾಗಿ ಜೀವನ ಸವೆಸುತ್ತದೆ. ನಾನಾ ಬಗೆಯ ಉಪಯೋಗಗಳು ಗೋವಿನ ಸಾಮೀಪ್ಯದಿಂದ ನಮಗೆ ದೊರಕುತ್ತದೆ. ಅವುಗಳನ್ನು ಅರಿತು ನಮ್ಮ ಆರೋಗ್ಯ ವೃದ್ಧಿ, ಜೀವನ ಸಮೃದ್ಧಿ ಮಾಡಿಕೊಳ್ಳಬಹುದು. ಇದರ ಜಾಗೃತಿಗಾಗಿ ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರು ‘ಭಾರತೀಯ ಗೋಪರಿವಾರ’ ಎಂಬ ಸಂಘಟನೆ ಸ್ಥಾಪಿಸಿ ನಾಡಿನಾದ್ಯಂತ ಗೋವಿನ ಮಹತ್ವವನ್ನು ತಲುಪಿಸುತ್ತಾ, ಗೋರಕ್ಷಣೆಗೆ ಒತ್ತು ಕೊಡುತ್ತಿದ್ದಾರೆ” ಎಂದರು.

 

ರಾಜ್ಯ ಗೋಪರಿವಾರದ ಸಂಘಟನಾ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ ಅವರು ವಂದಿಸಿದರು. ಭಾರತೀಯ ಗೋಪರಿವಾರದ ಶ್ರೀಕಾರ್ಯದರ್ಶಿ ಮಧು ಗೋಮತಿ ನಿರೂಪಿಸಿದರು.

 

ಮಾಹಿತಿ, ತರಬೇತಿ: ಶಿಬಿರದ ಮೊದಲ ಭಾಗದಲ್ಲಿ ಗೋಮಯ ಖಂಡ ಹಾಗೂ ಫಿನಾಯಿಲ್ ತಯಾರಿಸುವ ವಿಧಾನವನ್ನು ಶ್ರೀಮತಿ ಸುಲೋಚನಾ ಅವರು ತರಬೇತಿ ನೀಡಿದರೆ, ರಾಜ್ಯ ಗೋಪರಿವಾರದ ಪಂಚಗವ್ಯ ಚಿಕಿತ್ಸೆಯ ರಾಜ್ಯಾಧ್ಯಕ್ಷ ಡಾ.ರವಿ ಅವರು ಉತ್ಪನ್ನಗಳ ಬಳಕೆ ಮತ್ತು ಪರಿಣಾಮದ ಕುರಿತು ಪೂರಕ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *