ರಾಜ್ಯಾದ್ಯಂತ ಸಲ್ಲಿಕೆಯಾದ ಅಭಯಾಕ್ಷರ ಅರ್ಜಿ – ಗೋರಕ್ಷಣೆಗೆ ಆಗ್ರಹಿಸಿ ಒಂದು ಕೋಟಿ ಅರ್ಜಿಸಲ್ಲಿಕೆ

ಗೋವು

ಗೋಸಂರಕ್ಷಣೆಯ ಸಪ್ತಸೂತ್ರಗಳನ್ನು ಜನಮಾನಸಕ್ಕೆ ಮುಟ್ಟಿಸಿ, ನಾಡಿನ ಗೋಪ್ರೇಮಿಗಳಿಂದ ಹಕ್ಕೊತ್ತಾಯದ ಹಸ್ತಾಕ್ಷರವನ್ನು ಪಡೆದು; ದೇಶದ ಆಡಳಿತ ವ್ಯವಸ್ಥೆಯನ್ನು ಗೋಸಂರಕ್ಷಣೆಗೆ ಆಗ್ರಹಿಸುವ ‘ಅಭಯಾಕ್ಷರ’ ಅಭಿಯಾನದಲ್ಲಿ ಸಂಗ್ರಹಿತವಾದ ಸುಮಾರು ಒಂದು ಕೋಟಿ ಅರ್ಜಿಗಳು ಬೆಂಗಳೂರು, ಮಂಗಳೂರು, ಉಡುಪಿ, ಕಾರವಾರ, ಬೀದರ್ ಸೇರಿದಂತೆ ರಾಜ್ಯಾದ್ಯಂತ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ದೇಶದ ಪ್ರಧಾನಮಂತ್ರಿಗಳು ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ಸಲ್ಲಿಕೆಯಾದವು.

 

ಪೂಜ್ಯ ಸಿದ್ದಗಂಗಾ ಶ್ರೀಗಳು 21.1.19 ರಂದು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಅಂದು ನಿಗದಿಯಾಗಿದ್ದ ಕಾರ್ಯಕ್ರಮವನ್ನು ರದ್ಧುಗೊಳಿಸಿದ ಹಿನ್ನೆಲೆಯಲ್ಲಿ ಇಂದು ರಾಜ್ಯಾದ್ಯಂತ ಅರ್ಜಿ ಸಲ್ಲಿಕೆ ಕಾರ್ಯಕ್ರಮ ನಡೆಯಿತು. ಪೂಜ್ಯ ಸಿದ್ದಗಂಗಾ ಶ್ರೀಗಳು ಕೂಡ ಅಭಯಾಕ್ಷರಕ್ಕೆ ಸಹಿ ಮಾಡಿ, ಗೋಹತ್ಯೆ ನಿಷೇಧಿಸಬೇಕು ಎಂದು ಒತ್ತಾಯಿಸುವ ಜೊತೆಗೆ ರಾಘವೇಶ್ವರ ಶ್ರೀಗಳ ಗೋಸಂರಕ್ಷಣಾ ಕಾರ್ಯಗಳನ್ನು ಶ್ಲಾಘಿಸಿದ್ದರು.

ರಾಜ್ಯದ ಪ್ರತಿ ಜಿಲ್ಲಾಕೇಂದ್ರದಲ್ಲಿ ರಾಜ್ಯ ಗೋಪರಿವಾರದ ನೇತೃತ್ವದಲ್ಲಿ ಗೋಪ್ರೇಮಿ ಸಂತರು, ಗಣ್ಯರು, ಸ್ಥಳೀಯ ಗೋಪರಿವಾರದ ಪ್ರಮುಖರು ಹಾಗೂ ಗೋಪ್ರೇಮಿಗಳ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಹಕ್ಕೊತ್ತಾಯದ ಅರ್ಜಿಗಳನ್ನು ಸಲ್ಲಿಸಲಾಯಿತು. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಂಗಳೂರು ಭಾಗದಲ್ಲಿ ಸಂಗ್ರಹಿಸಲಾದ ಅರ್ಜಿಗಳನ್ನು ಶ್ರೀರಾಮಚಂದ್ರಾಪುರಮಠದ ಗೋಶಾಲಾ ಕಾರ್ಯದರ್ಶಿ ಡಾ. ಶಾರದಾ ಜಯಗೋವಿಂದ, ಕಾಮದುಘಾ ವಿಭಾಗದ ಶ್ರೀ ಗುಂಡಿ ಮಂಜಪ್ಪ, ಶ್ರೀಮತಿ ಗೀತಾ ಮಂಜಪ್ಪ ರಾಜ್ಯ ಗೋಪರಿವಾರದ ಡಾ. ರವಿ ಪಾಂಡವಪುರ, ಗೋಪರಿವಾರದ ಕಾರ್ಯದರ್ಶಿ ಮಧು ಗೋಮತಿ ಸೇರಿದಂತೆ ನೂರಾರು ಗೋಪ್ರೇಮಿಗಳ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.

ಅಭಯಾಕ್ಷರ ಅಭಿಯಾನ
ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ನಡೆದ ಈ ಅಭಿಯಾನಕ್ಕೆ ವರ್ಷದ ಹಿಂದೆ ಹಿರಿಯ ಸಂಶೋಧಕರಾದ ನಾಡೋಜ ಎಂ ಚಿದಾನಂದಮೂರ್ತಿ ಚಾಲನೆ ನೀಡಿದ್ದರು. ಬೆಂಗಳೂರಿನ ಹಲವೆಡೆ ‘ಹಾಲುಹಬ್ಬ’ವನ್ನು ಆಯೋಜಿಸಿ, ಜನರಲ್ಲಿ ಗೋಜಾಗರಣ ಮೂಡಿಸಿ ಅಭಯಾಕ್ಷರ ಸಹಿಯನ್ನು ಪಡೆಯಲಾಗಿತ್ತು. ಆನಂತರ ಪೂಜ್ಯ ಶ್ರೀಗಳ ಉಪಸ್ಥಿತಿಯಲ್ಲಿ ರಾಜ್ಯಾದ್ಯಂತ ‘ಅಭಯ ಗೋಯಾತ್ರೆ’ ನಡೆದು ಎಲ್ಲಾ ಜಿಲ್ಲೆಗಳಲ್ಲಿ ಅಭಯಾಕ್ಷರ ಸಂಗ್ರಹ ಕಾರ್ಯನಡೆದಿತ್ತು. ನಾಡಿನ ಅನೇಕ ಸಂತರು, ಗಣ್ಯ ಮಾನ್ಯರು ಸೇರಿದಂತೆ ಸುಮಾರು ಒಂದು ಕೋಟಿ ಅಭಯಾಕ್ಷರ ಅರ್ಜಿಗಳು ಸಂಗ್ರಹಿತವಾಗಿದ್ದವು.

ಈ ಹಿಂದೆ ಪೂಜ್ಯ ರಾಘವೇಶ್ವರಭಾರತೀ ಮಹಾಸ್ವಾಮಿಗಳ ನೇತೃತ್ವದಲ್ಲಿ ದೇಶಾದ್ಯಂತ 2009 ರಲ್ಲಿ ವಿಶ್ವಮಂಗಲ ಗೋಗ್ರಾಮಯಾತ್ರೆ ನಡೆದು 8.5 ಕೋಟಿ ಹಸ್ತಾಕ್ಷರವನ್ನು ಸಂಗ್ರಹಿಸಿ, ಗೋರಕ್ಷಣೆಗೆ ಆಗ್ರಹಿಸಿ ರಾಷ್ಟ್ರಪತಿಗಳಿಗೆ ಸಲ್ಲಿಕೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಅಭಯಾಕ್ಷರಕ್ಕೆ ಕುಮಾರಸ್ವಾಮಿ ಸಹಿ: ವರ್ಷದ ಹಿಂದೆ ಶಾಸಕರಾಗಿದ್ದ ಶ್ರೀ ಕುಮಾರಸ್ವಾಮಿಯವರೂ ಕೂಡ ಅಭಯಾಕ್ಷರ ಅರ್ಜಿಗೆ ಸಹಿ ಮಾಡಿ, ನಾಡಿನಾದ್ಯಂತ ಗೋವಧೆ ನಿಷೇಧಿಸಬೇಕು. ಗೋಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ಇದೀಗ ಅವರೇ ಮುಖ್ಯಮಂತ್ರಿಗಳಾಗಿದ್ದು, ಅಭಯಾಕ್ಷರ ಅರ್ಜಿಗಳ ಕುರಿತಾಗಿ ಅವರು ಯಾವ ನಿಲುವನ್ನು ತಳೆಯುತ್ತಾರೆ? ಹಿಂದೆ ಅವರೇ ಗೋಸಂರಕ್ಷಣೆಗೆ ಆಗ್ರಹಿಸಿದ್ದಂತೆ ಅವರೇ ಮುಂದೆ ನಿಂತು ಗೋಸಂರಕ್ಷಣೆಗೆ ಕ್ರಮ ಕೈಗೊಳ್ಳುವರೇ? ಒಂದು ಕೋಟಿ ಅರ್ಜಿಗೆ ಯಾವ ಉತ್ತರ ನೀಡುತ್ತಾರೆ?? ಎಂಬ ಕುರಿತಾಗಿ ತೀವ್ರ ಕುತೂಹಲ ಉಂಟಾಗಿದೆ.

Leave a Reply

Your email address will not be published. Required fields are marked *