‘ಅಶು’ವೆಂಬ ಹಸುವಿಗೊಂದು ಪತ್ರ – ಶ್ರೀಮತಿ ಶುಭಶ್ರೀ ಭಟ್ಟ, ಗುಡಬಳ್ಳಿ ಕುಮಟಾ

ಗೋವು ಲೇಖನ

‘ಅಶೂ!!

ಹೇಗಿದ್ದಿಯಾ ಮರಿ? ಕಾಮಧೇನುವಿನ ಸ್ವರ್ಗದಲ್ಲಿ ಎಲ್ಲರೂ ಚೆನ್ನಾಗಿ ನೋಡ್ಕೊತಾ ಇದಾರಲ್ವಾ?ಹಿಂಡಿ, ಗಂಜಿ, ಅಕ್ಕಚ್ಚು, ನೀರು, ಹಣ್ಣೆಲ್ಲಾ ಚೆಂದ ಇರ್ತದಾ? ಬೇಕಾದಷ್ಟು, ಹೊಟ್ಟೆ ತುಂಬುವಷ್ಟು, ತಿಂದು ತೇಗುವಷ್ಟು ತಿನ್ನಲಿಕ್ಕೆ ಕೊಡ್ತಾರಾ ಅಶೂ? ನನ್ನ ಮೇಲಿನ್ನೂ ಸಿಟ್ಟುಂಟಾ? ನಾನೇನ್ ಮಾಡ್ಲಿ ಹೇಳು ನಾನಾಗ ತುಂಬಾ ಚಿಕ್ಕೋಳು.

 

ಕುಂದಾಪುರದ ಅತ್ತೆ ಮನೆಯಿಂದ ನಿನ್ನಮ್ಮ ಸರಸ್ವತಿಯ ಜೊತೆ ಪುಟು-ಪುಟುವೆಂದು ತಪ್ಪು ಹೆಜ್ಜೆ ಇಡುತ್ತಾ ಬಂದವಳು ನೀನು. ವಾರವೂ ತುಂಬಿರದ ನೀನು ನಮ್ಮೆಲ್ಲರಿಗೂ ಬಲು ಅಚ್ಚುಮೆಚ್ಚಾಗಿದ್ದೆ. ಕಪ್ಪುರೋಮದ ಮೈಯಿ, ಬಿಳಿ ಹಂಡಾಪಟ್ಟೆ ಜೊತೆಗೆ ಅಂಬೊಡೆಯಂತಹ ನಿನ್ನ ಬಟ್ಟಲುಕಣ್ಣುಗಳು, ಅದು ಸೂಸುವ ತುಂಟತನ, ಇದೆಲ್ಲವೂ ನಮ್ಮನ್ನಾಕರ್ಷಿಸಿತ್ತು. ಒಳ್ಳೆದಿನ ನೋಡಿ ನಿನಗೆ ‘ಅಶ್ವಿನಿ’ ಎಂದು ನಾಮಕರಣ ಮಾಡಿದ್ದೆ. ನನ್ನ ಪುಟ್ಟ ತಂಗಿಯಷ್ಟೇ ಪುಟ್ಟಗಿದ್ದ ನಿನ್ನನ್ನು ನಾ ನನ್ನ ತಂಗಿಯಷ್ಟೇ ಪ್ರೀತಿ ಮಾಡ್ತಿದ್ದೆ, ಈಗಲೂ..

 

ನೀನು ನಮ್ಮನ್ನೆಲ್ಲಾ ಅದೆಷ್ಟು ಹಚ್ಕೊಂಡಿದ್ದೆ ನೆನಪಿದ್ಯಾ ಅಶೂ? ನನ್ನ ಅಮ್ಮನನ್ನು ಬಿಟ್ರೆ ಮತ್ಯಾರಿಗೂ ಹಾಲು ಕರೆಯಲು ಬಿಡು, ಹತ್ತಿರವೂ ಬರಕೊಡುತ್ತಿರಲಿಲ್ಲ ನೀನು. ನಮ್ಮ ಮನೆಯಲ್ಲಿನ ಜನ, ಬಿಟ್ಟರೆ ಕೆಲಸದ ಮಾಸ್ತಿಗಷ್ಟೇ ನಿನ್ನ ಬಳಿಸರಿವ ಅವಕಾಶಕೊಟ್ಟಿದ್ದೆ. ಒಂದು ದಿನ ನನ್ನಮ್ಮ ಹತ್ತಿರದ ಸಂಬಂಧಿಕರ ಮದುವೆಗೆಂದು ಸುರತ್ಕಲ್ ಗೆ ಹೋದಾಗ, ನಮ್ಮಮ್ಮನ ಸೀರೆಯುಟ್ಟು ಹಾಲು ಕರೆಯಲು ಬಂದ ಶಾಂಚಿಕ್ಕಿಗೆ ದವಡೆಹಲ್ಲು ಮುರಿಯುವಂತೆ ಒದ್ದಿದ್ದು ನಮಗೆಲ್ಲಾ ಇನ್ನೂ ನೆನಪಿದೆ, ಒದೆಸಿಕೊಂಡ ಅವರಿಗೂ. ಆದರೂ ಹುಚ್ಚು ಭರವಸೆಯಲ್ಲಿ ನಿನ್ನ ಬಳಿ ಬಂದು ನಿನ್ನ ಕೆಚ್ಚಲಿಗೆ ಕೈಹಾಕಿ, ಹಾಲು ಕರೆಯಲು ಬರದಿದ್ದರೂ ನಾ ಮಾಡಿದ ವ್ಯರ್ಥ ಪ್ರಯತ್ನಕ್ಕೆ ನೀನೇನೂ ಮಾಡದೇ ಸುಮ್ಮನೇ ನಿಂತಿದ್ದೆಯಲ್ಲಾ. ಅದ್ಯಾವ ಕಾರಣಕ್ಕೆ ನಿನಗೆ ಬೇರೆಯವರ ಮೇಲೆ ಸಿಟ್ಟಿತ್ತು? ನಮ್ಮನ್ನಷ್ಟೇ ನಂಬುವ ನಿನ್ನ ಪರಿಗೆ ನಾನು ಮರುಳಾಗಿದ್ದೆ. ಕೊಟ್ಟಿಗೆ ಹತ್ತಿರ ನನ್ನಮ್ಮನ ದನಿ ಕೇಳಿದಾಗಲೆಲ್ಲಾ ನೀನು ‘ಅಂಬಾ’ ಎಂದೆನ್ನುವ ಶಬ್ದ ನನಗೆ ‘ಅಮ್ಮಾ’ ಎಂಬಷ್ಟೇ ಅಪ್ಯಾಯಮಾನವಾಗಿ ಕೇಳಿಸುತ್ತಿತ್ತು. ಮಾತು ಬರದೇ ಇದ್ದರೂ ನೀನು ಸೂಸುವ ಮುಗ್ಧ ಪ್ರೀತಿಗೆ, ಮಮತೆಗೆ ನಾನದೆಷ್ಟು ಹಾತೊರೆಯುತ್ತಿದ್ದೆ. ನಿನಗದು ಗೊತ್ತಿತ್ತಾ ಅಶೂ?

 

ಮೊದಲ ಬಾರಿ ನೀ ಗರ್ಭ ಧರಿಸಿದಾಗ ಎಲ್ಲವೂ ಅದೆಷ್ಟು ಚೆಂದವಿತ್ತು. ‘ಮಾತುಬಾರದ ನಿನ್ನಂತಹ ಮುಗ್ಧೆಗೂ ಬಸುರಿಯಾದಾಗ ಬಯಕೆಗಳಿರಬಹುದಲ್ಲವೇ?’ ಎಂದು ನಾನು ಕೇಳಿದ ಪ್ರಶ್ನೆ ಮನೆಯವರನ್ನೆಲ್ಲಾ ತೀವ್ರವಾಗಿ ಕಾಡಿತ್ತಂತೆ. ಅದಾಗೆರಡು ದಿನದೊಳಗೆ ನಿನಗೆ ಕೊಡುವ ತಿಂಡಿ-ತೀರ್ಥದಲ್ಲಿ ಭಾರಿ ಬದಲಾವಣೆಯಾಗಿತ್ತು. ನಾವು ತಿಂಡಿ ತಿನ್ನುವ ಮೊದಲು ನಿನಗೆರಡು ಬೆಲ್ಲದ ದೋಸೆ ಮೀಸಲಾಗಿತ್ತು. ರಸಾಯನದ ಮಾವಿನ ಸಿಪ್ಪೆಯೊಡನೆ ಸುಮ್ಮನೆ ಹಣ್ಣೊಂದು ಅಡಗಿರುತ್ತಿತ್ತು.. ಅಕ್ಕಚ್ಚು-ಹಿಂಡಿಯ ಜೊತೆಗೆ ಇವೆಲ್ಲಾ ತಿಂಡಿ ಸೇರಿ ನೀನು ಮೈಕೈ ತುಂಬಿಕೊಂಡು ದೃಷ್ಟಿ ತಾಕುವಂತಾಗಿದ್ದೆ, ಹೊಟ್ಟೆಯಲ್ಲಿ ಅವಳಿ ಅಂಬೆಬುಚ್ಚಿಯನ್ನು ಹೊತ್ತಿಕೊಂಡಿರುವಂತೆ. ಸರಿ ರಾತ್ರಿಯಲ್ಲಿ ನೀ ಕೂಗಿದೊಡನೆ ಅಮ್ಮ ನಿದ್ದೆಯಿಂದೆದ್ದು ನಿನ್ನ ನೋಡಿಬರುತ್ತಿದ್ದರು. ಅದೊಂದು ದಿನ ನಾವು ಶಾಲೆಬಿಟ್ಟು ಮನೆಗೆ ಬರುವಷ್ಟರಲ್ಲಿ, ಮನೆಯವರೆಲ್ಲಾ ನಿನ್ನ ಬಳಿ ನೆರೆದಿದ್ದರು. ಏನಾಯ್ತೆಂದು ಅಜ್ಜಿಯ ಕೇಳಿದಾಗ ನಿನಗೆ ಬುಚ್ಚಿಕರುವಿನ ಹೆರಿಗೆ ನೋವೆಂದು ಗೊತ್ತಾಗಿ ಸಂಕ್ಟವಾಯ್ತು ಅಶೂ. ಅದೆಷ್ಟು ನೋವಾಗ್ತಿತ್ತೋ ನಿನಗೆ !! ‘ಅಂಬಾ..ಅಂಬಾ’ ಎಂದು ಅಂಬೆಗರೆಯುತ್ತಿದ್ದೆ. ನಮಗೆ ನಿನ್ನ ಬಳಿ ಬರಲೂ ಪ್ರವೇಶವಿರಲಿಲ್ಲ. ಅದಕ್ಕೆ ನಿನಗೆ ಸುಸೂತ್ರವಾಗಿ ಬುಚ್ಚಿ ಬರಲಿ ಎಂದು ನಾನು, ನನ್ನ ಪುಟ್ಟ ತಂಗಿ ಊದಿನಕಡ್ಡಿ ಹಚ್ಚಿಟ್ಟು ದೇವ್ರಲ್ಲಿ ಪ್ರಾರ್ಥನೆ ಮಾಡ್ಕೊಂಡಿದ್ವಿ ಗೊತ್ತೆನೇ ಮರಿ? ಅಂಬೆಗಳ ಡಾಕ್ಟರು ಬಂದ್ರು. ಎಂದಿನಂತೆ ಹೊಸಬರನ್ನು ಕಂಡೊಡನೆ ನೋವಲ್ಲೂ ಥಕಥಕ ಕುಣಿಯುತ್ತಿದ್ದೆಯಂತೆ.. ಆದರೆ ನಿನ್ನ ನೋವು ಹೆಚ್ಚಾದಾಗ ಅಸಹಾಯಕಳಾಗಿ ಅವರಿಗೆ ಸಹಕರಿಸಿದೆ. ಆವಾಗ ಉಂಡಾಡಿಗುಂಡನಂತೆ ಬಂದವನೇ ‘ಸೋಮ’… ನಿನ್ನ ಮಗ, ನಮ್ಮ ಮನೆಮಗನಂತವ..

 

ಪುಳಕ್ಕನೇ ಬಂದ ಮಗನನ್ನೂ ಯಾರೋ ಹೊಸಬನೆಂದು ನೀ ತಿಳಿದಾಗ ಕಂಗಾಲಾದ ಅಮ್ಮ ಸ್ವಲ್ಪ ಹಿಂಡಿ ತರಲು ಹೇಳಿದರು ಮನೆಯಲ್ಲಿ ಕುಳಿತಿದ್ದ ನಮಗೆ. ನಿನ್ನ ಮಗನ ನೋಡುವ ಸಂಭ್ರಮದಲ್ಲಿ ಅಜ್ಜಿ ಕೊಟ್ಟ ಹಿಂಡಿ ಹಿಡಿದು ಬಂದೆವು. ನೆಟ್ಟಗೆ ನಿಲ್ಲಲೂ ಬಾರದ ಮುದ್ದುಗರುವನ್ನು ಕಂಡು ನಮಗದೆಷ್ಟು ಖುಶಿಯಾಗಿತ್ತು ಗೊತ್ತುಂಟಾ?ನಿನ್ನದೇ ಮಗುವೆಂದು ನಿನಗರಿವಾಗಲೆಂದು ಅಮ್ಮ ಮೈಯಲ್ಲೆಲ್ಲಾ ಹಿಂಡಿ ಹಚ್ಚಿ, ನಿನಗೆ ಮುದ್ದುಗರೆದು ತಿಳಿಹೇಳುತ್ತಾ ನಿನ್ನ ಬಳಿ ಅವನನ್ನು ಬಿಟ್ಟಾಗಲೇ ನಿನಗೆ ಕರುಳಬಳ್ಳಿಯ ಪರಿಚಯವಾಗಿದ್ದು. ನೋಡುತ್ತಿದ್ದಂತೇ ಅವನ ಮೈಯೆಲ್ಲಾ ನೆಕ್ಕಿ ನೆಕ್ಕಿ ಅವನಿಗೆ ಬೆಚ್ಚಗಿನ ಅನುಭವ ಕಟ್ಟಿಕೊಟ್ಟೆಯೇನೋ ಗೊತ್ತಿಲ್ಲಾ, ಅವ ಮೆಲ್ಲ ಕಣ್ಬಿಟ್ಟು ನಕ್ಕಂತಾಯ್ತು ನನಗೆ. ನಂತರ ನಿನ್ನ ಸುಸ್ತು ಸುಧಾರಿಸಲೆಂದು ಟಾನಿಕ್ ಕೊಟ್ಟು, ಡಾಕ್ಟ್ರು ಮಾಮ ಹೊರಟುಹೊದ್ರು. ನಮಗೆ ನಿನ್ನ ಮಗನನ್ನು ಸವರುವ ತವಕ. ಆದರೆ ಅದಕ್ಕೆಲ್ಲಾ ಅವಕಾಶವಿರಲಿಲ್ಲ. ಆದರೂ ನೀನದೆಷ್ಟು ಸಾರ್ಥಕತೆಯಲ್ಲಿ ಮಿಂದೆದ್ದಿದ್ದೆಯೆಂದು ಅಂದು ಅರ್ಥವಾಗಿರಲಿಲ್ಲ… ಇಂದು ಅರ್ಥವಾಗುತ್ತಿದೆ.

 

ಎರಡನೇ ಸಲ ನೀ ಗರ್ಭಧರಿಸಿದಾಗ ನಿನ್ನ ಕೆಚ್ಚಲಹಾಲನ್ನು ನೀನೆ ಕುಡಿಯತೊಡಗಿದ್ದೆ. ಅದಕ್ಕೆ ಡಾಕ್ಟರು ಅದ್ಯಾವುದೋ ಅಪರೂಪದ ಖಾಯಿಲೆಯೆಂದು ಹೆಸರಿಟ್ಟು, ಒಂದಿಷ್ಟು ಮಾತ್ರೆ, ಮುಲಾಮು ಕೊಟ್ಟರು. ಜೊತೆಗೆ ಹಳ್ಳಿಜನ ಹೇಳಿದ ಮನೆಮದ್ದೆಲ್ಲಾ ನೆಕ್ಕಿಸಿದ್ದಾಯ್ತು. ಆದರೂ ನಿನ್ನ ಆ ಅಪರೂಪದ ಖಾಯಿಲೆ ಕಡಿಮೆಯಾಗಲೇ ಇಲ್ಲ. ಅದ್ಯಾವುದೋ ವಿಷಘಳಿಗೆ, ಅದ್ಯಾರೋ ಮಂಡೆಸಮಾ ಇಲ್ಲದ ಭೂಪ ಬಂದು ‘ಇಶ್ಶಿ!! ಹಿಂಗೆಲ್ಲಾ ಆಪ್ಪುಲಾಗ. ಹಿಂಗಾದ್ರೆ ಮನೆ ಹಿರಿತಲೆ ಜೀವಕ್ ಅಪಾಯ’ ಎಂದು ಮಹಾನ್ ಸರ್ವಜ್ಞನಂತೆ ಹಲುಬಿ ಹೋದದ್ದೆ ನೆಪ. ನಿನ್ನನ್ನು ಮಾರುವ ಎಂದು ಅಜ್ಜಿ ಇನ್ನಿಲ್ಲದ ಹಠಹಿಡಿದಳು. ನನ್ನ ಮತ್ತು ಅಮ್ಮನ ಕಣ್ಣೀರು, ನನ್ನ ಊಟಬಿಡುವ ಮುಷ್ಕರಕ್ಕೆ ಕೊನೆಗೂ ಮಣಿದರು ಅಜ್ಜಿ. ಆದರೆ ಅದು ಬರೀ ನನ್ನ ಕಣ್ಣೊರೆಸುವ ನಾಟ್ಕ ಅಂತಾ ಗೊತ್ತೇ ಆಗ್ಲಿಲ್ಲಾ ಅಶೂ ನಿಜವಾಗ್ಲೂ..

 

ಇದೆಲ್ಲಾ ಆಗಿ ವಾರೊಪ್ಪತ್ತು ಕಳೆದಿತ್ತಷ್ಟೇ, ನಾನು ಶಾಲೆಗೆ ಹೊರಟಿದ್ದೆ. ‘ಅಶೂ ಟಾಟಾ’ ಎಂದಾಗ ನೀನು ‘ಅಂಬಾ’ ಎಂದು ಅಳುವಂತೆ ಕೂಗಿದ್ದು ಇನ್ನೂ ಕಿವಿಯಲ್ಲಿ ಗುಂಯ್ಗುಡುತ್ತಿದೆ. ನಿನಗದರ ಸೂಚನೆ ಸಿಕ್ಕಿತ್ತೇನೋ!! ನನಗದರ ಸುಳಿವೂ ಸಿಕ್ಕಿರಲಿಲ್ಲ. ನನಗೆ ಗೊತ್ತಾದ್ರೆ ಸುಮ್ನೆ ರಂಪ ಮಾಡ್ತೀನಿ ಎಂದು, ನಾ ಶಾಲೆಗೆ ಹೋದಾಗ ನಿನ್ನನ್ನು ಬೇರೆಯವರಿಗೆ ಕೊಡುವ (ದುಡ್ಡಿಗೆಲ್ಲಾ ಅಲ್ಲಾ) ಏರ್ಪಾಡು ಮಾಡಿದ್ದರೆಂದು ನನಗೆ ಗೊತ್ತಿರ್ಲಿಲ್ಲ ಅಶೂ. ಶನಿವಾರ ಅರ್ಧದಿನದ ಶಾಲೆಮುಗಿಸಿ ಮನೆಗೆ ಬರುವಷ್ಟರಲ್ಲಿ, ಮನೆಮುಂದೆ ನಿಂತಿದ್ದ ದೊಡ್ಡಲಾರಿ, ನಾಲ್ಕೈದು ಆಳುಗಳು, ದಣಪೆಕೋಲಿನ ಹಿಂದೆ ಕೂತು ಮೌನವಾಗಿ ಕಣ್ಣೀರಾಗುತ್ತಿದ್ದ ಅಮ್ಮ, ನೋವಾದರೂ ತುಟಿಪಿಟಕ್ಕೆನ್ನದೇ ಬೇಸರ ನುಂಗುತ್ತಿದ್ದ ಅಪ್ಪ, ಆಗುವುದೆಲ್ಲಾ ಒಳ್ಳೆಯದಕ್ಕೆ ಎಂಬ ನಿರ್ಲಿಪ್ತತೆ ಭಾವ ತೊಟ್ಟ ಅಜ್ಜಿ, ಹರಸಾಹಸ ಮಾಡಿದ್ರೂ ಹೊರಡಲೊಪ್ಪದ ನೀನು… ಇದನ್ನೆಲ್ಲಾ ಕಂಡು ತಲೆತಿರುಗುವುದೊಂದು ಬಾಕಿ ನನಗೆ.

 

“ಅಯ್ಯೋ ಎಲ್ಲಿಗ್ ಕರ್ಕಂಡ್ ಹೋಗ್ತ್ರೀ ನನ್ ಅಶೂನಾ, ಬೇಡಾ ಬೇಡಾ… ನನ್ ಅಶೂ ನಂಗೆ ಬೇಕು.. ಮಾಮಾ ಮಾಮಾ ನನ್ ಅಶೂನ ಬಿಟ್ಟ್ ಬಿಡಾ. ಆಯೀ ನೀ ಆರು ಹೇಳೇ” ರಸ್ತೆಯಲ್ಲೇ ಬಿದ್ದು ಉರುಳಾಡಿದ್ರೂ ನನ್ನ ಮಾತಿಗೆ ಯಾರೂ ಬೆಲೆ ಕೊಡಲಿಲ್ಲ ಕಣೇ. ನನಗೂ ನನ್ನಮ್ಮನಿಗೂ ನಿನ್ನನ್ನು ಕಣ್ಣೀರಿಂದ ಕಳುಹಿಸಿಕೊಡುವುದಷ್ಟೇ ಸಾಧ್ಯವಾಯ್ತು. ಲಾರಿ ಮರೆಯಾಗುವರೆಗೆ ನೀ ಕೂಗಿದ ‘ಅಂಬಾ’ ಆಕ್ರಂದನ, ಆ ನಿನ್ನ ದೀನ ನೋಟ ನನ್ನಿಂದ ಮರೆಯಲು ಸಾಧ್ಯವೇ ಇಲ್ಲ ಮರಿ. ‘ಅಪ್ಪು ಮಗಾ! ಜಾಣ ಅಲಾ ನೀನು. ಅಶೂಗೆ ರಾಶಿನೂ ಅಬ್ಬು ಆಜು, ಅದ್ಕೆ ಕಡ್ಮೆ ಆದ್ಮೇಲೆ ಮತ್ತೆ ವಾಪಸ್ ಕರ್ಕಂಡ್ ಬಪ್ಪನಾ ಅಕಾ ಮಗಾ?’ ಎಂಬ ಅಜ್ಜಿಯ ಮುದ್ದುಗರೆವ ಮಾತು ಒಂದಿಷ್ಟೂ ರುಚಿಸಲಿಲ್ಲ. ನೀನಿಲ್ಲದೇ ಒಂದು ತುತ್ತು ಊಟವೂ ಹೊಟ್ಟೆಗಿಳಿಯಲಿಲ್ಲ.

 

ನಮ್ಮನ್ನು ಬಿಟ್ಟು ಬೇರೆ ನರಪಿಳ್ಳೆಯನ್ನೂ ಬಳಿಗೆ ಬಿಟ್ಟುಕೊಳ್ಳದ ನೀನು ಆ ಮಾಮಾ ಕರೆದುಕೊಂಡು ಹೋಗುವ ಮನೆಯವರೊಟ್ಟಿಗೆ ಹೇಗಿರಬಹುದು ಎಂಬ ನನ್ನ ಪ್ರಶ್ನೆಗೆ ಮಾತ್ರ ಯಾರಲ್ಲೂ ಉತ್ತರವಿರಲಿಲ್ಲ. ಅಲ್ಲಿ ಅದೆಷ್ಟು ಕಷ್ಟಪಟ್ಯೆ? ಅವರೆಲ್ಲಾ ನಿನಗೆ ಹಿಂಡಿ ಅಕ್ಕಚ್ಚು ಬೇಕಾದಷ್ಟು ಕೊಟ್ಟರೂ, ಮನೆಮಗಳಾಗಿ ಬೆಳೆದ ನಿನಗೆ ನಮ್ಮಂತೆ ಪ್ರೀತಿಯೇ ಮಾಡಲಿಲ್ಲ. ಬರೀ ಹಾಲು ಕರೆಯುವ ಸಾಧನವೆಂದುಕೊಂಡರಂತೆ ಎಂಬುದು ನಂತರ ಗೊತ್ತಾಯ್ತು. ಈ ಅಕ್ಕನನ್ನು ಕ್ಷಮಿಸಿಬಿಡು ಅಶೂ, ನೀನು ಹೋಗುವಾಗ ನಾನು ಸಣ್ಣವಳಾಗಿದ್ದುದೇ ನನ್ನ ತಪ್ಪು..

 

ನೀನು ಹೋದ ಸುಮಾರು ವರುಷದೊಳಗೆ ನಾನು ಕೇಳಿಸಿಕೊಂಡ ಸುದ್ದಿಯನ್ನು ನಾನು ಹೇಗೆ ಮರೆಯಲಿ ಅಶೂ? ಅಂದು ನಾನು ಶಾಲೆಯಿಂದ ಬರುವಷ್ಟರಲ್ಲಿ ಆ ದಲ್ಲಾಳಿ ಮಾಮನ ಸವಾರಿ ಚಿತ್ತೈಸಿತ್ತು.ಅವರನ್ನು ಮುಖವನ್ನೂ ನೋಡದೇ ನನ್ನಷ್ಟಕ್ಕೆ ನಾನು ಕೈಕಾಲು ತೊಳೆಯಲು ಬಚ್ಚಲಿಗೆ ನಡೆದಿದ್ದೆ. ನಾನು ಬಂದದ್ದನ್ನು ನೋಡದ ಮಾಮ ನಿನ್ನ ವಿಚಾರವನ್ನೇ ಮಾತನಾಡುತ್ತಿದ್ದ ಅಜ್ಜಿ-ಅಮ್ಮರ ಬಳಿ… ಕಿವಿ ನಿಮಿರಿಸಿ ಕೇಳತೊಡಗಿದೆ. ಆ ಮನೆಯವರು ನಿನ್ನನ್ನು ಒಂಚೂರು ಪ್ರೀತಿ ಮಾಡದೇ ನೋಡಿಕೊಂಡಿದ್ದು, ಸರಿಯಾಗಿ ಹೊಟ್ಟೆಗೆ ತಿನ್ನದೇ, ಆ ಖಾಯಿಲೆಯಿಂದ ಇನ್ನೂ ಕೃಶಳಾಗಿ ನೀನು ಸತ್ತಿದ್ದು.. ಮುಂದೆ ಕೇಳಲಾಗದೇ ‘ಖುಷೀನಾ ನಿಮ್ಗೆ? ಅಂತೂ ಸಾಯ್ಸಿದ್ರಾ ಎಲ್ಲಾ ಸೇರ್ಕಂಡು ನನ್ನ ಅಶೂನಾ? ಹಾಲ್ ಕುಡ್ಕಂಡ್ ಹೋಗು ಹುಳ್ಕಾ’ ಎಂದು ಮೈಮೇಲೆ ಬಂದವರಂತೆ ಎಗರಾಡಿ, ನಿನ್ನ ನೆನಪಿಂದ ನೋವೆಲ್ಲವೂ ಕಣ್ಣೀರಾಗಿ ಬಿಕ್ಕಿದ್ದೆ.

ಇಲ್ಲದ ಶಾಸ್ತ್ರ ಹೇಳಿ ಅಜ್ಜಿ ತಲೆಕೆಡಿಸಿದ ಆ ಅಂಡೆಪಿರ್ಕಿ ಮನುಷ್ಯನನ್ನು, ಪ್ರೀತಿಯೇ ಮಾಡದೇ ನಿನ್ನ ಸಾಯಿಸಿದ ಆ ಮನೆಯ ಜನರನ್ನೂ ಅದೆಷ್ಟು ಬೈದೆನೋ ನನಗೇ ಗೊತ್ತಿಲ್ಲ. ಇದಾದ್ಮೇಲೆ ನಮ್ಮ ಮನೇಲಿ ಹುಟ್ಟಿದ ಯಾವ ಆಕಳು ಕರುವನ್ನೂ ಬೇರೆಯವರ ಮನೆಗೆ ಕಳುಹಿಸಿಕೊಟ್ಟಿಲ್ಲ. ಯಾವ ಹಸುಕರುವಿಗೂ ನಿನ್ನ ಹೆಸರಿಟ್ಟಿಲ್ಲ. ಇದಾಗಿ ಎರಡು ದಶಕಗಳೇ ಕಳೆದರೂ ನಿನ್ನ ನೆನಪು ನಮ್ಮಿಂದ ಮರೆಯಾಗಿಲ್ಲ ಅಶೂ. ಗೊತ್ತಿರದ ತಪ್ಪಿನಲ್ಲಿ, ಅರಿವಿಲ್ಲದೇ ಪಾಲುದಾರಳಾದುದಕ್ಕೆ, ನಿನ್ನನ್ನು ನೋಯಿಸಿದ್ದಕ್ಕೆ ಕ್ಷಮೆಯಿರಲಿ.

 

ನಿನಗೆ ಮತ್ತೊಂದು ವಿಷ್ಯ ಗೊತ್ತುಂಟಾ? ನನ್ನವ ಕೂಡ ನನ್ನಂತೇ ಅಂಬೆಪ್ರಿಯ. ಮುಂದೊಂದು ದಿನ ನಿನ್ನಂತಹುದೇ ಹತ್ತಾರು(ಸಾಧ್ಯವಾದರೆ ಅದಕ್ಕೂ ಹೆಚ್ಚು) ಹಸುಕರುವ ಸಾಕಿ ನಿನ್ನ ಋಣವ ತೀರಿಸುವೆ ಅಶೂ. ನಾವು ಕಟ್ಟುವ ಗೋಶಾಲೆಗೆ ನಿನ್ನದೇ ಹೆಸರಿಡುವೆ ‘ಅಶ್ವಿನಿ ಗೋಶಾಲೆ’, ಇಷ್ಟವಾಯ್ತಾ? ಮತ್ತೆ ನನ್ನ ಕೊಟ್ಟಿಗೆಯಲ್ಲಿ ಮಗಳಾಗಿ ಬರುವುದರ ಮೂಲಕ ಕ್ಷಮಿಸಿಬಿಡು ಅಶೂ.

ನಿನ್ನ ಪುಟ್ಟಕ್ಕ,
ಶುಭಾ.

Author Details


Srimukha

Leave a Reply

Your email address will not be published. Required fields are marked *