ಒಂದು ಊರಿನಲ್ಲಿ ಒಬ್ಬ ಮರ ಕಡಿಯುವವನಿದ್ದ. ಒಮ್ಮೆ ಅವನು ಒಬ್ಬ ಮರದ ವ್ಯಾಪಾರಿಯ ಹತ್ತಿರ ಕೆಲಸಕ್ಕೆ ಸೇರುತ್ತಾನೆ. ಬಲಿಷ್ಠನಾದ ಅವನು ಅತ್ಯಂತ ಉತ್ಸಾಹದಿಂದ ಮರ ಕಡಿಯಲು ಪ್ರಾರಂಭಿಸುತ್ತಾನೆ. ಮೊದಲನೆಯ ದಿನ ೧೮ ಮರಗಳನ್ನು ಕಡಿಯುತ್ತಾನೆ. ಎರಡನೆಯ ದಿನ ಇನ್ನೂ ಹೆಚ್ಚು ಪ್ರಯತ್ನ ಮಾಡಿದರೂ ಕೇವಲ ೧೫ ಮರಗಳನ್ನು ಮಾತ್ರ ಕಡಿಯಲು ಸಾಧ್ಯವಾಗುತ್ತದೆ. ಮೂರನೆಯ ದಿನ ೧೨, ನಾಲ್ಕನೇ ದಿನ ೧೦. ಹೀಗೆ ದಿನದಿಂದ ದಿನಕ್ಕೆ ಪ್ರಯತ್ನ ಹೆಚ್ಚಾಗುತ್ತದೆ. ಫಲ ಕಡಿಮೆಯಾಗುತ್ತಾ ಹೋಗುತ್ತದೆ. ‘ಇದೇಕೆ ಹೀಗಾಗುತ್ತಿದೆ?’ ಎಂದು ತಿಳಿಯದ ಅವನು, ಮರದ ವ್ಯಾಪಾರಿಯ ಹತ್ತಿರ ಬಂದು-
“ನನ್ನ ಪ್ರಯತ್ನಕ್ಕೆ ತಕ್ಕ ಫಲವೇಕೆ ದೊರೆಯುತ್ತಿಲ್ಲ?” ಎಂದು ಕೇಳುತ್ತಾನೆ.
ಆಗ ವ್ಯಾಪಾರಿ- “ನಿನ್ನ ಕೊಡಲಿಯನ್ನು ಹರಿತ ಮಾಡಿದೆಯೇ? ಅದರ ಸಾಣೆ ಹಾಕಿ ಎಷ್ಟು ದಿನವಾಯಿತು?” ಎಂದು ಕೇಳುತ್ತಾನೆ.
ಆಗ ಮರ ಕಡಿಯುವವನು ಆಲೋಚಿಸುತ್ತಾನೆ, ಅವನಿಗೆ ನೆನಪಾಗುವುದಿಲ್ಲ.
ನಮ್ಮೆಲ್ಲರ ಕಥೆಯೂ ಇದೇ ಆಗಿದೆ. ನಮ್ಮಲ್ಲಿ ಅನೇಕರು ಭಾಷಣಗಾರರು, ಸಂಗೀತಗಾರರು, ನೃತ್ಯಪಟುಗಳೂ ಇದ್ದಾರೆ. ಆದರೆ ಅವರು ಆಗಾಗ ತರಬೇತಿ ಪಡೆಯದಿದ್ದರೆ, ಅನುದಿನವೂ ಪ್ರಾಕ್ಟೀಸ್ ಮಾಡದಿದ್ದರೆ ದಿನದಿಂದ ದಿನಕ್ಕೆ ಅವರ ಸಾಮರ್ಥ್ಯ ಕಡಿಮೆಯಾಗುತ್ತಾ ಹೋಗಿ ಹೇಳಿದ್ದನ್ನೇ ಹೇಳುತ್ತಾ, ಮಾಡಿದನ್ನೇ ಮಾಡುತ್ತಾ ಇರುತ್ತಾರೆ. ಆದ್ದರಿಂದ ನಾವು ಸದಾ ಚಾಲ್ತಿಯಲ್ಲಿರಲು ನಮ್ಮ ಸಲಕರಣೆಗಳನ್ನು ಆಗಾಗ ಹರಿತ ಮಾಡಿಕೊಳ್ಳುತ್ತಾ ಇರಬೇಕಾಗುತ್ತದೆ. ಅದಿಲ್ಲವಾದರೆ ನಮ್ಮ ಶ್ರಮ ಜಾಸ್ತಿ – ಫಲ ಕಡಿಮೆ ಆಗುತ್ತದೆ. ಆಗ ಮರ ಕಡಿಯುವವನ ಕಥೆ ನಮ್ಮದೂ ಆಗುತ್ತದೆ.
ಕಾಣದಾಗಿದೆ ಇಟ್ಟು ಮರೆತಿಹ ಕೀಲಿ
ಹುಡುಕಿ ಬಸವಳಿದು ಮನವೆಲ್ಲ ಖಾಲಿ
ಕಟ್ಟಿ ಕೊರೆಯುತಿದೆ ಸುತ್ತಣ ಬೇಲಿ
ಒಳನುಸುಳಿ ಬರಲಿ ಗುರುಕರುಣೆ ಹಾಲಿ |