ಅದೊಂದು ಹಿಮಗಿರಿ, ಅಲ್ಲಿ ನೂರಾರು ಮುಳ್ಳುಹಂದಿಗಳು ವಾಸಿಸುತ್ತಿದ್ದವು. ಒಮ್ಮೆ ತೀವ್ರವಾದ ಶೀತಮಾರುತ ಪ್ರಾರಂಭವಾಗುತ್ತದೆ. ತೀವ್ರವಾದ ಚಳಿಗಾಳಿಯನ್ನು ತಡೆದುಕೊಳ್ಳುವ ಬಗ್ಗೆ ಸಮಾಲೋಚಿಸಲು ಅವೆಲ್ಲ ಒಂದೆಡೆ ಸೇರುತ್ತವೆ. ಅಲ್ಲಿ ಬಂದ ಒಟ್ಟು ಅಭಿಪ್ರಾಯವೆಂದರೆ ಎಲ್ಲ ಮುಳ್ಳುಹಂದಿಗಳೂ ಒಂದಕ್ಕೊಂದು ಅಂಟಿಕೊಂಡಂತೆ ಒಟ್ಟಾಗಿ ಇದ್ದರೆ ಪರಸ್ಪರ ಶಾಖ ಉಂಟಾಗುವುದರಿಂದ ಚಳಿಯನ್ನು ತಡೆಯಬಹುದು ಎಂದು. ಆದರೆ ಅವು ಮುಳ್ಳುಹಂದಿಗಳಾದ್ದರಿಂದ ಒಂದು ಹಂದಿಯ ಮುಳ್ಳು ಇನ್ನೊಂದಕ್ಕೆ ಚುಚ್ಚುವುದರಿಂದ ಒಟ್ಟಾಗಿರಲು ಸಾಧ್ಯವಾಗದೇ ಬೇರೆ ಬೇರೆಯಾಗಿ ದೂರ ದೂರ ನಿಂತು ಚಳಿಯನ್ನು ತಡೆಯಲು ಪ್ರಯತ್ನಿಸುತ್ತವೆ. ಆದರೆ ಶೀತಮಾರುತ ಇನ್ನಷ್ಟು ತೀವ್ರವಾಗಿ ಅವು ಸತ್ತೇ ಹೋಗುವ ಪರಿಸ್ಥಿತಿ ಉಂಟಾಗುತ್ತದೆ. ಆಗ ಅವು ಹೀಗೆ ಬೇರೆ ಬೇರೆಯಾಗಿ ಸಾಯುವುದಕ್ಕಿಂತ ನೋವಾದರೂ ಸಹಿಸಿಕೊಂಡು ಒಟ್ಟಾಗಿದ್ದರೆ ಉತ್ತಮ ಎಂದು ಭಾವಿಸಿ, ಒಟ್ಟಾಗಿ ಜೀವಿಸಲು ಪ್ರಾರಂಭ ಮಾಡಿ ಎಲ್ಲವೂ ಬದುಕಿ ಉಳಿಯುತ್ತವೆ.
ಹೌದು, ನಮ್ಮ ಜೀವನದಲ್ಲಿಯೂ ನೆಂಟರು, ಇಷ್ಟರು, ಬಂಧುಗಳು, ನೆರೆಹೊರೆಯವರು ಹೀಗೆ ಇರುವಾಗ ಹಲವು ಬಾರಿ ಅವರಿಂದ ಬೇಸರ, ಸಂಕಟ, ನೋವು ಎಲ್ಲವೂ ಉಂಟಾಗುತ್ತದೆ. ಅವನ್ನೆಲ್ಲ ಸಹಿಸಿಕೊಂಡು ಸಮಾಜದಲ್ಲಿ ಒಗ್ಗಟ್ಟಾಗಿ ಬದುಕಿದಾಗ ಮಾತ್ರ ಬದುಕು ನೆಮ್ಮದಿಯಾಗುತ್ತದೆ. ಅದಿಲ್ಲವಾದರೆ ಹಿಂಸೆಯಾಗಿ ನಾವು ನಾಶವನ್ನೇ ಹೊಂದಬಹುದು.
ಹರೇ ರಾಮ