ಒಂದು ರಾಜ್ಯದಲ್ಲಿ ಮಹಾದೈವಭಕ್ತನಾದ ಒಬ್ಬ ರಾಜನಿದ್ದ. ಅವನು ಪ್ರತಿದಿನ ದೇವತಾಕಾರ್ಯಗಳನ್ನು ನಿಷ್ಠೆಯಿಂದ ತಪ್ಪದೇ ಮಾಡುತ್ತಿದ್ದ. ಆದರೆ ಪೂಜಾಕಾರ್ಯ ಮಾಡುತ್ತಿರುವಾಗ ಅವನಿಗೆ 3 ಪ್ರಶ್ನೆಗಳು ಉಂಟಾಗುತ್ತಿತ್ತು.
ಅವುಗಳೆಂದರೆ,
1.ದೇವರು ಇದ್ದಾನೆಯೇ? ಇದ್ದರೆ ಎಲ್ಲಿ ಇದ್ದಾನೆ?
2.ಅವನನ್ನು ನಾನು ನೋಡಬಹುದೇ?
3.ಅವನು ಏನು ಮಾಡುತ್ತಾನೆ?
ಈ ಮೂರು ಪ್ರಶ್ನೆಗಳಿಗೆ ಸಮಾಧಾನಕರವಾದ ಉತ್ತರ ಯಾರಿಂದಲೂ ಅವನಿಗೆ ಸಿಗುವುದಿಲ್ಲ. ಆಗ ಅವನು ತನ್ನ ರಾಜ್ಯದಲ್ಲಿ ಡಂಗುರ ಸಾರಿಸಿ ‘ಈ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುವವರಿಗೆ ದೊಡ್ಡ ಬಹುಮಾನ ನೀಡಲಾಗುತ್ತದೆ, ಯಾರು ವಿಫಲರಾಗುತ್ತಾರೋ ಅವರ ತಲೆದಂಡ ಪಡೆಯಲಾಗುತ್ತದೆ.’ ಎಂದು ಘೋಷಣೆ ಮಾಡುತ್ತಾನೆ.
ಹಲವಾರು ಜನ ಬಂದು ಪ್ರಯತ್ನಿಸಿ ಸೋತು ತಲೆದಂಡ ಒಪ್ಪಿಸುತ್ತಾರೆ. ಕಡೆಗೆ ಯಾರೂ ಬರುವುದಿಲ್ಲ.
ಆಗ ರಾಜ ತನ್ನ ಅಮಾತ್ಯನಲ್ಲಿ-
‘ನೀನು ಇದಕ್ಕೆ ಉತ್ತರ ಕಂಡು ಹಿಡಿಯಬೇಕು’ ಎನ್ನುತಾನೆ.
ಅಮಾತ್ಯನಿಗೆ ತುಂಬ ಚಿಂತೆಯಾಗುತ್ತದೆ. ಸರಿಯಾಗಿ ಉತ್ತರಿಸದಿದ್ದರೆ ತಲೆದಂಡ ಕೊಡಬೇಕಾಗುತ್ತದೆ ಎಂದು ಚಿಂತೆಯಲ್ಲಿಯೇ ಮನೆಗೆ ಬಂದಾಗ ಅವನ ಮಗ ಏನು ಸಮಸ್ಯೆ ಎಂದು ಕೇಳಿ ತಿಳಿದ.
ಹೀಗೆಂದ- ‘ನಾನು ಉತ್ತರಿಸುತ್ತೇನೆ. ನನ್ನನ್ನು ಅರಮನೆಗೆ ನಾಳೆ ಕರೆದುಕೊಂಡು ಹೋಗು.’
ಅಮಾತ್ಯ ಹಾಗೆಯೇ ಮಾಡಿದ. ಅವನು ಅರಮನೆಯ ಬಾಗಿಲಿನಲ್ಲಿ ಒಂದು ಪಾತ್ರೆಯಲ್ಲಿ ಹಾಲನ್ನು ಇಟ್ಟುಕೊಂಡು ಒಂದು ಕೋಲಿನಿಂದ ಅದನ್ನು ಕಡೆಯುತ್ತಿರುತ್ತಾನೆ.
ರಾಜ ಬಂದು, ‘ಇದೇನು ಮಾಡುತ್ತಿದ್ದೀಯ?’ ಎಂದು ಕೇಳಿದಾಗ, ‘ಇದರಲ್ಲಿ ಬೆಣ್ಣೆಯನ್ನು ಹುಡುಕುತ್ತಿದ್ದೇನೆ’ ಎಂದು ಅಮಾತ್ಯನ ಮಗ ಹೇಳುತ್ತಾನೆ.
ಆಗ ರಾಜ- ‘ಹಾಲು ಮೊಸರಾಗಿ ಅದನ್ನು ಮಥಿಸಿದಾಗ ಬೆಣ್ಣೆ ಬರುತ್ತದೆಯಲ್ಲವೇ?’ ಎನ್ನುತ್ತಾನೆ.
ಅದಕ್ಕರ ಆ ಹುಡುಗ- ‘ನಿನ್ನ ಮೊದಲನೆ ಎರಡೂ ಪ್ರಶ್ನೆಗಳಿಗೆ ಉತ್ತರ ದೊರೆಯಿತು. ಅದು ಹೇಗೆಂದರೆ ಹಾಲಿನಲ್ಲಿ ಬೆಣ್ಣೆ ಇರುವಂತೆ ದೇವರು ಇರುತ್ತಾನೆ. ಮೊಸರು ಮಾಡಿ ಮಥಿಸಿದಾಗ ಅದನ್ನು ನೋಡಬಹುದು.’
‘ಇನ್ನು ಮೂರನೆಯ ಪ್ರಶ್ನೆಗೆ ಉತ್ತರ ಏನು?’ ಎಂದು ರಾಜ ಕೇಳಿದಾಗ ಆ ಹುಡುಗ- ‘ನನ್ನನ್ನು ಸಿಂಹಾಸನದಲ್ಲಿ ಕೂರಿಸು’ ಎನ್ನುತ್ತಾನೆ. ಹಾಗೇ ಮಾಡಲು, ರಾಜನಿಗೆ ಹುಡುಗ ಹೇಳುತ್ತಾನೆ- ‘ದೇವರು ಸಭ್ಯರನ್ನು ಉನ್ನತ ಸ್ಥಾನಕ್ಕೂ, ಅಹಂಕಾರಿಗಳನ್ನು ಪಾತಾಳಕ್ಕೂ ತಳ್ಳುತ್ತಿರುತ್ತಾನೆ’ ಎಂದು. ಇದರಿಂದ ಸಮಾಧಾನಗೊಂಡ ರಾಜ ಆ ಹುಡುಗನಿಗೆ ಪುರಸ್ಕಾರವಿತ್ತು ಗೌರವಿಸಿ ಅಹಂಕಾರವನ್ನು ಬಿಟ್ಟು ಸೌಜನ್ಯದಿಂದ ರಾಜ್ಯವಾಳುತ್ತಾನೆ.
ತುಂಬಾ ಚೆನ್ನಾಗಿ ಇದೆ