ತ್ರಿಲೋಕ ಸಂಚಾರಿಯಾದ ನಾರದರು ಒಮ್ಮೆ ಭೂಲೋಕಕ್ಕೆ ಬರುತ್ತಾರೆ. ಎಲ್ಲ ಕಡೆಯಲ್ಲಿ ಪಶು, ಪಕ್ಷಿ, ಪ್ರಾಣಿ, ಮನುಷ್ಯ ಎಲ್ಲರೂ ಒಂದಲ್ಲ ಒಂದು ಕಾರಣಕ್ಕೆ ದುಃಖತಪ್ತರಾದಂತೆ ಕಾಣುತ್ತಾರೆ.
ಇದಕ್ಕೆ ಕಾರಣವೇನೆಂದು ನಾರದರು ಆಲೋಚಿಸುವಾಗ ಅವರಿಗೆ ಹೊಳೆಯುತ್ತದೆ- ‘ಮೋಹ ಕಾರಣ’ ಎಂದು.
ಪ್ರಾಣಿ ಪಕ್ಷಿಗಳ ಅತಿಯಾದ ಮೋಹವೇ ಅತಿಯಾದ ದುಃಖಕ್ಕೆ ಕಾರಣವೆಂದು ನಾರದರು ಶ್ರೀಹರಿಯ ಹತ್ತಿರ ಬಂದು- “ಪ್ರಪಂಚದಲ್ಲಿ ಮೋಹವೇ ಇಲ್ಲದಂತೆ ಮಾಡುವ ಹಾಗೆ ಮಾಡಿದರೆ ಜನರ ದುಃಖ ಕಡಿಮೆಯಾಗಿ ಅವರು ಸಂತೋಷದಿಂದ ಇರುತ್ತಾರೆ” ಎಂದು ಕೇಳಿಕೊಳ್ಳುತ್ತಾನೆ.
ಆಗ ಶ್ರೀಹರಿ- “ಆ ರೀತಿ ಮೋಹವೇ ಇಲ್ಲದಂತೆ ಮಾಡಿದರೆ ಪರಿಣಾಮ ಇನ್ನು ಭೀಕರವಾಗುತ್ತದೆ” ಎನ್ನುತ್ತಾನೆ. ಆದರೂ ನಾರದನ ಒತ್ತಾಯಕ್ಕೆ ಕಟ್ಟುಬಿದ್ದು “ಹಾಗೇ ಆಗಲಿ” ಎನ್ನುತ್ತಾನೆ.
ಸ್ವಲ್ಪ ದಿನಗಳ ಅನಂತರ ಇದರ ಪರಿಣಾಮವನ್ನು ವೀಕ್ಷಿಸಲು ಭೂಲೋಕಕ್ಕೆ ಬರುತ್ತಾನೆ. ಅಲ್ಲಿ ನೋಡಿದಾಗ ಆಗತಾನೇ ಜನಿಸಿದ ಕರುವಿಗೆ ತಾಯಿ ಹಸು ಹಾಲನ್ನು ಉಣಿಸುತ್ತಿರಲಿಲ್ಲ. ಗುರು ಶಿಷ್ಯರಿಗೆ ಪಾಠ ಪ್ರವಚನ ಮಾಡುತ್ತಿರಲಿಲ್ಲ. ತಾಯಂದಿರು ತಮ್ಮ ಮಕ್ಕಳ ಲಾಲನೆ ಪಾಲನೆ ಮಾಡದೇ ಬೇಕಾಬಿಟ್ಟಿಯಾಗಿ ಬಿಟ್ಟಿರುತ್ತಾರೆ. ಒಟ್ಟಿನಲ್ಲಿ ಎಲ್ಲಿಯೂ ಉತ್ಸಾಹದ ವಾತಾವರಣವೇ ಇರಲಿಲ್ಲ. ಆಗ ನಾರದರಿಗೆ, ಪ್ರಪಂಚದಲ್ಲಿ ಮೋಹವೇ ಇಲ್ಲದಿದ್ದರೆ ಜನ ಜೀವನ ಅಸ್ತವ್ಯಸ್ತವಾಗುತ್ತದೆ ಎಂಬ ಅರಿವಾಗುತ್ತದೆ.
ಪ್ರಪಂಚ ಸಸೂತ್ರವಾಗಿ ನಡೆಯಲು ಮೋಹ ಬೇಕು. ಆದರೆ ಅತಿಯಾದ ಮೋಹ ದುಃಖಕ್ಕೆ ಕಾರಣ ಎಂಬ ಅರಿವಾಗುತ್ತದೆ. ಎಲ್ಲವೂ ಭಗವಂತನ ಸೃಷ್ಟಿಯಾಗಿರುವಾಗ ಒಳ್ಳೆಯದು ಕೆಟ್ಟದ್ದು ಎರಡೂ ಇರುತ್ತದೆ. ನಾವು ನಮ್ಮ ವಿವೇಚನೆ ಬಳಸಿಕೊಂಡು ಜೀವನ ನಡೆಸಬೇಕು.