ಅವಿಚ್ಛಿನ್ನ ಪರಂಪರೆಯ ಹಿರಿಮೆ ಗರಿಮೆಯುಳ್ಳ ಶ್ರೀ ರಾಮಚಂದ್ರಾಪುರ ಮಠ ಅತ್ಯಂತ ವಿಶಿಷ್ಟವಾದದ್ದು. ಶ್ರೀ ಶಂಕರ ಭಗವತ್ಪಾದರು ಪೂರ್ವ ಸಂಕಲ್ಪಿತರಾಗಿ ಸ್ಥಾಪಿಸಿದ ಪೀಠವಿದು. ಶ್ರೀಸುರೇಶ್ವರಾಚಾರ್ಯರಿಂದ ಸಂನ್ಯಾಸ ದೀಕ್ಷಿತರಾಗಿದ್ದ ತಮ್ಮ ಜ್ಞಾನ ಶಿಷ್ಯರಾದ ಶ್ರೀ ವಿದ್ಯಾನಂದಾಚಾರ್ಯರನ್ನು ಮೂರನೆಯ ಪೀಠಾಧಿಪತಿಗಳನ್ನಾಗಿಸಿ ಅಗಸ್ತ್ಯ ಪ್ರಪೂಜಿತ ವರದಮುನಿ ಪ್ರದತ್ತ ಶ್ರೀರಾಮಾದಿ ವಿಗ್ರಹಗಳನ್ನೂ, ಚಂದ್ರಮೌಳೀಶ್ವರ ಲಿಂಗವನ್ನೂ, ಶ್ರೀಪಾದುಕೆಗಳನ್ನೂ ಅವರಿಗೆ ಅನುಗ್ರಹಿಸಿ ಸ್ಥಾಪಿಸಿದ ಪರಂಪರೆಯಿದು. ಅಖಂಡ ಭಾರತವರ್ಷದಲ್ಲಿ ಆದಿಗುರು ಶಂಕರಾಚಾರ್ಯ ಪರಂಪರೆಯಲ್ಲಿ ಮಹೋನ್ನತ ಇತಿಹಾಸವನ್ನು ಹೊಂದಿರುವಂತಹ ಏಕಮೇವ ಅವಿಚ್ಛಿನ್ನ ಪರಂಪರೆಯಿದು. ಈ ಶ್ರೀ ಪೀಠದ 36 ನೇ ಪೀಠಾಧಿಪತಿಗಳಾಗಿ ಪೀಠಾರೋಹಣಗೈದು 25 ಚಾತುರ್ಮಾಸ್ಯಗಳನ್ನು ಪೂರೈಸಿರುವ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳಿಗಿರುವ ಬಿರುದು “ಸಂಕಲ್ಪಿತ ಕಾರ್ಯಸಿದ್ಧಿ ಪ್ರವೀಣ”.
ಅದು ಕೇವಲ ಬಿರುದಲ್ಲ. ಶ್ರೀಸಂಸ್ಥಾನದವರ ಕಾರ್ಯಚಟುವಟಿಕೆಗಳ,ಅವರ ಸಾಧನೆಗಳ ಅರಿವಿರುವವರಿಗೆ ಇದು ವಾಸ್ತವ ಎಂಬುದು ತಿಳಿದು ಬರುತ್ತದೆ. ಸಾಧನೆಗಳೆಡೆಗಿನ ಅವರ ನಡಿಗೆ ಅಚ್ಚರಿ ಹುಟ್ಟಿಸುವಂತದ್ದು. ಶ್ರೀ ಮಠಕ್ಕೆ ಹಸಿರು ಹಾಗೂ ಹಳದಿಯ ಸಹಯೋಗದ ಬಣ್ಣ ನೀಡಿದರು. ಗೋವು ಹಾಗೂ ಕರುವನ್ನು ಹೊಂದಿರುವ ಕಾಮಧೇನು ಧ್ವಜ ನೀಡಿದರು. ಶ್ರೀ ಮಠದ ಪಾರಂಪರಿಕ 18 ಸಮಾಜಗಳ ಮನೆ-ಮನೆಗೆ ಸಂಚರಿಸಿ ದುಃಖ ದುಮ್ಮಾನ ಆಲಿಸಿ ಭರವಸೆಯ ಬೆಳಕಾದರು. ಗೋಮಾತೆಯ ಉಳಿವಿಗಾಗಿ ಪ್ರಾಣವನ್ನೇ ಪಣವಾಗಿಟ್ಟರು. “ಮುಷ್ಟಿಭಿಕ್ಷಾ” ಯೋಜನೆಯ ಮೂಲಕ ತ್ಯಾಗ ಮನೋಭಾವನೆಯನ್ನು ಮೂಡಿಸಿದರು. “ಬಿಂದು-ಸಿಂಧು” ಯೋಜನೆಯ ಮೂಲಕ ಜನಸಾಮಾನ್ಯರೂ ಸೇವಾಭಾಜನರಾಗಲು ಅವಕಾಶ ನೀಡಿದರು. ತಮ್ಮ ಪೀಠಾರೋಹಣ ದಿನವನ್ನು ಒಂದು ಬಡ ಕುಟುಂಬದ ಸಂಪೂರ್ಣ ಪೋಷಣೆಗೆ ವಿನಿಯೋಗಿಸುವ ದಿನವನ್ನಾಗಿ “ಜೀವನ ದಾನ” ಎಂಬ ರೂಪದಲ್ಲಿ ಲೋಕಾರ್ಪಣೆಗೊಳಿಸಿದರು. ಪ್ರಪಂಚದ ಮೊದಲ ಗೋ ಬ್ಯಾಂಕ್, ಗೋಶಾಲೆಗಳು, ಗವ್ಯೋದ್ಯಮ, ಗವ್ಯ ಚಿಕಿತ್ಸಾಲಯ ಮುಂತಾದ ವಿನೂತನ ಯೋಜನೆಗಳನ್ನು ಸಾಕಾರಗೊಳಿಸಿದರು. ಜನಹಿತ ವಿರೋಧಿ ಯೋಜನೆಗಳನ್ನು ವಿರೋಧಿಸುವ ಮೂಲಕ ಇದು ಕೇವಲ “ಜಗದ್ಗುರು ಪೀಠ ” ಮಾತ್ರವಲ್ಲ “ಸಮಾಜ ಸಂರಕ್ಷಣೆಯ ಧರ್ಮ ಪೀಠ” ಎಂಬುದನ್ನು ಸಾಬೀತು ಪಡಿಸಿದರು. ಜಗತ್ತಿನ ಲಕ್ಷ್ಯವನ್ನು ತನ್ನತ್ತ ಸೆಳೆದ ವಿಶ್ವ ಗೋ ಸಮ್ಮೇಳನ, ರಾಮಾಯಣ ಮಹಾಸತ್ರ, ವಿಶ್ವ ಮಂಗಲ ಗೋಗ್ರಾಮ ಯಾತ್ರೆ. ಇವೆಲ್ಲ ಭಾರತವರ್ಷದ ಚರಿತ್ರಾರ್ಹ ದಾಖಲೆಗಳು. ಸಹಸ್ರ ಸಂತ ಸಂಗಮದಂತಹ ಕಾರ್ಯಕ್ರಮಗಳನ್ನು ನೋಡಿದವರು ಇದು ರಾಮಚಂದ್ರಾಪುರ ಮಠದಿಂದ ಮಾತ್ರ ಸಾಧ್ಯ ಎಂದಿದ್ದು ಸಂಘಟನೆಯ ವಿರಾಟ್ ಸ್ವರೂಪಕ್ಕೆ ಒಂದು ನಿದರ್ಶನ.
ಶ್ರೀ ಮಠದ ಮೂಲಸ್ಥಾನವಾದ ಅಶೋಕೆಯ ಪುನರುತ್ಥಾನ, ಆಂಜನೇಯ ಜನ್ಮಸ್ಥಾನ ಗೋಕರ್ಣದ ಅಭಿವೃದ್ಧಿ, ಹೊಸನಗರದಲ್ಲಿ ಹೊಸರೂಪದ ಚಂದ್ರಮೌಳೀಶ್ವರ ದೇವಾಲಯ ನಿರ್ಮಾಣ ಒಂದೇ ಎರಡೇ!! ಪಟ್ಟಿಮಾಡುತ್ತಾ ಹೋದರೆ ಅದು ಅಪಾರ ಅನಂತ.
ಶ್ರೀಸಂಸ್ಥಾನದವರು ಸಂಕಲ್ಪಿಸಿರುವ “ಕೋಟಿರುದ್ರ” ಗೊಕರ್ಣ ಶ್ರೀ ಮಹಾಬಲೇಶ್ವರನ ಸನ್ನಿಧಿಯಲ್ಲಿ ನಡೆಯುತ್ತಿದ್ದು ಶ್ರೀಗಳವರ ಮಹಾಸಂಕಲ್ಪ ಸಂಪನ್ನಗೊಳ್ಳುವ ಹಂತದಲ್ಲಿದೆ.
ಇಷ್ಟೇ ಅಲ್ಲದೇ ಚಾತುರ್ಮಾಸ್ಯಕ್ಕೆ ತಮ್ಮ ಸಂಕಲ್ಪದಂತೆ ಹೊಸರೂಪಕೊಟ್ಟು ಧಾರ್ಮಿಕ ಆಚರಣೆಯನ್ನು ಸಮಾಜಮುಖಿಯಾಗಿಸಿದ ಕೀರ್ತಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರದ್ದು. ಶ್ರೀಸಂಸ್ಥಾನದವರು ಶ್ರೀ ಪೀಠಕ್ಕೆ ಬಂದ ನಂತರದ ದಿನಗಳಲ್ಲಿ ಶ್ರೀ ರಾಮಚಂದ್ರಾಪುರ ಮಠದಲ್ಲಿ ನಡೆದ ಕಾರ್ಯಕ್ರಮಗಳೆಲ್ಲವೂ ಒಂದೊಂದು ಹೊಸ ದಾಖಲೆ ಬರೆದಿವೆ. ಶ್ರೀಸಂಸ್ಥಾನದವರು ಸಂಕಲ್ಪಿಸಿದ ಕಾರ್ಯಕ್ರಮ ಅದು ಉತ್ಸವವಿರಲಿ, ಉಪವಾಸವಿರಲಿ ಅಲ್ಲಿ ಜನಸಾಗರವೇ ಕಾರ್ಯಕ್ರಮವನ್ನು ಸಾಕ್ಷೀಕರಿಸಿದೆ. ಇದೆಲ್ಲವನ್ನೂ ನೋಡಿದಾಗ ನಮ್ಮ ಮನದಾಳದಲ್ಲಿ ಮೂಡುವ ಭಾವನೆ ನಮ್ಮ ಶ್ರೀಸಂಸ್ಥಾನದವರು “ಸಂಕಲ್ಪಿತ ಕಾರ್ಯಸಿದ್ಧಿ ಪ್ರವೀಣ” ಎಂದು.