ಮಕ್ಕಳ ಬದುಕಲ್ಲಿ ದೀಪಾವಳಿಯ ಬೆಳಕು ಮೂಡಿಸಿದ ಶ್ರೀರಾಮಚಂದ್ರಾಪುರಮಠ

ಸುದ್ದಿ

ಬೆಂಗಳೂರು: ಹಲವು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮೂಲಕವೇ ಜನಸಾಮಾನ್ಯರ ಹಿತಕ್ಕಾಗಿ ದುಡಿಯುತ್ತಿರುವ ಶ್ರೀರಾಮಚಂದ್ರಾಪುರಮಠವು ಪುಟ್ಟ ಪುಟ್ಟ ಮಕ್ಕಳ ಮುಖದಲ್ಲೂ ನಗುವರಳಿಸಿದೆ.
“Fly Higher India” ಸಂಸ್ಥೆಯ ಮೂಲಕ ಇಂತಹದೊಂದು ಅನುಕರಣೀಯ ಕಾರ್ಯವನ್ನು ಶ್ರೀಮಠ ಮಾಡಿದೆ.

 

Fly Higher India, ಇದೊಂದು ಸರ್ಕಾರೇತರ ಸಂಸ್ಥೆಯಾಗಿದ್ದು ದೇಶಾದ್ಯಂತ ಈ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಇದರಡಿಯಲ್ಲಿ ಅದೆಷ್ಟೋ ಕಾರ್ಯಕರ್ತರು ನಿರಂತರ ಕೆಲಸ ಮಾಡುತ್ತಿದ್ದಾರೆ. ಈ ಸಂಸ್ಥೆಯು ತಿಂಗಳಲ್ಲಿ ಒಂದು ಭಾನುವಾರ ಯಾವುದಾದರೂ ಬಡ ಮಕ್ಕಳ ಶಾಲೆ, ಅನಾಥಾಶ್ರಮ ಅಥವಾ ವಿಶೇಷಚೇತನರ ಶಾಲೆಗೆ ಭೇಟಿ ನೀಡಿ, ಇಡಿಯ ದಿನವನ್ನು ಆ ಮಕ್ಕಳೊಟ್ಟಿಗೆ ಕಳೆಯುತ್ತದೆ.

 

ಸಂಸ್ಥೆಯ ಕಾರ್ಯಕರ್ತರು ಮಕ್ಕಳಿಗೆ ಆಟ ಆಡಿಸಿ, ಆಟದಲ್ಲೇ ಪಾಠವನ್ನು ಹೇಳಿಕೊಡುತ್ತ, ಊಟ ಬಡಿಸಿ, ಅವರಲ್ಲಿ ಒಂದಾಗಿ ಮಕ್ಕಳ ಸಂತೋಷವನ್ನು ದ್ವಿಗುಣಗೊಳಿಸುತ್ತಾರೆ. ಅಲ್ಲದೇ, ಮಕ್ಕಳಿಗೆ ಸಹಾಯವಾಗುವಂತಹ ವಸ್ತುಗಳು, ಪಠ್ಯ ಪುಸ್ತಕಗಳನ್ನು ವಿತರಿಸಲಾಗುತ್ತದೆ. ಹೊರನೋಟಕ್ಕೆ ಇದು ಚಿಕ್ಕ ಕೆಲಸ ಎನ್ನಿಸಿದರೂ ಪುಟ್ಟ ಮಕ್ಕಳ ಮುಖದ ಮೇಲೆ ಮೂಡುವ ನಗು ಸಾರ್ಥಕತೆಯ ಭಾವನೆ ಮೂಡಿಸುತ್ತದೆ.

 

ನವೆಂಬರ್ ೧೧ರಂದು ಶ್ರೀಮಠವೂ ಸಹ ಇಂತಹುದೇ ಪುಣ್ಯ ಕಾರ್ಯ ನಡೆಸಿ ದೇವರ ಸಮಾನವಾದ ಮಕ್ಕಳ ಮುಖದಲ್ಲಿ ನಗು ಮೂಡಿಸಿದೆ. ಜಾಲಹಳ್ಳಿ ಸರ್ಕಾರಿ ಶಾಲೆಗೆ ಶ್ರೀಮಠವೂ Fly Higher India ಕಾರ್ಯಕರ್ತರ ಮೂಲಕ stationery ಅಂದರೆ, ಪೆನ್, ಪೆನ್ಸಿಲ್, ಇತರೆ ಉಪಯುಕ್ತ ವಸ್ತುಗಳನ್ನು 100 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿತರಿಸಿದೆ.

 

ಶ್ರೀಸಂಸ್ಥಾನದಿಂದ ಆಶೀರ್ವಾದ ರೂಪದಲ್ಲಿ ಇದನ್ನು ಪಡೆದ ಮಕ್ಕಳು ಖುಷಿಗೊಂಡು, ನಗುಮೊಗದಿ ಶ್ರೀಮಠಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

 

ಎಲ್ಲರ ಉದ್ಧಾರವನ್ನು ಬಯಸುವ ಶ್ರೀಮಠವು, ಈ ದೀಪಾವಳಿಗೆ ಮಠದ ಕಾರ್ಯಕರ್ತರ ಮೂಲಕ ಸರ್ಕಾರಿ ಶಾಲೆಯ ಮಕ್ಕಳಿಗೆ ಉಡುಗೊರೆಗಳನ್ನು ನೀಡಿ, ಅವರ ಬದುಕು ಬೆಳಗಲೆಂದು, ಬಂಗಾರವಾಗಲೆಂದು ಆಶೀರ್ವದಿಸಿದೆ.

 

Leave a Reply

Your email address will not be published. Required fields are marked *