ಒಂದು ಊರಿನ ಒಂದು ದೊಡ್ಡ ಕೆರೆಯಲ್ಲಿ ಎರಡು ಕಪ್ಪೆಗಳಿದ್ದವು. ಒಂದು ದಪ್ಪವಿದ್ದರೆ ಇನ್ನೊಂದು ತೆಳ್ಳಗಿತ್ತು.
ಈ ಎರಡೂ ಕಪ್ಪೆಗಳೂ ಒಂದು ದಿನ ಹಾರುತ್ತಾ ಹಾರುತ್ತಾ ಒಂದು ಮನೆಯೊಳಗೆ ಪ್ರವೇಶಿಸಿ ಅಡುಗೆ ಮನೆಗೆ ಹೋಗಿ ಅಕಸ್ಮಾತ್ ಆಗಿ ಒಂದು ದೊಡ್ಡ ಮೊಸರಿನ ಪಾತ್ರೆಯಲ್ಲಿ ಬಿದ್ದುಬಿಡುತ್ತವೆ. ಎಷ್ಟೇ ಪ್ರಯತ್ನ ಮಾಡಿದರೂ ಅವಕ್ಕೆ ಮೇಲೆ ಬರಲು ಸಾಧ್ಯವಾಗುವುದಿಲ್ಲ.
ಆಗ ದಪ್ಪ ಕಪ್ಪೆ, ಸಣ್ಣ ಕಪ್ಪೆಯ ಬಳಿ-
‘ನನ್ನಿಂದ ಕಾಲು ಬಡಿಯಲು ಸಾಧ್ಯವಾಗುತ್ತಿಲ್ಲ. ನಾನು ಸತ್ತು ಹೋಗುತ್ತೇನೆ’ ಎಂದು ಹೇಳುತ್ತದೆ.
ಅದಕ್ಕೆ ಸಣ್ಣ ಕಪ್ಪೆ- ‘ಪ್ರಯತ್ನ ನಿಲ್ಲಿಸಬೇಡ. ಕಾಲು ಬಡಿಯುತ್ತಾ ಇರು. ಏನಾದರೂ ದಾರಿ ಸಿಗಬಹುದು’ ಎನ್ನುತ್ತದೆ.
ಆದರೆ ಅದರ ಮಾತನ್ನು ಕೇಳದ ದೊಡ್ಡ ಕಪ್ಪೆ ಕಾಲು ಬಡಿಯುವುದನ್ನು ನಿಲ್ಲಿಸುತ್ತದೆ. ಸ್ವಲ್ಪ ಹೊತ್ತಿನಲ್ಲಿ ಸತ್ತೇ ಹೋಗುತ್ತದೆ.
ಆದರೆ ಸಣ್ಣ ಕಪ್ಪೆ ಕಷ್ಟವಾದರೂ ಪ್ರಯತ್ನ ನಿಲ್ಲಿಸುವುದಿಲ್ಲ. ಒಂದೇ ಸಮನೆ ಕಾಲು ಬಡಿಯುತ್ತಾ ಇದ್ದದ್ದರಿಂದ ಸ್ವಲ್ಪ ಹೊತ್ತಿನಲ್ಲಿ ಮೊಸರು ಕಡೆದು, ಕಡೆದು ಬೆಣ್ಣೆ ಮುದ್ದೆಯಾಗುತ್ತದೆ. ಆ ಬೆಣ್ಣೆಯ ಉಂಡೆಯ ಮೇಲೆ ಕುಳಿತು ಕಪ್ಪೆ ಪಾತ್ರೆಯಿಂದ ಹೊರಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗುತ್ತದೆ.
ಈ ಕಥೆಯ ನೀತಿಯೆಂದರೆ ನಮ್ಮ ಜೀವನದಲ್ಲಿ ಅನೇಕ ಬಗೆಯ ಕಷ್ಟಗಳು ಬರಬಹುದು. ನಾವು ಧೃತಿಗೆಡದೆ ಪ್ರಯತ್ನಶೀಲರಾಗಿಯೇ ಇದ್ದರೆ ಕಷ್ಟಕಾರ್ಪಣ್ಯಗಳು ನಿವಾರಣೆಯಾಗಿ ಸುದಿನಗಳು ಬರುವ ಸಾಧ್ಯತೆ ಖಂಡಿತಾ ಇದೆ.
satyavaadude