ನಮ್ಮ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳವರು

ಅಂಕಣ ಆ ಕಣ್ಣಿಂದ : ಮೋಹನ ಭಾಸ್ಕರ ಹೆಗಡೆ ಹೆರವಟ್ಟ

ಪ್ರಾಯೋಧುನಾ ಶಿಷ್ಯವರ್ಗಃ ಸಂಪದ್ವಿದ್ಯಾದಿಭೂಷಿತಃ |
ಭಕ್ತಿಶ್ರದ್ಧಾದ್ಯುಪೇತೋಪಿ ಗುರುಪೀಠೇ ಸಮೃಧ್ಯತಾಮ್ ||

 

ಈಗಿನ ಶಿಷ್ಯವರ್ಗದವರು ವಿದ್ಯೆ, ಧನಸಂಪತ್ತು, ಉದ್ಯೋಗ, ಅಧಿಕಾರ, ಕೃಷಿ ಇತ್ಯಾದಿ ವಿಚಾರವಾಗಿ ಜೀವನರಂಗದಲ್ಲಿ  ನೆಲೆಯನ್ನೂರಿ ಬೆಳಗುತ್ತಿರುವುದನ್ನು ಹಾಗೂ ಗುರುಪೀಠದ ಬಗ್ಗೆ ಅಪಾರ ಭಕ್ತಿಶ್ರದ್ಧಾಸಂಪನ್ನರಾಗಿ ಬಾಳುತ್ತಿರುವುದನ್ನು
ನಮ್ಮ ಪರಮಪೂಜ್ಯ ಶ್ರೀಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರು ಆತ್ಮವಿದ್ಯಾಆಖ್ಯಾಯಿಕಾ ಎಂಬ ತಮ್ಮ ಅತಿ ಪ್ರೀತಿಯ ಆತ್ಮಚರಿತೆಯಲ್ಲಿ ಗುರುತಿಸಿ, ಇವರೆಲ್ಲರೂ ಇನ್ನೂ ವಿಶೇಷವಾಗಿ  ಅಭಿವೃದ್ಧಿ ಹೊಂದಿ ಬಾಳಿ ಬೆಳಗಲಿ ಎಂದು ನಮ್ಮೆಲ್ಲರನ್ನು ಹರಸಿದ್ದಾರೆ. ಅವರ ಆ ದಿವ್ಯ ಹರಕೆಯನ್ನು ನೆನಪಿಸಿಕೊಂಡು ಗುರುಕಾರುಣ್ಯದ ಆ ಕಟಾಕ್ಷದಲ್ಲಿ ಸದಾ ಬಾಳಿಬೆಳಗುವ ಅವಕಾಶವನ್ನು ಯೋಚಿಸುತ್ತಾ  ಮುಂದುವರಿಯತ್ತೇನೆ.

 

ಆರಂಭಿಕ ವಿದ್ಯಾಭ್ಯಾಸ : ದೊಡ್ಡ ಗುರುಗಳ ಪೂರ್ವಾಶ್ರಮದ ತೀರ್ಥರೂಪರ ಹೆಸರು ಗಣೇಶ ಭಟ್ಟರು. ತಾಯಿಯವರು ಮೂಕಾಂಬಿಕೆ.  ತಮ್ಮ ತಂದೆಯವರು ತ್ಯಾಗಶೀಲರು, ಜನಪ್ರಿಯರು, ಮಹಾಮಂತ್ರಜ್ಞರು ಆಗಿದ್ದು ಶ್ರೀಮಹಾಗಣಪತಿ ದೇವರ, ಶ್ರೀಚಂಡಿನವಾಕ್ಷರಿ, ಶ್ರೀದೇವೀ ಮಹಾಷೋಡಷಿ ಮುಂತಾದ ಮಹಾಮಂತ್ರಗಳ ಉಪಾಸಕರೂ ಆಗಿದ್ದರು ಎಂದು ಶ್ರೀಗಳವರು ನೆನಪಿಸಿಕೊಳ್ಳುತ್ತಾರೆ.  ಇವರ ತಾಯಿಯವರು ಸಹಧರ್ಮಿಣಿಯಾಗಿ, ಪತಿವ್ರತೆಯಾಗಿ ಗೃಹಕೃತ್ಯದ ಭಾರವನ್ನು ಸುಸೂತ್ರವಾಗಿ ನೋಡುತ್ತಿದ್ದು ಸಂತೋಷದ ಸಂಸಾರವನ್ನು ತೂಗಿಸಿಕೊಂಡು ಹೋಗುತ್ತಿದ್ದರು ಎಂದು ತಾಯಿಯವರನ್ನು ನೆನಪಿಸಿಕೊಳ್ಳುತ್ತಾರೆ. ಇವರ ಮೊದಲ ವಿದ್ಯಾಭ್ಯಾಸ ತಂದೆಯವರಿಂದಲೇ ಆರಂಭವಾಗುತ್ತದೆ. ಇವರಿಗೆ ಉಪನಯನ ಸಂಸ್ಕಾರ ಆಗಿ, ಉಪಾಕರ್ಮವೂ ಆದ ಬಳಿಕ ವಿಜಯದಶಮಿಯ ಶುಭಮುಹೂರ್ತದಂದು ವಿದ್ಯಾಭ್ಯಾಸವನ್ನು ತಂದೆಯವರೇ ಆರಂಭಿಸುತ್ತಾರೆ.

 

ಇವರ ತಂದೆಯವರು ಆ ಕಾಲದಲ್ಲಿಯೇ ಕೃಷ್ಣಯಜುರ್ವೇದದ  ಅಧ್ಯಯನ ಕೇಂದ್ರವಾದ ದ್ರಾವಿಡದೇಶಕ್ಕೆ ಹೋಗಿ ಅಲ್ಲಿ  ಕೃಷ್ಣಯಜುರ್ವೇದದ ಬ್ರಾಹ್ಮಣ, ಅರಣ್ಯಕಗಳು ಮತ್ತು ಸಪ್ತಕಾಂಡಸಂಹಿತೆಯನ್ನು ಪದಕ್ರಮಗಳೊಂದಿಗೆ ಅಧ್ಯಯನ ಮಾಡಿದ ವಿದ್ವಾಂಸರು. ಸಂಸ್ಕೃತ ಸಾಹಿತ್ಯವನ್ನು ಕೂಡ ವ್ಯಾಸಂಗ ಮಾಡಿದವರು. ಆದುದರಿಂದ ಧರ್ಮಶಾಸ್ತ್ರ,  ಜ್ಯೋತಿಷ್ಯ ಮುಂತಾದ ವಿಚಾರಗಳಲ್ಲಿ ಏನಾದರೂ ಸಂಶಯ ನಿವಾರಣೆಗಾಗಿ ಯಾರಾದರೂ ಪ್ರಶ್ನಿಸಿದರೆ ಅದಕ್ಕೆ ತಕ್ಷಣ ಯಥೋಚಿತವಾದ ವೇದವಾಕ್ಯಗಳನ್ನು ಉಲ್ಲೇಖಿಸುತ್ತಾ ಸಮರ್ಪಕವಾದ ಉತ್ತರವನ್ನು ನೀಡುತ್ತಿದ್ದರು. ಆಯುರ್ವೇದ ಚಿಕಿತ್ಸಾತಜ್ಞರೂ, ಶ್ರೌತ ಮತ್ತು ಸ್ಮಾರ್ತಪ್ರಯೋಗಾದಿ ಕರ್ಮಕಾಂಡದ ವಿವರಗಳನ್ನು ಚೆನ್ನಾಗಿ ಬಲ್ಲವರು ಆಗಿದ್ದ ಇವರು ಜನರಿಗೆ ಧರ್ಮಾರ್ಥವಾಗಿ ಔಷಧವನ್ನು ನೀಡುತ್ತಿದ್ದರಂತೆ.  ಅದೆಷ್ಟೋ ಸಲ ಇವರಿಗೆ ಸರ್ಪ ಕಡಿದಾಗ ಸ್ವತಃ ತಾವೇ ತಮಗೆ ಮಂತ್ರ ಮತ್ತು ಔಷಧ ಪ್ರಯೋಗ ಮಾಡಿಕೊಳ್ಳುವುದರ ಮೂಲಕ ಗುಣ ಹೊಂದಿದವರು. ಇತರರಿಗೂ ಸರ್ಪ ಕಡಿದ ಸಂದರ್ಭದಲ್ಲಿ ಯಥೋಚಿತ ಚಿಕಿತ್ಸೆ ಮಾಡಿ ಆ ಆಪತ್ತಿನಿಂದ ಅವರನ್ನು ದೂರ ಮಾಡುತ್ತಿದ್ದರಂತೆ.

 

ಉನ್ನತ ವ್ಯಾಸಂಗ : ಕೃಷ್ಣಯಜುರ್ವೇದದ ಅಧ್ಯಯನಕ್ಕಾಗಿ  ಕುಂಭಕೋಣದಲ್ಲಿ ವೇದವಿದ್ಯಾಭ್ಯಾಸ ಸಾಗುವುದು ಹಿತಕರವೆಂದು ಭಾವಿಸಿದ ಪೂಜ್ಯರ ತಂದೆಯವರು ಇವರನ್ನು ಅಲ್ಲಿಗೆ ಕರೆದುಕೊಂಡು ಹೋಗಿ ವೇದಾಧ್ಯಯನಕ್ಕೆ ಅನುವು ಮಾಡಿಕೊಡುತ್ತಾರೆ. ಅಲ್ಲಿ ತೈತ್ತಿರೀಯ ಸಂಹಿತೆಯ ಅಭ್ಯಾಸ ಮುಂದುವರಿಸುತ್ತಾ ಕೆಲವು ಕಾಲ ಇರುವಾಗ ಅನಾರೋಗ್ಯವಾದುದರಿಂದ ಅಲ್ಲಿಂದ  ಹಿಂದಕ್ಕೆ ಬರುತ್ತಾರೆ. ಆಮೇಲೆ ಪುನಃ ಅಲ್ಲಿಗೆ ಹೋಗಿ ಅಭ್ಯಾಸವನ್ನು ಮುಂದುವರಿಸುವ ಇಚ್ಛೆ ಇದ್ದಾಗ್ಯೂ ಅಲ್ಲಿಯ ವಾತಾರವಣ ಹಿಡಿಸದೇ ಇರುವುದರಿಂದ ಮೈಸೂರಿನ ಮಹಾರಾಜ ಸಂಸ್ಕೃತ ಪಾಠಶಾಲೆಯಲ್ಲಿ ಅಭ್ಯಾಸವನ್ನು ಮುಂದುವರಿಸುತ್ತಾರೆ. ಆಮೇಲೆ ಮೈಸೂರಿನಿಂದ ಅನತಿ ದೂರದ ನಂಜನಗೂಡು ಎಂಬ ಕಪಿಲಾನದಿಯ ತಟದ ಮೇಲಿನ ಶ್ರೀಕಂಠೇಶ್ವರ ದೇವಸ್ಥಾನದ ಸಮೀಪ ತಮ್ಮ ಅಭ್ಯಾಸವನ್ನು ಮುಂದುವರಿಸುತ್ತಾರೆ. ಅಲ್ಲಿ ತೈತ್ತಿರೀಯ ಸಂಹಿತೆಯ ಅಧ್ಯಯನವನ್ನು  ಮಾಡುತ್ತಾರೆ. ಗುರುಗಳಿಗೆ ತುಂಬ ತೀಕ್ಷ್ಣವಾದಂತಹ ಬುದ್ಧಿಮತ್ತೆ ಇರುವ ಕಾರಣ ಕೃಷ್ಣಯಜುರ್ವೇದದ ತೈತ್ತಿರೀಯ ಶಾಖೆಯ ಅಧ್ಯಯನ ಅತ್ಯಂತ ವೇಗವಾಗಿ ಸಾಂಗವಾಗಿ ನಡೆಯಿತಂತೆ. ಇವರಿಗೆ ಇದಕ್ಕೂ ಮೊದಲೇ ಸಂಸ್ಕೃತ ಭಾಷೆಯ ಧಾತು ಪಾಠದ 300 ಧಾತುಗಳ 10 ಲಕಾರಗಳು ಕಂಠಪಾಠವಾಗಿತ್ತಂತೆ. ಅಲ್ಲದೆ ಸಂಸ್ಕೃತ ಕಾವ್ಯ – ಸುಭಾಷಿತ – ಸಾಹಿತ್ಯಗಳಲ್ಲಿಯೂ ಇವರು ಪ್ರಯತ್ನಪೂರ್ವಕವಾಗಿ ಅಭ್ಯಾಸವನ್ನು ಮಾಡಿದವರು.

 

ಇವರು ವೇದಾಧ್ಯಯನದಲ್ಲಿರುವಾಗಲೇ ಇವರಿಗೆ ಕಾಶಿಕ್ಷೇತ್ರಕ್ಕೆ ಹೋಗಿ ವಿದ್ಯಾಭ್ಯಾಸವನ್ನು ಮಾಡಬೇಕು ಎನ್ನುವ ಉತ್ಕಟವಾದ ಇಚ್ಛೆ ಇತ್ತಂತೆ. ಕಾರಣ ಪಾವನಗಂಗಾ ತೀರದಲ್ಲಿ ಪರಮಾತ್ಮ ವಿಶ್ವೇಶ್ವರನ ಸಾನ್ನಿಧ್ಯದಲ್ಲಿ ವಿದ್ಯಾಭ್ಯಾಸವನ್ನು ಮಾಡಬೇಕು, ಅಲ್ಲಿ ಹಲವರು ಒಳ್ಳೆಯ ವಿದ್ವಾಂಸರು ಪಂಡಿತ ಶ್ರೇಷ್ಠರು ಇದ್ದಾರೆ. ಕಾಶಿ ಎಂದರೆ ಮೋಕ್ಷಪುರಿ, ಅಲ್ಲಿ ಕನಿಷ್ಠ 5 ವರ್ಷವಾದರೂ ಶಾಸ್ತ್ರಾಧ್ಯಯನವನ್ನು ಮಾಡಬೇಕು ಎಂದು ಅವರು ಭಾವಿಸಿದ್ದರು. ಅಭ್ಯಾಸ ನಡೆದ ಮೇಲೆ ಸಂನ್ಯಾಸಾಶ್ರಮವನ್ನು ಸ್ವೀಕರಿಸಬೇಕು ಎಂದು ಕೂಡ ಇವರು ಆಶಿಸುತ್ತಿದ್ದರಂತೆ.

 

ಇದೇ ಸಂದರ್ಭದಲ್ಲಿ ಅವರಿಗೆ ಶ್ರೀಗುರುಪೀಠದ  ಪೀಠಾಧಿಕಾರಿಯಾಗುವ ಆಹ್ವಾನವನ್ನು ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಮಚಂದ್ರಭಾರತೀಮಹಾಸ್ವಾಮಿಗಳವರು ಕಳಿಸುತ್ತಾರೆ. ಅವರ ಆಶಯವನ್ನು, ಆಹ್ವಾನವನ್ನು ಒಪ್ಪಿದ ಶ್ರೀಗಳವರು ಸಂನ್ಯಾಸಾಶ್ರಮಕ್ಕೆ ಬಂದು ಶ್ರೀಗಳವರ ಅನುಗ್ರಹವನ್ನು, ಆಶೀರ್ವಾದವನ್ನು ಪಡೆದು ಅದನ್ನು ಒಪ್ಪಿಕೊಳ್ಳುತ್ತಾರೆ. 1945ರ ಮೇ 18ರಂದು ಸಂನ್ಯಾಸಾಶ್ರಮವನ್ನು ಅವರು ಸ್ವೀಕರಿಸುತ್ತಾರೆ.

 

ಶ್ರೀಗಳೊಂದಿಗೆ ತಾವೂ ಚಾತುರ್ಮಾಸ್ಯ ವ್ರತವನ್ನು ಅಲ್ಲಿಯೇ ಕೈಗೊಳ್ಳುತ್ತಾರೆ. ಆದರೂ ಶಾಸ್ತ್ರಾಧ್ಯಯನವನ್ನು ಕುರಿತು ಚಿಂತಿಸುತ್ತಿದ್ದರು. ಕೆಲವು ಕಾಲ ಕಳೆದ ಮೇಲೆ ಇವರು ಶ್ರೀರಾಮಚಂದ್ರಾಪುರಮಠಕ್ಕೆ ಹತ್ತಿರವಿರುವ ಹೆದಲಿಯ ಪಂಡಿತರಾದ ಶ್ರೀ ವೆಂಕಟರಮಣ ಭಟ್ಟರಲ್ಲಿ ರಘುವಂಶ ಮಹಾಕಾವ್ಯದ ಎರಡನೆಯ ಸರ್ಗದ ಪಾಠವನ್ನು ಅಭ್ಯಾಸ ಮಾಡುತ್ತಾರೆ. ವೆಂಕಟರಮಣ ಭಟ್ಟರು ಸಾತ್ತ್ವಿಕರೂ ಸಜ್ಜನರೂ ಆಗಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ.

 

ಇದೇ ಸಂದರ್ಭ ಹಿರಿಯ ಗುರುಗಳು ಕಾಶಿಯಾತ್ರೆಗೆ ಸಂಕಲ್ಪಿಸಿ ಹೊರಡುತ್ತಾರೆ. ಈ ಸಂದರ್ಭ ಶ್ರೀರಾಮಚಂದ್ರಾಪುರಮಠದಲ್ಲಿದ್ದ ದೊಡ್ಡ ಗುರುಗಳಿಗೆ ತಾವೂ ಅಧ್ಯಯನ, ಸತ್ಸಂಗ ಇತ್ಯಾದಿಗಳಿಂದ ಮುಂದುವರಿಯಬೇಕು ಎಂಬ ಬಲವತ್ತರವಾದ ಆಸೆಯಿಂದ ಕಾಶಿ ಗಮನಕ್ಕೆ ಮನ ಮಾಡುತ್ತಾರೆ. ಹಾಗೆ ದೃಢಸಂಕಲ್ಪ ಮಾಡಿ ಹೊರಟ ಅವರು ಕಾಶಿಕ್ಷೇತ್ರವನ್ನು ಸೇರುತ್ತಾರೆ. ಅಲ್ಲಿ ನಿತ್ಯ ತಮ್ಮ ಪರಮಪೂಜ್ಯ ಗುರುಗಳ ದರ್ಶನವನ್ನು ಮಾಡಿ ಬರುತ್ತಿದ್ದರಂತೆ. ಇದೇ ಸಂದರ್ಭ ಕಾಶಿಯಲ್ಲಿ ಶ್ರೀಶ್ರೀಗಳವರು  ಶ್ರೀರಾಮನವಮಿ ವ್ರತಾಚರಣೆಯನ್ನು ನೆರವೇರಿಸಿದ್ದಲ್ಲಿ ತಾವೂ ಭಾಗಿಗಳಾಗಿ ಅದರ ಸಂಪ್ರದಾಯ ಪದ್ಧತಿಯನ್ನು ಅನುಭವಿಸುತ್ತಾರೆ.

 

ಅನಂತರ ಹಿರಿಯ ಗುರುಗಳು ಕಾಶಿಯಿಂದ ಶ್ರೀರಾಮಚಂದ್ರಾಪುರಮಠಕ್ಕೆ ನಿರ್ಗಮಿಸಿದ ಮೇಲೆ ತಾವು ಅಲ್ಲಿಯೇ ಉಳಿದು ತಮ್ಮ ಅಭ್ಯಾಸವನ್ನು ಮುಂದುವರಿಸುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾರೆ. ಹಾಗೆಯೇ ಪ್ರಧಾನ ಅಧ್ಯಾಪಕರಾದ ಪಂಡಿತ ಶ್ರೀಹೆಬ್ಬಾರ ಗಣಪತಿ ಶಾಸ್ತ್ರಿಗಳವರಲ್ಲಿ  ತಮ್ಮ ಅಭ್ಯಾಸವನ್ನು ಮುಂದುವರಿಸುತ್ತಾರೆ. ಮೂಲತಃ ದಕ್ಷಿಣಕನ್ನಡ ಜಿಲ್ಲೆಯ ಪಣಂಬೂರಿನ ಶ್ರೀ ಗಣಪತಿ ಶಾಸ್ತ್ರಿಗಳವರು ಕಾಶಿಯಲ್ಲಿ ಹೆಬ್ಬಾರ ಶಾಸ್ತ್ರಿಗಳೆಂದೇ ಪ್ರಸಿದ್ಧರಾಗಿದ್ದರು. ಅವರು ಭಾರತೀಯವಾದ ಅನೇಕ ಭಾಷೆಗಳನ್ನು ಬಲ್ಲವರೂ, ಉತ್ತಮ ದೇಶಭಕ್ತರೂ, ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡವರೂ ಆಗಿದ್ದರು. ಅವರು ಇಂಗ್ಲೀಷ್ ಭಾಷೆಯಲ್ಲಿ ಪ್ರವೀಣರಾಗಿದ್ದು, ಆಂಗ್ಲ  ಧೋರಣೆಯನ್ನು ಕೂಡ ಚೆನ್ನಾಗಿ ಅರಿತವರು. ಅವರು ಮೈಸೂರಿನ ಸಂಸ್ಕೃತ ಪಾಠಶಾಲೆಯಲ್ಲಿಯೂ, ಇಂದೂರು ಮೊದಲಾದ ಪ್ರದೇಶಗಳಲ್ಲಿಯೂ ಕೂಡ ಅಭ್ಯಾಸ ಮಾಡಿದವರು. ಕಾವ್ಯ – ನಾಟಕ ಮೊದಲಾಗಿ ಸಾಹಿತ್ಯ – ವ್ಯಾಕರಣ ಶಾಸ್ತ್ರಗಳಲ್ಲಿಯೂ ಕ್ರಮವಾದ ಅಧ್ಯಯನ ನಡೆಸಿದವರು. ಅವರು ಕಾಶಿಕ್ಷೇತ್ರಕ್ಕೆ ಬಂದು ನ್ಯಾಯ – ವೈಶೇಷಿಕ – ದರ್ಶನ – ಶಾಸ್ತ್ರಗಳ ಅಭ್ಯಾಸವನ್ನು ನಡೆಸಿದ ಪಂಡಿತರು. ಅಲ್ಲದೇ ಜೈಮಿನಿ ಮಹರ್ಷಿ ಪ್ರಣೀತವಾದ ಪೂರ್ವಮಿಮಾಂಸಾಶಾಸ್ತ್ರ, ಬಾದರಾಯಣ ಮಹರ್ಷಿ ವಿರಚಿತ ಶಾರೀರಿಕಮೀಮಾಂಸಾಶಾಸ್ತ್ರ, ಕಪಿಲ ಮಹರ್ಷಿ ಸಾರಿದ  ಸಾಂಖ್ಯದರ್ಶನ, ಪತಂಜಲಿ ಮಹರ್ಷಿಗಳ ಯೋಗದರ್ಶನ, ಚಾಣಕ್ಯ ಹಾಗೂ ಕಾಮಂದಕರ ನೀತಿಶಾಸ್ತ್ರಗಳು ಇವುಗಳಲ್ಲೆಲ್ಲ ಒಳ್ಳೆಯ ಪಾಂಡಿತ್ಯಸಂಪನ್ನರು. ಅವರು ಕನ್ನಡ, ಸಂಸ್ಕೃತ, ಹಿಂದಿ, ಇಂಗ್ಲೀಷ್,ತಮಿಳು ಮಲೆಯಾಳಿ, ಮರಾಠಿ, ನೇಪಾಳಿ ಇತ್ಯಾದಿ ಬಹುಭಾಷಾ ವಿಶಾರದರು. ಅನೇಕ ಗ್ರಂಥ ರಚನೆಗಳನ್ನು ಕೂಡ ಮಾಡಿದವರು. ಅಂತಹ ಘನಪಂಡಿತರಾದ ಶ್ರೀ ಹೆಬ್ಬಾರ ಗಣಪತಿ ಶಾಸ್ತ್ರಿಗಳವರಲ್ಲಿ ದೊಡ್ಡ ಗುರುಗಳು ಅಭ್ಯಾಸವನ್ನು ಪ್ರಾರಂಭಿಸುತ್ತಾರೆ. ಅವರಲ್ಲಿ ಕಾಳಿದಾಸ ಮಹಾಕವಿ ವಿರಚಿತ ರಘುವಂಶ ಮಹಾಕಾವ್ಯ ಮೊದಲಾದ ವಿಷಯಗಳನ್ನು ತಿಳಿದುಕೊಳ್ಳುತ್ತಾರೆ.

ಮಡಿಕೇರಿಯ ಪಂಡಿತ ಶ್ರೀ ಕೃಷ್ಣ ಶಾಸ್ತ್ರಿಗಳು ಕಾಶಿಯಲ್ಲಿದ್ದರು. ಅವರು ಘನವಿದ್ವಾಂಸರು. ವ್ಯಾಕರಣಶಾಸ್ತ್ರ ಪಂಡಿತರೆಂದೇ ಅವರು ಪ್ರಸಿದ್ಧರು. ಆಮೇಲೆ ಅವರಲ್ಲಿ ಶಾಸ್ತ್ರಾಧ್ಯಯನವನ್ನು ಮಾಡುತ್ತಾರೆ. ವ್ಯಾಕರಣಶಾಸ್ತ್ರವನ್ನು ತಿಳಿದುಕೊಳ್ಳುತ್ತಾರೆ. ಆರಂಭದಲ್ಲಿ ಭಟ್ಟೋಜಿ ದೀಕ್ಷಿತರು ರಚಿಸಿದ ಪಾಣಿನಿಯ ಸೂತ್ರಕ್ಕೆ ಸಂಬಂಧಿಸಿದ ಸಿದ್ಧಾಂತ ಕೌಮುದಿಯಲ್ಲಿ ಅಭ್ಯಾಸವನ್ನು ಆರಂಭಿಸುತ್ತಾರೆ.  ಸಮಗ್ರ ಗ್ರಂಥವನ್ನು ಕ್ರಮವಾಗಿ ಅಧ್ಯಯನ ಮಾಡಿದರು.

 

ಆಮೇಲೆ ಹೊಸ್ಮನೆ ಪಂಡಿತ ಶ್ರೀ ರಾಮಚಂದ್ರ ಶಾಸ್ತ್ರಿಗಳವರಲ್ಲಿ ತಮ್ಮ ಅಭ್ಯಾಸವನ್ನು ಮುಂದುವರಿಸುತ್ತಾರೆ. ಮೂಲತಃ ಗೋಕರ್ಣದರವರಾದ  ಶ್ರೀರಾಮಚಂದ್ರಶಾಸ್ತ್ರಿಗಳವರು ಕಾಶಿಕ್ಷೇತ್ರಕ್ಕೆ ಬಂದು ನೆಲೆನಿಂತವರು. ಅವರು ತರ್ಕ ವ್ಯಾಕರಣಾದಿ ಶಾಸ್ತ್ರಗಳಲ್ಲಿ ಪಾಂಡಿತ್ಯವನ್ನು ಸಂಪಾದಿಸಿದವರು. ಅವರಲ್ಲಿಯೂ  ಕಾವ್ಯಗಳು, ನಾಟಕಸಾಹಿತ್ಯಗಳು, ನ್ಯಾಯಶಾಸ್ತ್ರಾದಿಗಳ ಅಭ್ಯಾಸವನ್ನು ಮಾಡುತ್ತಾರೆ. ಅತಿ ಗಂಭೀರವಾದ ನ್ಯಾಯಶಾಸ್ತ್ರವನ್ನು ಕೂಲಂಕಷವಾಗಿ ಅಭ್ಯಾಸ ಮಾಡುತ್ತಾರೆ. ತರ್ಕಸಂಗ್ರಹ ಗ್ರಂಥಕ್ಕೆ ಶ್ರೀಗೋವರ್ಧನಾಚಾರ್ಯರು  ಬರೆದ ನ್ಯಾಯಬೋಧಿನೀ ಎಂಬ ವ್ಯಾಖ್ಯಾನವನ್ನು ಅಭ್ಯಾಸ ಮಾಡುತ್ತಾರೆ. ಆಮೇಲೆ ಜಗದೀಶ ಭಟ್ಟಾಚಾರ್ಯರು ರಚಿಸಿದ ತರ್ಕಾಮೃತ ಎಂಬ ಕಠಿಣ ಮತ್ತು ಸಂಕ್ಷಿಪ್ತವಾದ ಕೃತಿಯ ಅಧ್ಯಯನವನ್ನು ಕೂಡ ಮಾಡುತ್ತಾರೆ. ಆಮೇಲೆ ಶಿಶುಪಾಲವಧೆ ನೈಷಧ ಮೊದಲಾದ ಕಾವ್ಯಗ್ರಂಥಗಳಲ್ಲಿ ಇವರ ವ್ಯಾಸಂಗ ಮುಂದುವರಿಯುತ್ತದೆ. ಹಾಗೆಯೇ ವಿಷ್ಣುಶರ್ಮ ವಿರಚಿತ ಪಂಚತಂತ್ರ ಗ್ರಂಥ, ಭೋಜಪ್ರಬಂಧ ಎಂಬ ಗ್ರಂಥಗಳ ಪಾಠವೂ  ನಡೆಯುತ್ತದೆ. ಚಂಪೂ ಭಾರತದ ಕುರಿತಾದ ಮೂರು ಸ್ತವಕಗಳ ವ್ಯಾಸಂಗವೂ ನಡೆಯುತ್ತದೆ. ಮಹಾಕವಿ ಬಾಣಭಟ್ಟ ವಿರಚಿತ ಶ್ರೀಹರ್ಷಚರಿತೆ ಎಂಬ ಕಠಿಣವಾದ ಗದ್ಯಕಾವ್ಯದ ಉಛ್ವಾಸಗಳ ಅಧ್ಯಯನವನ್ನು ಕೂಡ ಮಾಡುತ್ತಾರೆ. ಜೊತೆಗೆ ಅಲಂಕಾರ ಶಾಸ್ತ್ರದ ಚಂದ್ರಾಲೋಕ ಮತ್ತು ಛಂದಸ್ ಶಾಸ್ತ್ರದ ಶೃತಬೋಧ ಎಂಬ ಗ್ರಂಥಗಳ ವ್ಯಾಸಂಗವನ್ನೂ ನಡೆಸುತ್ತಾರೆ. ಹಾಗೆಯೇ ನಾಗಾನಂದವೆಂಬ ಒಳ್ಳೆಯ ನಾಟಕದ ಪಾಠವನ್ನೂ ಕೂಡ ಅಭ್ಯಸಿಸುತ್ತಾರೆ. ಇದೇ ಸಂದರ್ಭದಲ್ಲಿ ವಿವಿಧ ರೀತಿಯಲ್ಲಿ ರಾಜನೀತಿಗಳನ್ನು ಬೋಧಿಸುವ ಚಾಣಕ್ಯನ ಮುದ್ರಾರಾಕ್ಷಸ ನಾಟಕದ ಪಾಠವನ್ನು ಕೂಡ ಅಭ್ಯಸಿಸುತ್ತಾರೆ. ಹಲವಾರು ಶಾಸ್ತ್ರಗಳಿಗೆ ಸಂಬಂಧಿಸಿದ ಕ್ರೋಢಪತ್ರಾದಿಗಳಿಂದ ಕೂಡಿರುವ ಶಾಸ್ತ್ರಗ್ರಂಥಗಳನ್ನು ಕೂಡ ಇವರು ಅಭ್ಯಸಿಸುತ್ತಾರೆ. ಅದರಲ್ಲಿ ಮೊದಲಿಗೆ ವಿಶ್ವನಾಥ ಪಂಚಾನನ ಭಾಷಾಪರಿಚ್ಛೇದ ಎಂದು ಹೇಳಲಾದ ಕಾರಿಕಾವಲಿಯನ್ನು ಪೂರ್ಣವಾಗಿ ಓದುತ್ತಾರೆ. ಕಾರಿಕಾವಲಿಯ ವ್ಯಾಖ್ಯಾನವಾದ ಸಿದ್ಧಾಂತಮುಕ್ತಾವಲಿ ಕೃತಿಯ ಕುರಿತಾಗಿ ಕೂಡ ಇವರು ಅಭ್ಯಸಿಸುತ್ತಾರೆ. ಈ ರೀತಿ ವ್ಯಾಸಂಗ ನಿರತರಾದಂತೆ ಮುಕ್ತಾವಲಿವ್ಯಾಖ್ಯಾನವೆಂದು ಪ್ರಖ್ಯಾತವಾದ ಅತಿ ಗಂಭೀರವೂ ಪ್ರೌಢವೂ ಆದ ಶ್ರೀಮಹಾದೇವ ಭಟ್ಟ ವಿರಚಿತ ದಿನಕರಿ ಗ್ರಂಥದ ಅಧ್ಯಯನವನ್ನು ಮಾಡುತ್ತಾರೆ.

 

ಗಂಗೇಶ ಉಪಾಧ್ಯಾಯರು ರಚಿಸಿದ ಪೂರ್ವಪಕ್ಷವ್ಯಾಪ್ತಿ ಎಂಬುದು 5 ವಿಧವಾಗಿ ವಿವರಿಸಲ್ಪಟ್ಟಿದೆ. ಅದನ್ನು ವಿವರವಾಗಿ ತಿಳಿಸುವ ಅನೇಕ ಪ್ರಬಂಧಗಳನ್ನು ಇವರು ಅಭ್ಯಸಿಸುತ್ತಾರೆ. ಮಾಥುರೀಪಂಚಲಕ್ಷಿಣೀ ಎಂಬ ಬಹು ಕ್ಲಿಷ್ಟವಾದ ಮಧುರಾನಾಥರು ರಚಿಸಿದ  ಗ್ರಂಥದ ಅಧ್ಯಯನವನ್ನು ಕೂಡ ಇವರು ನಡೆಸುತ್ತಾರೆ. ಜೊತೆಗೆ ಪಂಡಿತ ಪ್ರವರ ಶಿವದತ್ತಮಿಶ್ರರೆಂಬುವರು ಮಾಥುರೀ ಪಂಚಲಕ್ಷಣಿಗೆ ಬರೆದ ವಿಸ್ತೃತವಾದ ಗಂಗಾನಿರ್ಝರಣಿ ಎಂಬ ಟೀಕಾ ಹಾಗೂ ಕ್ರೋಢಪತ್ರರೂಪವಾದ ಗ್ರಂಥದ ಅಧ್ಯಯನವನ್ನು ಮಾಡುತ್ತಾರೆ. ಇದು ಅತ್ಯಂತ ಗಂಭೀರವಾದ ಅಧ್ಯಯನ. ಹೀಗೆ ಅಧ್ಯಯನ ದಾರಿಯಲ್ಲಿ ಮುಂದುವರಿಯುತ್ತಾ ನ್ಯಾಯ ಪಂಚಾನನ ಶ್ರೀಜಗದೀಶಭಟ್ಟಾಚಾರ್ಯ ರಚಿಸಿದ ಜಾಗದೀಶೀಪಂಚಲಕ್ಷಿಣೀ ಎಂಬ ಗ್ರಂಥದ ಪಾಠವನ್ನು ಪೂರೈಸುತ್ತಾರೆ. ಹಾಗೆಯೇ ಅದಕ್ಕೆ ಸಂಬಂಧಿಸಿದ ಕ್ರೋಢಪತ್ರಾತ್ಮಕವಾದ ತತ್ತ್ವಾಲೋಕ ಎಂಬ ಅರ್ಥಗಾಂಭೀರ್ಯದಿಂದ ಕೂಡಿದ ಗ್ರಂಥದ ಪಾಠವನ್ನು ನಡೆಸುತ್ತಾರೆ. ಬುದ್ಧಿಗೆ ಒಳ್ಳೆಯ ಪರಿಶ್ರಮದಾಯಕವಾದ ಗದಾಧರ ಭಟ್ಟಾಚಾರ್ಯರು ಬರೆದ ಪಂಚಲಕ್ಷಿಣೀ ಎಂಬ ಗ್ರಂಥವನ್ನು ಕೃಷ್ಣಂಭಟ್ಟೀಯ ವ್ಯಾಖ್ಯಾನ ಸಹಿತವಾಗಿ ಅಭ್ಯಾಸ ಮಾಡುತ್ತಾರೆ. ಜಗದೀಶಭಟ್ಟಾಚಾರ್ಯರು ನ್ಯಾಯಶಾಸ್ತ್ರವನ್ನು ತಿಳಿದ ಪಂಡಿತರಲ್ಲಿ ಪ್ರಮುಖರು ಆಚಾರ್ಯರೂ ಮಹಾಮೇಧಾವಿಗಳೂ ಮಹಾಪಂಡಿತರೂ ಮತ್ತು ಶ್ರೇಷ್ಠರಾಗಿದ್ದರು. ಇವರು ಕೂಡ ಆ ಮಣಿದೀಪ್ತಿಗೆ ವ್ಯಾಖ್ಯಾನವನ್ನು  ಮಾಡಿರುತ್ತಾರೆ. ಅವರು ರಚಿಸಿದ ಸಿದ್ಧಾಂತವ್ಯಾಪ್ತಿ ಲಕ್ಷಣಗ್ರಂಥದ ಅಧ್ಯಯನವನ್ನು ನಡೆಸುತ್ತಾರೆ.

 

ಹೀಗೆ ವಿದ್ಯಾಭ್ಯಾಸವನ್ನು ಕಾಶಿಯಲ್ಲಿ ನಡೆಸುತ್ತಿರುವ ಕಾಲಕ್ಕೆ ಕೆಕ್ಕಾರು ಮಠದಲ್ಲಿದ್ದ ಶ್ರೀರಾಮಚಂದ್ರಭಾರತೀ ಮಹಾಸ್ವಾಮಿಗಳವರು ಮಹಾಸಮಾಧಿಸ್ಥರಾದರು ಎಂಬ ಸುದ್ದಿ ಕೇಳಿ ಕೆಕ್ಕಾರು ಮಠಕ್ಕೆ ಧಾವಿಸುತ್ತಾರೆ. ಅಲ್ಲಿ ಆರಾಧನೆಯೇ ಮೊದಲಾದ ಎಲ್ಲ  ಕಾರ್ಯಗಳಲ್ಲಿ ಭಾಗಿಗಳಾಗಿ ಮಠದ ಹೊಣೆಗಾರಿಕೆಯನ್ನು ಹೊತ್ತುಕೊಳ್ಳುತ್ತಾರೆ.
ಹಾಗೇ ವಿದ್ಯಾಭ್ಯಾಸಕ್ಕಾಗಿ ಪುನಃ ಅವರು ಕಾಶಿಕ್ಷೇತ್ರಕ್ಕೆ  ಪ್ರಯಾಣಿಸುತ್ತಾರೆ. ಕಾಶಿಯಲ್ಲಿದ್ದುಕೊಂಡು ಮೊದಲಿನಂತೆ ತರ್ಕ, ವೇದಾಂತ ಮುಂತಾದ ಶಾಸ್ತ್ರಾಧ್ಯಯನವನ್ನು ಮುಂದುವರಿಸುತ್ತಾರೆ. ಶ್ರೀಗಧಾಧರ ಭಟ್ಟಾಚಾರ್ಯರು ಬರೆದ ಅತಿಕ್ಲಿಷ್ಟವಾದ ಶಕ್ತಿವಾದದ ಕುರಿತು ವ್ಯಾಖ್ಯಾನ ಸಹಿತವಾಗಿ ಕ್ರಮವಾದ ವ್ಯಾಸಂಗವನ್ನು ನಡೆಸುತ್ತಾರೆ. ಅಲ್ಲದೆ ಅತಿ ಕಠಿಣವಾದ ಹೇತ್ವಾಭಾಸಗಳ ಸಾಮಾನ್ಯನಿರುಕ್ತಿ ಎಂಬ ಪ್ರೌಢ ಗ್ರಂಥದ ಪಾಠವನ್ನು ಕೂಡ ಅಭ್ಯಸಿಸುತ್ತಾರೆ.  ಇದೆಲ್ಲವನ್ನು ಇವರಿಗೆ ಹೆಬ್ಬಾರ ಶಾಸ್ತ್ರಿಗಳು ಬೋಧಿಸುತ್ತಾರೆ. ಆಮೇಲೆ ಸಾಮಾನ್ಯ ನಿರುಕ್ತಿಗ್ರಂಥದ ವ್ಯಾಖ್ಯೆಯಾದ ಗಂಗಾನಿರ್ಝರಣಿ ಎಂಬ ತುಂಬ ಕಷ್ಟವಾದ ಅಭ್ಯಾಸವನ್ನೂ ಮಾಡುತ್ತಾರೆ. ಅಂತೆಯೇ ಅಕ್ಷತಾ ಎಂಬ ಕಠಿಣವಾದ, ಗದಾಧರಭಟ್ಟಾಚಾರ್ಯ ವಿರಚಿತ ಗ್ರಂಥದ ಅಭ್ಯಾಸವನ್ನೂ ನಡೆಸುತ್ತಾರೆ. ಹಾಗೂ ತರ್ಕಪ್ರಕರಣ ಎಂಬ ಕ್ಲಿಷ್ಟಗ್ರಂಥವನ್ನೂ ಅಭ್ಯಾಸ ಮಾಡುತ್ತಾರೆ. ಕಾಶಿಯಲ್ಲಿರುವ ಇನ್ನೋರ್ವ ಮಹಾಮೇಧಾವಿ ಪಂಡಿತ ಶ್ರೀಹರಿರಾಮಶಾಸ್ತ್ರಿ ಶುಕ್ಲರಲ್ಲಿ ಅಭ್ಯಾಸವನ್ನು ನಡೆಸುತ್ತಾರೆ. ಅವರಲ್ಲಿ ನ್ಯಾಯಶಾಸ್ತ್ರದ ಅಭ್ಯಾಸವನ್ನು ಮಾಡುತ್ತಾರೆ. ಇನ್ನೋರ್ವ ಪಂಡಿತ ಶ್ರೀಜಯರಾಮಶಾಸ್ತ್ರಿ ಶುಕ್ಲರಲ್ಲಿ ಕೂಡ ನ್ಯಾಯಶಾಸ್ತ್ರದ ತತ್ತ್ವಾರ್ಥಗಳನ್ನು ಅಭ್ಯಾಸ ಮಾಡುತ್ತಾರೆ. ಇವರಿಬ್ಬರೂ ಗುರುಗಳಿಗೆ ಕಲಿಸುವುದಕ್ಕಾಗಿಯೇ ತುಂಬ ಆಸಕ್ತಿಯಿಂದ ಬಹುದೂರದಿಂದ ದಿನವೂ ಬಂದು ಅಭ್ಯಾಸವನ್ನು ಹೇಳುತ್ತಿದ್ದರು  ಎನ್ನುವುದನ್ನು ನೆನಪಿಸಿಕೊಳ್ಳುತ್ತಾರೆ. ಅವರ ಸಮ್ಮುಖದಲ್ಲಿ ನ್ಯಾಯಶಾಸ್ತ್ರಗಳ ಗಹನವಾದ ಹಲವಾರು ಗ್ರಂಥಗಳ ಅಧ್ಯಯನವನ್ನು ನಡೆಸುತ್ತಾರೆ. ಇದಕ್ಕಾಗಿ ತುಂಬು ಹೆಚ್ಚಿನ ಪರಿಶ್ರಮವನ್ನು ಶ್ರೀಗಳವರು ವಹಿಸುತ್ತಾರೆ. ಜೈಮಿನಿ ಮಹರ್ಷಿಗಳಿಗೆ ಸಂಬಂಧಪಟ್ಟ ವಿಧಿ, ನಿಷೇಧ ಮೊದಲಾದ ವಿಷಯಗಳ ಪೂರ್ವಮೀಮಾಂಸೆಯ ಪರಿಭಾಷೆ ಎಂಬ ಗ್ರಂಥದ ಅಭ್ಯಾಸವನ್ನು ಮಾಡುತ್ತಾರೆ. ಆ ಪೂರ್ವಮೀಮಾಂಸಾ ಶಾಸ್ತ್ರದ ಅರ್ಥ ಸಂಗ್ರಹ ಮತ್ತು ಜೈಮಿನಿಯ ಸೂತ್ರಗಳ ವಿವರಗಳನ್ನು ತಿಳಿಸುವ ಶಾಸ್ತ್ರದೀಪಿಕೆ ಎಂಬ ದಿವ್ಯಗ್ರಂಥದ ಅಭ್ಯಾಸವನ್ನು ಮುಂದುವರಿಸುತ್ತಾರೆ. ವೇದಾಂತಸಾರ ಎಂಬ ಗ್ರಂಥದ ಅಭ್ಯಾಸವನ್ನು ಹಾಗೂ ವೇದಾಂತ ಪರಿಭಾಷಾ ಎಂಬ ವೇದಾಂತಶಾಸ್ತ್ರಗ್ರಂಥದ ಮತ್ತು ಅದರ ವ್ಯಾಖ್ಯಾನರೂಪದ ಶಿಖಾಮಣಿ ಎಂಬ ಕಠಿಣವೂ ತರ್ಕವಿಚಾರ ಸಂಪನ್ನವೂ ಆದ ವಿಸ್ತೃತ ವ್ಯಾಖ್ಯಾನದಲ್ಲಿ ಕೂಡ ಇವರು ಅಧ್ಯಯನವನ್ನು ಮಾಡುತ್ತಾರೆ.

 

ಪರಮಪೂಜ್ಯ ಶ್ರೀಮಧುಸೂದನ ಸರಸ್ವತಿ ಸ್ವಾಮಿಗಳು ರಚಿಸಿರುವ ಅದ್ವಿತೀಯ ವಸ್ತು ಬೋಧಕವಾದ ಅದ್ವೈತಸಿದ್ಧಿ ಎಂಬ ಉದ್ಗ್ರಂಥವನ್ನೂ ಅದಕ್ಕೆ ಬ್ರಹ್ಮಾನಂದ ಸರಸ್ವತಿಗಳು ವಿರಚಿಸಿದ ಲಘುಚಂದ್ರಿಕಾ ವ್ಯಾಖ್ಯಾನದೊಂದಿಗೆ ಕ್ರಮವಾಗಿ ಅಭ್ಯಾಸ ಮಾಡಿದರು. ಜೊತೆಯಲ್ಲಿ ಮಧುಸೂದನ ಸರಸ್ವತಿಸ್ವಾಮಿಗಳು ವೇದಾಂತಶಾಸ್ತ್ರಕ್ಕೆ ಸಂಬಂಧಿಸಿದಂತೆ ರಚಿಸಿದ ಅತ್ಯಂತ ಗಹನವಾದ ಸಿದ್ಧಾಂತಬಿಂದು ಎಂಬ ಪ್ರಸಿದ್ಧ ಗ್ರಂಥದ ಅಧ್ಯಯನವನ್ನು ಕೂಡ ಮಾಡುತ್ತಾರೆ. ಹಾಗೆಯೇ ಸಿದ್ಧಾಂತಬಿಂದು ಗ್ರಂಥಕ್ಕೆ ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮಿಗಳ ನ್ಯಾಯರತ್ನಾವಲೀ ಎಂಬ ಅರ್ಥಸಂಪನ್ನವಾದ ಟೀಕಾಗ್ರಂಥದ ವ್ಯಾಸಂಗವನ್ನು ಕೂಡ ಮಾಡುತ್ತಾರೆ. ಸಾಂಖ್ಯಶಾಸ್ತ್ರದ ಈಶ್ವರ ಕೃಷ್ಣತೀರ್ಥರ ಕಾರಿಕೆಯಲ್ಲಿ ವಾಚಸ್ಪತಿಮಿಶ್ರ ರಚಿಸಿದ ಸಾಂಖ್ಯತತ್ತ್ವಕೌಮುದಿ ಎಂಬ ಗ್ರಂಥದ ಅಧ್ಯಯನವನ್ನು ಕೂಡ ನೆರವೇರಿಸುತ್ತಾರೆ. ಇದಾದ ಅನಂತರ ನಾರಾಯಣತೀರ್ಥರ ಶ್ರೇಷ್ಠವಾದ ಯೋಗಚಂದ್ರಿಕೆ ಎಂಬ ವ್ಯಾಖ್ಯಾನದಿಂದ ಕೂಡಿದ ಪತಂಜಲಿ ಮಹರ್ಷಿಗಳಿಂದ ಪ್ರಣೀತವಾದ ಯೋಗಶಾಸ್ತ್ರಕ್ಕೆ ಸಂಬಂಧಿಸಿದ ಯೋಗಸೂತ್ರದ ಅಭ್ಯಾಸವನ್ನು ನಡೆಸುತ್ತಾರೆ. ಹೀಗೆ ಕಾಶಿಯಲ್ಲಿ ಆ ಕಾಲದಲ್ಲಿ ಶ್ರೀರಾಜೇಶ ಶಾಸ್ತ್ರಿ ದ್ರವಿಡ ಎಂಬ ಮಹಾಪಂಡಿತರಾಜ ಎಂಬ ಬಿರುದನ್ನು ಹೊಂದಿದ ವಿದ್ವಾಂಸರಲ್ಲಿ ಕೂಡ ಅವರು ಪಾಠ ಪ್ರವಚನವನ್ನು ಹೇಳಿಸಿಕೊಂಡಿದ್ದರು.

 

ಹೀಗೆ ಕಾಶಿಕ್ಷೇತ್ರದಲ್ಲಿ ಅಪಾರವಾದ ಜ್ಞಾನವನ್ನು ಪಡೆದು ಶ್ರೀಗಳವರು ಅಲ್ಲಿಂದ ಮಠದ ಆಡಳಿತವನ್ನು ನಿರ್ವಹಿಸುವುದಕ್ಕೆ  ಶ್ರೀಮಠಕ್ಕೆ ಚಿತ್ತೈಸುತ್ತಾರೆ. ಈ ಸಂದರ್ಭದಲ್ಲಿ ಕಾಶಿಯಿಂದ ಹೊರಡುವಾಗ ಎಲ್ಲ ವಿದ್ವಾಂಸರುಗಳು ಸೇರಿ ಇವರನ್ನು ಸಾರ್ವಜನಿಕವಾಗಿ ಅಲ್ಲಿಯ ಪಂಡಿತ ಸಭೆಯಲ್ಲಿ ಸನ್ಮಾನಿಸಿ ಆದರಪೂರ್ವಕವಾಗಿ ಬೀಳ್ಕೊಡುತ್ತಾರೆ.

ವೇದವಿದ್ಯಾಶಾಲೆಗಳ ಸ್ಥಾಪನೆ ಮತ್ತು ವಿದ್ಯಾಸಂಸ್ಥೆಗಳಿಗೆ ಪ್ರೋತ್ಸಾಹ : ಆದಿಗುರು ಶಂಕರಾಚಾರ್ಯರು ದೇಶದ ಉದ್ದಗಲಕ್ಕೆ ಸಂಚರಿಸಿ ಗ್ಲಾನಿಯ ಪಥದಲ್ಲಿರುವ ಧರ್ಮವನ್ನು ಮೇಲೆತ್ತಿದರು. ಅದನ್ನೇ ಮೂಲಾಧಾರವಾಗಿಸಿಕೊಂಡ ಪೂಜ್ಯ ಶ್ರೀಗಳವರು ಕೂಡ ಗ್ಲಾನಿಯ ಪಥದಲ್ಲಿರುವ ವೇದವಿದ್ಯೆಗಳನ್ನು ಸಂರಕ್ಷಿಸುವುದಕ್ಕಾಗಿ ಮಠದ ಅಧಿಕಾರವನ್ನು ಸ್ವೀಕರಿಸಿದ ತಕ್ಷಣ ಕಾರ್ಯಪ್ರವೃತ್ತರಾದರು. ವೇದದ ದಿವ್ಯ ಮಹತ್ತ್ವವನ್ನು, ವೈದಿಕಧರ್ಮವನ್ನು ಆಚರಿಸಬೇಕಾದ ಅಗತ್ಯವನ್ನು  ಅವರು ತಮ್ಮ ನಿರಂತರ ಸಂಚಾರದಲ್ಲಿ ಮಾಡುತ್ತ ಬಂದ ಹಲವಾರು ಉಪದೇಶಗಳ ಮುಖಾಂತರ, ಪ್ರವಚನಗಳ ಮುಖಾಂತರ ಶಿಷ್ಯ ಸಮುದಾಯಕ್ಕೆ ಮನದಟ್ಟು ಮಾಡಿದರು. ಹಾಗಲ್ಲದೆ ಅದನ್ನು ನಿರಂತರವಾಗಿ ಮುಂದುವರಿಸುವುದಕ್ಕೆ ಬೇಕಾಗಿದ್ದ ವೇದಪಾಠಶಾಲೆಗಳನ್ನು ಸ್ಥಾಪಿಸಿದರು. ಹೊನ್ನಾವರದ ಮುಗ್ವಾದಲ್ಲಿ ಶ್ರೀರಾಘವೇಂದ್ರಭಾರತೀ ಸಾಮವೇದ ಪಾಠಶಾಲೆಯನ್ನು ಸ್ಥಾಪಿಸಿದರು. ಈ ಶಾಲೆಗಳಿಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಹೊಂದಿಸಿಕೊಟ್ಟಿದ್ದಲ್ಲದೆ ಅಲ್ಲಿಗೆ ವಿದ್ಯಾರ್ಜನೆ ಮಾಡುವುದಕ್ಕಾಗಿ ಬರುವ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಪ್ರೋತ್ಸಾಹವನ್ನು ವ್ಯವಸ್ಥೆಗಳನ್ನು ಸ್ವತಃ ಅವರೇ ಮುಂದೆ ನಿಂತು ಕಲ್ಪಿಸಿಕೊಟ್ಟರು. ತಮಗೆ ಬಿಡುವಾದಾಗ ಸ್ವತಃ ತಾವು ಕೂಡ ವಿದ್ಯಾರ್ಥಿಗಳಿಗೆ ಪಾಠವನ್ನು ಮಾಡುವುದರ ಮುಖಾಂತರ ಅವರಲ್ಲಿ ಅಪೂರ್ವವಾದ ಶಕ್ತಿ ಸಂಚಯವನ್ನುಂಟುಮಾಡಿದರು. ಇದಲ್ಲದೆ ಕೆಲವು ವೈದಿಕ ವೇದಪಾಠಶಾಲೆಗಳಿಗೆ ಪ್ರೋತ್ಸಾಹದ ನೆರವು ನೀಡುತ್ತ ಅವು ಯೋಗ್ಯಪಥದಲ್ಲಿ ಸಾಗುವಂತೆ ಮಾಡಿದರು. ಅದರಲ್ಲಿ ಕೇದಿಗೆಸರದ ಸವೇದ ಸಂಸ್ಕೃತ ಪಾಠಶಾಲೆಯಾಗಲೀ, ಸಿದ್ದಾಪುರದ ಹಾಳತಕಟ್ಟೆಯ ಸಂಸ್ಕೃತಪಾಠಶಾಲೆಯಾಗಲೀ, ತಾಳಗುಪ್ಪದ ಹಿರೇಮನೆ ಪಾಠಶಾಲೆಯಾಲೀ ಇಲ್ಲೆಲ್ಲ ಅವರು ಪ್ರೋತ್ಸಾಹವನ್ನು ನೀಡುತ್ತ ಬಂದರು. ಶ್ರೀಮಠದಲ್ಲಿ ತಾವು ಪೂಜೆ ಸಲ್ಲಿಸುವ ಸಂದರ್ಭದಲ್ಲಿ  ವೇದಪಠಣ ಕಾರ್ಯಕ್ರಮವೂ ಕೂಡ ಸಾಂಗವಾಗಿ ನೆರವೇರುವಂತೆ ಅವರು ಹೊಂದಿಸಿದರು. ಈ ಎಲ್ಲ ಕಾರಣಗಳಿಂದಾಗಿ ಇಂದು ನಾವು ಕಾಣುತ್ತಿರುವ ವೇದವಿದ್ಯೆಯ ಮಹತ್ತ್ವ ಮತ್ತು ವೇದವಿದ್ಯೆಯಲ್ಲಿ ಆಸಕ್ತಿಯನ್ನು ಅನುರಕ್ತಿಯನ್ನು ತಳೆದವರ ಒಂದು ವಿಶಾಲವಾದ ಸಮೂಹವನ್ನು ಕಾಣಬಹುದಾಗಿದೆ.

 

ದೇವಾಲಯಗಳ ಜೀರ್ಣೋದ್ಧಾರವನ್ನು ಕೂಡ ಅತ್ಯಂತ ಜತನದಿಂದ ಶ್ರೀಗಳವರು ನೆರವೇರಿಸುತ್ತ ಬಂದರು. ದೇವಾಲಯಗಳಿಗೆ ಎಂತಹ ಮಹತ್ತ್ವದ ಸ್ಥಾನವಿದೆ, ಅದು  ಎಂತಹ ಧಾರ್ಮಿಕ ಶಿಸ್ತನ್ನು, ಶ್ರದ್ಧಾ ಭಕ್ತಿಯನ್ನು ಶಿಷ್ಯ ಸಮುದಾಯದಲ್ಲಿ ಉಂಟು ಮಾಡಬಲ್ಲದು, ಆರ್ತರಿಗೆ ಅದು ಯಾವ ರೀತಿಯಲ್ಲಿ ಭರವಸೆಯನ್ನು, ಆಶ್ರಯವನ್ನು  ನೀಡಬಲ್ಲದು ಎನ್ನುವುದನ್ನೆಲ್ಲ ನಾವು ಕಾಣುತ್ತಿದ್ದೇವೆ. ಅದನ್ನೇ ಗಮನಸಿದಂತಹ ಪೂಜ್ಯರು ಜೀರ್ಣಾವಸ್ಥೆಯಲ್ಲಿರುವಂಥ ದೇವಸ್ಥಾನಗಳನ್ನ ಪುನರುಜ್ಜೀವನಗೊಳ್ಳುವಂತೆ ಮಾಡಿದರು. ಹಲವಾರು  ಶಿಷ್ಯಸಮುದಾಯಗಳ ನಡುವೆ ಇರುವ ದೇವಾಲಯಗಳಿಗೆ ಪುನರಪಿ ಶಕ್ತಿವರ್ಧನೆಗೆ ಬೇಕಾದ ಕಾರ್ಯಗಳನ್ನು ನಿರ್ವಹಿಸಿದರು. ಅದಕ್ಕೆ ಬೇಕಾದ ಧಾರ್ಮಿಕ ಕಾರ್ಯಕ್ರಮಗಳನ್ನು ನಿರ್ವಹಿಸುವುದಕ್ಕೆ ಅಗತ್ಯ ಪ್ರೋತ್ಸಾಹವನ್ನು ನೀಡಿದರು. ಕೆಕ್ಕಾರಿನ ಬಟ್ಟೆವಿನಾಯಕ ದೇವಾಲಯದ ಜೀರ್ಣೋದ್ಧಾರ, ಇಟಗಿಯ ರಾಮೇಶ್ವರ ದೇವಾಲಯದ ಜೀರ್ಣೋದ್ಧಾರ, ಸಾಗರದ ಬೇಳೂರಿನ ಈಶ್ವರ ದೇವಾಲಯದ ಜೀರ್ಣೋದ್ಧಾರ, ಇಡಗುಂಜಿಯ ಮಹಾಗಣಪತಿ ದೇವಾಲಯಕ್ಕೆ ಅಗತ್ಯವಾದಂತಹ  ಪ್ರೋತ್ಸಾಹ, ಕಾನಮಠ ಕೊಯಿಪಾಡಿಯ ಶಂಕರನಾರಾಯಣ ದೇವಾಲಯದ ಜೀರ್ಣೋದ್ಧಾರ, ಹೊನ್ನಾವರದ ರಾಮತೀರ್ಥದ ರಾಮೇಶ್ವರ ದೇವಾಲಯಕ್ಕೆ ಬೇಕಾದ ಪ್ರೋತ್ಸಾಹ ಇದಲ್ಲದೆ ಕುಂಬಳೆ ಸೀಮೆಯ ಪೆರಡಾಲದ ಕುಂಟಿಕಾನ ಶಂಕರನಾರಾಯಣ ದೇವಾಲಯದ ಚಂದ್ರಶಾಲೆಗೆ, ಹೊನ್ನಾವರದ ಹೊಸಾಕುಳಿಯ ಮಕ್ಕಿ ಉಮಾಮಹೇಶ್ವರ ದೇವಾಲಯಕ್ಕೆ ಪ್ರೋತ್ಸಾಹ, ಮುಗ್ವೆಯ ಸುಬ್ರಹ್ಮಣ್ಯ ದೇವಾಲಯ, ಕಡ್ಲೆ ಉಪ್ಲೆ ಮಹಾಲಿಂಗೇಶ್ವರ ದೇವಾಲಯ, ವಂದೂರಿನ ಶಂಭುಲಿಂಗೇಶ್ವರ ದೇವಾಲಯ, ಅನಂತಪುರ ಕುಂಬಳೆ ಸೀಮೆಯ ಅನಂತಪದ್ಮನಾಭ ದೇವಾಲಯ ಈ ಎಲ್ಲ ದೇವಾಲಯಗಳಲ್ಲಿ ಬೇಕಾದ ಚಂದ್ರಶಾಲೆಗಳ ನಿರ್ಮಾಣವಾಗಿರಬಹುದು, ಗರ್ಭಾಗೃಹ, ಮುಖಮಂಟಪ ಇವುಗಳಿಗೆ ಎಲ್ಲ ಶ್ರೀಗಳವರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಾಯ ಸಲಹೆಗಳನ್ನು ನೀಡುತ್ತ ಬಂದು ಅವುಗಳೆಲ್ಲ ಊರ್ಜಿತಾವಸ್ಥೆಯಲ್ಲಿದ್ದು  ತಮ್ಮ ಗತವೈಭವವನ್ನು ಪುನಃ ಪಡೆಯುವಂತಹ ವ್ಯವಸ್ಥೆಗೆ ಇಂಬು ನೀಡಿದರು.
ಇವಿಷ್ಟಲ್ಲದೆ ಮಠಗಳ ನಿರ್ಮಾಣದಲ್ಲಿ, ಮಠಗಳ ಪುನರುಜ್ಜೀವನದಲ್ಲಿ ಕೂಡ ತುಂಬ ಆಸಕ್ತಿಯನ್ನು ವಹಿಸಿ ಕಾರ್ಯವನ್ನು ನಿರ್ವಹಿಸಿದರು. ಮಠಗಳು ಸಮಾಜದ ಕೇಂದ್ರಬಿಂದು. ಅದು ಆ ಪ್ರದೇಶದ ಅಭಿವೃದ್ಧಿಗೆ ಮುಖ್ಯವಾದ ಕಾರಣವನ್ನು ನೀಡುತ್ತದೆ ಮತ್ತು ಎಲ್ಲರಿಗೂ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂಬಂತಹ ವಿಚಾರಗಳನ್ನು ಗಮನಿಸಿ ಅಲ್ಲೆಲ್ಲ ನಿತ್ಯ ನೈಮಿತ್ತಿಕ ವ್ಯವಹಾರಗಳು, ಪೂಜೆಪುನಸ್ಕಾರಗಳು ಸಹಜವಾಗಿ ಸಾಗುವ ಕಾರ್ಯವನ್ನು ಕೂಡ ಅವರು ನಿರ್ವಹಿಸಿದರು. ಗೋಕರ್ಣ ಕ್ಷೇತ್ರದಲ್ಲಿರುವ ರಘೂತ್ತಮ ಮಠವನ್ನು ಪುನರ್ನೂತನವಾಗಿ ಕಾಣುವಂತೆ ವ್ಯವಸ್ಥೆಯನ್ನು ಮಾಡಿದರು. ಕೆಕ್ಕಾರು ಮಠದಲ್ಲಿ ಕೂಡ ಅದು ಉತ್ತಮ ರೀತಿಯಿಂದ ಹೊಸತಾಗಿ ನಿರ್ಮಾಣವಾಗುವ ಹಾಗೆ ಅವರು ವ್ಯವಸ್ಥೆಯನ್ನು ಕಲ್ಪಿಸಿದರು. ಹೊಸನಗರದ ಸಂಪೆಕಟ್ಟೆಯ ಶ್ರೀಕೃಷ್ಣಾನಂದ ಮಠ ಒಂದು ಕಾಲದಲ್ಲಿ ಸರಿಯಾದ ಉತ್ತರಾಧಿಕಾರಿಗಳು ಇಲ್ಲದಿರುವಾಗ ಮೈಸೂರು ಸರ್ಕಾರದ ಆಡಳಿತಕ್ಕೆ ಒಳಪಟ್ಟಿತ್ತು. ಅದನ್ನು  ಪುನಃ ಶ್ರೀಮಠದ ವ್ಯಾಪ್ತಿಗೆ ಬರುವಂತೆ ಆಡಳಿತವನ್ನು ನಿರ್ವಹಿಸಿ ಅಲ್ಲಿ ನಿತ್ಯಪೂಜಾ ವಿನಿಯೋಗಗಳು ಸುಸಂಬದ್ಧವಾಗಿ ನೆರವೇರುವ ಏರ್ಪಾಡನ್ನು ಮಾಡಿದರು. ಭಾನ್ಕುಳಿ ಸಂಯುಕ್ತ ಮಠದಲ್ಲಿ ಅದರ ಪುನರುಜ್ಜೀವನವನ್ನು ಮಾಡಿದರು. ಈ ಮಠವನ್ನು ಕಟ್ಟುವುದಕ್ಕೆ ಸರ್ವರೂ ತಮ್ಮ ತಮ್ಮ ಕೊಡುಗೆಯನ್ನು ಕೊಡಬೇಕು ಎಂಬುದಕ್ಕಾಗಿ ಒಂದು ಅಪರೂಪವಾದಂತಹ ವ್ಯವಸ್ಥೆಯನ್ನು ಕಲ್ಪಿಸಿದರು. ಆ ಮಠಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯಿಂದ ಮುಷ್ಟಿ ಮಣ್ಣನ್ನು ತಂದು ಈ ಮಠವನ್ನು ಕಟ್ಟಬೇಕು. ಪ್ರತಿಯೊಬ್ಬರಲ್ಲಿಯೂ ತಮ್ಮದು ಎನ್ನುವ ಭಾವ ಬರುವಂತೆ ಮಾಡಬೇಕು ಎಂದು ಯೋಚಿಸಿದರು. ಪ್ರಧಾನಮಠವನ್ನು ಹೊಸದಾದ ಕಟ್ಟಡದಲ್ಲಿ ಅದ್ಭುತವಾಗಿ ಅದು ಬೆಳಗುವಂತೆ ಮಾಡಿದರು. ಅದರ ವೈಭವ ವೃದ್ಧಿಯಾಗುವಂತೆ ಅದನ್ನು ನಿರ್ವಹಿಸಿದರು. ಹಲವಾರು ದೇವತಾಮೂರ್ತಿಗಳನ್ನು ಅಲ್ಲಿ ಪುನಃಪ್ರತಿಷ್ಠೆ ಮಾಡಿ, ನಿತ್ಯ ನೈಮಿತ್ತಿಕ ವ್ಯವಹಾರಗಳು ಸಾಂಗವಾಗಿ ವಿಜೃಂಭಣೆಯಿಂದ ನೆರವೇರುತ್ತಿರುವಂತೆ ಅದನ್ನು ಹೊಂದಿಸಿದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಶ್ರೀರಾಮಚಂದ್ರಾಪುರಮಠವನ್ನು ತಾವು ಹೆಚ್ಚು ವಾಸವಾಗಿದ್ದಂತಹ ಆ ಮಠವನ್ನು ಅದರ ವೈಭವ ಪುನಃ ಕಾಣುವಂತೆ ಮಾಡಿದರು. ಶಿಥಿಲಗೊಂಡ ಕೆಲವು ಕಟ್ಟಡಗಳನ್ನು ನೂತನವಾಗಿ ಕಟ್ಟಿಸಿ, ಅದು ತುಂಬು ಕಳೆಯಿಂದ ಕಾಣುವಂತೆ ಮಾಡಿದರು. ಅಪ್ಸರಕೊಂಡ ಮಠ ಹೊನ್ನಾವರ ತಾಲ್ಲೂಕಿನಲ್ಲಿದೆ. ಇದನ್ನು ಕೂಡ  ಇದರ ಕೆಲವು ಕಟ್ಟಡಗಳನ್ನು ಪುನರ್ನವೀಕರಿಸಿ ಅದರ ಶೋಭೆಗೆ ಕಾರಣರಾದರು. ಈ ಎಲ್ಲ ಮಠಗಳಲ್ಲಿ ಅಲ್ಲಿಯ ನಿತ್ಯ ನೈಮಿತ್ತಿಕ ವ್ಯವರಹಾರಗಳು ನಡೆಯುವುದಕ್ಕೆ ಬೇಕಾದ ಆರ್ಥಿಕ ಭದ್ರತೆಯನ್ನು ಅಲ್ಲಲ್ಲಿಯೇ ಆಗುವಂತೆ ಮಾಡಿದರು. ದಕ್ಷಿಣಕನ್ನಡದ ಜನತೆಗೆ ಹತ್ತಿರದ ಮಠ ಎಂದರೆ ತೀರ್ಥಹಳ್ಳಿಯಾಗಿತ್ತು. ಅಲ್ಲಿಗೆ ಹೋಗಿ ಬರುವುದು ಎಲ್ಲ ಶಿಷ್ಯರಿಗೂ ಕಷ್ಟವಾಗುತ್ತಿತ್ತು. ಇದನ್ನು ಮನಗಂಡ ಗುರುಗಳಲ್ಲಿ ಅಲ್ಲಿಯ ಶಿಷ್ಯಸ್ತೋಮ ಬಂದು ದಕ್ಷಿಣಕನ್ನಡದಲ್ಲಿ ಒಂದು ಮಠಾಯತನ ಬೇಕು ಎಂಬ ವಿನಮ್ರ ಬೇಡಿಕೆಯನ್ನು ಮುಂದಿಟ್ಟರು. ಅದರ ಅಂತರಾರ್ಥವನ್ನು ಗ್ರಹಿಸಿ ಪೆರಾಜೆಯಲ್ಲಿ ಶ್ರೀರಾಮಚಂದ್ರಾಪುರ ಮಠವನ್ನು ಸ್ಥಾಪಿಸಿದರು. ಮತ್ತು ಶ್ರೀಪೆರಾಜೆಯ ಮಠವು ಶ್ರೀರಾಮಚಂದ್ರಾಪುರಮಠ ಎಂದೇ ಶುಭನಾಮದಿಂದ ಪ್ರಸಿದ್ಧವಾಗಲಿ ಎಂದು ಹರಸಿದರು. ಅಲ್ಲಿ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿದ್ದಲ್ಲದೆ, ಆಂಜನೇಯನ ನಡೆ ಇರುವ ಸ್ಥಳ ಇದು ಎಂದು ಆ ಸ್ಥಳದ ಮಹಿಮೆಯನ್ನು ಜನಮಾನಸದಲ್ಲಿ ಬಿತ್ತಿದರು. ಅಲ್ಲಿಯ ಶಿಷ್ಯಸ್ತೋಮವನ್ನು ಸಂಘಟಿಸಿ ಸಮಿತಿಯನ್ನು ರಚಿಸಿ ಸಮಗ್ರವಾಗಿ ಆ ಮಠ ವೈಭವದಿಂದ ಮೆರೆಯುವಂತೆ ಎಲ್ಲ ವ್ಯವಸ್ಥೆಯನ್ನು ಅದಕ್ಕೆ ಹೊಂದಿಸಿಕೊಟ್ಟರು.

 

ಕೃಷಿ ಪೂಜ್ಯ ಶ್ರೀಗಳವರಿಗೆ ಒಂದು ವಿಶೇಷವಾದಂತಹ ಆಸಕ್ತಿಯ ಕ್ಷೇತ್ರ. ಹಾಗಾಗಿ ಎಲ್ಲೆಲ್ಲಿ ಮಠಗಳಿವೆಯೋ ಅಲ್ಲೆಲ್ಲ ಸುಂದರವಾದ ಅಡಿಕೆ ತೋಟ, ತೆಂಗಿನ ತೋಟ ಭತ್ತದ ಗದ್ದೆಗಳು ಇವುಗಳೆಲ್ಲ ಕಾಲಕಾಲಕ್ಕೆ ಸಮೃದ್ಧವಾದ ಬೆಳೆ ನೀಡುವ ಹಾಗೆ ಹೊಂದಿಸಿದರು. ಇದರ ಜೊತೆಯಲ್ಲಿ ಮಠದ ಆರ್ಥಿಕ ಸ್ಥಿತಿ ಶ್ರೀಗಳವರು ಆಡಳಿತ ವಹಿಸಿಕೊಳ್ಳುವಾಗಲೂ ಕಷ್ಟದಲ್ಲಿತ್ತು. ಅವರ ವಿದ್ಯಾಭ್ಯಾಸದ ಕಾಲದಲ್ಲಿಯೂ ಕಷ್ಟದಲ್ಲಿತ್ತು. ಅದೆಲ್ಲವನ್ನೂ ಅವರು ಮನಗಂಡಿದ್ದರು. ತಾವು ಕಾಶಿಯಲ್ಲಿ ವಿದ್ಯಾಭ್ಯಾಸ ಮಾಡುವಾಗ ಜೊತೆಯಲ್ಲಿರುವ ಈರ್ವರು ಶಿಷ್ಯರನ್ನು  ತಾವು ಹಿಂದೆ ಕಳಿಸಿದ್ದರು. ಸ್ವತಃ ಎಲ್ಲ ಕೆಲಸಗಳನ್ನು ತಾವೇ ನಿರ್ವಹಿಸಿಕೊಂಡು ಅಭ್ಯಾಸಮಾಡುತ್ತಿದ್ದರು. ಆ ಪ್ರಮಾಣದಲ್ಲಿ ಮಠಕ್ಕೆ ಆರ್ಥಿಕ ಸಂಕಷ್ಟವಿತ್ತು. ಅದನ್ನೆಲ್ಲ ಮನಗಂಡ ಗುರುಗಳು ಪ್ರತಿಯೊಂದು ಮಠಕ್ಕೂ ಕಾಲಕಾಲಕ್ಕೆ ನಿರ್ದಿಷ್ಟವಾದ ಆದಾಯ ಬರುವಂತೆ ಕೃಷಿಯ ಮೂಲವನ್ನು ಹೊಂದಿಸಿದ್ದರು. ಮಠ ಸಲ್ಲಿಸಬೇಕಾದ ಯಾವುದೇ ರೀತಿಯ ಕರಗಳನ್ನು ತೆರಿಗೆಗಳನ್ನು ಅವರು ಒಮ್ಮೆಯೂ ತಪ್ಪಿಸದೇ ಅದು ಕಾಲಕಾಲಕ್ಕೆ ಸಂದಾಯವಾಗುವಂತೆ ನೋಡಿಕೊಂಡಿದ್ದರು. ಮಠದ ಅದೆಷ್ಟೋ ಎಕರೆ ಜಮೀನು ಇನಾಮು ದತ್ತಿ, ಭೂ ಹಿಡುವಳಿ ಮಿತಿ, ಒಕ್ಕಲು ಮಸೂದೆ ಎಂಬುದಾಗಿ ಕೈತಪ್ಪಿ ಹೋಗಿತ್ತು. ಮಠದ ಆಸ್ತಿ ಅಂತ ಗೊತ್ತಿದ್ದೂ ಅದನ್ನು ತಮ್ಮ ಆಸ್ತಿಯನ್ನಾಗಿ ಮಾಡಿಕೊಂಡ ಹಲವಾರು ಉದಾಹರಣೆಗಳು ನಮ್ಮ ಮುಂದಿದೆ.  ಈ ಎಲ್ಲ ಕಾರಣಗಳಿಂದಾಗಿ ಮಠದ ಆರ್ಥಿಕ ಸ್ಥಿತಿ ಕಷ್ಟಕರವಾದಾಗ ಅದಕ್ಕೆ ಪರ್ಯಾಯ ಮಾರ್ಗವನ್ನು ಕಂಡುಹಿಡಿದು, ಅವನ್ನು ತಾವು ಸ್ವತಃ ಅವಲೋಕನವನ್ನು ಮಾಡಿ ಅದು ಪುನಃ ತನ್ನ ಸ್ವಾವಲಂಬಿ ಸ್ಥಿತಿಗೆ ಬರುವಂತೆ ಮಾಡಿದರು.

 

ಸಮಾಜ ಸಂಘಟನೆ ಶ್ರೀಗಳವರು ಮಾಡಿದಂತಹ ಮತ್ತೊಂದು ಮಹತ್ತರವಾದ ಕಾರ್ಯ. ಶಿಷ್ಯಸಮಾಜ ಎನ್ನುವುದನ್ನು ತುಂಬು ಪ್ರೀತಿಯಿಂದ ಅವರು ನಿರ್ವಹಿಸಿದರು. ವ್ಯಾಪಕವಾಗಿ ಸಮಾಜದ ಮೂಲೆ ಮೂಲೆಯಲ್ಲಿ ಸಂಚರಿಸಿ ಅಲ್ಲಿಯ ಪ್ರಮುಖರನ್ನು ಶಿಷ್ಯ ಸಮುದಾಯವನ್ನು ಹತ್ತಿರ ಕರೆದು ಯುಕ್ತವಾದ ಮಾರ್ಗದರ್ಶನವನ್ನು ನೀಡಿ ಎಲ್ಲರೂ ಮಠಕ್ಕೆ ನಡೆದುಕೊಳ್ಳುವ ವಿಧಾನವನ್ನು   ಸೂಚಿಸಿದರು. ಮಠದ ಕಾರ್ಯಗಳಲ್ಲಿ ಭಾಗಿಗಳಾಗುವಂತೆ ವ್ಯವಸ್ಥೆಯನ್ನು ಕಲ್ಪಿಸಿದರು. ಹಲವರಿಗೆ ಬೇರೆ ಬೇರೆ ರೀತಿಯ ಹೊಣೆಗಾರಿಕೆಯನ್ನು ನೀಡಿ ಅವರೆಲ್ಲರೂ ಸಂಘಟನೆಯಲ್ಲಿ ಚುರುಕಾಗಿ ಕಾರ್ಯನಿರ್ವಹಿಸುವಂತೆ ಮಾಡಿದರು. ಮಠದ ಹಲವಾರು ಶಿಷ್ಯರು ಉನ್ನತೋನ್ನತ ಹುದ್ದೆಯಲ್ಲಿದ್ದವರನ್ನು ಮಠಕ್ಕೆ ಆಮಂತ್ರಿಸಿ ಅವರೆಲ್ಲರೂ ಈ ಕಾರ್ಯಗಳಲ್ಲಿ ಭಾಗಿಗಳಾಗುವಂತೆ ಮಾಡಿದರು. ಅಖಿಲ ಹವ್ಯಕ ಮಹಾಧಿವೇಶನ ಎನ್ನುವ ಒಂದು ಅಭೂತಪೂರ್ವ ಮಹಾಧಿವೇಶನವನ್ನು  ತೀರ್ಥಹಳ್ಳಿಯಲ್ಲಿ ನವೆಂಬರ್ 1 ಮತ್ತು 3, 1955ನೆಯ ಇಸವಿಯಲ್ಲಿ ಆಯೋಜಿಸಿ ಇಡೀ ಸಮುದಾಯ ನಿಬ್ಬೆರಗಾಗುವಂತೆ ಮಾಡಿದರು. ಬಹುಶಃ ಹವ್ಯಕ ಸಮಾಜದಲ್ಲಿ ಇಂತಹ ಮಹಾಧಿವೇಶನ ನಡೆದದ್ದೇ ಇರಲಿಲ್ಲ. ಇದು ಶ್ರೀಗಳವರು ಮಾಡಿದ ಒಂದು ಮಹೋನ್ನತವಾದ ಕಾರ್ಯಗಳಲ್ಲಿ ಒಂದು. ಅದರ ಯಶಸ್ಸು ಕೂಡ ಅಪೂರ್ವವಾದ ಚೈತನ್ಯವನ್ನು ಆತ್ಮಶಕ್ತಿಯ ವೃದ್ಧಿಯನ್ನು ಮಾಡಿತು. ಅಷ್ಟೆ ಅಲ್ಲದೆ ಅಖಿಲ ಹವ್ಯಕ ಮಹಾಮಂಡಲ ಎಂಬ ಸಂಸ್ಥೆಯನ್ನು ಸ್ಥಾಪಿಸಲು ಶ್ರೀಗಳವರು ಮಾರ್ಗದರ್ಶನವನ್ನು ನೀಡಿ ಎಲ್ಲ ಪ್ರದೇಶಗಳಿಂದ ಬೇರೆ ಬೇರೆ ಪರಿಣಿತ ಹವ್ಯಕ ಬಾಂಧವರನ್ನು ಸೇರಿಸಿ ಒಳಗೊಂಡ ಸಂಸ್ಥೆಯನ್ನು ಸ್ಥಾಪಿಸಲು ಪ್ರೇರಣೆಯನ್ನು ನೀಡಿದರು. ಅದೇ ಇಂದಿಗೂ ಕೂಡ ಅಖಿಲ ಹವ್ಯಕ ಮಹಾಸಭಾ ಎಂಬ ಹೆಸರಿನಲ್ಲಿ ನಡೆದುಕೊಂಡು ಬರುತ್ತಾ ಇದೆ.

ಧಾರ್ಮಿಕ ಪಂಚಾಂಗ : ನಮ್ಮ ಸಮಾಜವು ಬೇರೆ ಬೇರೆ ಕಡೆಗಳಲ್ಲಿ ವಿಸ್ತರಿಸಿಕೊಂಡಿದ್ದರಿಂದ ಎಲ್ಲರೂ ಅಲ್ಲಲ್ಲಿಯ ಪರಿಚಿತ ಪಂಚಾಂಗವನ್ನು ಅನುಸರಿಸಿ ಧಾರ್ಮಿಕಕಾರ್ಯಗಳನ್ನು ನಿರ್ವಹಿಸುತ್ತಿದ್ದರು, ಇದರಲ್ಲಿ ಹಲವಾರು ಗೊಂದಲಗಳು  ಉಂಟಾಗುವುದಿತ್ತು. ಇದರ ಮೂಲವನ್ನು ಮನಗಂಡ ಶ್ರೀಗಳವರು ನಮ್ಮ ಸಮಾಜದ ಎಲ್ಲರಿಗೂ ಒಂದೇ ರೀತಿಯ ಪಂಚಾಂಗ ಇರುವುದು ಅಗತ್ಯ ಎಂಬುದನ್ನು ಮನಗಂಡು ಧಾರ್ಮಿಕ ಪಂಚಾಂಗವನ್ನು ಜನತೆಗೆ ಮಠದ ಅಧಿಕೃತ ಪಂಚಾಂಗವನ್ನಾಗಿ ನೀಡಿದರು. ಅದಕ್ಕೆ ಬೇಕಾಗಿ ಧಾರ್ಮಿಕ ಪಂಚಾಂಗ ಪ್ರಕಟಣಾ ಸಮಿತಿಯನ್ನು ಕೂಡ ಸ್ಥಾಪಿಸಿದರು. ಅದು ಇಂದಿಗೂ ಕೂಡ ಅದೇ ರೀತಿಯಲ್ಲಿ ನಡೆದುಕೊಂಡು ಬರುತ್ತಾ ಇದೆ. ಹಲವಾರು ಬೇರೆ ಬೇರೆ ವಿದ್ಯಾಸಂಸ್ಥೆಗಳಿಗೆ ಭೇಟಿ ನೀಡಿ ಅಲ್ಲೆಲ್ಲ ಅಲ್ಲಿಗೆ ಬೇಕಾದಂತಹ ಆಶೀರ್ವಾದ ಅನುಗ್ರಹವನ್ನು ನೀಡಿ ಅವರನ್ನು ಪ್ರೋತ್ಸಾಹಿಸಿದರು. ಹಲವಾರು ಪುಸ್ತಕ ಪ್ರಕಾಶನಗಳಿಗೆ ಇವರು ನೀಡಿದ ಕೊಡುಗೆ ಅನನ್ಯವಾದದ್ದು.  ಅದರಲ್ಲಿಯೂ ಮುಖ್ಯವಾಗಿ ಭಾರತದರ್ಶನ ಪ್ರಕಾಶನ, ಬೆಂಗಳೂರು ಇವರು ಪ್ರಕಾಶಿಸಿದ ರಾಮಾಯಣ, ಮಹಾಭಾರತ, ಹಾಗೂ ಭೂಆಧಾರಿತ ಅರ್ಥನೀತಿ ಇತ್ಯಾದಿ ಸಂಸ್ಕೃತ-ಕನ್ನಡ ಪುಸ್ತಕಗಳ ಪ್ರಕಟಣೆಗೆ ಶ್ರೀಗಳವರು ಸುವರ್ಣಮಂತ್ರಾಕ್ಷತೆಯನ್ನು ನೀಡಿ ಆಶೀರ್ವಾದವನ್ನು ನೀಡಿದ್ದಲ್ಲದೆ ಸ್ವತಃ ಆಶೀರ್ವಾದ ಸಂದೇಶವನ್ನು ನೀಡಿ ಅವರು ಪ್ರೋತ್ಸಾಹಿಸಿದರು. ಇಂದಿಗೂ ಶ್ರೀರಾಮಾಯಣ, ಮಹಾಭಾರತ ಈ ಗ್ರಂಥಗಳು ಪಾರಾಯಣ ಗ್ರಂಥಗಳಾಗಿ ಲಕ್ಷಾಂತರ ಮನೆಗಳಲ್ಲಿ ನಡೆಯುತ್ತಿರುವುನ್ನು ನಾವು ಗಮನಿಸಬಹುದು. ಕನ್ನಡ ಸಂಧ್ಯಾಭಾಷ್ಯ, ವೆಂಕಟೇಶ ಪ್ರಯೋಗರತ್ನಮಾಲಾ ಪ್ರಕಾಶ, ಶ್ರೀರಾಮಚರಿತ ಇವುಗಳ ಪ್ರಕಾಶನಕ್ಕೂ ಅವರು ಪ್ರೋತ್ಸಾಹವನ್ನು ನೀಡಿದರು.

 

ಶ್ರೀಗಳವರ ಸ್ವಭಾವ ಹೂವಿನಷ್ಟು ಮೃದು. ಅವರು ವಚನ ಪಾಲನೆಯಲ್ಲಿ ಅಗ್ರಗಣ್ಯರು. ಎಂತಹ ಕಠಿಣ ಪರಿಸ್ಥಿತಿಯಲ್ಲೂ ತಾವು ಆಡಿದ ನುಡಿ ಈಡೇರುವಂತೆ ನಡೆದುಕೊಳ್ಳುತ್ತಿದ್ದರು. ಪೂಜಾ ವೈಶಿಷ್ಟ್ಯ, ಅದನ್ನು ಕೂಡ ಅತ್ಯಂತ ಗಂಭೀರವಾಗಿ ಪದ್ಮಾಸನದಲ್ಲಿ ಕುಳಿತು ಶ್ರೀರಾಮನನ್ನು ಅನನ್ಯ  ಶ್ರದ್ಧೆಯಿಂದ ಆರಾಧಿಸುತ್ತಿದ್ದರು. ಅವರಿಗೆ ಶಿಷ್ಯ ಸಮುದಾಯ ಎಂದರೆ ಅಪಾರವಾದ ಪ್ರೀತಿ. ಸದಾ ಶಿಷ್ಯ ಸಮುದಾಯದ ಏಳಿಗೆಗಾಗಿ, ಅವರ ಕುಟುಂಬದ ಉದ್ಧಾರಕ್ಕಾಗಿ ಯೋಚಿಸುತ್ತಿದ್ದರು.
ಅವರಿಗೆ ಸಾಹಿತ್ಯ, ಶಿಕ್ಷಣ, ಶಿಲ್ಪ, ಕೃಷಿ, ಅರ್ಥಶಾಸ್ತ್ರ, ಜ್ಯೋತಿಷ್ಯ, ಮೊದಲಾದ ವಿಷಯಗಳಲ್ಲಿ ವ್ಯಾಪಕವಾದ ಪಾಂಡಿತ್ಯವಿದ್ದು ಎಲ್ಲದರಲ್ಲಿಯೂ ಅಪಾರವಾದ  ಪ್ರೀತಿಯಿತ್ತು. ದೇಶದ ಕುರಿತಾಗಿ ತುಂಬು ಕಾಳಜಿ ಇದ್ದುದಲ್ಲದೆ ದೇಶದ ರಾಜಕೀಯ ಸ್ಥಿತ್ಯಂತರಗಳ ಕುರಿತು ಗಮನಿಸುತ್ತಿದ್ದರು. ನಿತ್ಯ ಅಧ್ಯಯನಶೀಲರಾದ ಅವರು ವೃತ್ತಪತ್ರಿಕೆಗಳನ್ನು ದೇಶದ ಆರ್ಥಿಕ, ಸಾಮಾಜಿಕ, ಧಾರ್ಮಿಕ ಸ್ಥಿತಿಗತಿಗಳನ್ನು ಅನ್ಯಾನ್ಯ ಪ್ರದೇಶಗಳಲ್ಲಿ ಆಗುತ್ತಿರುವ ವೈಪರೀತ್ಯಗಳನ್ನು ಕೂಡ ತುಂಬು ಮನಸ್ಸಿನಿಂದ ಗಮನಿಸುತ್ತಿದ್ದರು. ಅದನ್ನು ವಿಶ್ಲೇಷಿಸುತ್ತಿದ್ದರು. ಮಠಕ್ಕೆ ಆಗಮಿಸುವ ವಿದ್ವಾಂಸರುಗಳನ್ನು  ಗೌರವದಿಂದ ನಡೆಸಿಕೊಂಡು ಅವರನ್ನು ಪ್ರೋತ್ಸಾಹಿಸುತ್ತಿದ್ದರು. ಶಿಷ್ಯರಲ್ಲಿ ಪ್ರತಿಭಾಸಂಪನ್ನರಿದ್ದರೆ ಅವರನ್ನು ಹತ್ತಿರಕ್ಕೆ ಕರೆದು ಅವರ ಪ್ರತಿಭಾವಿಕಾಸಕ್ಕೆ ಬೇಕಾದ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದರು. ಶಿಷ್ಯರಲ್ಲಿ ಆರ್ಥಿಕ ಸಂಕಷ್ಟ ಬಂದಾಗ ಅದನ್ನು ಪರಿಹರಿಸುವ ಕಾರ್ಯವನ್ನು ಕೈಗೊಳ್ಳುತ್ತಿದ್ದರು. ಹಲವಾರು ಸಂಘ-ಸಂಸ್ಥೆಗಳಿಗೆ ಅದರ ಉದ್ದೇಶಗಳನ್ನು ಮನಗಂಡು ಸುವರ್ಣಮಂತ್ರಾಕ್ಷತೆಯನ್ನು ನೀಡಿ ಅವರನ್ನು ಹರಸುತ್ತಿದ್ದರು. ಎಷ್ಟೋ ಸಂದರ್ಭದಲ್ಲಿ ಪರಂಪರಾಗತ ಪೀಠದಲ್ಲಿ ಕುಳಿತು  ಶಿಷ್ಯ ಸಮುದಾಯದಲ್ಲಿ ನಡೆದ ಯಾವುದಾದರೂ ಸಂಕಷ್ಟವನ್ನೋ ಅಥವಾ ದ್ವೇಷವನ್ನೋ ಪರಿಹರಿಸುವಲ್ಲಿ ಇಬ್ಬರನ್ನೂ ಕರೆದು ಸೂಕ್ತವಾದ ಮಾರ್ಗದರ್ಶನವನ್ನು ನೀಡಿ ನ್ಯಾಯಾಯಲಕ್ಕೆ ಹೋಗದ ಹಾಗೆ ಅದನ್ನು ಅಲ್ಲಿಯೇ ಪರಿಹರಿಸುತ್ತಿದ್ದರು. ಯಾವ ಕಾರ್ಯ ಹೇಗೆ ನಡೆಯಬೇಕು ಎನ್ನುವುದನ್ನು ತಾವು ಪೂರ್ಣ ಯೋಜಿಸಿ ಅದು ಸಮೃದ್ಧವಾಗಿ ಯಶಸ್ಸು ಕಾಣುವಂತೆ ನೋಡುತ್ತಿದ್ದರು. ಗೋಕರ್ಣದ ಅಷ್ಟಬಂಧ ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ಕ್ರಮಬದ್ಧವಾಗಿ ವಿಶ್ವವೇ ಕಣ್ತೆರೆದು ನೋಡುವಂತೆ ಅದರ ಮುಂದಾಳತ್ವವನ್ನು  ವಹಿಸಿ ತಾವು ಅದನ್ನು ನಿರ್ವಹಿಸಿದ್ದರು. ಬೇರೆ ಬೇರೆ ಮಠಗಳೊಂದಿಗೆ ಪ್ರೀತಿಯ ಬಾಂಧವ್ಯವನ್ನು ಅವರು ಹೊಂದಿದ್ದರು.
ತಮ್ಮ ಯೋಗಬಲದಿಂದ ತಮ್ಮ ತಪೋಬಲದಿಂದ ನೂರಾರು ಪವಾಡಗಳನ್ನು ಅವರು ಮಾಡಿ ಶಿಷ್ಯರಿಗೆ ಶ್ರೀಪೀಠದ ಮಹತ್ತ್ವನ್ನು  ತೋರಿಸಿದ್ದರು. ಆದರೆ ಎಲ್ಲಿಯೂ ಯಾವುದೇ ರೀತಿಯಲ್ಲಿಯೂ ಅವರು ಅದನ್ನು ಉಲ್ಲೇಖಿಸಿದ್ದಿಲ್ಲ. ಅದು ಶಿಷ್ಯರಿಗೆ ಅನುಭವವೇದ್ಯವಾದ ಸಂಗತಿ. ಬೆಂಗಳೂರಿನಲ್ಲಿ, ಗಿರಿನಗರದಲ್ಲಿ ಮಠದ  ಶಾಖಾಮಠ ಇರಬೇಕು ಎಂದು ಸಂಕಲ್ಪಿಸಿ, ಬೆಂಗಳೂರಿನಲ್ಲಿ ಇರುವ ಎಲ್ಲ ಶಿಷ್ಯರಿಗೆ ಅನುಕೂಲವಾಗುವಂತೆ ಶ್ರೀರಾಮಾಶ್ರಮವನ್ನು ಇಲ್ಲಿ ಸ್ಥಾಪಿಸುವ ಆಶಯವನ್ನು ಹೊಂದಿದ್ದರು. ಅಂತೆಯೇ ಇಲ್ಲಿ ಶಾಖಾಮಠದ ಸ್ಥಾಪನೆಗೂ ಕಾರಣರಾದರು.  ಶ್ರೀಮಠದ ಸಂಪೂರ್ಣವಾದಂತಹ ಪರಂಪರಾಗತ ಆಚರಣೆಗಳು ಯಾವುದೇ ರೀತಿಯ ನ್ಯೂನತೆ ಇಲ್ಲದೆ ನಡೆದುಕೊಂಡು ಬರುವ ಎಲ್ಲ ವ್ಯವಸ್ಥೆಯನ್ನು ಕಲ್ಪಿಸಿದ್ದರು.

 

ಸ್ಮರಣೀಯ ಸ್ಮರಣೆ : ಪೂಜ್ಯ ಶ್ರೀಗಳ ಕುರಿತು ಅವರ ಹತ್ತಿರದಿಂದ ಸೇವೆ ಮಾಡಿ ಬಲ್ಲ ಯಾರಲ್ಲಿಯಾದರೂ ವಿಚಾರಿಸಬೇಕು ಎಂದು ಯೋಚಿಸಿದೆ.
ನಮ್ಮ ಮಠದ ಹಿರಿಯ ಅಧಿಕಾರಿಗಳು ನೆನಪಾದರು. ಅವರಲ್ಲಿ ಕೇಳಿದಾಗ ಅವರು ಪ್ರೀತಿಯಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು ಹೀಗೆ-
“ದೊಡ್ಡಗುರುಗಳಿಗೆ ಯಾವುದೇ ವಿಷಯವನ್ನು ವಿವರವಾಗಿ ತಿಳಿಯುವ ಮನಸ್ಸು. ಅದಕ್ಕಾಗಿ ಪ್ರಶ್ನೆಗಳನ್ನು ಕೇಳಿ ಕೇಳಿ ಮನದಟ್ಟು ಮಾಡಿಕೊಳ್ಳುತ್ತಿದ್ದರು. ರಕ್ಷಣಾ ವ್ಯವಸ್ಥೆ ಬಗ್ಗೆ, ಪೊಲೀಸ್ ವ್ಯವಸ್ಥೆ ಬಗ್ಗೆ, ರಾಜಕೀಯ, ಕೃಷಿ ಇತ್ಯಾದಿ ಎಲ್ಲಾ ವಿಷಯಗಳ ಕುರಿತು ಅವರಿಗೆ ತುಂಬಾ ಆಸಕ್ತಿ ಇತ್ತು.  ಇನ್ನೊಂದು, ಅವರಿಗೆ ಮನಸ್ಸಿಗೆ ಬಂದ ವಿಷಯವನ್ನು ಸಾಧಿಸುವ ಛಲ ಬಲವತ್ತರವಾಗಿತ್ತು. ಇನ್ನೊಂದು ಸಂದರ್ಭ ಅವರಲ್ಲಿ ಮಾತಾಡುವಾಗ ಬೇರೆ ಮಠಗಳಂತೆ ನಮ್ಮ ಮಠದಿಂದ ಇಂಜಿನಿಯರಿಂಗ್ ಅಥವಾ ಮೆಡಿಕಲ್ ಕಾಲೇಜು ಮಾಡಿದ್ದರೆ ವ್ಯಾಪಕತೆ ಹಾಗೂ ಆದಾಯವೂ ಆಗುತ್ತಿತ್ತು ಎಂದಾಗ ‘ನಮಗೆ ಅದೆಲ್ಲ ಬೇಡ, ಅದು ನಮ್ಮ ಕೆಲಸ ಅಲ್ಲ’ ಎಂದಿದ್ದರು. ಅವರು ಮುಕ್ತರಾಗುವ ಕೆಲವೇ ಕೆಲವು ಗಂಟೆಗೆ ಮೊದಲು ನಾವು ದರ್ಶನಕ್ಕೆ ಬಂದಾಗ ಕ್ಷಿಣವಾದ ಸ್ವರದಲ್ಲಿ ಹೇಗಿದ್ದಿ ಎಂದು ಆಶಿರ್ವದಿಸಿದ್ದರು.” ಹೀಗೆ ನೆನಪಿಸಿಕೊಂಡು ಭಾವುಕರಾದರು.

 

ನಮ್ಮ  ಹುಲಿಮನೆ ಮಂಜುನಾಥ ಭಟ್ಟರು ಶ್ರೀಗಳವರ ಕುರಿತು ತಮ್ಮ ಅಭಿಪ್ರಾಯವನ್ನು ಹೀಗೆ ಹೇಳುತ್ತಾರೆ-
“ಅವರು ತುಂಬ ಗಂಭೀರ, ಮತ್ತು ಆಳವಾಗಿ ವಿಷಯವನ್ನು ಯೋಚಿಸುವವರು ಮತ್ತು ತಿಳಿಸುವವರು. ಅದು ಶಾಸ್ತ್ರಸಮ್ಮತವಾದ ವಿಷಯವಾಗಿರಲಿ, ವೈದಿಕ ವಿಚಾರವಾಗಿರಲಿ, ಕೃಷಿಸಂಬಂಧ ವಿಚಾರವಾಗಿರಲಿ, ಅಥವಾ ಯಾವುದೇ ಲೌಕಿಕ ವಿಚಾರವಾಗಿರಲಿ ಅದರಲ್ಲಿ ಅವರ ವಿಚಾರಧಾರೆ ಎಷ್ಟು ಗಂಭೀರವೋ ಅಷ್ಟೇ ಆಳವೂ ಆಗಿರುತ್ತಿತ್ತು. ಯಾವುದೇ ಶಿಷ್ಯರು ಬಂದು ತಮ್ಮ ಸಮಸ್ಯೆಯನ್ನು ಹೇಳಿಕೊಂಡಾಗ ಅಥವಾ ಕೌಟುಂಬಿಕ ಸಮಸ್ಯೆಯನ್ನು ಹೇಳಿಕೊಂಡಾಗ ಅವರು ಎರಡೂ ಪಕ್ಷದವರನ್ನು ಕರೆದು ಹಿತವಾಗಿ ನುಡಿದು ಆ ಸಮಸ್ಯೆಯನ್ನು  ಅತ್ಯಂತ ಸುಲಲಿತವಾಗಿ ಪರಿಹರಿಸುತ್ತಿದ್ದರು. ಮತ್ತೆ ಅವರು ಅಧಿಕಾರವನ್ನು ಸ್ವೀಕರಿಸುವ ಸಂದರ್ಭದಲ್ಲಿ ಎಲ್ಲ ಮಠಗಳ ಪರಿಸ್ಥಿತಿಯೂ ಉತ್ತಮವಾಗಿರದೇ ದುಃಸ್ಥಿತಿಯಲ್ಲಿತ್ತು. ಅದನ್ನು ಸುಸ್ಥಿತಿಗೆ ತರುವಲ್ಲಿ ಅವರು ತುಂಬ ಪ್ರಯತ್ನಪಟ್ಟರು. ಆಗ ಎಲ್ಲ ಕಡೆ ಹೋಗುತ್ತಿರುವಾಗ ಅವರು ಆಯಾಯ ಪ್ರದೇಶದಲ್ಲಿ ಇರುವ ಬೆಳೆ ಸಂಪತ್ತು ಇವುಗಳನ್ನು ತುಂಬ ಸೂಕ್ಷ್ಮವಾಗಿ ತಿಳಿದುಕೊಂಡಿರುತ್ತಿದ್ದರು. ಉತ್ತರಕನ್ನಡದ ಘಟ್ಟದ ಕೆಳಗಿನ ಭಾಗಕ್ಕೆ ಹೋದಾಗ ಅಲ್ಲೆಲ್ಲ ಭೂಮಿ ಎಕರೆ ಲೆಕ್ಕದಲ್ಲಿ ಇರುತ್ತಿರಲಿಲ್ಲ. ಗುಂಟೆಯ ಲೆಕ್ಕ. ಆವಾಗ ಅವರಲ್ಲಿಯೇ ಇರುವ ತೆಂಗಿನ ಮರ ಎಷ್ಟು, ಅಡಿಕೆ ಮರ ಎಷ್ಟು, ಇತ್ಯಾದಿ ಕೇಳುತ್ತಲೆ ಅವರ ಸಾಮರ್ಥ್ಯವನ್ನು ತಿಳಿಯುತ್ತಿದ್ದರು. ಹಾಗಲ್ಲದೆ ಮಠೀಯವಾದ, ಸಾರ್ವಜನಿಕವಾದ ಕೆಲಸವನ್ನು ಶಿಷ್ಯರಿಂದ ಮಾಡಿಸುವುದಕ್ಕಿಂತ ಮೊದಲು ತಾವು ತಿಳಿದ ಸಾಮರ್ಥ್ಯವಂತರಿಂದ ಪ್ರೇರಣಾತ್ಮಕವಾಗಿ ವಾಗ್ದಾನವನ್ನು ಮಾಡಿಸುತ್ತಿದ್ದರು. ಹುಲಿಮಂಡೆ ತೋಟವನ್ನು ನೋಡಿಕೊಂಡು ಇರುವಾಗ ಅವರು ಹತ್ತು ಹದಿನೈದು ದಿನಕ್ಕೊಮ್ಮೆ ಹೋಗಿ ತೋಟದಲ್ಲಿ ಸುತ್ತಾಡಿ ಬಂದರೂ ಅಲ್ಲಿ ಇರುವ ಈ ವರ್ಷ ಬರುವ ಆದಾಯದ ಕುರಿತು ಅವರಿಗೆ ಖಚಿತವಾದ ಮಾಹಿತಿ ಇರುತ್ತಿತ್ತು. ಅಷ್ಟು ಸೂಕ್ಷ್ಮವಾಗಿ ಎಲ್ಲವನ್ನೂ ಗಮನಿಸುತ್ತಿದ್ದರು. ಅವರನ್ನು ನೋಡುವಾಗ ಅನೇಕರಿಗೆ ಹೆದರಿಕೆಯಾಗುತ್ತಿತ್ತು. ಅಷ್ಟು ಗಂಭೀರ ಅವರು. ಆದರೆ ಅವರ ಸನಿಹ ಹೋದರೆ ಅವರು ಕಾಮಧೇನುವೇ ಸರಿ. ಅವರು ಪೂಜೆ ಮಾಡುವಾಗಲೂ ಹಾಗೆಯೇ. ತುಂಬ ತನ್ಮಯರಾಗಿರುತ್ತಿದ್ದರು. ಮಂತ್ರೋಚ್ಚಾರಣೆ ಮಾಡುವ ವೈದಿಕರು ಸ್ವಲ್ಪ ತಪ್ಪಿದರೂ ಅವರ ಕಡೆ ಕಣ್ಣು ಬಿಟ್ಟು ನೋಡುತ್ತಿದ್ದರು. ಅವರಿಗೆ ಚಂದ್ರಮೌಳೀಶ್ವರನಿಗೆ ಅಭಿಷೇಕ ಮಾಡುವಾಗ ಖಚಿತವಾದ ಲೆಕ್ಕ ಇತ್ತು. ಅವರ ಅಭಿಷೇಚನೆಯನ್ನು ಆ ಪ್ರಮಾಣದಲ್ಲಿ ಮಾಡುತ್ತಿದ್ದರು. ಹಾಗಾಗಿ ವೇಗವಾಗಿ ಮಂತ್ರ ಹೇಳಿದರೆ ಅವರು ಸಹಿಸುತ್ತಿರಲಿಲ್ಲ. ಅವರು ಉದಾರ ಹೃದಯಿಗಳು. ಅವರು ಎಂತಹ ಗುಣಗ್ರಾಹಿಗಳು ಎನ್ನುವುದಕ್ಕೆ ಒಂದು ಉದಾಹರಣೆ, ಮಂಗಳೂರಿನಲ್ಲಿ ಒಬ್ಬ ತುಂಬ ಬಡತನದಲ್ಲಿರುವ ಬ್ರಾಹ್ಮಣರಿದ್ದರು. ಅವರಿಗೆ ಪೂರ್ಣ ವೇದಾಧ್ಯಯನ ಆಗಿತ್ತು.  ಆದರೆ ಯಾಕೋ ಅವರಿಗೆ ಬಡತನ ಬೆಂಬತ್ತಿತ್ತು. ಜನಿವಾರವನ್ನು ಮಾರಾಟ ಮಾಡುತ್ತ ತಿರುಗುತ್ತಿದ್ದರು. ಒಂದು ದಿನ ಮಾಣಿಮಠಕ್ಕೆ ಹೋದಾಗ ಅವರನ್ನು ಕರೆದು ಅವರನ್ನು ಸುಮಾರು ಎರಡೂವರೆ ಗಂಟೆಗಳ ಕಾಲ ಪರೀಕ್ಷೆ ಮಾಡಿದರು. ಮಾರನೇ ದಿನ ಮಾಣಿಮಠದ ವಾರ್ಷಿಕೋತ್ಸವದ ಸಂದರ್ಭದಲ್ಲಿ ತುಂಬಿದ ಸಭೆಯಲ್ಲಿ ವೈದಿಕರ ಕುರಿತು ವೇದಾಧ್ಯಯನ ಕುರಿತು ಮಾತನಾಡಿ ತಾನು ನಿನ್ನೆ ಪರೀಕ್ಷಿಸಿದ ಬ್ರಾಹ್ಮಣನನ್ನು ಎಲ್ಲರಿಗೂ ಪರಿಚಯಿಸಿ ಇವರು ವೇದಾಧ್ಯಯನ ಸಂಪನ್ನರು, ಇವರನ್ನು ಎಲ್ಲೆಡೆ ಕರೆದುಕೊಂಡು ಹೋಗುವವರು ತಮಗಿಂತ 10 ರೂಪಾಯಿ ಹೆಚ್ಚಿನ ಸಂಭಾವನೆ ಸಿಗುವಂತೆ ಮಾಡಬೇಕು ಎಂದು ಸೂಚಿಸಿಬಿಟ್ಟರು. ಅವರು ಎಷ್ಟು ಉದಾರ ಹೃದಯಿಗಳು ಎಂಬುದಕ್ಕೆ ಈ ಉದಾಹರಣೆ ಸಾಕ್ಷಿ.” ಎಂದು ಹುಲಿಮನೆ ಮಂಜುನಾಥ ಭಟ್ಟರು ನೆನಪಿಸಿಕೊಳ್ಳುತ್ತಾರೆ.

 

ಇನ್ನೊಬ್ಬರು ನಮ್ಮ ಪ್ರೀತಿಯ ಶ್ರೀ ಕೆ. ವಿ. ರಮೇಶಣ್ಣ. ಅವರು ಶ್ರೀ ಸವಾರಿಯಲ್ಲಿ ದೊಡ್ಡ ಗುರುಗಳೊಂದಿಗೆ ಅವರ ಸೇವೆಯಲ್ಲಿದ್ದವರು. ಪ್ರಸ್ತುತ ಶ್ರೀಸಂಸ್ಥಾನದವರ ಪರಿವಾರದಲ್ಲಿಯೂ ಇದ್ದಾರೆ. ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದು ಹೀಗೆ-
“ದೊಡ್ಡ ಗುರುಗಳಿಗೆ ಈಗಿನ ಶ್ರೀಗಳವರ ಬಗೆಗೆ ತುಂಬ ಪ್ರೀತಿಯಿತ್ತು. ತಮ್ಮ ಆಯ್ಕೆ ಸಮರ್ಪಕವಾಗಿದೆ ಎಂದು ಮನಸ್ಸಿನಲ್ಲಿಯೇ ಸಂತೋಷ ಪಡುತ್ತಿದ್ದರು. ಇವರು ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡುವಾಗ  ಸಂಸ್ಕೃತದಲ್ಲಿ ದೊಡ್ಡ ಗುರುಗಳಿಗೆ ಪತ್ರ ಬರೆಯುತ್ತಿದ್ದರು. ಅದನ್ನು ಶ್ರೀರಂಗನಾಥಶರ್ಮರಿಗೆ ದೊಡ್ಡ ಗುರುಗಳು ತೋರಿಸುತ್ತಿದ್ದರು. ಆಗ ಅವರು ಮೆಚ್ಚಿ ತಮ್ಮ ಅಭಿಪ್ರಾಯ ಹೇಳುತ್ತಿದ್ದರು. ಆದರೆ ತಮ್ಮ ಪ್ರೀತಿಯನ್ನು ದೊಡ್ಡ ಗುರುಗಳು ಹಾಗೆಲ್ಲ ತೋರಿಸುತ್ತಿರಲಿಲ್ಲ.
ಮೊದಲಿನಿಂದಲೂ ನಮ್ಮ ಮಠದ ಶ್ರೀಗಳವರ ಬಗೆಗೆ ಬೇರೆ ಬೇರೆ ಮಠಗಳವರಲ್ಲಿ  ಒಂದು ಬಗೆಯ ಭಯ ಮಿಶ್ರಿತವಾದ ಗೌರವ ಇತ್ತು. ಕಾರಣ ಈ ಶ್ರೀಪೀಠದ ಸ್ವಾಮಿಗಳು ಅಪಾರ ವಿದ್ಯಾಸಂಪನ್ನರು ಮತ್ತು ಕಾರ್ಯದಕ್ಷರು ಎಂದು. ದೊಡ್ಡ ಗುರುಗಳ ಬಗೆಗೆ ಇನ್ನೊಂದು ಶಂಕರಾಚಾರ್ಯ ಪೀಠದ ಹಿಂದಿನ ಹಿರಿಯ  ಶ್ರೀಶ್ರೀಗಳವರು ಹೇಳುತ್ತಿದ್ದರಂತೆ-
“ವಿದ್ಯೆ ಹಾಗೂ ವ್ಯವಹಾರಗಳಲ್ಲಿ ರಾಮಚಂದ್ರಾಪುರಮಠದ ಶ್ರೀಗಳವರನ್ನು ಮೀರಿಸುವುದು  ಯಾರಿಗೂ ಸಾಧ್ಯವಿಲ್ಲ” ಎಂದು.

 

ದೊಡ್ಡ ಗುರುಗಳ ಜೊತೆ ಅಂದರೆ ನಮ್ಮ ಮಠದ ಶ್ರೀಸವಾರಿ ಎಂದರೆ ಅದು ದೊಡ್ಡ ವಿಶ್ವವಿದ್ಯಾಲಯ ಇದ್ದಂತೆ. ಇಲ್ಲಿ ಅಭ್ಯಾಸ ಮಾಡಿದರೆ ಅದು ಲಾಗಾಯ್ತಿನಿಂದಲೂ  ತುಂಬ ತಿಳುವಳಿಕೆಯ ವ್ಯಕ್ತಿಯಾಗುತ್ತಾರೆ ಎಂಬ ದೃಢವಾದ ನಂಬಿಕೆ ಇದೆ. ಇದು ಹಲವರ ಅನುಭವ ಕೂಡ. ದೊಡ್ಡ ಗುರುಗಳು ಮುಕ್ತರಾಗುವ ದಿನ ಪ್ರಾತಃಕಾಲ 4.30 ಗಂಟೆಗೆ ನನ್ನಲ್ಲಿ ಹೇಳಿದರು,
“ನಾವಿನ್ನು ಆ ಕಡೆ ಹೋದ ಮೇಲೆ ಈ ಕಡೆ ಬರುವುದಿಲ್ಲ. ಯಾರಲ್ಲೂ ನಿಷ್ಠುರನಾಗಬೇಡ. ನೆಂಟರಿಷ್ಟರಲ್ಲೆಲ್ಲ ಹೊಂದಿಕೊಂಡು ನಡೆ” ಎಂದು. ಈ ಮಾತು ಏನೆಲ್ಲ ಅರ್ಥ ಹೊಂದಿದೆ ಎಂದು ನನಗಿನ್ನೂ ಅರ್ಥವಾಗಿಲ್ಲ. ಎಂದು ಕಂಬನಿ ತುಂಬಿದ ಗದ್ಗದಿತ ಸ್ವರದಲ್ಲಿ  ರಮೇಶಣ್ಣ ಹೇಳಿಕೊಂಡರು.

 

ಈ ರೀತಿ ಸುದೀರ್ಘ ಕಾಲ ವಿಶ್ವದ ಏಕೈಕ  ಅವಿಚ್ಛಿನ್ನ ಪರಂಪರೆಯ ಧರ್ಮಪೀಠವಾದ ಶ್ರೀರಾಮಚಂದ್ರಾಪುರಮಠದ ದಿವ್ಯಪೀಠವನ್ನು ಅಲಂಕರಿಸಿ ಮಠದ ಸ್ಥಿರ-ಚರ ಸಂಪತ್ತನ್ನು  ರಕ್ಷಿಸಿ, ವೃದ್ಧಿಸಿ ಪರಂಪರಾಗತ ಕ್ರಮಗಳನ್ನು ಕಾಪಾಡಿ , ಶಿಷ್ಯಭಕ್ತಸ್ತೋಮಕ್ಕೆ ಆಶ್ರಯ, ಅಭಯವನ್ನು ನೀಡಿ ಶಿಷ್ಯರ ಏಳಿಗೆ, ಪ್ರಗತಿಯನ್ನು ಕಂಡು ಮುಕ್ತವಾಗಿ ಆನಂದಿಸಿ, ಆ ಪರಬ್ರಹ್ಮ ಶಕ್ತಿಯಲ್ಲಿ ಲೀನರಾದವರು ನಮ್ಮ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳವರು.

Leave a Reply

Your email address will not be published. Required fields are marked *