ಉತ್ತಮ ವಿದ್ಯಾರ್ಥಿ – ಒಳ್ಳೆಯ ವಿದ್ವಾಂಸ

ಲೇಖನ

 

ಈ ನಿಲುವೇ ಸೊಗಸು ಈ ನುಡಿಯೇ ಚೆಂದ.
ತೀಕ್ಷ್ಣ ನೋಟ. ಅಸಂದಿಗ್ಧ ಭಾವಸ್ಫುರಣೆಯ ಮನೋಧೋರಣೆಯನ್ನು ಸಹಜವಾಗಿ ಹೊರ ಹೊಮ್ಮಿಸುವ ದೇಹಧರ್ಮ, ಒಪ್ಪ ಓರಣವಾದ ವಸನ, ಆರಂಭದಲ್ಲಿ ತುಸು ಹೆಚ್ಚು ಗಂಭೀರವೇನೋ ಎಂದು ಕಾಣುವಂತಿದ್ದರೂ, ಮೃದುವಾದ ಹಾಗೂ ಶೋಧಕತನದ ಮನಸ್ಸು, ಭಾವಶುದ್ಧ ಚರ್ಯೆ, ಸಾಂಘಿಕ ಚಟುವಟಿಕೆಯಲ್ಲಿದ್ದು ಆನಂದ ಅನುಭವಿಸುವ ಸಹಜತೆ, ಹೃದ್ಗತ ಅಭಿಪ್ರಾಯದ ಅಭಿವ್ಯಕ್ತಿಯಲ್ಲಿ ನಿರ್ಮೋಹ ಖಚಿತತೆ – ಈ ರೀತಿಯ ಗುಣಸ್ವಭಾವಗಳಿಂದ ಮೇಳವಿಸಿಕೊಂಡಿರುವ ಸಹೃದಯ ವಿದ್ವದ್ವರ ಕೆರೇಕೈ ಉಮಾಕಾಂತ ಭಟ್ಟರು.

 

ಜೀವನದಲ್ಲಿ ಆರವತ್ತು ಸಂವತ್ಸರಗಳನ್ನು ಸಾಗಿ ಬಂದ ಅವರ ಕುರಿತಾಗಿ ಅವರೊಟ್ಟಿಗೆ ಮತ್ತು ಸ್ವತಂತ್ರವಾಗಿ ಒಂದು ಸೂಕ್ಷ್ಮ ಪರಿಕ್ರಮಣವನ್ನು ಗೈದರೆ ಅವರು ಹೇಗೆ ಸ್ವತಂತ್ರ ನಿಲುವಿನ ಶುದ್ಧ ಸ್ವರೂಪದ ಸರ್ವಾದರಣೀಯ ವ್ಯಕ್ತಿಯಾದರು ಎಂದು ತಿಳಿದುಕೊಳ್ಳಬಹುದು. ಅತ್ಯಂತ ವಿಶಿಷ್ಟವೂ, ಕುತೂಹಲಕಾರಿಯೂ ಆದ ಚಿಂತನೆ ಇದು.

 

ಮುಂದೆ ಹೀಗಾಗಬೇಕು ಎಂಬವರಿಗೆ ಹಿಂದೆ ಹೀಗಾಗಿತ್ತು ಎಂದು ಅರಿವಾದರೆ ಅದು ಶ್ರೇಷ್ಠ ಕಾಣಿಕೆ ಎಂದು ನಂಬಿದವ ನಾನು. ಈಗ ಹೀಗಿರುವುದಕ್ಕೆ ಹಿಂದೆ ಹೀಗಾದದ್ದು ಕಾರಣ ಎಂಬುದನ್ನು ತಿಳಿಸುವ ಪ್ರಯತ್ನವೂ ಇದೆ. ಹಾಗಾಗಿ ಉಮಾಕಾಂತ ಭಟ್ಟರ ಜೀವನದ ಬಹುಮೌಲಿಕ ಕಾಲಘಟ್ಟದ ಶಿರಸ್ಸಿನಲ್ಲಿ ನಿಂತು ತಿರುಗಿ ನೋಡುವ ಹಾಗೂ ಪ್ರತಿಯೊಂದು ಸ್ವಭಾವಗುಣಕ್ಕೂ ಇರುವ ಆಧಾರವನ್ನು ಪರಾಂಬರಿಸುವ ಪ್ರಯತ್ನ ಮಾಡುತ್ತಿದ್ದೇನೆ.

 

ಹೊಂದಾಣಿಕೆಗೆ ತೆರೆದ ಮನಸ್ಸು

ಪ್ರವಚನವಾಗಲೀ, ಪಾಠವಾಗಲೀ, ಯಕ್ಷಗಾನ-ತಾಳಮದ್ದಲೆಯ ಪಾತ್ರಧಾರಿಕೆಯಾಗಲೀ, ಉಮಾಕಾಂತ ಭಟ್ಟರು ಮುಕ್ತವಾಗಿ ಹೊಂದಿಕೊಳ್ಳುತ್ತಾರೆ. ಅವರಿಗೆ ತನ್ನ ಕರ್ತವ್ಯಪ್ರಜ್ಞೆ ಮತ್ತು ಬದ್ಧತೆಯ ಬಗೆಗೆ ಅಪಾರ ಕಾಳಜಿ. ಹಾಗೂ ತನ್ನಿಂದ ಕೂಟ ವ್ಯವಸ್ಥೆ ಹಾಳಾಗಬಾರದು ಎಂಬ ಎಚ್ಚರ. ಅದಕ್ಕೆ ಕಾರಣ ಇವರ ಮನೆಯ ಪರಿಸರ ಹಾಗೂ ವಾತಾವರಣ.

 

ಶಿರಸಿಯಿಂದ ಕೇವಲ 5 ಕಿ.ಮೀ. ಅಂತರದ ಪುಟ್ಟ ಹಳ್ಳಿ ಕೆರೇಕೈ. ಕಾಲುದಾರಿ ಇರುವುದು ಕೆರೆಯ ದಡದ ಮೇಲೆ. ಅಲ್ಲಿಂದ ಮೇಲೆ ಬಂದರೆ ಒಂಭತ್ತು ಸಾಲು ಮನೆಗಳಿವೆ. ಎಲ್ಲ ಚಾಳವೇ ಇದ್ದಂತಿದೆ. ಎಲ್ಲ ಮನೆಗಳೂ ಒಂದಕ್ಕೊಂದು ಕೂಡಿಕೊಂಡೇ ಇವೆ. ಆ ಮನೆಗಳ ಎದುರು ಅಂಗಳ. ಅದನ್ನು ದಾಟಿದರೆ ಎಲ್ಲರ ಮನೆಯ ತೋಟಗಳು. ಈ ರೀತಿಯಲ್ಲಿ ಕೂಡುಕುಟುಂಬ ವ್ಯವಸ್ಥೆ ಅದು. ಹೊಂದಾಣಿಕೆಯೇ ಮೂಲಾಧಾರವಾದ ಜೀವನಕ್ರಮ ಇವರನ್ನು ಗಾಢವಾಗಿ ಅವರಿಸಿಕೊಂಡಿದೆ. ಹಾಗಾಗಿ ‘ವಿನಯ ಇಲ್ಲದ ವಿದ್ವತ್ತೆ’ ವಿಭ್ರಮಿಸಲು ಈ ಸ್ವಭಾವ ಬಿಡದು. ಕೆರೇಕೈಯ ಒಂಭತ್ತು ಮನೆಗಳು (ನವಗ್ರಹಗಳು) ಸಾಲಾಗಿ ಇದ್ದುದರಿಂದ ಅಲ್ಲಿ ಪರಸ್ಪರ ಸಹಕಾರ ಇಲ್ಲದಿದ್ದರೆ ಜೀವನ-ದಿನಮಾನ ಸಾಧ್ಯವಿಲ್ಲ. ಆ ಕ್ರಮ ಇಂದಿಗೂ ಅಲ್ಲಿ ಹಾಗೆಯೆ ಇದೆ. ಇನ್ನೊಂದು ವಿಶೇಷವೆಂದರೆ ಆ ಒಂಭತ್ತು ಸಾಲುಮನೆಗಳಲ್ಲಿ ಎಲ್ಲ ರೀತಿಯ ಪ್ರತಿಭಾವಂತರು ಅರಳಿದ್ದಾರೆ. ಈಗಲೂ ಸಹ ಅರಳುತ್ತಿದ್ದಾರೆ. ಎಲ್ಲರ ನಡುವೆ ಸದಾ ಲವಲವಿಕೆ, ವಿಶಿಷ್ಟತೆಯ ತುಡಿತ ಕಾಣುವಂತಿದೆ. ಈ ರೀತಿಯ ಬದುಕಿನ ಮನೆ ದೇಶದಲ್ಲಿಯೇ ಒಂದು ವಿಶೇಷ ಅಂದರೆ ಅತಿಶಯೋಕ್ತಿಯಲ್ಲ.

ತಂದೆ ಕೆರೇಕೈ ಕೃಷ್ಣಭಟ್ಟರು ಸದಾ ಅಭ್ಯಾಸಿ ವೈದಿಕ, ಕೃಷಿಕ. ಚಿಂತಕ ಹಾಗೂ ಪ್ರಯೋಗಶೀಲ. ಪರಂಪರೆಯ ಕುಟುಂಬದ ರೀತಿ-ನೀತಿಗಳನ್ನು ಚೆನ್ನಾಗಿ ಅರಿತವರು. ಅದನ್ನು ಜತನವಾಗಿ ಮುಂದಿವರಿಸಿಕೊಂಡು ಹೋಗಬೇಕೆಂಬ ಹಂಬಲದ ನಿರ್ಮಲ ಮನಸ್ಸಿನವರು. ಮೃದುಭಾಷಿ. ಶಿಸ್ತಿನ ಜೀವನಕ್ರಮದ ಪ್ರತೀಕ. ಅಪ್ಪಟ ದೇಶಾಭಿಮಾನಿ. ತಾಯಿ ದೇವಕಿ ಯಕ್ಷಗಾನದ ಉಸಿರನ್ನೇ ಹೊತ್ತುಬಂದ ಶೀಗೇಹಳ್ಳಿ ಕುಟುಂಬದವರು. ಅವರು ನಡೆ-ನುಡಿಯಲ್ಲಿ ಚುರುಕು ಮತ್ತು ತೀಕ್ಷ್ಣ. ಯಕ್ಷಗಾನ ಮತ್ತು ಕೃಷಿ ಅವರಿಗೆ ಬಲು ಪ್ರೀತಿ. ಏನನ್ನೂ ಹೇಳಿಸಿಕೊಳ್ಳದ ಶಿಸ್ತಿನ ಜೀವನಕ್ರಮದವರು. ಅವರ ಪ್ರೀತಿ ಮತ್ತು ಅದರ ಅಭಿವ್ಯಕ್ತಿ ವಿಶೇಷವಾಗಿಯೇ ಇತ್ತು. ಅವರಲ್ಲಿ ಶೋಧಕತೆ ಹಾಗೂ ಬೋಧಕತೆ ಸದಾ ಸ್ಪರ್ಧಿಸುತ್ತಲೇ ಇರುತ್ತಿದ್ದವು. ಉಮಾಕಾಂತ ಭಟ್ಟರು ಹಿರಿಯ ಮಗ. ಅವರಿಗೆ ತಂಗಿಯರಿಬ್ಬರು. ಸವಿತಾ ಹಾಗೂ ಶೈಲಜಾ. ಪ್ರತಿಭೆ-ಪಾಂಡಿತ್ಯ-ಸಹೃದಯತೆ ಮೇಳವಿಸಿರುವ ಮಾದರಿ ವ್ಯಕ್ತಿತ್ವದವರು.

 

ಮಕ್ಕಳಲ್ಲಿ ಹಿರಿಯವರಾದ್ದರಿಂದ ಉಮಾಕಾಂತರ ಎಲ್ಲ ಬೇಡಿಕೆಗಳು ಬೇಗನೇ ಈಡೇರುತ್ತಿದ್ದವು. ಆದರೂ ತಪ್ಪಿಗೆ ಉಗ್ರಶಿಕ್ಷೆ ತಂದೆ-ತಾಯಿಯರ ಕಡೆಯಿಂದ ಆಗುತ್ತಿತ್ತು. ಒಂದು ದಿನ ನೆರೆಮನೆಯ ಅಂಗಳದಲ್ಲಿ ಬೆಳದಿದ್ದ ಎಳೆಯ ಸೌತೆಕಾಯಿ ತೆಗೆದಿದ್ದನ್ನು ತಿಳಿದ ತಂದೆ, ತಕ್ಷಣ ಅವರ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಯಜಮಾನರಲ್ಲಿ ಕಾಲು ಹಿಡಿಸಿ ಕ್ಷಮಾಪಣೆ ಕೇಳುವಂತೆ ಮಾಡಿದ್ದರು. ‘ಪ್ರೀತಿ-ಭೀತಿ ಒಟ್ಟೊಟ್ಟಿಗೇ ಜೀವನವನ್ನು ವ್ಯಾಪಿಸಿತು’ ಎಂದು ಇವರು ಈಗಲೂ ನೆನೆಸಿಕೊಳ್ಳುತ್ತಾರೆ. ಇಂತಹ ಹಲವಾರು ಸಣ್ಣಪುಟ್ಟ ಘಟನೆಗಳು ನಡೆದಿರುವುದರಿಂದ ಎಷ್ಟೇ ಬೆಳೆದರೂ ಒಂದು ರೀತಿಯ ಸಂಕೋಚ ಹಾಗೂ ತಪ್ಪಿಗೆ ಹೆದರುವ ಸ್ವಭಾವ ಅಂಟಿಕೊಂಡೇ ಸಾಗುತ್ತಿವೆ ಎಂದು ಗಮನಿಸಬಹುದಾಗಿದೆ. ಅಪಾರ ಅರಿವು ಹಾಗೂ ಚಿಂತನೆ, ಒಳಗೊಳ್ಳುವ ಹಾಗೂ ವ್ಯಾಪಕಗೊಳಿಸುವ, ಗುಣಾಧಿಕ್ಯದಿಂದಲೇ ತೆರೆದುಕೊಳ್ಳುವ ತುಡಿತ ಈ ಕುಟುಂಬದವರ ಜೀವರಸ, ಸ್ಥಾಯೀ ಭಾವ ಎಂದು ನನಗನಿಸಿದೆ. ಈ ಎಲ್ಲಾ ಗುಣಗಳೂ ಸ್ವಭಾವವಾಗಿ ಬಾಲ್ಯದಲ್ಲಿ ಹಠವೆಂದು ಕಂಡು ಬರುವಂತಿದ್ದರೂ ಲೋಕಶಿಕ್ಷಣ ನಿಕಷಕ್ಕೆ ಒಳಪಟ್ಟಾಗ ಪರಿಷ್ಕೃತಗೊಂಡು ಅನುಸರಣೀಯ ಶಕ್ತಿಯಾಯಿತು ಎಂದು ಕಾಣುತ್ತದೆ.

 

ವಿದ್ಯಾಭ್ಯಾಸದ ಭದ್ರ ತಳಹದಿ

 

ಹಲವಾರು ಪುರಾಣ-ಕಥೆಗಳ, ಗ್ರಂಥಗಳ, ಇವುಗಳಲ್ಲಿನ ವಿಷಯಗಳ, ಅದರ ಸೂಕ್ಷ್ಮತೆಗಳ ಕುರಿತು ನಯವಾಗಿ ವಿಶ್ಲೇಷಿಸುವ ಚತುರತೆ ಉಮಾಕಾಂತ ಭಟ್ಟರ ವಿಶೇಷ. ಅದಕ್ಕಾಗಿ ಸಾಕಷ್ಟು ವಿಸ್ತಾರವಾಗಿ ಯುಕ್ತಿಗಳನ್ನು ಒದಗಿಸುವುದು ಹಾಗೂ ಅವುಗಳ ಶೀಲಾಭಿವ್ಯಕ್ತಿಯೊಡನೆ ಮಂಡಿಸುವ ಕ್ರಮ ಅನನ್ಯ. ಇದು ಹೇಗೆ ಎಂಬುದಕ್ಕೆ ಅವರ ಬಾಲ್ಯದ ದಿನಗಳಲ್ಲಿ ಆಟವೇ ಪಾಠವಾದ ಬಗೆ, ಆವರಣವೇ ಶಾಲೆಯಾದ ರೀತಿ ಮನನೀಯವಾಗಿವೆ. ‘ಲೋಕಶಿಕ್ಷಣ-ಮನೆಪಾಠಗಳು ಹೇಗೆ ಬಹೂಪಯೋಗಿ ಕಲಿಕಾ ವಿಧಾನವೇ ಆಗುತ್ತವೆ’ ಎಂಬುದನ್ನು ಇಂದಿಗೂ ಪ್ರತಿಪಾದಿಸುವಂತಿದೆ.

 

ಇವರು ಒಂದನೆಯ ತರಗತಿಯಲ್ಲಿದ್ದಾಗ ಇವರ ಊರಿನ ಶಾಲೆಗೆ ಗೋಕರ್ಣದ ಬಾಳೇಹಿತ್ತಲು ಅನಂತ ಗಣಪತಿ ಭಟ್ಟ ಎಂಬ ದೊಡ್ಡ ವಿದ್ವಾಂಸರು ಅಧ್ಯಾಪಕರಾಗಿ ಬಂದರು. “ಅವರಂತಹ ಅಪೂರ್ವ ಶಿಕ್ಷಕರನ್ನೇ ನಾನು ಕಂಡಿಲ್ಲ. ಅವರು ಪಂಪ, ರನ್ನ, ಕುಮಾರವ್ಯಾಸರ ಕಾವ್ಯದ ಬಗೆಗೆಲ್ಲ ಮನೋಜ್ಞವಾಗಿ ತಿಳಿಸುತ್ತಿದ್ದರು. ಅವರಲ್ಲಿ ನನ್ನ ತಂದೆಯವರೂ ಪಾಠ ಹೇಳಿಸಿಕೊಳ್ಳುತ್ತಿದ್ದರು. ಆಗ ನಾನು ಗಲ್ಲಕ್ಕೆ ಕೈಯಿಟ್ಟು ಕೇಳುತ್ತಿದ್ದೆ. ಅವರಿಂದ ಬಾಯಿಲೆಕ್ಕ ಹೇಳುವುದು, ಶುದ್ಧ ಬರಹ, ಕಾವ್ಯವನ್ನು ಪರಿಣಾಮಕಾರಿಯಾಗಿ ವಾಚಿಸುವ ಕ್ರಮ, ತನ್ನ ನಾಲ್ಕನೆಯ ತರಗತಿಯಲ್ಲೇ ರೂಢಿಯಾಯಿತು” ಎಂದು ಅವರನ್ನು ಉಮಾಕಾಂತ ಭಟ್ಟರು ನೆನಪಿಸಿಕೊಳ್ಳುತ್ತಾರೆ. ಆಗಾಗ ಅನಂತ ಗಣಪತಿ ಭಟ್ಟರು ಕಾವ್ಯಗಳ ಪದ್ಯಗಳನ್ನು ಮನೆಗೆ ಬಂದ ಆಪ್ತೇಷ್ಟರ-ಅತಿಥಿಗಳ ಎದುರು ಹಾಡಿಸಿ ಹಿಗ್ಗುತ್ತಿದ್ದರು, ಚಪ್ಪಾಳೆ ಬಂದಾಗ ಖುಷಿ ಪಡುತ್ತಿದ್ದರು. ಹಾಗಾಗಿ ಇವರಿಗೂ ಚಪ್ಪಾಳೆ ಪ್ರೀತಿ ಬಹಳ ಎಳೆವೆಯಿಂದಲೇ ಬಂತು. ಈ ರೀತಿ ರಂಗಭೂಮಿ ಚಟುವಟಿಕೆಯ ಮೂಲಧಾತು ಕ್ರಮಬದ್ಧವಾಗಿ ಉಮಾಕಾಂತ ಭಟ್ಟರಲ್ಲಿ ಸಿದ್ಧವಾಯಿತು.

 

ಮೂಲತಃ ಕುಮಟಾ ಬಾಡದವರಾದ, ಒಂದು ರೀತಿಯ ಅವಧೂತರಂತೇ ಬಾಳಿದ ಮಹಾಪಂಡಿತರಾದ ಬಾಬು ರಾಮಚಂದ್ರ ಶರ್ಮರು ವಾಸಿಷ್ಠ ಗಣಪತಿ ಮುನಿಗಳ ಶಿಷ್ಯರು. (ಇವರಿಗೆ ಕವಿಕುಲಕಲಭ ಎಂಬ ಬಿರುದು ಇತ್ತು) ಅವರು ಬಹುಶ್ರುತ ವಿದ್ವಾಂಸರು. ಸಂಸ್ಕೃತ ಅಧ್ಯಯನ, ರಂಗವಲ್ಲಿ ಬಿಡಿಸುವುದು ಅವರ ವಿಶೇಷ. ಅವರು ಎಷ್ಟು ಸೊಗಸಾಗಿ ಬರೆಯುತ್ತಿದ್ದರು ಎಂದರೆ ಅವರ ಕೈ ಬರಹವನ್ನೇ ಮುದ್ರಣ ಲಿಪಿಗೆ ಬಳಸಿಕೊಳ್ಳಬೇಕಿತ್ತು ಎಂಬಷ್ಟರ ಮಟ್ಟಿಗೆ. ಶುಭ್ರ ಉಡುಗೆ-ತೊಡುಗೆ, ಸರಳ ಬದುಕು ಅವರದಾಗಿತ್ತು. ಋಷಿಗಳಂತೆ ಶಿಖೆ ಕಟ್ಟಿ ಗಡ್ಡ ಬಿಟ್ಟುಕೊಂಡಿರುತ್ತಿದ್ದರು. ಋಷಿಗಳು ಹೇಗಿರುತ್ತಾರೆ ಎಂದು ಕೇಳಿದರೆ ಊರಲ್ಲಿ ಎಲ್ಲರೂ ರಾಮಚಂದ್ರ ಶರ್ಮರಂತೆ ಎಂದು ತೋರಿಸುತ್ತಿದ್ದರು. ಅವರು ಆಶುಕವಿಗಳು. ಹಾಡು ಬರೆಯುತ್ತಿದ್ದರು. ವೇದಾಂತ ಸಾರಸಂಗ್ರಹವಾದ ಹಾಡು ಅವರಿಂದ ಹೊರಹೊಮ್ಮುತ್ತಿತ್ತು ಎಂದು ಉಮಾಕಾಂತ ಭಟ್ಟರು ನೆನಪಿಸಿಕೊಳ್ಳುತ್ತಾರೆ. ಪ್ರಾಯಃ ಇವರ ಪ್ರಭಾವದಿಂದಲೇ ಬಾಲ್ಯದಲ್ಲಿ ಸಂಸ್ಕೃತ ಪ್ರೀತಿ, ಕವಿಹೃದಯ ಉಮಾಕಾಂತರಲ್ಲಿ ಅರಳಿರಬಹುದು. ಇವರ ಮನೆಯಲ್ಲಿ ಜನರ ಬಳಕೆ ಹೆಚ್ಚು. ಯಕ್ಷಗಾನದವರೂ, ಬೇರೆ ಬೇರೆ ವಿದ್ವಾಂಸರೂ ಆಗಾಗ ಬರುತ್ತಿದ್ದರು. ಅವರೆಲ್ಲ ಬಂದು ಮಧ್ಯದ ಒಳಗೆ ಕುಳಿತು ಬೇರೆ ಬೇರೆ ವಿಷಯಗಳ ಕುರಿತಂತೆ ಚರ್ಚೆ ಮಾಡುತ್ತಿದ್ದರು. ಆಗಾಗ ಪ್ರಶಂಸೆ ನಿಂದೆಗಳೂ ಇರುತ್ತಿದ್ದವು. ಆ ಮಧ್ಯದ ಕೋಣೆಗೆ ‘ಪರನಿಂದಾ ಚೌಕ’ ಎಂದು ಕೃಷ್ಣಭಟ್ಟರು ಅಭಿಮಾನದ ಹೆಸರಿಟ್ಟಿದ್ದರು. ಆಗೆಲ್ಲ ಅಲ್ಲೇ ಕುಳಿತು ಆಲಿಸುತ್ತಿದ್ದ ಮಕ್ಕಳು ಅರಿವಿನ ಬುತ್ತಿಯನ್ನು ಕಟ್ಟಿಕೊಳ್ಳುತ್ತಿದ್ದರು. ರಾತ್ರಿ ಬಹುಹೊತ್ತಿನವರೆಗೆ ಚರ್ಚೆ-ವಿಚಾರ ನಡೆಯುತ್ತಿತ್ತು. ಆಗಾಗ ಚಹಾ-ತಿಂಡಿ. ಅಂದಿನ ಆ ಪ್ರಭಾವವನ್ನು ಇಂದಿಗೂ ಉಮಾಕಾಂತ ಭಟ್ಟರಲ್ಲಿ ಗುರುತಿಸಬಹುದಾಗಿದೆ.

 

ಮೊದಲ ಅರ್ಥ – ಮೊದಲ ಆಟ – ಮೊದಲ ಪರೀಕ್ಷೆ

 

ಸಾಮಾನ್ಯವಾಗಿ ಚಿಕ್ಕಮಕ್ಕಳನ್ನು ಯಾವುದೇ ತಾಳಮದ್ದಲೆ ಅಥವಾ ಯಕ್ಷಗಾನಕ್ಕೆ ಕರೆದುಕೊಂಡು ಹೋಗುತ್ತಿರಲಿಲ್ಲ. ಏಕೆಂದರೆ ‘ಅವರಿಗೆ ಆಸಕ್ತಿ ಇಲ್ಲದೆ ನಿದ್ರಿಸುತ್ತಾರೆ’ ಎಂದು. ಆದರೆ ನಾನು ಮೊದಲು ಕಂಚಿಕೈ ತಾಳಮದ್ದಲೆಗೆ ಹೋದೆ. ಆದರೆ ಆ ಹೊತ್ತು ನಾನು ನಿದ್ರಿಸಿದ್ದು ಅರ್ಧ ಗಂಟೆ ಮಾತ್ರ. ಇದನ್ನು ಗಮನಿಸಿದ ತಂದೆಯವರು ಆನಂತರ ಬೇರೆ ಬೇರೆ ತಾಳಮದ್ದಲೆಗೂ ನನ್ನನ್ನು ಕರೆದುಕೊಂಡು ಹೋಗಲು ಸಮ್ಮತಿಸಿದರು. ನಾಲ್ಕನೆಯ ತರಗತಿಯಲ್ಲಿರುವಾಗ ತಾಳಮದ್ದಲೆಯ ಅರ್ಥ ಹೇಳಿದ್ದು ಮೊದಲನೆಯ ಬಾರಿ. ಭೀಷ್ಮವಿಜಯದ ಸುಕೇತು ರಾಜ. ಆಗ ಅನೇಕ ಹಿರಿಯರಿಂದ ಮೆಚ್ಚುಗೆ ಪಡೆದಿದ್ದೆ ಎಂದು ಉಮಾಕಾಂತ ಭಟ್ಟರು ಹಸಿ ಹಸಿಯಾಗಿ ನೆನಪಿಸಿಕೊಳ್ಳುತ್ತಾರೆ. ಗಣ್ಯರಾದ ಅನಂತ ಹೆಗಡೆ ಕಾಗೇರಿಯವರು ಇದನ್ನು ಬಹುಕಾಲ ಹೇಳಿ ಹೇಳಿ ಆನಂದಿಸುತ್ತಿದ್ದರು. ಆನಂತರ ಒಂದು ದಿನ ಯಕ್ಷಗಾನಕ್ಕೂ ತಂದೆಯವರ ಜೊತೆ ಹೋದ ಇವರು ಪೂರ್ಣ ಆಟ ನೋಡಿದರು. ಆ ಆಟ ಶಿರಸಿಯ ಸಮೀಪದ ಕಾನಸೂರಿನಲ್ಲಿ ನಡೆದಿತ್ತು. ಅಲ್ಲಿ ಎರಡು ಪ್ರಸಂಗಗಳು. ಮೊದಲೆಲ್ಲ ರಾತ್ರಿ ಇಡೀ ಎರಡು ಪ್ರಸಂಗಗಳು ಇದ್ದರೂ ಒಂದು ಸೂತ್ರ ಇರುತ್ತಿತ್ತು. ಈಗಿನಂತೆ ಅಲ್ಲ. ಅಂದಿನ ಪ್ರಸಂಗ ಕೀಚಕ ವಧೆ-ಉತ್ತರ ಗೋಗ್ರಹಣ. ಕೆರೆಮನೆ ಮೇಳದ ಮಹಾನ್ ಕಲಾವಿದರಿಂದ ಕೂಡಿದ ಅಪೂರ್ವ ಆಟ ಅದಾಗಿತ್ತು. ಈ ಆಟದಲ್ಲಿಯೂ ಕೂಡ ಬಾಲಕ ಉಮಾಕಾಂತ ನಿದ್ರಿಸಲಿಲ್ಲ. ಹಾಗಾಗಿ ಯಕ್ಷಗಾನ ನೋಡುವ ಅವಕಾಶವು ಹೇರಳವಾಗಿ ದೊರೆಯಿತು. ಅಂದಿನಿಂದ ಯಕ್ಷಗಾನದ ಗಂಧ ಇವರನ್ನು ಗಾಢವಾಗಿ ಆವರಿಸಿತು. ಈ ಎಲ್ಲ ಸಂದರ್ಭಗಳಲ್ಲಿ ಇವರಿಗೆ ಯಕ್ಷಗಾನದ ಅತ್ಯುತ್ಕೃಷ್ಟ ಪ್ರದರ್ಶನಗಳು ನೋಡುವುದಕ್ಕೆ ಲಭ್ಯವಾದವು. ಅಲ್ಲದೆ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಿದ್ದರು. ಶಾಲಾ ಅಭ್ಯಾಸದಲ್ಲೂ ಮುಂದೆ ಇದ್ದುದರಿಂದ ಯಕ್ಷಗಾನ-ತಾಳಮದ್ದಲೆಗಳಲ್ಲಿ ಭಾಗವಹಿಸುವ ಅವಕಾಶವೂ ಒದಗುತ್ತಿತ್ತು.

 

ಈ ರೀತಿಯಲ್ಲಿ ಶಾಲಾ ಅಭ್ಯಾಸದ ಜೊತೆ ಸಾಂಸ್ಕೃತಿಕ ಗಂಧ ಸೇರಿ ಹೆಚ್ಚು ಸಂಪನ್ನವಾದ ಪ್ರತಿಭೆ ರೂಪು ಪಡೆಯಿತು. ಬಾಲ್ಯ ಮತ್ತು ಪರಿಸರ ಒಂದರ್ಥದಲ್ಲಿ ಸೂಕ್ತ ಸಂಸ್ಕಾರವನ್ನೂ, ವ್ಯಕ್ತಿತ್ವದ ಮುಂಧೋರಣೆಯನ್ನೂ ಒದಗಿಸಿದವು.

ಮೈಸೂರಿಗೆ

ಇವರ ಸೋದರಮಾವ ಸೋಮಸಾಗರದ ಡಿ. ಎಸ್. ಭಟ್ ಎಂಬ ವಿದ್ವಾಂಸರು ಯಡಳ್ಳಿ ಶಾಲೆಯ ಅಧ್ಯಾಪಕರಾಗಿ ಇದ್ದವರು ಕೃಷ್ಣಭಟ್ಟರಲ್ಲಿ ಇವರ ಉನ್ನತ ಶಿಕ್ಷಣದ ಬಗೆಗೆ ಪ್ರಸ್ತಾಪಿಸಿದರು. ಆಗ ‘ಸುರಸರಸ್ವತಿ ಸಭಾ’ದ ರಾಜ್ಯಮಟ್ಟದ ಸಂಸ್ಕೃತ ಪರೀಕ್ಷೆ ಶೃಂಗೇರಿ ಮಠದ ಆಶ್ರಯದಲ್ಲಿ ನಡೆಯುತ್ತಿತ್ತು. ಅದರಲ್ಲಿ ಇವರು ಪ್ರಥಮಾ, ದ್ವಿತೀಯಾ, ತೃತೀಯಾ, ತುರೀಯಾ, ಪ್ರವೇಶಿಕಾ ಈ ಎಲ್ಲ ಪರೀಕ್ಷೆಗಳನ್ನು ಪಾಸು ಮಾಡಿದರು. ಆ ಸಂದರ್ಭ ಹೈಸ್ಕೂಲಿನಲ್ಲೂ ಸಂಸ್ಕೃತ ವಿಷಯ ಆಯ್ಕೆ ಮಾಡಿಕೊಂಡು ವ್ಯಾಸಂಗ ಮುಂದುವರಿಯಿತು. ಆಗ ಇವರೊಬ್ಬರಿಗೇ ಕಡತೋಕಾದ ಆರ್. ಆರ್. ಭಟ್ ಎಂಬ ಹೆಡ್ ಮಾಸ್ಟರ್‌ರು ಸಂಸ್ಕೃತ ವಿಷಯವನ್ನು ಮಂಜೂರಿ ಮಾಡಿಸಿ ತಂದು ಅಭ್ಯಾಸಕ್ಕೆ ಅನುವು ಮಾಡಿಕೊಟ್ಟಿದ್ದು ವಿಶೇಷ. ಹೀಗೆ ಓದುತ್ತಲೇ ಎಸ್.ಎಸ್.ಎಲ್.ಸಿ. ಯಲ್ಲಿ ರಾಜ್ಯಕ್ಕೆ 492 ನೇ ರ್‍ಯಾಂಕ್ ಪಡೆದರು. 20 ಅಂಕಗಳಿಂದ 10 ನೇ ರ್ಯಾಂಕ್ ತಪ್ಪಿತು. ಸ್ವಲ್ಪ ಹೆಚ್ಚು ಪರಿಶ್ರಮ ಹಾಕಿದ್ದರೆ ಖಂಡಿತಾ ರ್ಯಾಂಕ್ ಬರುತ್ತಿದ್ದರಂತೆ. ಆನಂತರ ಡಿ. ಎಸ್. ಭಟ್ಟರು ಹಾಗೂ ಇವರ ತಂದೆ ಕೃಷ್ಣಭಟ್ಟರು ಇವರನ್ನು ಹಾಗೂ ಕಾಗೇರಿ ಶಿವರಾಮರನ್ನು ಹೆಚ್ಚಿನ ಅಭ್ಯಾಸಕ್ಕಾಗಿ ಮೈಸೂರಿಗೆ ಕರೆದುಕೊಂಡು ಹೋದರು. ಪೂಜ್ಯ ಶ್ರೀರಾಮಭದ್ರಾಚಾರ್ಯರಲ್ಲಿ ಇವರನ್ನು ವಿದ್ವಾಂಸರನ್ನಾಗಿ ಮಾಡಿ ಎಂದು ವಿನಂತಿಸಿ ಬಿಟ್ಟು ಬಂದರು.

 

ಅದು 1974 ರ ಕಾಲ. ತನ್ನ ಊರನ್ನು ಬಿಟ್ಟು ಬೇರೆ ಊರಿಗೆ ಬಂದ ಹೊಸ ಅನುಭವ. ಮೈಸೂರಿನ ಸಂಸ್ಕೃತ ಮಹಾವಿದ್ಯಾಲಯಕ್ಕೆ ಸೇರಿದರು. ಜೊತೆಜೊತೆಗೆ ಪಿ.ಯು.ಸಿ. ಮೊದಲಾದ ಅಧ್ಯಯನವೂ ಒದಗಿತು. ಆಗ ಒಂದೆಡೆ ಸಂಸ್ಕೃತಾಧ್ಯಯನ, ಇನ್ನೊಂದೆಡೆ ಕಾಲೇಜು ಶಿಕ್ಷಣ. ‘ಗುರುಕುಲ ರೀತ್ಯಾ ಅಭ್ಯಾಸ’ ಒಂದು ಅಪೂರ್ವ ಯೋಗ ಎಂದು ನಂಬಿದ ಇವರಿಗೆ ಬೆಳಿಗ್ಗೆ ಮಹಾವಿದ್ವಾಂಸರಾದ ಛಾಯಾಪತಿಗಳಿಂದ, ಸಂಜೆ ರಾಮಭದ್ರಾಚಾರ್ಯರಿಂದ ಹಾಗೂ ಮಧ್ಯೆ ಚಂದ್ರಶೇಖರ ಭಟ್ಟರಿಂದ ಪಾಠಗಳು ನಡೆಯುತ್ತಿದ್ದವು. ಕಾಲೇಜಿನಲ್ಲಿ ಅಪಾರ ಅನುಭವದ ಅಧ್ಯಾಪಕರಿಂದಲೇ ಕ್ಲಾಸು ನಡೆಯುತ್ತಿತ್ತು. ಸುಮಾರು ಏಳು ವರ್ಷಗಳ ಕಾಲ ಮೈಸೂರಿನ ಅಭ್ಯಾಸ ಜೀವನಕ್ಕೆ ಶ್ರೇಷ್ಠ ದರ್ಶನ ನೀಡಿತ್ತಲ್ಲದೇ, ಇವರ ವಿದ್ವತ್ತಿನ ವಿಕಾಸಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿತ್ತು.

 

ಇವರು ಸಂಸ್ಕೃತ ಸಾಹಿತ್ಯ ಪ್ರವೇಶದ ಸಮಯದಲ್ಲೇ ವಾಕ್ಯಾರ್ಥ ಮಾಡಿದ ವಿದ್ಯಾರ್ಥಿಯಾಗಿದ್ದರು. ಅದನ್ನು ನೋಡಿದ ಹಿರಿಯ ವಿದ್ವಾಂಸ ಜಿ. ವಿಷ್ಣುಮೂರ್ತಿಭಟ್ಟರು ಮೆಚ್ಚಿ ಮಾರನೇ ದಿನವೇ ತರ್ಕಸಂಗ್ರಹದ ಒಂಭತ್ತು ವ್ಯಾಖ್ಯಾನದ ಪುಸ್ತಕ ನೀಡಿದರು. ಇದು ಸಂಸ್ಕೃತ ಅಭ್ಯಾಸಕ್ಕೆ ಉತ್ತಮ ಪ್ರೇರಣೆಯನ್ನು ಒದಗಿಸಿತು. ಸಂಸ್ಕೃತದಲ್ಲಿ ಹೆಚ್ಚು ಕೆಲಸ ಮಾಡಲು ಅವ್ಯಕ್ತವಾಗಿ ಇವರನ್ನು ಒತ್ತಾಯಿಸಿತು. ಆದುದರಿಂದ ರಾಮಭದ್ರಾಚಾರ್ಯರಲ್ಲಿ ನ್ಯಾಯಶಾಸ್ತ್ರದ ವಿದ್ಯಾರ್ಥಿಯಾಗಲು ಸಂಕಲ್ಪಿಸಿ ಅವರಲ್ಲಿ ನಿವೇದಿಸಿಕೊಂಡರು. ಅದನ್ನು ಒಪ್ಪಿದ ಅವರು ಇವರನ್ನು ಸ್ವೀಕರಿಸಿ ವಿದ್ಯಾದಾನ ಮಾಡಿದ್ದು ಇವರ ಜೀವನದ ಅತ್ಯುನ್ನತ ಭಾಗ್ಯ. ಆಗ ಅವರಾಡಿದ ಮಾತುಗಳನ್ನು ಉಮಾಕಾಂತ ಭಟ್ಟರು ಹೀಗೆ ಸ್ಮರಿಸುತ್ತಾರೆ-
“ಅಧ್ಯಯನ ಮಾಡಿದ ಹಾಗೂ ಮಾಡದ ಎರಡೂ ರೀತಿಯ ಗ್ರಂಥಗಳು ನಿನಗೆ ಒಂದೇ ರೀತಿ ಅರ್ಥ ಆಗುವಂತೆ ವ್ಯುತ್ಪತ್ತಿ ಬರಿಸುವ ಪ್ರಯತ್ನ ಮಾಡ್ತೇನಪ್ಪಾ !” ಎಂದರು ಎಂದು. ಅದರಂತೆ ಅವರು ವಿಚಾರವನ್ನು ನೈಸರ್ಗಿಕವಾಗಿ ಬೆಳೆಸಿದರು. ನಡೆ-ನುಡಿಗಳ ಮರ್ಮವನ್ನು ತಿಳಿಸಿಕೊಟ್ಟರು. ಇದು ಅವರಿಗೆ ಅನೂಹ್ಯವಾದ ಪ್ರೌಢಿಮೆ ನೀಡಿತು. ಅಷ್ಟು ಮಾತ್ರವಲ್ಲದೆ ಇವರು ಸಂಸ್ಕೃತ ಕಾಲೇಜಿನಲ್ಲಿ ಹಲವು ವಿದ್ವನ್ಮಣಿಗಳಿಗೆ ಪ್ರೀತಿಯ ಶಿಷ್ಯರಾಗಿದ್ದರು. ಅವರಿಂದ ಪ್ರಭಾವಿತರಾಗಿದ್ದರು.

 

ಕಾಲೇಜಿನಲ್ಲಿ ಬಿ.ಎ. ಪರೀಕ್ಷೆಯಲ್ಲಿ 5ನೇ ರ್ಯಾಂಕ್ ಪಡೆದು ಉತ್ತೀರ್ಣರಾಗಿ, ಇಂಗ್ಲಿಷ್ ಎಂ.ಎ. ಮಾಡಲು ಮುಂದಾದರು. ಈ ಕಾಲದಲ್ಲಿ ಸಂಸ್ಕೃತ ಶಾಸ್ತ್ರಾಭ್ಯಾಸದ ದಾರಿ ಮುಂದುವರಿಯಿತು. ಜೊತೆಯಲ್ಲಿ ಕನ್ನಡ ಹಾಗೂ ಸಂಸ್ಕೃತದಲ್ಲಿ ಪದ್ಯ ಬರೆಯುವ ತುಡಿತವೂ ಹೆಚ್ಚಾಯಿತು. ಅದೂ ಎಳೆವೆಯ ಪ್ರಭಾವವೇ ಇರಬಹುದು. ಇಲ್ಲಿ ಅಂದಿನ ಬಾಬು ರಾಮಚಂದ್ರ ಶರ್ಮರನ್ನು ನೆನಪಿಸಿಕೊಳ್ಳೋಣ. ಒಂದು ದಿನ ಇವರಿಗೆ ಸಿಗಬೇಕಾದ ಭಾಷಣದ ಅವಕಾಶ ತಪ್ಪಿಸಲಾಯಿತು. ಅದನ್ನು ಪ್ರತಿಭಟಿಸಲು ಮುಖ್ಯವಾಗಿ ಒಂದು ಪದ್ಯ ಬರೆದು ವಿವರಿಸಿದರು. ಅದು ಮುಮ್ಮಡಿ ಕೃಷ್ಣರಾಜರ ಜಯಂತಿಯ ವೇದಿಕೆ ಆಗಿತ್ತು. ಇದನ್ನು ಪ್ರಸ್ತುತ ಪಡಿಸಿದಾಗ ಮೆಚ್ಚಿದ ಆ ಸಭೆಯ ಘನ ಅಧ್ಯಕ್ಷರಾದ ವಿದ್ವಾಂಸರು ‘ಕೋಯಂ ಆಶುಕವಿಃ ಆಗಮ್ಯತಾಂ’ ಎಂದು ಕರೆದರು. ಐದು ರೂಪಾಯಿ ಬಹುಮಾನ ನೀಡಿದರು. ಇದುವೇ ‘ಛಂದಸ್ವತೀ’ ಹುಟ್ಟಿನ ಮೂಲಕ ರಾಷ್ಟ್ರದ ಗಮನ ಸೆಳೆಯಲು ಕಾರಣವಾಗಿರಬಹುದು. ಈಗ ನಾವು ನೋಡುತ್ತಿರುವ ಕವಿ ಉಮಾಕಾಂತ ಭಟ್ಟರು ಒಬ್ಬಂಟಿಯಾಗಿ ಎಲ್ಲ ಖರ್ಚನ್ನು ಭರಿಸುತ್ತ ಸಂಸ್ಕೃತ ವಾಙ್ಮಯ ಲೋಕದಲ್ಲಿ ‘ಛಂದಸ್ವತೀ’ ಎಂಬ ಷಾಣ್ಮಾಸಿಕ ಪದ್ಯ ಪತ್ರಿಕೆಯನ್ನು ಪ್ರಕಟ ಮಾಡುತ್ತ ಬಂದ ಸಾಹಸಿ! ಮಹತ್ತ್ವದ ಒಂದು ಘಟನೆ ಮಹಾಸಾಹಸಕ್ಕೆ ನಾಂದಿಯಾಗದೇ ಇದ್ದೀತೇ? ಕಾಲೇಜು ವಿದ್ಯಾಭ್ಯಾಸದಲ್ಲಿ ಎಷ್ಟೇ ಪ್ರಗತಿಯಲ್ಲಿದ್ದರೂ, ಪ್ರತಿಭಾಸಂಪನ್ನರಾಗಿದ್ದರೂ ಮನದ ತುಂಬಾ ಸಂಸ್ಕೃತ, ಶಾಸ್ತ್ರಗಳೇ ವ್ಯಾಪಿಸಿದ್ದರಿಂದ ಇಂಗ್ಲೀಷಿನಲ್ಲಿ ಉತ್ತಮ ಅಂಕ ಗಳಿಸಿದರೂ ಇಂಗ್ಲೀಷ್ ಎಂ.ಎ. ಮಾಡುವಾಗ ಆಸಕ್ತಿ ಹೆಚ್ಚಲಿಲ್ಲ. ಯು.ಆರ್. ಅನಂತಮೂರ್ತಿ, ಪೋಳಂಕಿ ರಾಮಮೂರ್ತಿ ಮೊದಲಾದವರು ಪಾಠಮಾಡಿದರೂ ಪೂಜ್ಯ ಶ್ರೀರಾಮಭದ್ರಾಚಾರ್ಯರ ಪಾಠವೇ ಶಾಶ್ವತ ಸ್ಥಾನ ಗಳಿಸಿಕೊಂಡಿತು. ಕ್ರಮೇಣ ಇಂಗ್ಲೀಷ್ ಬಾಂಧವ್ಯ, ಮೋಹ, ಆಸಕ್ತಿ ಕಡಿಮೆಯಾಯಿತು.

 

ಬಾಲ್ಯದ ಸಂಕೋಚ, ತುಸು ಹಠ, ತನ್ನನ್ನು ತಾನು ತೋರಿಸಿಕೊಳ್ಳುವ ಮನಸ್ಸು ಎಲ್ಲವೂ ಮೈಸೂರಿನಲ್ಲಿ ಪೊರೆ ಕಳಚಿ ಧೈರ್ಯ-ವಿನಮ್ರತೆ, ಸಾಧನೆಗಾಗಿನ ನಡೆ, ಸಹಜತೆಯ ಔಚಿತ್ಯಗಳು ಹೆಚ್ಚೆಚ್ಚು ಸ್ಫುಟವಾಗಿ ಇವರಿಗೆ ಮನವರಿಕೆಯಾದವು. ತೀಕ್ಷ್ಣ ಪ್ರತಿಕ್ರಿಯೆ ನೀಡುವ ಸ್ವಭಾವ ಆಗ ಸ್ವಲ್ಪ ಕಡಿಮೆಯಾಯಿತು. ಒಮ್ಮೆ ಇವರು ಸಂಸ್ಕೃತ ಕಾಲೇಜಿನಲ್ಲಿ ಸಹಪಾಠಿಯ ಜೊತೆ ಅನುಚಿತ ಶಬ್ದ ಪ್ರಯೋಗ ಮಾಡಿದಾಗ ತೀವ್ರ ವಿಚಾರಣೆಗೆ ಒಳಪಟ್ಟರು. ಆಗ ರಾಮಭದ್ರಾಚಾರ್ಯರು ಹಿತವಚನ ತಿಳಿಸಿದ ರೀತಿ – “ಇನ್ನೊಬ್ಬರಿಗೆ ಉದ್ವೇಗ ಉಂಟಾಗುವಂತಹ ಭಾಷೆ ಬಳಸಬಾರದು. ಉಡುಪು ಧರಿಸಬಾರದು. ಇನ್ನೊಬ್ಬರಲ್ಲಿ ಭಾವ ವಿಕಾರವಾಗುವಂತೆ ವರ್ತಿಸಬಾರದು. ನಡವಳಿಕೆ ಶುದ್ಧವಾಗಿರಬೇಕು” ಎಂದು. ಈ ನಾಲ್ಕೂ ಮಾತುಗಳು ಎಂದೂ ಮರೆಯದ ಮಾತುಗಳು. ಗುರುಗಳ ಹಿತೋಕ್ತಿಯಾದ ಅವುಗಳನ್ನು ಇವರು ಇಂದಿಗೂ ಪಾಲಿಸುತ್ತಲಿದ್ದಾರೆ. ಮೈಸೂರಿನ ಆ ಸಾಂಸ್ಕೃತಿಕ ಪರಿಸರದ ಶ್ರೀಮನ್ಮಹಾರಾಜ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಪ್ರಾಚೀನ, ನವೀನ ನ್ಯಾಯಶಾಸ್ತ್ರಗಳ ಅಧ್ಯಯನವನ್ನು ಪೂರ್ಣಗೊಳಿಸಿ ವಿದ್ವತ್‌ ಪದವಿಯನ್ನು ಪಡೆದರು. ವಿದ್ವಾನ್ ಉಮಾಕಾಂತ ಭಟ್ಟರಾದರು.

ಅಧ್ಯಾಪಕರಾಗಿ

1981ರಲ್ಲಿ ವಿದ್ಯಾಭ್ಯಾಸ ಪೂರೈಸುತ್ತಿರುವ ಹೊತ್ತಿಗೆ ಜೈಪುರದಲ್ಲಿ ನಡೆದ ರಾಷ್ಟ್ರೀಯ ವಾಕ್ಪ್ರತಿಯೋಗಿತಾ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಪಡೆದರು. ಆ ಸಂತೋಷವನ್ನು ತನ್ನ ಗುರುಗಳಾದ ಪೂಜ್ಯ ರಾಮಭದ್ರಾಚಾರ್ಯರಿಗೆ ಸಮರ್ಪಿಸಿ ಆಶೀವಾದ ಪಡೆಯಲು ಮೇಲುಕೋಟೆಗೆ ತೆರಳಿದರು. ಆಗ ಅತ್ಯಂತ ವಾತ್ಸಲ್ಯದಿಂದ ಆಶೀರ್ವದಿಸಿದ ಅವರು ಎರಡು ದಿನ ಅಲ್ಲೇ ಉಳಿಸಿಕೊಂಡು ಪಾಠ ಮಾಡಿದರು. ಮೇಲುಕೋಟೆಯ ಸಂಸ್ಕೃತ ಸಂಸತ್ತಿನಲ್ಲಿ ಒಂದು ಸಂಶೋಧಕರ ಹುದ್ದೆ ಖಾಲಿ ಇರುವುದನ್ನು ಶ್ರೀಲಕ್ಷ್ಮೀತಾತಾಚಾರ್ಯರಿಂದ ತಿಳಿದು, ಸೇರಲು ಸೂಚಿಸಿದರು. ಅಂತೆಯೇ ತಂದೆ-ತಾಯಿಗಳ ಆಶೀರ್ವಾದ ಪಡೆದು ಮೇಲುಕೋಟೆಯ ಸಂಸ್ಕೃತ ಸಂಶೋಧನ ಸಂಸತ್ತಿನ ಸಂಶೋಧಕರಾದರು. 1984ರಲ್ಲಿ ಸರಕಾರಿ ಸಂಸ್ಕೃತ ಕಾಲೇಜಿನ ಪ್ರಾಚೀನನ್ಯಾಯ ಪಂಡಿತ ಹುದ್ದೆಗೆ ನಿಯುಕ್ತರಾಗಿ ಅಲ್ಲಿಯೆ ಮುಂದೆ ಪ್ರಾಂಶುಪಾಲರಾಗಿ ಮೂವತ್ತಮೂರು ವರ್ಷಗಳ ಸೇವೆಯನ್ನು ಮಾಡಿರುತ್ತಾರೆ.

 

ಇಲ್ಲಿನ ಮೊದಲ 7-8 ವರ್ಷಗಳು, ಪೂಜ್ಯ ರಾಮಭದ್ರಾಚಾರ್ಯರೂ ಮೇಲುಕೋಟೆಯ ಸಂಸ್ಕೃತ ಅಕಾಡೆಮಿಯಲ್ಲಿ ಹಿರಿಯ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಅವರ ಸಾಮೀಪ್ಯ ಹಾಗೂ ಅವರಿಂದ ಪಾಠ ಕೇಳುವ ಸುಯೋಗ ಲಭ್ಯವಾಗಿ ಇವರ ಅಧ್ಯಯನ ಮತ್ತು ಅಧ್ಯಾಪನ ನಿರಾತಂಕವಾಗಿ ಸಾಗುತ್ತ ನಡೆಯಿತು. ಸ್ವತಃ ಅಧ್ಯಯನವಿಲ್ಲದೇ ಎಂದೂ ಅಧ್ಯಾಪನಕ್ಕೆ ಇಳಿಯಲಾರೆ ಎಂಬ ವ್ರತ ಇಂದಿಗೂ ಇವರಲ್ಲಿ ಇದೆ. ಪಾಠಕ್ರಮದಲ್ಲಿ ಇವರಿಗೆ ರಾಮಭದ್ರಾಚಾರ್ಯರ ಕ್ರಮ-ನಡೆಯೇ ಆಧಾರ, ಪೂಜ್ಯ. ಆದರೆ ಅವರಂತೆ ಸರಳ-ಸುಲಭ ಕ್ರಮ ತನ್ನದಾಗಲಿಲ್ಲ ಎಂಬ ಕೊರಗು ಉಮಾಕಾಂತರಿಗೆ ಇದೆ. ಇವರ ಪಾಠಕ್ರಮವನ್ನು ತಿಳಿಯುವ ಪ್ರಯತ್ನ ಮಾಡಿದ್ದೇನೆ. ಆಗ ನನಗೆ ಇವರ ಪಾಠಕ್ರಮದಲ್ಲಿ ಗಾಬರಿಗೆಡಿಸುವ ರೀತಿ ಇಲ್ಲ. ಒಂದೊಂದೇ ಪದವನ್ನು ಲೋಕಯುಕ್ತಿಗಳನ್ನೂ, ವಿಸ್ತಾರವಾದ ಆಧಾರಗಳನ್ನೂ ನೀಡುತ್ತ ಬಿಡಿಸಿ ಹೇಳುವ ಕ್ರಮವೇ ಇದೆ. ಇವರು ಜಟಿಲ ವಿಚಾರಗಳನ್ನು ಸರಳೀಕೃತಗೊಳಿಸುವ ಉದ್ದೇಶಕ್ಕೆ ಬದ್ಧರಾಗಿಯೇ ಇರುತ್ತಾರೆ. ಹಾಗಾಗಿ ಹಿಂದಿನ ಗುರುಪರಂಪರೆಯನ್ನೇ ಮುಂದುವರಿಸಿದ್ದಾರೆ ಎಂದು ಸ್ಪಷ್ಟವಾಯಿತು. ಸ್ವಭಾವತಃ ಗಾಂಭೀರ್ಯ ಇದ್ದುದರಿಂದ ಅವರಿಗೆ ಈ ನಿರೀಕ್ಷೆ ಹುಟ್ಟಿದ್ದಿರಬೇಕು.

 

ಇವರ ಅಂತೇವಾಸಿ ಶಿಷ್ಯರು ದೇಶದ ಹಲವು ಕಡೆಗಳಲ್ಲಿ ಗೌರವಾರ್ಹವಾದ ಸ್ಥಾನದಲ್ಲಿದ್ದಾರೆ. ಋತ ಜೀವನ ಕ್ರಮದಲ್ಲಿದ್ದಾರೆ. ಅವರಲ್ಲಿ ಮೈಸೂರಿನ ಶ್ರೀಮನ್ಮಹಾರಾಜಾ ಸಂಸ್ಕೃತ ಕಾಲೇಜಿನ ನವೀನನ್ಯಾಯ ಪ್ರಾಧ್ಯಾಪಕರಾದ ಎಂ.ಎ. ಆಳ್ವಾರ್‌ರಾಗಲೀ, ಅಹಮದಾಬಾದಿನ ಸಂಸ್ಕೃತ ಮಹಾವಿದ್ಯಾಲಯದ ಪ್ರಾಚಾರ್ಯರಾದ ಬಿ.ವಿ.ರಾಮಪ್ರಿಯರಾಗಲೀ, ಆದಿಚುಂಚನಗಿರಿಯ ಸಂಸ್ಕೃತ ಮಹಾವಿದ್ಯಾಲಯದ ಅಧ್ಯಾಪಕರಾದ ಮಧುಸೂದನ ಅಡಿಗರಾಗಲೀ ಪ್ರಥಮ ಪಂಕ್ತಿಯಲ್ಲಿ ನನಗೆ ಕಂಡಿದ್ದಾರೆ. ಇವರಲ್ಲಿ ಅಡಿಗರು ತನ್ನ ಗುರುಗಳಾದ ಇವರನ್ನು ಭಾವಿಸಿ ಸಂಭ್ರಮಿಸಿ ಹೃದ್ಗತ ಹೇಳಿದ್ದನ್ನು ಹಾಗೇ ಅಕ್ಷರಕ್ಕಿಳಿಸುವೆ.

 

“ಶಾಸ್ತ್ರದ ಸಂಸ್ಕಾರವನ್ನೂ, ಶಾಸ್ತ್ರದ ಪ್ರೀತಿಯನ್ನೂ ನಮ್ಮಲ್ಲಿ ಬೆಳೆಸಿದರು, ಉಳಿಸಿದರು. ಯಾವ ವಿಷಯದಲ್ಲಿಯೂ ಅಸ್ಪಷ್ಟತೆಯಿರದಂತೆ ಪಾಠ ಮಾಡುತ್ತಿದ್ದರು. ಅರ್ಥವಾಗದೇ ಇರುವಾಗ ಕಳವಳಗೊಳ್ಳದ ಹಾಗೇ ಅದರ ಪ್ರತಿಪದವನ್ನು ಬಿಡಿಸುತ್ತಾ ಎಂದೂ ಮರೆಯದ ಹಾಗೆ ತಿಳಿಸುತ್ತಿದ್ದರು. ಅವರಿಗೆ ಕಾರಣಾಂತರದಿಂದ ಕ್ಲೇಶ ಅಥವಾ ಖೇದ ಉಂಟಾದರೆ ಅದನ್ನು ಮರೆಯಲು ವಿಶೇಷವಾಗಿ ಪಾಠವನ್ನೇ ಮಾಡುತ್ತಿದ್ದರು. ಅವರ ವಿದ್ಯಾಪ್ರೀತಿ ನಮ್ಮ ಶಾಸ್ತ್ರಸಂಸ್ಕಾರವನ್ನು ದೃಢಗೊಳಿಸಿತು. ಉಪಕ್ರಮಿಸಿದ ವಿಷಯ ಪೂರ್ಣ ಮನದಟ್ಟಾಗುವವರೆಗೆ ತನ್ನ ಸಹನೆ ಕಳೆದುಕೊಳ್ಳುವುದಿಲ್ಲ ಹಾಗೂ ಎಷ್ಟು ಗಂಟೆಗಳು ಸರಿಯಲಿ ಅದೇ ಉತ್ಸಾಹ ಅದೇ ಹುರುಪು. ನಾನಂತೂ ಪದವಿ ಪಡೆದ ಮೇಲೆಯೂ ಶಾಸ್ತ್ರಗಳ ವಿಷಯದಲ್ಲಿ ಏನೂ ತಿಳಿಯದ ಸ್ಥಿತಿಯಲ್ಲಿದ್ದೆ. ಅಂತಹ ನನ್ನನ್ನು ಈಗಿನ ಆತ್ಮವಿಶ್ವಾಸದ ವ್ಯಕ್ತಿಯನ್ನಾಗಿ, ಸಭೆ-ಸಮಾರಂಭಗಳಲ್ಲಿ ನಿರ್ಭೀತಿಯಿಂದ ವಿಷಯ ಪ್ರತಿಪಾದಿಸಬಲ್ಲವನನ್ನಾಗಿ ರೂಪಿಸಿದ ಗುರುಗಳು ಅವರು. ನನ್ನ ಭಾಷಾಶುದ್ಧಿಯನ್ನು, ಭಾವಶುದ್ಧಿಯನ್ನು ಹಾಗೂ ಬುದ್ಧಿಶುದ್ಧಿಯನ್ನೂ ಮಾಡಿ ಜೀವನದ ತೇಜೋವೃದ್ಧಿ ಮಾಡಿದವರು ಅವರೇ. ನನ್ನ ಪಾಠಪ್ರವಚನಗಳು ಅವರ ದಟ್ಟ ಪ್ರಭಾವದ ಛತ್ರದ ಆಶ್ರಯದಲ್ಲೇ ಆಕೃತಿ ಹಾಗೂ ಸ್ವರೂಪವನ್ನು ಪಡೆದಿವೆ” ಎಂದು. ಈ ಅಭಿಪ್ರಾಯವು ಶಿಷ್ಯನೊಬ್ಬನ ಪ್ರಾಮಾಣಿಕ ನುಡಿಚಿತ್ರವೇ ಆಗಿದೆ.

 

ಮೇಲುಕೋಟೆ ಹಾಗೂ ಇಲ್ಲಿಯ ಸಂಸ್ಕೃತ ವಿದ್ಯಾಲಯ ಎರಡೂ ನನ್ನ ಪಾಲಿಗೆ ಧ್ಯಾನಸ್ಥಳವೇ ಆಗಿದೆ. ಇಲ್ಲಿ ನನಗೆ ಸದಾ ಚೈತನ್ಯ ಸಿಗುತ್ತದೆ. ಅಭ್ಯಾಸಕ್ಕೆ, ಬರವಣಿಗೆಗೆ ಪ್ರೇರಣೆ ಹಾಗೂ ಸ್ಫೂರ್ತಿ ಸಿಗುತ್ತದೆ. ನನ್ನ ಕೆಲವು ಗ್ರಂಥ ರಚನೆಗಳಾಗಲೀ, ಸಾಂಸ್ಕೃತಿಕ ಕೃಷಿಯಾಗಲೀ ಪ್ರವರ್ಧಿಸಿದ್ದು ಇಲ್ಲಿಯೇ ಎಂದು ಉಮಾಕಾಂತರು ಅತೀವ ಅಭಿಮಾನ ವ್ಯಕ್ತಪಡಿಸುತ್ತಾರೆ. ಈ ಊರಿನಲ್ಲಿ ಆದರ ಅಭಿಮಾನ ಹಾಸುಹೊಕ್ಕಾಗಿದೆ. ಪಾಂಡಿತ್ಯಕ್ಕೆ ಉತ್ತಮ ಮನ್ನಣೆ ಇದೆ. ನನ್ನನ್ನು ಎಲ್ಲರೂ ಅತ್ಯಂತ ವಾತ್ಸಲ್ಯ ಹಾಗೂ ಗೌರವದಿಂದಲೇ ಉಪಚರಿಸಿದ್ದಾರೆ ಎಂದು ಪ್ರೀತಿಯಿಂದ ನುಡಿಯುತ್ತಾರೆ. ಇವರು ನಿವೃತ್ತರಾಗುವವರೆಗೂ ಸಹೋದ್ಯೋಗಿಗಳೊಡನೆ ಯಾವುದೇ ಮನಃಕ್ಲೇಶವನ್ನು ಹೊಂದದೆ ಎಲ್ಲರೊಡನೆ ಬೆರೆತಿದ್ದಾರೆ. ಅಧಿಕಾರಿಗಳು ಬಂದಾಗಲೂ ಅವರಿಗೆ ಕ್ರಮಬದ್ಧವಾದ ವಿವರಣೆ ನೀಡಿ ಸಂಸ್ಥೆಯ ಗೌರವ-ಮನ್ನಣೆಗಳು ಹೆಚ್ಚುವಂತೆ ನೋಡಿಕೊಂಡಿದ್ದಾರೆ. ವಸ್ತುತಃ ಇವರ ಸ್ವಭಾವಕ್ಕೆ ಸಂಸ್ಥೆಯ ಆಡಳಿತ, ಸರ್ಕಾರಿ ಕಛೇರಿಗಳಿಗೆ ಅಲೆದಾಟ ಇವುಗಳೆಲ್ಲ ಹೊಂದಿಬರದು. ಆದರೂ ಎಚ್ಚರಿಕೆಯಿಂದ ಜಾಣ್ಮೆಯಿಂದ ಪ್ರಾಂಶುಪಾಲರ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ.

 

ಮೇಲುಕೋಟೆ ಎಂಬ ಕ್ಷೇತ್ರವಂತೂ ಹಲವು ರೀತಿಯ-ಶಾಖೆಯ ಪಂಡಿತರ ಪಾಂಡಿತ್ಯದಿಂದ ರಾರಾಜಿಸುತ್ತಿದೆ. ಅಂತಹ ಪ್ರದೇಶದಲ್ಲಿ ಜಾಗೃತ ಮನಸ್ಸಿನಿಂದಲೇ ಸದಾ ಇರಬೇಕು. ಅಲ್ಲಿ ಪಂಡಿತರಿಗೆ ಉತ್ತಮ ಗೌರವವಿದೆ. ಊರಿನ ಅಥವಾ ವಿದ್ಯಾಲಯದ ಯಾವುದೇ ಸೂಕ್ಷ್ಮ ವಿವಾದ ಸಂಗತಿಗಳಲ್ಲಿ ಇವರೆಂದೂ ಭಾಗವಹಿಸಿದ್ದೇ ಇಲ್ಲ. ಹಾಗಾಗಿ ಇವರಿಗೆ ಯಾರೊಂದಿಗೂ ದ್ವೇಷವಿಲ್ಲ. ಎಲ್ಲರೂ ಇವರನ್ನು ತುಂಬು ಆದರ-ಅಭಿಮಾನದಿಂದ ಕಾಣುತ್ತಾರೆ. ಹಾಗಾಗಿಯೇ ವಿದ್ವಜ್ಜನರ ನಡುವೆ ಇವರು ಕಲಶಪ್ರಾಯರಾಗಿ ಕಾಣುತ್ತಿದಾರೆ. ನಿವೃತ್ತಿಯ ನಂತರವೂ ತನ್ನ ಪ್ರೀತಿಯ ಮೇಲುಕೋಟೆಯನ್ನು ತನ್ನ ಧ್ಯಾನಕ್ಷೇತ್ರ ಎಂದು ಭಾವಿಸಿಕೊಂಡಿದ್ದಾರೆ. ಮೇಲುಕೋಟೆಯ ಬಗ್ಗೆ ಇವರಿಗೆ ಎಷ್ಟು ಪ್ರೀತಿಯಿದೆ ಎನ್ನುವುದಕ್ಕೆ ಇವರ ಹೆಸರಿನ ಜೊತೆ ‘ಮೇಲುಕೋಟೆ’ ಸೇರಿಕೊಂಡಿರುವುದೇ ಸಾಕ್ಷಿ.

 

ಗೃಹಸ್ಥಧರ್ಮ

 

ಪತ್ನಿ ಸುನಂದಾಳನ್ನು ತನ್ನ ನಿಜವಾದ ಭಾಗ್ಯ ಎಂದೆನ್ನುವ ಇವರು ತನ್ನ ಹೆಂಡತಿಯಲ್ಲಿರುವ ಹೊಂದಾಣಿಕೆ ಹಾಗೂ ಜವಾಬ್ದಾರಿ ನಿರ್ವಹಿಸುವ ಕೌಶಲ, ತನ್ನ ಈ ಎಲ್ಲ ಯಶಸ್ಸಿಗೆ ಕಾರಣ ಎನ್ನುತ್ತಾರೆ. ಎಂದೆಂದಿಗೂ ಯಾವುದೇ ಬೇಡಿಕೆ ತೋರ್ಪಡಿಸದೆ ಇದ್ದುದನ್ನು ಆನಂದದಿಂದ ಸ್ವೀಕರಿಸಿ ಪ್ರೀತಿಯಿಂದ ಹಂಚುವ ಅಪೂರ್ವ ಶಕ್ತಿಯನ್ನು ಮೈಗೂಡಿಸಿಕೊಂಡವಳು. ಮೇಲುಕೋಟೆಗೆ ಬಂದಾಗ ತಮ್ಮಿಬ್ಬರಿಗೂ ರಾಮಭದ್ರಾಚಾರ್ಯರ ಕುಟುಂಬದಿಂದಲೇ ಆದ ಜೀವನದರ್ಶನ ಪರಮಶ್ರೇಷ್ಠವಾದದ್ದು ಎಂದು ನುಡಿಯುತ್ತಾರೆ. ಹಿರಿಯ ಮಗ ಜಯಂತ ಮಿತಭಾಷಿ, ಸೂಕ್ಷ್ಮಗ್ರಾಹಿ; ಕಿರಿಯ ಮಗ ರಘುರಾಮ ಸ್ನೇಹಮಯಿ ಹಾಗೂ ಭಾವಸ್ಪಂದೀ ಸ್ವಭಾವದವ. ಇಬ್ಬರೂ ಸಹ ಸಮಾಜದ ಓರೆಕೋರೆಗೆ ತಮ್ಮ ಮಿತಿಯಲ್ಲಿಯೇ ಸ್ಪಂದಿಸುವ ಸಹೃದಯೀ ಅಂತಃಕರಣದವರು. ಈ ದೃಷ್ಟಿಯಿಂದ ಇವರ ಗೃಹಸ್ಥಧರ್ಮ ಆದರ್ಶಮಯ ಹಾಗೂ ಸಂಪನ್ನವಾದುದು.

 

ತಾಳಮದ್ದಲೆ ಅರ್ಥಧಾರಿ

 

ವಿದ್ವತ್ ಮುಗಿಯುತ್ತಿದ್ದಂತೆ ಯಕ್ಷಗಾನ ತಾಳಮದ್ದಲೆಗಳಲ್ಲಿ ತೊಡಗಿಸಿಕೊಂಡರು. 1982 ರಲ್ಲಿ ಉದ್ಯೋಗಕ್ಕಾಗಿ ಮೇಲುಕೋಟೆಗೆ ಬಂದರು. ಯಕ್ಷಗಾನ ತಾಳ-ಕುಣಿತ ಅಭ್ಯಸಿಸಿದರು. ಮೈಸೂರಿನಲ್ಲಿ ಯಕ್ಷಗಾನ ಕಲಾಪ್ರತಿಷ್ಠಾನ ಸ್ಥಾಪಿಸಿ ಅಭ್ಯಾಸ ಮುಂದುವರಿಸಿದರು. ಮೇಲುಕೋಟೆ ಸರ್ಕಾರಿ ಸಂಸ್ಕೃತ ವಿದ್ಯಾಲಯದಲ್ಲಿ ವೃತ್ತಿ ಶುರುವಾಯ್ತು. ಈ ವೇಳೆಗಾಗಲೇ ಯಕ್ಷಗಾನದ ತಾಳಮದ್ದಲೆಯಲ್ಲಿ ಉತ್ತರಕನ್ನಡದ ಘಟ್ಟದ ಮೇಲಿನ ಭಾಗದಲ್ಲಿ ಭಾಗವಹಿಸುವಿಕೆ ಆರಂಭವಾಗಿತ್ತು. ಇವರ ತಂದೆಯವರು ಸಹ ಚಾಲ್ತಿಯ ಅಗ್ರಗಣ್ಯ ಕಲಾವಿದರಾಗಿದ್ದರು. ಹಾಗಾಗಿ ಇವರನ್ನೂ ಆಯೋಜಕರು ಕರೆಯುತ್ತಿದ್ದರು.

 

1992 ರ ಆಸುಪಾಸಿನಲ್ಲಿ ಕುಮಟಾ-ಹೊನ್ನಾವರದ ಕಾರ್ಯಕ್ರಮಗಳಿಗೆ ಬರತೊಡಗಿದರು. ಅಲ್ಲಿಂದ ಉಡುಪಿ-ಮಂಗಳೂರು ಕಡೆ ಹೊರಳುವಂತಾಯಿತು. ಹೇರಳವಾದ ಮಾಹಿತಿ, ಪಾತ್ರದ ಒಳನೋಟಗಳನ್ನು ಎಳೆಎಳೆಯಾಗಿ ಬಿಡಿಸಿ ಹೊಸ ಪರಿಣಾಮ ಉಂಟು ಮಾಡುವ ಕ್ರಮ, ಶ್ರುತಿಬದ್ಧ ಮಾತು, ಇವರಿಗೆ ಬಲುಬೇಗ ಕೀರ್ತಿಯನ್ನು ತಂದಿತು. ಎಡನೀರು ಮಠದ ಶ್ರೀಗಳ ನೇತೃತ್ವದ ತಾಳಮದ್ದಲೆಗಳಲ್ಲಿ ಭಾಗವಹಿಸಿ ಎಲ್ಲ ನಾಮಾಂಕಿತ ಹಿರಿಯ ಅರ್ಥಧಾರಿಗಳೊಂದಿಗೆ ಪಾತ್ರ ನಿರ್ವಹಿಸಿ ಮುಕ್ತ ಪ್ರಶಂಸೆಗೆ ಪಾತ್ರರಾದರು. ಇವರ ಉತ್ತುಂಗದ ಆ ಕಾಲದಲ್ಲಿ ಬಗೆಬಗೆಯ ಪಾತ್ರಗಳನ್ನು ನಿರ್ವಹಿಸಿದರು. ಹಾಗೂ ಎಲ್ಲದರಲ್ಲೂ ನಾವೀನ್ಯ ಹಾಗೂ ರಸಿಕ ರಂಜನೆಯ ದಾರಿಯನ್ನು ಲೋಕಕಾಣ್ಕೆಯಾಗಿಸಿದರು. ಎಲ್ಲೆಡೆ ಪ್ರಮುಖ ಪಾತ್ರದ ಅರ್ಥಧಾರಿಯೇ ಆಗಿ ವಿಜೃಂಭಿಸಿದರು. ಎಳೆಯ ವಯಸ್ಸಿನಿಂದಲೂ ಲೋಕದಲ್ಲಿ ಗಮನ ಸೆಳೆಯುವ ನಡೆ-ನುಡಿಯ ಮೂಲಕ ಪ್ರಶಂಸೆಗಳನ್ನು ಹೊತ್ತುಕೊಂಡೇ ಬಂದ ಇವರಿಗೆ ಚಪ್ಪಾಳೆ ಬಲು ಪ್ರೀತಿ. ಎಲ್ಲೋ ಒಮ್ಮೊಮ್ಮೆ ಅದು ಅವರ ಅನ್ಯಮನಸ್ಕತೆಗೆ ಕಾರಣವಾದುದೂ ಇದೆ. ಪಾತ್ರಗಳ ನಿರ್ವಹಣೆಯಲ್ಲಿ ಗುಣಾತ್ಮಕ ಕೊಡುಗೆಯಲ್ಲಿ ಅಗತ್ಯಕ್ಕಿಂತ ಹೆಚ್ಚೇ ಚಿಂತಿಸುವ ಇವರಿಗೆ ಸಣ್ಣ ಸಣ್ಣ ವ್ಯತ್ಯಯಗಳೂ ತೊಂದರೆ ನೀಡುವುದಿದೆ. ಹಾಗಾಗಿ ಎಷ್ಟೋ ಸಲ ಒಪ್ಪಿದ ಕಾರ್ಯಕ್ರಮಕ್ಕೂ ಗೈರಾಗಿ ಗೊಂದಲ ಸೃಷ್ಟಿಸಿದ್ದಿದೆ. ಈ ಆಕ್ಷೇಪ ಅವರನ್ನು ಇಂದಿಗೂ ಹೊಂದಿಕೊಂಡಿದೆ. ಆದರೆ ಅಂತಹ ಸಂದರ್ಭದಲ್ಲಿ ಗುಪ್ತವಾಗಿ ನೋಯುವ ಸ್ವಭಾವ ಇವರದ್ದು ಎಂಬುದನ್ನು ಇವರನ್ನು ಬಲ್ಲವರು ಅರಿತಿದ್ದಾರೆ.
ರಸಪೋಷಕರಾಗಿ, ಶ್ರುತಿನಿಷ್ಠರಾಗಿ, ವಚೋವೈಭವಕ್ಕೆ ಸರಿಸಾಟಿಯಾಗಿ ನಿಂತು ತಾಳಮದ್ದಲೆಯನ್ನು ಕಲೆಯನ್ನಾಗಿಸಿ ಅರ್ಥ ಹೇಳುವ ಶಕ್ತಿ ನಮ್ಮ ಉಮಾಕಾಂತ ಭಟ್ಟರದ್ದು ಎಂದು ಅವರೊಂದಿಗೆ ಸಾಕಷ್ಟು ಅರ್ಥ ಹೇಳಿದ ಕೆರೆಮೆನೆ ಮಹಾಬಲ ಹೆಗಡೆಯವರು ಹೇಳುತ್ತಿದ್ದರು.
ಪಾತ್ರದಲ್ಲಿ ಏನನ್ನೂ ಸಾಧಿಸಬಲ್ಲ ಯಕ್ಷಗಾನದ ಸಮರ್ಥ ಅರ್ಥಧಾರಿ ಉಮಾಕಾಂತ ಭಟ್ಟರು ಎಂದು ಕೆರೆಮನೆ ಶಂಭು ಹೆಗಡೆಯವರು ಒಮ್ಮೆ ನನ್ನಲ್ಲಿ ಹೇಳಿದ್ದಾರೆ.
ಉತ್ತರಕನ್ನಡದ ಶೈಲಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು, ಇವರು ಭಯಂಕರದ ಅರ್ಥಧಾರಿ ಎನ್ನುತ್ತಿದ್ದರು. ಅವರಿಂದ ಕೊನೆಯ ಸನ್ಮಾನ ಪಡೆದ ಭಾಗ್ಯಶಾಲಿ ಇವರೇ. (ಅದೂ ನಮ್ಮ ಮನೆಯಲ್ಲಿ, ನಮ್ಮ ತಂದೆಯವರ ನೆನಪಿನಲ್ಲಿ).
ವಸ್ತುತಃ ತಾಳಮದ್ದಲೆಯ ಕ್ಷೇತ್ರದಲ್ಲಿ ಉಮಾಕಾಂತ ಭಟ್ಟರು ಅಗ್ರಗಣ್ಯರು. ಉತ್ತರಕನ್ನಡ ಜಿಲ್ಲೆಯ ಶೈಲಿಯ ಪ್ರತಿನಿಧಿಗಳು. ಅರ್ಥಗಾರಿಕೆ ಕೇವಲ ಮಾತಿನ ಮಂಟಪವಾಗದೆ ಕಲಾತ್ಮಕ ರೂಪಕವಾಗುವಂತೆ ಪಾತ್ರನಿರ್ವಹಣೆ ಇವರ ವಿಶೇಷ. ಮಾತು ಪ್ರವಚನವಾಗದಂತೆ ಮಿತವಾದ ಆಂಗಿಕಾಭಿನಯ, ಭಾವತೀವ್ರತೆಗೆ ಅನುಗುಣವಾಗಿ ಪಾತ್ರ ತಾದಾತ್ಮ್ಯ ಇವರ ಹೆಚ್ಚಿಕೆ. ಇವರು ಅಧ್ಯಯನ ಮತ್ತು ವ್ಯಾಸಂಗದ ಬಲವನ್ನು ಬಳಸುವುದು ಪಾತ್ರಗಳ ಭಾವಜೀವ ಪುಷ್ಟಿಗಾಗಿಯೆ ಹೊರತು ಸ್ವಪ್ರತಿಭೆಯ ಪ್ರದರ್ಶನಕ್ಕಾಗಿ ಅಲ್ಲ. ಇವರದು ಕೇವಲ ಶುಷ್ಕವಾದ ದೀರ್ಘಶೈಲಿಯಲ್ಲ. ಬದಲಿಗೆ ಸೂತ್ರಶೈಲಿ. ಅಂದರೆ ಅಗತ್ಯವಿದ್ದೆಡೆ ಪಾತ್ರಗಳ ಗುಣಶೀಲಗಳನ್ನು ಅರಿತು ದೀರ್ಘವಾಗಿಯೂ, ಸಾರವತ್ತಾಗಿಯೂ ವಿವರಿಸುವ, ಅದಿಲ್ಲದಿದ್ದರೆ ಕಥೆ ಮುಕ್ಕಾಗದಂತೆ, ಪ್ರಸಂಗದ ಸೊಬಗು ಕೆಡದಂತೆ ಔಚಿತ್ಯವರಿತು ಅಗತ್ಯವಿದ್ದಷ್ಟು ಮಾತ್ರ ವಿವರಿಸುವ ಶೈಲಿ ಇವರದ್ದಾಗಿದೆ. ಶ್ರುತಿಬದ್ಧವಾದ ಅರ್ಥಗಾರಿಕೆ ಇವರ ವೈಶಿಷ್ಟ್ಯ. ಯಕ್ಷಗಾನದ ಅಥವಾ ತಾಳಮದ್ದಲೆಯ ರಂಗವೆನ್ನುವುದು ಹಿಮ್ಮೇಳ ಮುಮ್ಮೇಳ ಸಂಗಮ. ಆದುದರಿಂದ ಶ್ರುತಿ ಲಯಗಳು ಸಮಾನವಾಗಿಯೆ ಸಾಗಬೇಕು. ಅದಿಲ್ಲದಿದ್ದರೆ ಇಡಿಯ ಪ್ರಸಂಗವೆ ನೀರಸ. ಈ ವಿಷಯದಲ್ಲಿ ಉಮಾಕಾಂತರದು ಎಚ್ಚರಿಕೆಯ ನಡೆ. ಹಿಮ್ಮೇಳ ತೆಂಕಿರಲಿ, ಬಡಗಿರಲಿ ಶ್ರುತಿಗೆ ಅನುಗುಣವಾಗಿಯೆ ಅರ್ಥವನ್ನು ಹೇಳುತ್ತಾರೆ. ಕೆಲವೊಮ್ಮ ದೀರ್ಘಕಾಲ ಅರ್ಥವನ್ನು ಹೇಳುವಾಗ ಬಾಯಿ ಒಣಗಿ ಆಯಾಸವಾದರೂ ಶ್ರುತಿಯ ವಿಷಯದಲ್ಲಿ ರಾಜಿಯಿಲ್ಲ. ಅದಕ್ಕೆ ಒಮ್ಮೆ ಅರ್ಥ ಕೇಳಿದ ಕೇಳುಗ ಇಷ್ಟಪಟ್ಟು ಪುನಃ ಪುನಃ ಇವರ ಅರ್ಥವನ್ನು ಕೇಳುತ್ತಾನೆ. ಸ್ವತಃ ಕವಿಗಳಾಗಿ ಆಮೂಲಾಗ್ರವಾದ ರಂಗಪ್ರಜ್ಞೆಯನ್ನು ಹೊಂದಿರುವ ಇವರು ಯಾವುದೇ ಪ್ರಸಂಗವಿರಲಿ, ಅದರ ಚೌಕಟ್ಟನ್ನು ಸರಿಯಾಗಿ ನಿರ್ಮಿಸುತ್ತಾರೆ. ಪಾತ್ರದ ಹದವರಿತು ಮಾತಿನ ರೂಪಕವನ್ನು ಸಿದ್ಧಪಡಿಸುತ್ತಾರೆ. ಆದುದರಿಂದಲೆ ತಾಳಮದ್ದಲೆಯ ಕ್ಷೇತ್ರದಲ್ಲಿ ಇವರದೇ ಆದ ಮಾರ್ಗ ಸಿದ್ಧವಾಗಿದೆ. ಇವರು ಆದರ್ಶ ಅರ್ಥಧಾರಿಗಳು.

 

ಪ್ರವಚನಕಾರ

 

ಇವರ ಪ್ರವಚನಗಳೂ ಹತ್ತರ ಕೂಡೆ ಹನ್ನೊಂದಲ್ಲ. ವಿಫುಲ ಚಿಂತನೆ, ಅರ್ಥಗಳ ಉಲ್ಲೇಖ, ರಸಮಯವಾದ ಆವರಣ ನಿರ್ಮಾಣ ಹಾಗೂ ತಳಸ್ಪರ್ಶಿಯಾದ ಅಧ್ಯಯನಗಳಿಂದ ವಿದ್ವಜ್ಜನರ ಮನ್ನಣೆಗೆ ಪಾತ್ರವಾಗಿದೆ. ಅದೇ ಸಂದರ್ಭ ಸರಳ ಉದಾಹರಣೆಗಳ ವಿವರಣೆಗಳೊಂದಿಗೆ ಇತರರಿಗೂ ಆಸ್ವಾದ ಯೋಗ್ಯವಾಗಿರುತ್ತದೆ. ಮಾತು ಅರ್ಥವಾಗಬೇಕು ಎಂಬ ಗುರೂಪದೇಶ ಅಕ್ಷರಶಃ ಇವರ ಪ್ರವಚನಗಳಲ್ಲಿ ವ್ಯಕ್ತವಾಗುತ್ತದೆ. ದೇಶಾದ್ಯಂತ ಹಲವಾರು ಮಹತ್ತ್ವದ ವೇದಿಕೆಗಳಲ್ಲಿ ಶಾಸ್ತ್ರ ನಿರೂಪಣೆ ಮಾಡಿ ವಿದ್ವದಾದರಕ್ಕೆ ಪಾತ್ರರಾಗಿದ್ದಾರೆ. ದೆಹಲಿ, ಅಹಮದಾಬಾದ್, ಚೆನ್ನೈ, ದ್ವಾರಕಾ ಮೊದಲಾದ ಕಡೆ ರಾಷ್ಟ್ರೀಯ-ಅಂತಾರಾಷ್ಟ್ರೀಯ ಕಾರ್ಯಾಗಾರಗಳಲ್ಲಿ ಭಾಗವಹಿಸಿ, ಪ್ರಬಂಧ ಮಂಡಿಸಿ ತಮ್ಮ ವೈದುಷ್ಯವನ್ನು ಮೆರೆದಿದ್ದಾರೆ. ಪುಣೆಯ ವೇದ-ಶಾಸ್ತ್ರೋತ್ತೇಜಕ ಸಭಾದ ಮೂಲಕ ನಡೆಯುವ ‘ಕೋವಿದ’, ‘ಪಾರಂಗತ’ ಪರೀಕ್ಷೆಗಳಲ್ಲಿ ಸಮಾರು ಹದಿನೈದು ವರ್ಷಗಳ ಕಾಲ ಪರೀಕ್ಷಕರಾಗಿ ಭಾಗವಹಿಸಿ ದೇಶದ ಅಗ್ರಮಾನ್ಯ ಪಂಡಿತರನ್ನು ಪರೀಕ್ಷಿಸಿದ್ದಾರೆ. ಆನಂದಪುರದಲ್ಲಿ ‘ಕಾವ್ಯಶಾಲಾ’ ಎಂಬ ವಿನೂತನ ಪದ್ಯರಚನಾ ಕಾರ್ಯಾಗಾರವನ್ನು ಏರ್ಪಡಿಸಿ, ವಿದ್ಯಾರ್ಥಿಗಳಲ್ಲಿ ಕಾವ್ಯರಚನಾ ಕೌಶಲವನ್ನು ಪ್ರಚೋದಿಸಿದ್ದಾರೆ. ಬೆಂಗಳೂರಿನ ‘ಗೋಖಲೆ ವಿಚಾರಸಂಸ್ಥೆ’, ಶಿವಮೊಗ್ಗೆಯ ‘ಪ್ರಸನ್ನ ಗಣಪತಿ ಮಂದಿರ’, ಮೈಸೂರಿನ ‘ಪರಂಪರಾ’ ಹೀಗೆ ರಾಜ್ಯದ ಹತ್ತು ಹಲವು ವೇದಿಕೆಗಳು ಇವರ ಪ್ರವಚನ ಪಾಟವಕ್ಕೆ ಸಾಕ್ಷಿಯಾಗಿವೆ. ಖಚಿತವಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸುವ ಇವರ ಸ್ವಭಾವದಲ್ಲಿ ‘ಶಾಸ್ತ್ರನಿಷ್ಠೆ’ ಲೋಕರೂಢಿಯನ್ನು ಮೀರಿಯೇ ಇದೆ. ಇದು ಇವರ ಪ್ರವಚನದಲ್ಲಿ ವಿಶಿಷ್ಟ ಮೆರುಗನ್ನು ಮೂಡಿಸುತ್ತದೆ.ಅಲ್ಲದೆ ಇವರು ಮಾಡಿದ ಉಪನ್ಯಾಸಗಳು ಶತಾಧಿಕ. ಅವುಗಳಲ್ಲಿ ಕೆಲವು ಅಡಕಮುದ್ರಿಕೆಗಳು ಸಹೃದಯರ ಸ್ವತ್ತಾಗಿವೆ. ಆ ಮೂಲಕ ಸಮಾಜದಲ್ಲಿ ಸಾಂಸ್ಕೃತಿಕ ಜಾಗೃತಿಯ ಕೆಲಸವನ್ನು ಮಾಡುತ್ತಿವೆ.

ಲೋಕಾರ್ಪಿತ ಹೊತ್ತಿಗೆಗಳು

 

ಇವರಿಗೆ ಮಾತು ಸಿದ್ಧಿಸಿದಂತೆ ಬರವಣಿಗೆಯೂ ಸಿದ್ಧಿಸಿದೆ. ಇವರ ಶಾಸ್ತ್ರ ಲೇಖನಗಳಾಗಲೀ, ವ್ಯಕ್ತಿತ್ವ ದರ್ಶನದ ಪ್ರಬಂಧಗಳಾಗಲೀ, ಬೇರೆ ಬೇರೆ ತಾತ್ತ್ವಿಕ ವಿಚಾರಪ್ರಚೋದಕ ಲೇಖನಗಳಾಗಲೀ ಸರಳ ಮತ್ತು ಗಂಭೀರ. ಸಂಸ್ಕೃತ ಸಾಹಿತ್ಯ, ಕನ್ನಡ ಸಾಹಿತ್ಯ, ಯಕ್ಷಗಾನ-ತಾಳಮದ್ದಲೆ, ಉಪನ್ಯಾಸ ಮೊದಲಾದ ಕ್ಷೇತ್ರಗಳಲ್ಲಿ ಸುಲಲಿತವಾಗಿ ಸಂಚರಿಸುವ ಇವರು ಗಮನೀಯ ಸಾಹಿತ್ಯ ಸೇವೆ ಗೈದಿದ್ದಾರೆ. ಈತನಕ 27ಕ್ಕೂ ಹೆಚ್ಚು ಹೊತ್ತಿಗೆಗಳನ್ನು ಲೋಕಕ್ಕೆ ಸಮರ್ಪಿಸಿದ ಇವರು ಪ್ರಚಾರವೇ ಇಲ್ಲದೇ ಸಾಹಿತ್ಯ ಸೇವೆಯನ್ನು ಮಾಡುತ್ತ ಸಾಗುತ್ತಿದ್ದಾರೆ.

 

ಇವರ ಜ್ಞಾನಮೂಸೆಯಿಂದ ಸ್ವತಂತ್ರವಾಗಿ ಲೋಕಮುಖವಾದ ಗ್ರಂಥಗಳೆಂದರೆ,
‘ನ್ಯಾಯನಿಬಂಧಮಾಲಾ’ ಇದು ಪ್ರಾಚೀನ ನವೀನ ನ್ಯಾಯಶಾಸ್ತ್ರಗಳ ವಿವಿಧ ವಿಷಯಗಳನ್ನು ಒಳಗೊಂಡ ವಿಮರ್ಶಾತ್ಮಕ ಪ್ರಬಂಧಗಳ ಸಂಕಲನ. ‘ಭೃಂಗಮಾರ್ಗ’ ಇದು ಸಂಸ್ಕೃತ ಖಂಡಕಾವ್ಯ. ‘ಅಭಿನವ ಪ್ರಹೇಲಿಕಾ’ ಇದು ಪದ್ಯರೂಪದ ಒಗಟುಗಳ ಗುಚ್ಛ, ಇವರ ಸರ್ಜನಶೀಲಬುದ್ಧಿಯ ಪ್ರತೀಕ. ‘ಸದಾತನ’ ಇದು ವಿಷಯ ವೈವಿಧ್ಯಗಳುಳ್ಳ ಕನ್ನಡ ವಿಮರ್ಶಾತ್ಮಕ ಪ್ರಬಂಧಗಳ ಸಂಕಲನ. ‘ಕೃಷಿಪರಾಶರ’ ಇದು ಪರಾಶರಮಹರ್ಷಿಗಳಿಂದ ರಚಿತವಾದ ಕೃಷಿಗ್ರಂಥದ ಕನ್ನಡಾನುವಾದ. ಕೃಷಿಕರ ಕೈಪಿಡಿ. ‘ಲೋಕಶಂಕರ’ ಇದು ಸ್ವರಚಿತ ಸಂಸ್ಕೃತ ಖಂಡಕಾವ್ಯಗಳ ಕನ್ನಡಾನುವಾದ. ‘ಮಹರ್ಷಿವಸಿಷ್ಠ’ ಇದು ವಸಿಷ್ಠರ ಜೀವನವನ್ನೂ, ವೈಶಿಷ್ಟ್ಯವನ್ನೂ ತಿಳಿಸುವ ಗ್ರಂಥ. ‘ಯಕ್ಷಗಾನ ಮೇಘದೂತ’ ಇದು ಕಾಲಿದಾಸನಿಂದ ರಚಿತವಾದ ಮೇಘದೂತದ ಹೊಸ ಪ್ರಯೋಗ. ‘ಶತಾವ್ಯಯೀ’ ಇದು ಒಂದು ನೂರು ಅವ್ಯಯಗಳ ಬೇರೆ ಬೇರೆ ಅರ್ಥಗಳನ್ನು ಸೋದಾಹರಣವಾಗಿ ತಿಳಿಸುವ ಗ್ರಂಥ. ವಿದ್ಯಾರ್ಥಿಗಳ ಮೆಚ್ಚಿನ ಕೈಪಿಡಿ. ‘ಯತಿರಾಜ ರಾಮಾನುಜ’ ಶ್ರೀಮದ್ಭಗವದ್ರಾಮಾನುಜಾಚಾರ್ಯರ ಬದುಕನ್ನು ಪರಿಚಯಿಸುವ ಗ್ರಂಥ. ‘ಕುಮಾರಯಾಮುನ’ ಶ್ರೀಯಾಮುನಾಚಾರ್ಯರ ಬಾಲ್ಯವೈದುಷ್ಯವನ್ನು ತಿಳಿಸುವ ಲಘುರೂಪಕ.
ಅಂತೆಯೇ ಸಂಪಾದಿತ ಕೃತಿಗಳು- ಅಜ್ಞಾತ ಕವಿಯು ರಚಿಸಿದ ‘ಕ್ರಿಯಾನಿಘಂಟು’ ಮತ್ತು ವಿದ್ಯಾರ್ಥಿಗಳ ಅಚ್ಚುಮೆಚ್ಚಾದ ‘ಉಪಸರ್ಗಾರ್ಥಸಂಗ್ರಹ’ಗಳು ಈಗಾಗಲೆ ಎರಡು ಮುದ್ರಣಗಳು ಮುಗಿದಿವೆ. ‘ದಶಕಮ್’ ಸ್ವರ್ಣವಲ್ಲೀಪ್ರಭಾ ಮಾಸಪತ್ರಿಕೆಯ ದಶಮಾನೋತ್ಸವದ ವಿಶೇಷ ಸಂಚಿಕೆ. ‘ರಜತವಲ್ಲೀ’ ಸ್ವರ್ಣವಲ್ಲೀ ಶ್ರೀಗಳ ಪಟ್ಟಾಭಿಷೇಕ ರಜತೋತ್ಸವದ ನೆನಪಿಗಾಗಿ ಪ್ರಕಟವಾದ ವಿಶೇಷ ಸಂಚಿಕೆ. ‘ಸಿರಿಕೂಡಲಿ’ ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಗುರುಗೌರವಗ್ರಂಥ. ‘ಸಹೃದಯ’ ಸನ್ಮಿತ್ರ ಪ್ರೊ. ವಿ.ಎನ್.ಭಟ್ಟರ ಸಂಸ್ಮರಣಾಭಿನಂದನ ಗ್ರಂಥ. ‘ಪ್ರಶ್ನೋಪನಿಷತ್’ ಇವರೇ ಅನುವಾದಿಸಿ ಸಂಪಾದಿಸಿದ ಗ್ರಂಥ. ‘ನ್ಯಾಯಲೀಲಾವತೀಮುಖಮುಕುರ’ ಮಹಾಮಹೋಪಾಧ್ಯಾಯ ಎನ್. ಎಸ್. ರಾಮಭದ್ರಾಚಾರ್ಯರಿಂದ ರಚಿತವಾದ ನ್ಯಾಯಲೀಲಾವತೀ ಗ್ರಂಥದ ವ್ಯಾಖ್ಯಾನವನ್ನು ವಿಸ್ತೃತ ಭೂಮಿಕೆಯೊಡನೆ ಪರಿಚಯಿಸುವ ಕೃತಿ. ‘ಈಶಾವಾಸ್ಯೋಪನಿಷದ್ವಿವೃತಿ’ ಇದೂ ಕೂಡ ಮಹಾಮಹೋಪಾಧ್ಯಾಯ ಎನ್. ಎಸ್. ರಾಮಭದ್ರಾಚಾರ್ಯರ ಕೃತಿಯೇ. ವಿಸ್ತೃತ ಭೂಮಿಕೆಯೊಡನೆ ತಮ್ಮ ಗುರುಗಳ ಕೃತಿಯನ್ನು ಲೋಕಕ್ಕೆ ಪರಿಚಯಿಸಿದ್ದಾರೆ. ‘ಪದಶಕ್ತಿ’ ಇದು ರಾಷ್ಟ್ರಮಟ್ಟದ ವಿದ್ವಾಂಸರ ಪ್ರಬಂಧಗಳುಳ್ಳ ಸಂಸ್ಕೃತ ಗ್ರಂಥ. ಇದಕ್ಕೂ ಇವರ ವಿಸ್ತೃತವಾದ ಶೋಧಾತ್ಮಕ ಭೂಮಿಕೆಯಿದೆ.

 

ಅಂತೆಯೇ ಇವರು ತಮ್ಮದೇ ಆದ ಛಂದಸ್ವತೀ ಪ್ರಕಾಶನದಿಂದ ಹಲವು ಪುಸ್ತಕಗಳನ್ನು ಪ್ರಕಾಶಿಸಿದ್ದಾರೆ. ಅವುಗಳಲ್ಲಿ ಭೀಮನಕೋಣೆ ಭಾಸ್ಕರ ಭಟ್ಟರ ‘ಕಾದಂಬಿನೀಹರಣಂ’ ರೂಪಕ, (ಇದಕ್ಕೆ ಇವರ ವಿಸ್ತೃತವಾದ ಪ್ರೌಢವಾದ ಭೂಮಿಕೆ ಇದೆ. ಪ್ರಕಟವಾದ ನಂತರದಲ್ಲಿ ನಾಲ್ಕಾರು ಪ್ರಯೋಗಗಳಾಗಿವೆ. ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಬಹುಮಾನವನ್ನೂ ಪಡೆದಿದೆ.) ಅಂತೇವಾಸಿ ಮಧುಸೂದನ ಅಡಿಗರ ‘ಔದಾರ್ಯಗಾದಾಧರಂ’ ರೂಪಕ (ಕರ್ಣಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಸಂಸ್ಕೃತಗ್ರಂಥ ಪುರಸ್ಕಾರವನ್ನು ಪಡೆದಿದೆ.) ಮತ್ತು ಎಂಬಾರ್ ವರದಾಚಾರ್ಯರಿಂದ ರಚಿತವಾದ ‘ಆಂಗ್ಲಾಮರಕೋಶ’ (ಸಂಸ್ಕೃತ ಶ್ಲೋಕಗಳ ಗತಿಯನ್ನು ಹೊಂದಿದ ಇಂಗ್ಲಿಷ್ ಶಬ್ದಗಳ ಸಂಸ್ಕೃತದ ಅರ್ಥವನ್ನು ಸೂಚಿಸುವ ಕೋಶ. ಅಮರಕೋಶದಂತೆ ಇದನ್ನು ಓದಬಹುದು.) ಮುಖ್ಯವಾದವು. ಇನ್ನು ಹಲವು ‘ಲಕಾರವಾದಾರ್ಥ’ವೇ ಮೊದಲಾದ ಗ್ರಂಥಗಳು ಪ್ರಕಾಶನದ ಸಿದ್ಧತೆಯಲ್ಲಿವೆ. ಇನ್ನೂ ಹೆಚ್ಚು ಕೃತಿಗಳು ಇವರಿಂದ ಲೋಕಾರ್ಪಣೆಗೊಂಡು ಸಾರಸ್ವತಲೋಕದ ಕಡಲನ್ನು ಗುಣಶ್ರೇಷ್ಠತೆಯಿಂದ ಉಕ್ಕೇರುವಂತೆ ಮಾಡಲಿ. ಆ ಮಾರ್ಗದಲ್ಲಿಯೇ ಇರುವ ವೈಶೇಷಿಕ ಸೂತ್ರವೃತ್ತಿ ಹಾಗೂ ಗೀತಗೋವಿಂದದ ರಸ ಭಾಷ್ಯಗಳು ಶೀಘ್ರವಾಗಿ ಸಾರಸ್ವತರ ಕೈ ಸ್ವತ್ತಾಗಲಿ.

 

ಛಂದಸ್ವತೀ ವಿದ್ವಾನ್ ಉಮಾಕಾಂತ ಭಟ್ಟರ ಬದುಕಿನ ಬಹುದೊಡ್ಡ ಸಾಧನೆ. ಇದು ಆರು ತಿಂಗಳಿಗೊಮ್ಮೆ ಪ್ರಕಟಗೊಳ್ಳುವ ಸಂಸ್ಕೃತ ಪದ್ಯಪತ್ರಿಕೆ. ಇದರಲ್ಲಿ ಗದ್ಯದ ಗಂಧವೇ ಇಲ್ಲ. ಎಲ್ಲವೂ ಸಂಸ್ಕೃತದ ಛಂದಸ್ಸಿನಿಂದ ರಚಿತವಾದ ಇಂದಿನ ಕವಿಗಳ ಪದ್ಯಗಳೇ ಆಗಿರುತ್ತವೆ. ಶೀರ್ಷಿಕೆಯಂದ ಹಿಡಿದು ಜಾಹಿರಾತಿನವರೆಗೆ ಎಲ್ಲವೂ ಪದ್ಯಮಯ. ಅರೈಯರ್ ಶ್ರೀರಾಮಶರ್ಮಾ, ಶತಾವಧಾನೀ ಡಾ.ರಾ. ಗಣೇಶ್, ಎಸ್. ಜಗನ್ನಾಥ, ಪ್ರೊ.ಎಚ್.ವಿ. ನಾಗರಾಜರಾವ್, ಶೇಷಾಚಲಶರ್ಮ, ಸೂರ್ಯನಾರಾಯಣ ನಾಗೇಂದ್ರ ಭಟ್ಟ, ಎನ್.ಲಕ್ಷ್ಮೀನಾರಾಯಣ ಭಟ್ಟ, ವೇದರತ್ನಂ ವೆಂಕಟನಾಥ ಹೀಗೆ ದೇಶದ ಪ್ರಸಿದ್ಧರಾದ ಸಂಸ್ಕೃತಕವಿಗಳು ಈ ಪತ್ರಿಕೆಯಲ್ಲಿ ತಮ್ಮ ಕಾವ್ಯಗಳನ್ನು ಪ್ರಕಟಿಸಿದ್ದಾರೆ. ಶೃಂಗೇರಿಯ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀಶ್ರೀಭಾರತೀತೀರ್ಥ ಮಹಾಸ್ವಾಮಿಗಳು ತಮ್ಮ ‘ವಾಲಿವಧ’ ಎಂಬ ಕಾವ್ಯವನ್ನು ನೀಡಿ ಅನುಗ್ರಹಿಸಿದ್ದಾರೆ. ಸಂಸ್ಕೃತದ ಉದಯೋನ್ಮುಖ ಕವಿಗಳಿಗೆ ಇದು ಉತ್ತಮ ವೇದಿಕೆಯಾಗಿದೆ. ಛಂದೊಮಯವಾದ ಕಾವ್ಯಪರಂಪರೆ ಉಳಿಯಲಿ, ಬೆಳೆಯಲಿ ಎಂಬ ಆಶಯದಿಂದ ಇದನ್ನು ಸಂಪಾದಿಸಿ ಪ್ರಕಟಿಸುತ್ತಿರುವ ಧಿರ ಸಾಹಸಿ ಇವರಾಗಿದ್ದಾರೆ.

ಸಂದ ಗೌರವಗಳು-ಮನ್ನಣೆಗಳು

 

ಸಾಮಾನ್ಯವಾಗಿ ಈ ವಿಷಯ ಬಂದಾಗ ಉದ್ದದ ಪಟ್ಟಿ ಕೊಟ್ಟು ಇನ್ನಿಲ್ಲದಂತೆ ಹೊಗಳುತ್ತಾರೆ. ಆದರೆ ನನಗೆ ಮಾನ-ಮನ್ನಣೆಗೆ ಭಾಜನವಾದ ಮನಸ್ಸನ್ನು ಮತ್ತು ಸಂಭ್ರಮದ ಎಳೆಯನ್ನು ಅರಿತು ಒದಗಿದ ಗೌರವಗಳ ಮಹತ್ತ್ವವನ್ನು ಕಾಣವುದು ಹೆಚ್ಚು ಸಮಂಜಸವೆನಿಸುತ್ತಿದೆ.
ಇವರ ತಂದೆಯವರು ಎಂದೂ ಸನ್ಮಾನವನ್ನು ಸ್ವೀಕರಿಸಲಿಲ್ಲ. ಸನ್ಮಾನಕ್ಕೆ ಬಹಳ ಹೆದರಬೇಕು. ಸನ್ಮಾನ ಮಾಡುವ ಖುಷಿ ಸನ್ಮಾನ ಮಾಡಿಸಿಕೊಳ್ಳುವದರಲ್ಲಿ ಇಲ್ಲ. ಆಮೇಲೆ ಅದನ್ನು ನಿರ್ವಹಿಸುವುದು ಸುಲಭವಲ್ಲ ಎಂಬುದು ಅವರ ಧೋರಣೆಯಾಗಿತ್ತು. ಆದುದರಿಂದ ಯಾವಾಗಲೂ ತನಗಿಂತ ಹಿರಿಯರನ್ನು ತೋರಿಸುತ್ತಿದ್ದರು.

 

ಹಾಗೆಯೇ ಇವರ ವಿದ್ಯಾಗುರುಗಳಾದ ಮಹಾಮಹೋಪಾಧ್ಯಾಯ ಶ್ರೀ ರಾಮಭದ್ರಾಚಾರ್ಯರೂ ಸಹ ಸನ್ಮಾನದ ಹಿಂದಿನ ದೃಷ್ಟಿಯನ್ನು ವಿಶೇಷವಾಗಿ ಗಮನಿಸುತ್ತಿದ್ದರು. ‘ನಾವು ಬಹಳ ಸಣ್ಣವರಪ್ಪ’ ಎನ್ನುತ್ತಿದ್ದರು. ಅವರು ‘ಸನ್ಮಾನ ಎಷ್ಟು ದೊಡ್ಡದು, ನಮಗೆ ಅದನ್ನೆಲ್ಲ ಒಪ್ಪುವುದು ಹೇಗೆ ಸಾಧ್ಯ’ ಎಂದು ವಿನೀತರಾಗಿ ಹೇಳುತ್ತಿದ್ದರು.

 

ಹೀಗೆ ಈ ಎರಡು ಪ್ರತೀಕಗಳ ಎದುರು ಉಮಾಕಾಂತರ ವಿಚಾರ ತುಸು ಭಿನ್ನವೇ ಆಗಿದೆ. ಇವರು ಸನ್ಮಾನಗಳಿಂದ ಅವರವರ ಮನಸ್ಸು ಆನಂದಿಸುತ್ತದೆ, ಹಿಗ್ಗುತ್ತದೆ. ಆದರೆ ಅದು ಅಷ್ಟಕ್ಕೇ ನಿಲ್ಲುವಂತಾಗಬೇಕು, ಎಂದೂ ಅಹಂಕಾರವನ್ನು ತರಬಾರದು ಎನ್ನುತ್ತಾರೆ. ಹಾಗಾಗಿ ಇವರು ಎಷ್ಟೆಲ್ಲ ಸನ್ಮಾನ ಸ್ವೀಕರಿಸಿದರೂ ಅಲ್ಲೆಲ್ಲ ಸಂಭ್ರಮವೇ ಕಾಣುತ್ತದೆ ಹೊರತು ಅಹಂಕಾರವಲ್ಲ. ಸನ್ಮಾನವನ್ನು ಒಪ್ಪಿಕೊಳ್ಳುವುದು ಹಾಗೂ ಅದನ್ನು ಅನುಭವಿಸುವುದು ಒಂದು ರೀತಿಯಲ್ಲಿ ಖುಷಿ, ಕುತೂಹಲ ಇವರಿಗೆ. ಸನ್ಮಾನ ಮನಸ್ಸಿನ ಪ್ರಫುಲ್ಲತೆಗೆ ಹಿಡಿದ ಕೈಗನ್ನಡಿ ಎಂಬ ಧೋರಣೆ ಹಾಗೂ ಸರಿಯಾದ ಸನ್ಮಾನ ಇತರ ಪ್ರಯತ್ನಶೀಲರಿಗೆ ಪ್ರೇರಣೆ ನೀಡಿದರೆ ಯಥಾರ್ಥವಾಗಿ ಸನ್ಮಾನ ಪಡೆದವರ ಧನ್ಯತೆ ಎಂಬ ಇವರ ವಿಚಾರ ಇವರದ್ದಾಗಿದೆ.

 

ಸಂಸ್ಕೃತ ಕಾಲೇಜಿನಲ್ಲಿ ವಿದ್ವತ್ ಮಾಡಿ, ಇಂಗ್ಲೀಷ್ ಎಂ.ಎ. ಮಾಡಿ ಮೇಲುಕೋಟೆಯ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಆಧ್ಯಾಪನದಲ್ಲಿ ತೊಡಗಿದ್ದಾಗ, ಮೊದಲನೆಯದಾಗಿ 1986 ರಲ್ಲಿ ಶಿರಸಿ ಸಮೀಪದ ಓಣಿವಿಘ್ನೇಶ್ವರದ ವಸುಧಾ ಜನ್ಮದಿನೋತ್ಸವ ಸಂದರ್ಭದಲ್ಲಿ ‘ಯುವ ವಿದ್ವಾಂಸರಿಗೆ ನೀಡುವ ಪುರಸ್ಕಾರ’ ಇವರಿಗೆ ಸಂದಿದೆ. ಆಗ ಖ್ಯಾತ ಯಕ್ಷಗಾನ ಕಲಾವಿದ ಮೂರೂರು ದೇವರು ಹೆಗಡೆಯವರಿಗೂ ಸನ್ಮಾನ. ಅಂದು ದೇವರು ಹೆಗಡೆಯವರು ಇವರ ಮಾತಿನಿಂದ ಆನಂದ ಪಟ್ಟವರು. ಇವರು ‘ನಿಮ್ಮೊಡನೆ ಹೇಗೆ ಸನ್ಮಾನ ಸ್ವೀಕರಿಸುವುದು’ ಎಂದು ಕೇಳಿದಾಗ, ದೇವರು ಹೆಗಡೆಯವರು ‘ಮರದಲ್ಲಿ ಬರೀ ಹಣ್ಣೇ ಇದ್ದರೆ ಹೇಗೆ? ಚಿಗುರು, ಹೂವು ಎಲ್ಲಾ ಇರಬೇಕು. ಪರಂಪರೆ ಅಂದರೆ ಅದು’ ಎಂದು ಮಾತಾಡಿದ್ದನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ. ಅಂದಿನ ಸಭೆಯಲ್ಲಿ ಮೊದಲ ಸನ್ಮಾನದ ಶಾಲು ಹೊದೆಸಿದಾಗ ಒಳಗೊಳಗೇ ಏನೋ ಪುಳಕ, ವರ್ಣನಾತೀತವಾದ ಆನಂದ ಎಂದು ಹಿಗ್ಗಿ ಹೇಳುತ್ತಾರೆ.

ಇದಾದ ಅನಂತರ ಕುಮಟಾ ತಾಲೂಕಿನ ಕೂಜಳ್ಳಿ ಸಮೀಪದ ಶಾಂತಿಕಾಪರಮೇಶ್ವರೀ ದೇವಲಯದಲ್ಲಿ ನಡೆದ ಸನ್ಮಾನ ಬಹುಮೌಲಿಕವಾದದ್ದು. ಏಕೆಂದರೆ ಇದು ಶೃಂಗೇರಿಯಲ್ಲಿ ಪಡೆದ ಗೌರವದ ಅನಂತರ ಪಡೆದ ಮೊದಲ ಸನ್ಮಾನ. ಆಮೇಲೆ ಇವರಿಗೆ ರಾಜ್ಯಾದ್ಯಂತ ಯಕ್ಷಗಾನ ಹಾಗೂ ವಿದ್ವತ್ ಕ್ಷ್ಷೇತ್ರಗಳೆರಡರಲ್ಲೂ ಸಾಕಷ್ಟು ಸನ್ಮಾನಗಳಾಗಿವೆ.
ಅನಂತರ ಮೈಸೂರಿನಲ್ಲಿ ‘ಯಕ್ಷಗಾನವಿಚಕ್ಷಣ’ ಎಂಬ ಬಿರುದು ಇವರಿಗೆ ಸಂದಿದೆ. ಧಾರವಾಡದ ಧರ್ಮಸಂಸ್ಕೃತಿ ಪ್ರತಿಷ್ಠಾನವು ‘ಸಂಸ್ಕೃತಿವಾಹಕ’ ಎಂಬ ಬಿರುದನ್ನು ನೀಡಿ ಇವರನ್ನು ಸನ್ಮಾನಿಸಿದೆ. ಕೂಡಲೀ ಶೃಂಗೇರಿಪೀಠವು ಇವರ ನ್ಯಾಯಶಾಸ್ತ್ರ ವೈದುಷ್ಯವನ್ನು ಕಂಡು ‘ನ್ಯಾಯ ವಿಶಾರದ’ ಎಂಬ ಬಿರುದಿನೊಂದಿಗೆ ಸನ್ಮಾನಿಸಿದೆ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವುಇವರು ರಚಿಸಿದ ‘ಭೃಂಗಮಾರ್ಗ’ ಖಂಡಕಾವ್ಯವನ್ನು ಗ್ರಹಿಸಿ ೨೦೧೨ ರ ‘ಪ್ರೊ. ಹಿರಿಯಣ್ಣ ಸಂಸ್ಕೃತ ಗ್ರಂಥ ಪುರಸ್ಕಾರ’ವನ್ನು ನೀಡಿ ಗೌರವಿಸಿದೆ. ೨೦೧೫ ರಲ್ಲಿ ಪುತ್ತೂರಿನ ವಿದ್ಯಾವರ್ಧಕ ಸಂಘವು ಇವರ ಸಾಹಿತ್ಯದ ಅನುಪಮ ಸೇವೆಯನ್ನು ಗುರುತಿಸಿ ‘ಶಂಕರಪ್ರಶಸ್ತಿ’ಯನ್ನು ನೀಡಿ ಸನ್ಮಾನಿಸಿದೆ. ಅಖಿಲ ಭಾರತ ಹವ್ಯಕ ಮಹಾಸಭಾವು ಇವರ ಸರ್ವತೋಮುಖವಾದ ಪಾಂಡಿತ್ಯವನ್ನು ಪರಿಗ್ರಹಿಸಿ ಪ್ರಥಮ ‘ಹವ್ಯಕಭೂಷಣ’ ಪ್ರಶಸ್ತಿಯನ್ನು ನೀಡಿ ಅಭಿನಂದಿಸಿದೆ. ಧಾರವಾಡದಲ್ಲಿ ಬ್ರಹ್ಮಶ್ರೀ ಪ್ರತಿಷ್ಠಾನವು ಇವರ ಶಾಸ್ತ್ರವಿದ್ವತ್ತೆಯನ್ನು ಕಂಡು ‘ಶಾಸ್ತ್ರ ಸಾಹಿತ್ಯ ಭೂಷಣಂ’ ಎಂಬ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ಸ್ವರ್ಣವಲ್ಲೀ ಮಠದ ಶ್ರೀಶ್ರೀಗಂಗಾಧರೇಂದ್ರಸರಸ್ವತೀಸ್ವಾಮಿಗಳು ಇವರ ಸಾಧನೆಯನ್ನು ಗುರುತಿಸಿ ‘ಸಾಧನಾಶಂಕರ’ ಪ್ರಶಸ್ತಿಯನ್ನು ನೀಡಿ ಅನುಗ್ರಹಿದ್ದಾರೆ. ಕೊಲ್ಲಾಪುರದ ಕರವೀರ ಮಠದಲ್ಲಿ ನಡೆದ ಸನ್ಮಾನ, ಶ್ರೀಶ್ರೀಕೇಶವಾನಂದಭಾರತೀ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ನೀಡೆದ ‘ನೀರ್ಚಾಲು ಪ್ರಶಸ್ತಿ ಇವೆಲ್ಲವೂ ಇವರನ್ನು ಧನ್ಯವಾಗಿಸಿವೆ. ಕಳೆದ ವರ್ಷ ಶಿರಸಿಯಲ್ಲಿ ಜರುಗಿದ ‘ಕೆರೇಕೈ 60 ದಂಟಕಲ್ 70’ ಎಂಬ ರಾಜ್ಯಮಟ್ಟದ ಅಭಿನಂದನಾ ಕಾರ್ಯಕ್ರಮವು ಇವರ ಬದುಕಿನ ಅವಿಸ್ಮರಣೀಯ ಕ್ಷಣ. ಆಗ ಯಕ್ಷಗಾನ ಬಯಲಾಟಕ್ಕಿಂತ ಇವರ ಸನ್ಮಾನ ಕಾರ್ಯಕ್ರಮಕ್ಕೆ ಹೆಚ್ಚು ಜನರು ಬಂದು ಇರನ್ನು ಅಭಿನಂದಿಸಿದ್ದು ದಾಖಲಾರ್ಹ ಚರಿತ್ರೆ. ಇದನ್ನು ಇವರು ತಾನು ಜನರ ಪ್ರೀತಿಗೆ ಸೋತ ಕ್ಷಣ ಇದು ಎಂದು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ.

 

ಈ ರೀತಿ ಮಾನ-ಮನ್ನಣೆಯ ಬಗೆಗೆ ತಮ್ಮ ಅಭಿಪ್ರಾಯಯವೇನು? ಎಂದು ಕೇಳಿದ್ದಕ್ಕೆ ನೀಡಿದ ವಿವರಣೆ, “ಬೆಳೆಯುವ-ಬೆಳಗುವ ವಸ್ತು (ಸತ್) ನಮ್ಮಲ್ಲಿರಬೇಕು. ಅದನ್ನು ಜನ ಗುರುತಿಸಬೇಕು. ಅವರು ಗುರುತಿಸಿದ್ದನ್ನು ನಾವು ಆದರಿಸಬೇಕು. ದೇಶಕಾಲದ ಪ್ರಸ್ತುತಿಗೆ ಈ ಸನ್ಮಾನ ಬಹುಮುಖ್ಯ. ಅಲ್ಲದಿದ್ದರೆ ದೇಶದಿಂದಲೂ ನಾವು ಅಪ್ರಸ್ತುತರಾಗಬಹುದು. ಕಾಲದಿಂದಲೂ ಅಪ್ರಸ್ತುತರಾಗಬಹುದು. ಅದಿಲ್ಲ ಎಂದು ನಿಶ್ಚಯಿಸಲು ಇದು ತಾಳೆ ನೋಡುವ ಕ್ರಮ” ಎಂದು. ಈ ಭಾವದಿಂದ ಸನ್ಮಾನ ಒಪ್ಪುವ ಸ್ವಭಾವ ಇವರದ್ದು. ಇದನ್ನು ಎಲ್ಲೆಡೆ ಸನ್ಮಾನ ಒಪ್ಪುವ ಎಲ್ಲ ಸಾಧಕರು ಹೊಂದಿದ್ದರೆ ಅದು ಚೆನ್ನ. ಇವರು ಎರಡು ಉತ್ತಮ ರೂಪಕಗಳ ಮಾದರಿಯಲ್ಲಿ ಮಾನ-ಮನ್ನಣೆಗಳನ್ನು ನೋಡುತ್ತ ಬಂದರೂ, ತನ್ನದೇ ಆದ ಸ್ವಂತ ವಿವೇಚನೆಯ ಮೇಲೆ ನೆಲೆ ನಿಂತಿದ್ದಾರೆ. ಇದುವೇ ಇವರಲ್ಲಿ ನಾನು ಮೆಚ್ಚಿದ ಗುಣ. ಇದು ಲೋಕಪ್ರಿಯವೂ ಸರಿ.

 

ಹೀಗೆ ನಮ್ಮ ನಾಡಿನ ಅಗ್ರಣೀಯ ವಿದ್ವಾಂಸರುಗಳಲ್ಲಿ ಒಬ್ಬರಾಗಿ ವಿಸ್ತೃತವಾದ ಜ್ಞಾನಶಾಖೆಗಳಲ್ಲಿ ಸಂಚರಿಸಿ ಸಾತ್ವಿಕ-ಸಾಂಸ್ಕೃತಿಕ ವಾತಾವರಣವನ್ನು ಶ್ರೀಮಂತಗೊಳಿಸಿದ, ಆ ಕಾಯಕದಲ್ಲಿ ಆನಂದ-ಪರಮಾನಂದಗಳನ್ನು ಹೊಂದುತ್ತಿರುವ ಉಮಾಕಾಂತ ಭಟ್ಟರು ನಾಡಿನ ಹೆಮ್ಮೆ. ವಿದ್ವತ್ ವಲಯದ ಕೀರ್ತಿ. ಅದು ಲೋಕ ವಿಸ್ತಾರವಾಗಿ ಸರ್ವತ್ರ ಅಭಿಮಾನವಾಗಿ ವ್ಯಾಪಿಸಲಿ, ವಿಜೃಂಭಿಸಲಿ ಎಂಬ ಪ್ರಾಂಜಲ ಆಶಯ ನಮ್ಮದು. ಹೀಗಾಗಿ ಈ ಹೃದ್ಗತವನ್ನು ಈ ರೀತಿ ಸಂಪನ್ನ ಗೊಳಿಸಬಯಸಿದ್ದೇನೆ.

 

ಇವರಿಗೆ ಮಹಾಮಹೋಪಾಧ್ಯಾಯ ಶ್ರೀರಾಮಭದ್ರಾಚಾರ್ಯರು ತಮ್ಮ ಮನೆಯಲ್ಲಿ ದೇವರ ಮುಂದೆ ಕೂರಿಸಿ ಹಣೆಗೆ ತಿಲಕ ಇಟ್ಟು, ಅಕ್ಷತೆ ಹಾಕಿ, ಪೂಜೆಯ ಹೊತ್ತಿನಲ್ಲಿ ತೊಡುವ ತಮ್ಮ ಮೈಮೇಲಿನ ಶಾಲನ್ನು ಹೊದೆಸಿ ಆಶೀರ್ವಾದ ಮಾಡಿದ್ದನ್ನು ‘ಪರಮಶ್ರೇಷ್ಠ’ ಎಂದು ಇಂದೂ ಇವರು ಕಣ್ಣಾಲಿ ತುಂಬಿ ನೆನಪಿಸಿಕೊಳ್ಳುತ್ತಾರೆ. ಇದು ನಾ ಕಂಡ ಸತ್ಯ. ಅಂದು ಇವರಿಗೆ ಇವರ ಗುರುವರ್ಯರು ಮಾಡಿದ ಆಶೀರ್ವಾದವೇ “ನೀನು ನಮ್ಮಲ್ಲಿ ಓದಿದ ಉತ್ತಮ ವಿದ್ಯಾರ್ಥಿ-ಒಳ್ಳೆಯ ವಿದ್ವಾಂಸ.”

 

Author Details


Srimukha

Leave a Reply

Your email address will not be published. Required fields are marked *