ಅತಿಯಾದ ಪರಿಚಯವೇ ಅಜ್ಞಾನಕ್ಕೆ ಕಾರಣ : ಲೋಹಿತಶರ್ಮಾ ಇಡುವಾಣಿ

ಲೇಖನ

ಹೀಗನಿಸುತ್ತಿತ್ತು ಆಗಾಗ. ಇರಲಿಲ್ಲ ಆದರೆ ಸ್ಪಷ್ಟತೆ. ಸ್ಪಷ್ಟವಾಗಿಸಿತು ಪಾರಿವಾಳ ನನ್ನ ಅಸ್ಪಷ್ಟತೆಯನ್ನು.

ಓದುತ್ತಿದ್ದೆ ನನ್ನಷ್ಟಕ್ಕೆ ನಾನು ಒಂದು ರೂಮಿನಲ್ಲಿ ಕುಳಿತು. ಹಾರುತ್ತಿದ್ದವು ಹೊರಗಡೆ ಪಾರಿವಾಳಗಳು. ನೋಡುತ್ತಿದ್ದೆ ಆಗಾಗ ಅವುಗಳನ್ನೂ. ಪ್ರಯತ್ನಿಸುತ್ತಿದ್ದವು ಅವು ಕಿಟಕಿಯ ಮೂಲಕ ಒಳ ಬರಲು. ಬರುತ್ತಿರಲಿಲ್ಲ, ಬರಲಾಗುತ್ತಿರಲಿಲ್ಲ. ಅಲ್ಲಿ ನಾನಿದ್ದೆ ಹಾಗಾಗಿ. ಕುತೂಹಲ ನನಗೆ, ಇವೇಕೆ ಇಲ್ಲಿ ಬರುತ್ತಿವೆ ಎಂದು. ನೋಡಿದೆ ಸ್ವಲ್ಪ ಸಮಯ. ಎಲ್ಲೆ ಮೀರಿತು ಕುತೂಹಲ. ಕಣ್ಣಾಡಿಸಿದೆ ರೂಮಿನ ಸುತ್ತ. ಕಡ್ಡಿಗಳಿದ್ದವು ಮೂಲೆಯಲ್ಲಿ. ಅರ್ಥಮಾಡಿಕೊಂಡೆ ಎಲ್ಲವನ್ನೂ. ಎದ್ದು ಹೋಗಲಿಲ್ಲ. ಬಾರದಂತೆ ತಡೆಯುವುದು ನನ್ನ ಬಯಕೆಯಾಗಿತ್ತು, ಗಲೀಜು ಮಾಡುವವೆಂದು. ಹುಸಿಯಾಯಿತು ನನ್ನ ಪ್ರತಿಜ್ಞೆ ಎರಡು ಮೂರು ದಿನಗಳಲ್ಲಿ.

ಓದಿತ್ತಿದ್ದೆ ಅದೇ ಸ್ಥಳದಲ್ಲಿ ತಲೆ ತಗ್ಗಿಸಿ. ಆರಂಭಿಸಿದ್ದವು ಪಾರಿವಾಳಗಳು ಗೂಡು ಕಟ್ಟಲು. ಕಡ್ಡಿಗಳನ್ನು ಹೆಕ್ಕಿ ಹಾರಿ ಬರುತ್ತಿದ್ದವು ನನ್ನೆದುರೇ. ಅಷ್ಟೇ ಅಲ್ಲ, ನನಗೇ ಭಯ ಹುಟ್ಟಿಸುವಂತೆ ಹಾರಿಹೋಗುತ್ತಿದ್ದವು ಪಕ್ಕದಲ್ಲೇ. ಗೂಡು ಕಟ್ಟಿಕೊಂಡವು ನೋಡನೋಡುತ್ತಿದ್ದಂತೆ. ಅವಕ್ಕೆ ಅನಂತರ ಭಯವೇ ಇರಲಿಲ್ಲ ನನಗಿಂತ ಭಿನ್ನವಾದ ಜೀವಿಯೊಂದಿದೆ, ಅಪಾಯ ಬರಬಹುದೆಂದು. ಅದಕ್ಕೆ ಕಾರಣ ಅತಿ ಪರಿಚಯ.

ಆರಂಭದಲ್ಲಿ ಅವಕ್ಕೆ ನಾನು ಬೇರೆಯವ. ಹತ್ತಿರ ಬರುತ್ತಿರಲಿಲ್ಲ ಹಾಗಾಗಿ. ಕಾಲ ಸರಿದಂತೆ ಗೊತ್ತಾಯಿತು ನಾನೇನೂ ಮಾಡಲಾರೆನೆಂದು. ಒಳ ಬಂದವು ಹಾಗಾಗಿ. ಗೂಡು ಕಟ್ಟಿಕೊಂಡವು ನನ್ನೆದುರೇ. ಹಾರಾಡಿದವು ನಾನೂ ಭಯಗೊಳ್ಳುವಂತೆ. ಇದೇ ಅತಿಪರಿಚಯ ಲಕ್ಷಣ.

ಇದು ಪಕ್ಷಿ ಮತ್ತು ಮನುಷ್ಯನ ಕಥೆಯಲ್ಲ. ಪ್ರಾಣಿ ಮತ್ತು ಪ್ರಾಣಿಗಳ ಕಥೆ, ಮನುಷ್ಯ ಮತ್ತು ಮನುಷ್ಯರ ಕಥೆಯೂ. ಮನುಷ್ಯ ಮತ್ತು ದೇವರ ಕಥೆಯೂ.

ಮನುಷ್ಯ ಮತ್ತೊಬ್ಬ ಮನುಷ್ಯನನ್ನು ತಾತ್ಸಾರ ಮಾಡುವುದು ಅತಿಯಾದ ಪರಿಚಯವಾದಾಗ. ಆತ ಎಂತಹ ದೊಡ್ಡ ವ್ಯಕ್ತಿಯೇ ಆಗಿರಲಿ. ಅವನೊಡನೆ ಅತಿಯಾದ ಪರಿಯಚವಾದಾಗ ತಾತ್ಸಾರವೇ ಮೂಡುವುದು. ಇವನು ಇಷ್ಟೇ ಎನ್ನುವ ಭಾವವೇ ತಾತ್ಸಾರ. ಗುರು-ಶಿಷ್ಯ ನಡುವೆ ಕೂಡ ಇಂತಹ ಭಾವ ಏರ್ಪಡುತ್ತದೆ. ಅತಿಯಾದ ಪರಿಚಿತನಾದ ಗುರುವು ಶಿಷ್ಯನಿಗೆ ಶ್ರೇಷ್ಠವೆನಿಸನು. ಅದು ಶಿಷ್ಯನ ಅಜ್ಞಾನ. ಗುರುವುಗೆ ಶಿಷ್ಯನ ಕುರಿತು ಅನ್ನಿಸಿದರೆ ಅದು ಜ್ಞಾನವನ್ನು ಹೆಚ್ಚಿಸುವ ದಾರಿ.

ಹಾಗೆಯೇ ದೇವರು ಮತ್ತು ಮನುಷ್ಯ ಕೂಡ. ದೇವರು ಯಾಕೆ ಎಲ್ಲರಿಗೂ ಪ್ರತ್ಯಕ್ಷನಾಗೋದಿಲ್ಲ ಎಂದರೆ ಇದೇ ಕಾರಣ. ಅತಿಪರಿಚಯದಿಂದ ತಾತ್ಸಾರವುಂಟಾಗುವ ಕಾರಣಕ್ಕೆ. ಎಲ್ಲರ ಪ್ರಾರ್ಥನೆಗೂ ದೇವರು ಒಲಿದರೆ ಅದಕ್ಕೆ ಏನರ್ಥ? ಶ್ರೇಷ್ಠತೆ ಉಳಿಯದು, ಉರುಳಿಹೋಗುವುದು.

ಹಾಗೆಯೇ ಮನುಷ್ಯ ಮತ್ತು ಮನುಷ್ಯರ ಸಂಬಂಧ ಕೂಡ. ಯಾರು ಅತಿಯಾದ ಪರಿಚಯಕ್ಕೊಳಗಾಗುವನೋ ಆತ ಅವಜ್ಞೆಗೆ ಒಳಗಾಗುತ್ತಾನೆ. ಇಬ್ಬರೂ ನಡುವೆ ಅತಿ ಪರಿಚಯವಾದರೆ ಸ್ನೇಹವಾಗಿ ಪರಿವರ್ತಿತವಾಗುತ್ತದೆ. ಅದೇ ಒಂದೇ ಕಡೆಯ ಪರಿಚಯವಾದರೆ ತಾತ್ಸಾರವೇ.

ಗಂಡ ಮತ್ತು ಹೆಂಡತಿಯ ನಡುವೆಯೂ ಇಂತಹ ಭಾವವೇ ಇರುವುದು. ಗಂಡ ಹೆಂಡತಿಯನ್ನೂ, ಹೆಂಡತಿ ಗಂಡನನ್ನೂ ತಾತ್ಸಾರ ಭಾವದಿಂದ ಕಾಣುವುದೂ ಇದೇ ಕಾರಣಕ್ಕೆ.

ಇದಕ್ಕೆ ಮನೀಜ್ಞವಾದ ಸುಭಾಷಿತವೂ ಇದೆ.
ಅತಿಪರಿಚಯಾದವಜ್ಞಾ
ಸಂತತಗಮನಾತ್ ಅನಾದರೋ ಭವತಿ |
ಮಲಯೇ ಬಿಲ್ಲಪುರಂಧ್ರೀ
ಚಂದನತರುಕಾಷ್ಠಮಿಂಧನಂ ಕರೋತಿ ||

ಅತಿಯಾದ ಪರಿಚಯ, ಒಂದೇ ಕಡೆಗೆ ನಿರಂತರ ಗಮನ ಇವೆರಡೂ ತಾತ್ಸರದ ಮೂಲ.
ಮಲಯಪರ್ವತದಲ್ಲಿ ವಾಸಿಸುವ ಬಿಲ್ಲ ಸ್ತ್ರೀಯರು, ಶ್ರೇಷ್ಠವಾದ ಚಂದನದ ಮರಗಳನ್ನು ಉರುವಲಿಗೆ ಬಳಸುತ್ತಾರೆ‌.

ಅತಿಯಾಗಿ ಚಂದನ ಮರಗಳು ಬೆಳೆಯುವ ಸ್ಥಳ‌ ಮಲಯಪರ್ವತ. ಆ ಚಂದನ ಮರಗಳು ಮಲಯ ಪರ್ವತದಿಂ ಸಾವಿರಾರು ಮೈಲು ದೂರವಿರುವವರಿಗೆ ಶ್ರೇಷ್ಠ ಮರ. ಪೂಜನೀಯ ವೃಕ್ಷ. ಆದರೆ ಅಲ್ಲಿದ್ದವರಿಗೆ ಅದು ಕಟ್ಟಿಗೆ ಅಷ್ಟೇ. ಅದಕ್ಕೆ ಕಾರಣ ಅತಿಪರಿಚಯ.

ಇನ್ನೊಬ್ಬರ ಪರಿಚಯ ಅತಿಯಾಗಿ ಆಗಬಾರದು. ನಮ್ಮ ಪರಿಚಯ ಮಿತಿ ಮೀರಬಾರದು.

 

Author Details


Srimukha

Leave a Reply

Your email address will not be published. Required fields are marked *