ಜವಾಬ್ದಾರಿ ಅರಿತು ನಡೆಯುವ ಕರ್ತವ್ಯ ಪ್ರತಿಯೊಬ್ಬ ನಾಗರಿಕರದ್ದು.
ಭಾರತಕ್ಕೆ ಆಜಾದಿಯ ಕಲ್ಪನೆಯನ್ನು ಕೊಟ್ಟು ಅಜೇಯರಾಗಿಯೇ ಬದುಕು ಪೂರೈಸಿದ ಕ್ರಾಂತಿಕಾರಿ ಚಂದ್ರಶೇಖರ ಆಜಾದರು ತಮ್ಮ ಜೀವವನ್ನು ದೇಶಕ್ಕಾಗಿ ಅರ್ಪಿಸಿದ್ದು ನಿನ್ನೆಯ ದಿನ ಅಂದರೆ ಫೆಬ್ರವರಿ 27, 1931ರಲ್ಲಿ.
ಅಹಿಂಸಾ ಪರಮೋ ಧರ್ಮಃ’ ಎಂಬ ಮಾತಿನಲ್ಲೇ ಮುಳುಗಿದ್ದ ಭಾರತೀಯರಿಗೆ ಭಾರತದವರೇ ಹೇಳಿದ ‘ಧರ್ಮಹಿಂಸಾ ತಥೈವ ಚ’ ಎಂಬದನ್ನು ನೆನಪಿಸುವ ಮೂಲಕ ಕ್ರಾಂತಿಕಾರಿ ಹೋರಾಟಕ್ಕೆ ಮುನ್ನುಡಿ ಬರೆದವರು ಆಜಾದರು. ಅವರ ತ್ಯಾಗದ ಸ್ಪೂರ್ತಿ ನಮ್ಮೆಲ್ಲರ ಹೃದಯದಲ್ಲಿ ನಿತ್ಯಸತ್ಯವಾಗಿದೆ. ಈ ಸ್ಮರಣೆಯಲ್ಲಿ ಒಂದು ಸಣ್ಣ ನುಡಿನಮನ.
೧೯೨೧ರ ಸಮಯದಲ್ಲಿ ಕಾಶಿಯಲ್ಲಿ ಗಾಂಧೀಜಿಯವರ ಅಸಹಕಾರ ಚಳುವಳಿಯ ಮೆರವಣಿಗೆಯೊಂದು ನಡೆಯುತ್ತಿತ್ತು. ಹೋರಾಟ ನಿರತ ದೇಶಭಕ್ತರ ಮೇಲೆ, ಸಾಧು ಸಂತರ ಮೇಲೆ ಪೋಲೀಸರು ಮನಬಂದಂತೆ ಲಾಠಿ ಚಾರ್ಜ್ ಮಾಡಿದರು. ಕಚ್ಚೆಪಂಚೆ ಜುಬ್ಬಾ ಧರಿಸಿ, ಹಣೆಯ ಮೇಲೆ ತಿಲಕ ಇಟ್ಟು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದ ತರುಣನೊಬ್ಬ ಪೋಲೀಸರನ್ನು ಕರೆದು ಅವರು ಇವನತ್ತ ನೋಡುತ್ತಲೇ ಕಲ್ಲಿನಿಂದ ಅವರ ಹಣೆಗೆ ಹೊಡೆದಿದ್ದ. ಆ ಧೀರ ಹುಡುಗನೇ ಚಂದ್ರಶೇಖರ್.
ನ್ಯಾಯಾಲಯದ ಕಟಕಟೆಯಲ್ಲಿ ಈತ ಎದೆಯುಬ್ಬಿಸಿ ನಿಂತಿದ್ದ. ಇಲ್ಲಿ ಚಂದ್ರಶೇಖರ ಮತ್ತು ನ್ಯಾಯಾಧೀಶರ ನಡುವಿನ ಸಂಭಾಷಣೆ ಯಾರಲ್ಲಿಯೂ ದೇಶಭಕ್ತಿಯ ಕಿಚ್ಚು ಹೊತ್ತಿಸಬಲ್ಲದು. ಹೆಸರೇನು ಎಂದು ಕೇಳಿದ ಪ್ರಶ್ನೆಗೆ ‘ಆಝಾದ್’ ಎಂದು ಉತ್ತರಿಸಿ, ಕೆಲಸವೇನು ಎಂದು ಕೇಳಿದ ಪ್ರಶ್ನೆಗೆ ‘ಇಂಗ್ಲೀಷರನ್ನು ಭಾರತದಿಂದ ತೊಲಗಿಸುವುದು’ ಎಂದು ಹೇಳಿ ದಿಟ್ಟತನ ತೋರಿದ್ದರು.
“ದುಶ್ಮನೋಂಕೀ ಗೋಲಿಯೋಂಕೋ ಮೈ ಸಾಮ್ನಾ ಕರೂಂಗಾ, ಆಜಾದ್ ಹೀ ರಹೂಂಗಾ. ಮೈ ಆಜಾದ್ ಹೀ ಮರೂಂಗಾ.” ನಾನು ಸ್ವತಂತ್ರನಾಗಿಯೇ ಸಾಯುತ್ತೇನೆ ಎಂಬ ಪ್ರತಿಜ್ಞೆಯನ್ನು ಮಾಡಿದ್ದರೂ ಮಾತ್ರವಲ್ಲ ಜೀವನದ ಅಂತ್ಯದಲ್ಲೂ ನುಡಿದಂತೆ ನಡೆದರು.
ಉತ್ತರಪ್ರದೇಶದ ಚೌರಾಚೌರಿಯಲ್ಲಿನ ಘಟನೆಯ ನಂತರ ಗಾಂಧೀಜಿಯವರು ಹಠಾತ್ತಾಗಿ ಅಸಹಕಾರ ಚಳುವಳಿಯನ್ನು ಹಿಂಪಡೆದಿದ್ದರಿಂದ ಆಝಾದರು ಮಂದಗತಿಯ ನಿಲುವುಗಳಿಂದ ದೂರವಾಗಿ ರಾಮಪ್ರಸಾದ್ ಬಿಸ್ಮಿಲ್ಲರ ಜೊತೆ ಸೇರಿ ಕ್ರಾಂತಿಕಾರಿ ಹೋರಾಟದ ದಾರಿ ಹಿಡಿದರು.
ಪ್ರಣ್ವೇಶ್ ಚಾಟರ್ಜಿಯ ಮೂಲಕ ಆಝಾದರಿಗೆ ರಾಮ್ ಪ್ರಸಾದ್ ಬಿಸ್ಮಿಲ್ ಅವರ ಸಂಪರ್ಕ ಏರ್ಪಟ್ಟಿತು. ರಾಮ್ ಪ್ರಸಾದರು, ಚಾಟರ್ಜಿ, ಸತ್ಯೆಂದ್ರನಾಥ್ ಸನ್ಯಾಲ್, ಶಚೀಂದ್ರನಾಥ್ ಭಕ್ಷಿ ಸೇರಿ ೧೯೨೪ ರಲ್ಲಿ ಹಿಂದೂಸ್ಥಾನ್ ರಿಪಬ್ಲಿಕನ್ ಅಸೋಸಿಯೇಷನ್ ಸ್ಥಾಪಿಸಿದರು. ಈ ಸಂಘಟನೆಯ ಮೂಲೋದ್ದೇಶವೇ ಜಾತಿ, ಧರ್ಮಗಳ ಬೇಧಭಾವಗಳಲ್ಲಿದ ಎಲ್ಲರಿಗೂ ಸಮನಾದ ಅಧಿಕಾರ ಮತ್ತು ಅವಕಾಶಗಳಿಂದ ಕೂಡಿದ ಸ್ವತಂತ್ರ ಭಾರತ. ಇದು ಆಝಾದರ ಚಿಂತನೆಗಳಿಗೆ ಶಕ್ತಿ ನೀಡಿತು. ಆಝಾದರು ಸಂಘಟನೆಗಾಗಿ ಹಣ ಸಂಗ್ರಹಿಸುವ ಕಾರ್ಯ ಶುರುಮಾಡಿದರು. ಬ್ರಿಟೀಷರ ಮೇಲೆ ಯಾವ ಪರಿಯ ಕೋಪ ಇತ್ತೆಂದರೆ ಬ್ರಿಟೀಷ್ ಸರ್ಕಾರವನ್ನು ಲೂಟಿ ಮಾಡಿಯೇ ಹಣ ಸಂಗ್ರಹಿಸುತ್ತಿದ್ದರು ಆಝಾದರು.
ಅವುಗಳಲ್ಲಿ ಪ್ರಮುಖವಾದದರು ೧೯೨೫ರ ಕಕೋರಿ ರೈಲು ದರೋಡೆ. ಈ ಪ್ರಕರಣದಲ್ಲಿ ರಾಮ್ ಪ್ರಸಾದ್ ಬಿಸ್ಮಿಲ್ಲಾ, ಅಷ್ಫಕ್ಕುಲ್ಲಾ ಖಾನ್ ಸೇರಿದಂತೆ ನಾಲ್ವರಿಗೆ ಮರಣದಂಡನೆ ವಿಧಿಸಲಾಯಿತು. ಇಲ್ಲಿಯೂ ಆಝಾದರು ಪೋಲಿಸರ ಕೈಗೆ ಸಿಗದೆ ಅಜೇಯರಾಗಿಯೇ ಉಳಿದರು. ಇಷ್ಟಾದರೂ ಭಾರತೀಯರ ಮೇಲೆ ದೌರ್ಜನ್ಯ ಎಸಗುವ, ಅನ್ಯಾಯ ಮಾಡುವವರಿಗೆ ತಕ್ಕ ಪಾಠ ಕಲಿಸುತ್ತಿದರು ಆಝಾದ್.
೧೯೨೭ರಲ್ಲಿ ಸೈಮನ್ ಆಯೋಗ ಭಾರತಕ್ಕೆ ಬಂದಾಗ ಅವರ ವಿರುದ್ಧದ ಹೋರಾಟದಲ್ಲಿ ಲಾಲಾ ಲಜಪತ ರಾಯರ ಮೇಲಿನ ಹಲ್ಲೆಯ ಸೇಡು ತೀರಿಸಿಕೊಳ್ಳುವುದಕ್ಕಾಗಿ ೧೯೨೮ರಲ್ಲಿ ಸೈಮನ್‍ನನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತಾದರೂ, ಅವನ ಮೇಲಾಧಿಕಾರಿ ಸ್ಯಾಂಡರ್ಸ್ ಸಾವನ್ನಪ್ಪಿದ್ದ. ಹಾಗೆಯೇ ೧೯೨೯ರಲ್ಲಿ ಅಸ್ಸೆಂಬ್ಲಿಯಲ್ಲಿ ಭಗತ್ ಸಿಂಗ್ ಹಾಗೂ ಬುಕುಟೇಶ್ವರ ದತ್ತರು ಬಾಂಬ್ ಸ್ಪೋಟಿಸಿದ್ದರು. ಈ ಎರಡೂ ಕಾರ್ಯಾಚರಣೆಯಲ್ಲಿ ಆಝಾದರದ್ದೇ ಮುಖ್ಯ ಭೂಮಿಕೆಯಿತ್ತು ಮತ್ತು ಪೋಲಿಸರಿಗೆ ಇದ್ದ ಸ್ಪಷ್ಟ ಮಾಹಿತಿಯಿಂದ ಆಜಾದರನ್ನು ಬಂಧಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದರೂ, ಎರಡೂ ಬಾರಿ ತಪ್ಪಿಸಿಕೊಂಡು ಅಜೇಯರಾಗೇ ಉಳಿದರು ಆಜಾದರು.
೧೯೩೧ರ ಫೆಬ್ರವರಿ ೨೩ರಂದು ಅಲಹಾಬಾದಿನ ಆಲ್ಫ್ರೆಡ್ ಪಾರ್ಕಿಗೆ ಆಜಾದರು ಸುಖದೇವನೊಡನೆ ಬಂದಿದ್ದರು. ಪೋಲಿಸರ ದಂಡೇ ಬಂದು ಪಾರ್ಕನ್ನು ಸುತ್ತುವರೆದು ಆಜಾದರ ಮೇಲೆ ಗುಂಡು ಹಾರಿಸಲು ಸಿದ್ಧವಾಗಿತ್ತು. ಬಂದುಕೂಧಾರಿ ಪೋಲಿಸರೊಂದಿಗೆ ಆಝಾದರು ವೀರಾವೇಶದಿಂದ ಹೋರಾಡಿದರು. ಆಜಾದರಿಗೆ ತಮ್ಮ ಬಂದೂಕಿನಿಂದ ಹೊರಟ ಒಂದೊಂದು ಗುಂಡಿನ ಲೆಕ್ಕವೂ ಇತ್ತು. ಕಡೆಯ ಒಂದು ಗುಂಡು ಬಾಕಿ ಇದೆ ಎನ್ನುವಾಗ ತಮ್ಮ ತಲೆಗೇ ಗುಂಡು ಹೊಡೆದುಕೊಂಡರು. ಬ್ರಿಟೀಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಆಜಾದರು ಅವರು ಮಾಡಿದ್ದ ‘ಸ್ವತಂತ್ರನಾಗಿಯೇ ಸಾಯುತ್ತೇನೆ ಹೊರತು ಬ್ರೀಟೀಷರ ಕೈಯಿಂದ ಅಲ್ಲ’ ಎಂಬ ಸಂಕಲ್ಪವನ್ನು ತಾಯಿ ಭಾರತಿಗೆ ಪ್ರಾಣದಾರತಿ ಮಾಡುವ ಮೂಲಕ ಅಜೇಯರಾಗಿಯೇ ಸಾಧಿಸಿದರು.
ಯಾವ ಭಾರತದ ಸ್ವಾತಂತ್ರ್ಯಕ್ಕಾಗಿ ಅಜೇಯ ಸಂಕಲ್ಪದ ಮೂಲಕ ಆಜಾದರಂತಹ ಅಸಂಖ್ಯಾತ ಹೋರಾಟಗಾರರು ಬಲಿದಾನಗೈದರೋ, ಯಾವ ಭಾರತದ ರಕ್ಷಣೆಗಾಗಿ ದಿನಂಪ್ರತಿ ಅಸಂಖ್ಯಾತ ಯೋಧರು ಜೀವಾರ್ಪಣ ಮಾಡ್ತಿದ್ದಾರೋ ಅದೇ ಭಾರತವು ಇಂದು ಯುದ್ಧ ರೀತಿಯ ವಾತಾವರಣವನ್ನು ಎದುರಿಸುತ್ತಿದೆ. ಭಾರತದ ಹೆಮ್ಮೆಯ ಯೋಧರು ಸರಿಯಾಗಿಯೇ ಉತ್ತರಿಸುತ್ತಿದ್ದಾರೆ.
ಈ ಹಂತದಲ್ಲಿ ಭಾರತದ ಪ್ರತಿಯೊಬ್ಬ ನಾಗರಿಕನೂ ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಬೇಕಿದೆ. ನಮ್ಮ ಒಂದೊಂದು ಸಣ್ಣ ನಿರ್ಲಕ್ಷ್ಯ, ತಪ್ಪುಗಳು ದೇಶದ ರಕ್ಷಣಾ ವ್ಯವಸ್ಥೆಯ ಮೇಲೆ ಬಹುದೊಡ್ಡ ಪರಿಣಾಮ ಬೀಳಲಿದೆ. ಸಾಮಾಜಿಕ ಜಾಲತಾಣಗಳಲ್ಲೇ ಆಗಲಿ ಅಥವಾ ಸಮಾಜದ ಮಧ್ಯದಲ್ಲೇ ಆಗಲಿ ನಾವು ಹಂಚಿಕೊಳ್ಳುವ ಮಾಹಿತಿಗಳ ಕುರಿತು ನಾವು ಎಚ್ಚರದಿಂದಿರಬೇಕು. ಯೋಧರ, ಶಸ್ತ್ರಾಸ್ತ್ರಗಳ ಕುರಿತು ಮಾಹಿತಿಗಳನ್ನು ನಾವು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬಾರದು. ಗಾಳಿಸುದ್ದಿಗಳ ಪಸರುವಿಕೆಯನ್ನು ತಡೆಯಬೇಕು. ಭಾರತೀಯರ ಧೈರ್ಯ ಕುಸಿಯುವಂತಹ ವಿಚಾರಗಳನ್ನು ವಿನಿಮಯ ಮಾಡಬಾರದು. ವಿರೋಧಿಗಳು ನಮ್ಮ ದೇಶದ ದಿಕ್ಕು ತಪ್ಪಿಸಲು ಮಿಥ್ಯ ಸಂದೇಶಗಳನ್ನು ಹರಡಿಸುವ ಸಾಧ್ಯತೆಗಳಿರುತ್ತವೆ, ನಮಗೆ ಬಂದ ಮಾಹಿತಿ ಅಧಿಕೃತ ಎಂದು ಖಚಿತವಾಗುವವರೆಗೂ ನಾವು ಅದನ್ನು ಬೇರೆಯವರಿಗೆ ಕಳುಹಿಸದಿರೋಣ. ನಮ್ಮ ನಡುವೆಯೂ ಒಂದಷ್ಟು ಜನ ವಿರೋಧಿಗಳಿಗಾಗಿ ಕೆಲಸ ಮಾಡುವವರಿದ್ದಾರೆ. ಅಂಥವರ ಕುರಿತು ಎಚ್ಚರದಿಂದ ಇರಬೇಕು. ಕೇಂದ್ರ ಸರ್ಕಾರ ಹಾಗೂ ರಕ್ಷಣಾ ವ್ಯವಸ್ಥೆ ಯಾವುದೇ ನಿರ್ಧಾರ ತೆಗೆದುಕೊಂಡರೂ ಜಾತ್ಯತೀತ-ಪಕ್ಷಾತೀತವಾಗಿ ನಾವೆಲ್ಲರೂ ಒಂದಾಗಿ ಬೆಂಬಲಿಸಬೇಕಿದೆ. ಈ ಸಮಯದಲ್ಲೂ ಒಂದಾಗದಿದ್ದರೆ ಮತ್ತೆ ಯಾವಾಗ?
ಈ ರೀತಿಯ ಹೆಜ್ಜೆಗಳ ಮೂಲಕ ಜಾಗತಿಕ ಮಟ್ಟದಲ್ಲಿ ಅಜೇಯ ಯಶಸ್ಸು ಸಾಧಿಸಬೇಕಿದೆ. ಇದಕ್ಕಾಗಿ ನಾವೆಲ್ಲ ಕಟಿಬದ್ಧರಾಗಬೇಕು. ಹೀಗೆ ಆದಾಗ ಭಾರತ ವಿಶ್ವಗುರುತ್ವದಿಂದ ಮತ್ತೆ ಶೋಭಿಸುತ್ತದೆ. ಮತ್ತು ತನ್ಮೂಲಕ ತ್ಯಾಗ ಬಲಿದಾನ ಮಾಡಿದ ಸ್ವಾತಂತ್ರ್ಯ ಹೋರಾಟಗಾರರ, ಗಡಿ ರಕ್ಷಕರ ಆತ್ಮಗಳಿಗೆ ಶಾಂತಿ ಸಿಗಲಿದೆ.