ಬದುಕಿಗೊಂದು ಬದ್ಧತೆ ಬೇಕು. ನಾ ಹೀಗೆ ಬದುಕುವುದೆಂಬ ನಿರ್ಧಾರ ಬೇಕು. ಅದಕ್ಕೆ ಬೇಕಾದಂತೆ ತನ್ನ ಸುತ್ತಲಿನ ವಾತವರಣವನ್ನು ಸೃಷ್ಟಿಸಿಕೊಳ್ಳುವುದೇ ಜಾಣತನ. ಆಯ್ದುಕೊಂಡದನ್ನ ಪ್ರೀತಿಸಿದರೆ, ಒಪ್ಪಿಕೊಂಡಿದ್ದನ್ನ ಅಪ್ಪಿಕೊಂಡರೆ ಬದುಕು ನಿರಾಳ. ಕೆಲವೊಮ್ಮೆ ಆಲೋಚನೆ ಇಲ್ಲದೆಯೇ ಬದುಕು ನಿರ್ಧಾರವಾಗಿ ಬಿಡುವುದು. ಆಗ ಬಂದಿದ್ದನ್ನ ಸ್ವೀಕರಿಸಿ ಒಪ್ಪಿಕೊಳ್ಳೋದು ಅನಿವಾರ್ಯ.
ಗೆಳತಿಯೊಬ್ಬಳ ಮಾತಿನ ದಾಟಿ ಹೀಗಿತ್ತು. ‘ಹೋಗಿ ಹೋಗಿ ಹಳ್ಳಿ ಮನೆ ಒಪ್ಪಿಕೊಂಡು ಮದುವೆ ಆಗಿ ಬಿಟ್ಟೆಯಲ್ಲೇ. ಪೇಟೆ ಎಷ್ಟು ಚನ್ನಾಗಿದೆ ಗೊತ್ತಾ?’
ಅವಳ ಮಾತಿನ ದಾಟಿ ಅವಳ ಮನಸಿನ ಆಲೋಚನಾಮಟ್ಟಕ್ಕೆ ಬಿಟ್ಟಿದ್ದು. ಅವಳಿಗೆ ಪೇಟೆಯೇ ಸುಖ. ನಮಗೆ ಹಳ್ಳಿಯೇ ಸುಖ. ಈ ಸುಖ ಅನ್ನೋದು ಇನ್ನೆಲ್ಲೋ ಇರುವಂತಹದ್ದಲ್ಲ. ಅದು ನಮ್ಮೊಳಗಿನ ಭಾವ, ಎನ್ನೋದು ನನ್ನ ನಿಲುವು.
ಹೌದು. ಹಳ್ಳಿಯ ಜೀವನ ನಾ ಆರಿಸಿಕೊಂಡ ಬದುಕು. ಆಯ್ಕೆ ಮಾಡಿಕೊಂಡಾಗಿದೆ. ಅದನ್ನೇ ಖುಷಿಯಿಂದ ಪ್ರೀತಿಸಿ ಒಪ್ಪಿಕೊಂಡಾಗಿದೆ. ಅವಳಿಗೆ ಪೇಟೆಯಲ್ಲಿ ಏನು ಸುಖವೋ ಅದು ನನಗೆ ಇಲ್ಲೇ ದೊರಕಿದೆ. ಜೀವನಶೈಲಿ ಬದಲಾಗಿರಬಹುದು. ಆದರೆ ಸುಖಕ್ಕೇನೂ ಕೊರತೆ ಇಲ್ಲ.
ಮಾಡುವ ಕೆಲಸದಲ್ಲಿ ಪ್ರೀತಿ ಇದ್ದರೆ ಯಾವುದೂ ಅಸಾಧ್ಯ ಎನ್ನುವ ಮಾತೇ ಇಲ್ಲ. ನಾನು ಹಳ್ಳಿಯಲ್ಲೇ ಹುಟ್ಟಿ ಬೆಳೆದರೂ ತವರಿನಲ್ಲಿ ಯಾವ ಹಳ್ಳಿಮನೆ ಕೆಲಸವನ್ನೂ ಕಲಿತಿಲ್ಲ. ಅಮ್ಮ ‘ಸ್ವಲ್ಪ ನೋಡು, ಕೊಟ್ಟಿಗೆಯಲ್ಲಿ ದನ ಸಗಣಿ ಹಾಕಿದೆ’ ಅಂದ್ರೆ, ‘ಹೋಗೆ, ನೀನೇ ತೆಗಿ’ ಅಂತ ಬೆಳೆದವಳು ನಾನು. ಆದರೆ ಈಗ ಬೆಳಗ್ಗೆ ಎದ್ದ ಕೂಡಲೇ ಮಾಡೋ ಮೊದಲ ಕೆಲಸವೇ ಕೊಟ್ಟಿಗೆ ಕೆಲಸ. ಮೊದಲು ತೋಟಕ್ಕೆ ಗೆಳತಿಯರ ಜೊತೆ ಆಟ ಆಡಲಿಕ್ಕೆ ಹೋಗ್ತಿದ್ದೆ ಬಿಟ್ರೆ ಯಾವ ಕೆಲಸವೂ ಗೊತ್ತಿಲ್ಲ. ಈಗ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಬಲ್ಲೆ. ಗದ್ದೆಯಂತೂ ಕಣ್ಣಲ್ಲಿ ನೋಡಿದ್ದು ಬಿಟ್ಟರೆ ಅದರ ಯಾವ ಕೆಲಸದ ಅರಿವೂ ಇರಲಿಲ್ಲ.
ಈಗ ಅದೆಲ್ಲವನ್ನೂ ಕಲಿತೆ. ಯಾವ ಕೆಲಸವೂ ಕಷ್ಟ ಎನ್ನಿಸಲೇ ಇಲ್ಲ. ಮಾಡೋ ಪ್ರತಿ ಕೆಲಸವನ್ನೂ ಪ್ರೀತಿಸಿದೆ. ಗೌರವಿಸಿದೆ. ಸುಲಭ ಆಗಿಹೋಯ್ತು. ಅದೆಷ್ಟೋ ಕಲಿತೆ. ಅನುಭವ ಎಲ್ಲವನ್ನೂ ಕಲಿಸಿತು. ಹಳ್ಳಿಯ ಜೀವನ ನೀರಸವಲ್ಲ. ಅದೊಂದು ಪ್ರತಿದಿನದ ಸವಾಲು. ಪ್ರತಿದಿನದ ಆನಂದ. ಪ್ರತಿದಿನವೂ ಭಿನ್ನ. ಮನರಂಜನೆಗೂ ಯಾವ ಕೊರತೆಯೂ ಇಲ್ಲ. ಅನುಭವಿಸುವ ಭಾವ ಬೇಕಷ್ಟೇ. ಹರಿವ ನದಿ, ಹಕ್ಕಿಗಳ ಚಿಲಿಪಿಲಿ, ಸುತ್ತಲ ಬೆಟ್ಟ, ಹಸಿರು ತೋಟ, ಒಂದಷ್ಟು ಅಕ್ಕಪಕ್ಕದ ಹರಟೆ. ಸಾಕಲ್ಲವೇ ಖುಷಿಗಿಷ್ಟು?
ಕಾಲ ಬದಲಾಗಿದೆ. ಮೊದಲಿನಂತೆ ಇಲ್ಲ ಹಳ್ಳಿ. ಇಲ್ಲೂ ನಾವು ಕಲಿತ ವಿದ್ಯೆಗೆ ಬೆಲೆ ಇದೆ. ತಂತ್ರಜ್ಞಾನ ಹಳ್ಳಿಯನ್ನು ದಿಲ್ಲಿಯಾಗಿಸಿದೆ. ಪೇಟೆಯಲ್ಲಿ ದುಡ್ಡು ಕೊಟ್ಟು ಮಾಡೋ shopping, ಇಲ್ಲಿ ಸುಮ್ನೆ ಬೆಟ್ಟ ಸುತ್ತಿ ಬಂದರೆ ಬುಟ್ಟಿ ತುಂಬಾ ಹಣ್ಣುಹಂಪಲು.
ಹಳ್ಳಿ ಎಂದೊಡನೆ ಮುಗುಮುರಿಯೋ ಮಂದಿಗಳೇ ಕೇಳಿ, ದಿಲ್ಲಿಯಲ್ಲಿ ಯಾವುದೋ ಹೋಟೆಲಲ್ಲಿ ಕುಳಿತು ತಿನ್ನೋ ಅನ್ನ ಹಳ್ಳಿಯ ರೈತನ ಬೆವರ ಫಲ. ಪೇಟೆಯಲ್ಲಿ ಅದ್ಯಾವುದೋ ಬೀಡಾಅಂಗಡಿಯ ಮುಂದೆ ನಿಂತು ತಿನ್ನೋ ಪಾನ್ ಹಳ್ಳಿಯ ರೈತನ ವರುಷದ ಬೆಳೆ ಅಡಿಕೆಯ ಫಲ. ರಸ್ತೆಯ ಬದಿಯಲ್ಲಿ ನೀವು ಚಪ್ಪರಿಸೋ ಚಾಟ್ಸ್ ಗೆ ಬಳಸುವ ಮಸಾಲೆ ಹಳ್ಳಿಯ ರೈತನ ಬೆಳೆ.
ಇನ್ನೂ ಮುಂದುವರಿದು ನಮ್ಮ ಕೆಲವು ಹುಡುಗೀರು ಹೇಗೆ ಅಂದ್ರೆ, ಹಳ್ಳಿ ಮನೆ ಹುಡುಗ ಪರ್ವಾಗಿಲ್ಲ. ತೋಟ ಬೇಕು. ಅತ್ತೆ-ಮಾವ ಹಳ್ಳೀಲಿ ಇರಬೇಕು. ಹುಡ್ಗ ಪೇಟೇಲಿ ಇರಬೇಕು. ತನ್ನ ಮಕ್ಕಳ ನೋಡಿಕೊಳ್ಳೋಕೆ, ರಜೇಲಿ ಮಜಾ ಮಾಡೋಕೆ ಹಳ್ಳಿಮನೆ ಬೇಕು. ಇದಕ್ಕೆ ಹುಡುಗರು ಏನೂ ಹೊರತಾಗಿಲ್ಲ. ಪೇಟೆಯಲ್ಲಿ ಕಡಿಮೆ ಸಂಬಳದ ಚಿಕ್ಕ ಕೆಲಸವಾದರೂ ಸರಿ. ಹಳ್ಳಿಯಲ್ಲಿ ಅಪ್ಪನೊಂದಿಗೆ ಹೊಲದಲ್ಲಿ ಕೈ ಕೆಸರಾಗಿಸಿಕೊಳ್ಳಲು ಸಿದ್ಧವಿಲ್ಲ. ಹೀಗಿದೆ ನಮ್ಮ ಮನೋಭಾವ.
ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳಬೇಕೆಂದೇನೂ ಅಲ್ಲ. ಕಾಲ ಬದಲಾಗಿದೆ. ನಾವು ಬದಲಾಗಬೇಕಿದೆ. ಪೇಟೆಯಲ್ಲೇ ದುಡಿಮೆ ಮಾಡಿ. ಆದರೆ ಅದೇ ಹಳ್ಳಿಗಿಂತ ಸರ್ವಶ್ರೇಷ್ಠ ಎಂಬ ಭ್ರಮೆ ಬೇಡ, ಅಷ್ಟೇ. ಎಲ್ಲೇ ಇರಿ, ಹೇಗೇ ಇರಿ, ಇರುವಲ್ಲೇ ಖುಷಿಪಡಿ. ಯಾವುದನ್ನೂ ಕೀಳಾಗಿ ಕಾಣಬೇಡಿ. ಇದ್ದಲ್ಲಿ ಇದ್ದದ್ದನ್ನ ಪ್ರೀತಿಸಿ, ಬೇರೆಯದನ್ನು ಗೌರವಿಸಿ.