ಬೇಸಿಗೆಯ ಬಿಸಿಲು ಜೋರಾಗಿದೆ. ಇನ್ನು ಮಕ್ಕಳಿಗೆ ರಜೆ ಬೇರೆ ಪ್ರಾರಂಭ. ಜೊತೆಗೆ ಮಾವು ಹಲಸು ಎಲ್ಲಾ ನಮಗಾಗೇ ಫಲ ಬಿಟ್ಟು ನಿಂತಿವೆ. ಬೇಸಿಗೆ ಬಂತು ಎಂದರೆ ಹಳ್ಳಿ ಹೆಂಗಸರಿಗೆ ಬಿಡುವಿಲ್ಲದ ಕೆಲಸ. ಹಪ್ಪಳ, ಸಂಡಿಗೆ, ತರ ತರದ ಉಪ್ಪಿನಕಾಯಿ, ಮಾವಿನ ಮಿಡಿ ಹಾಕೋದು. ನಡುವೆ ಅಲ್ಲಿ ಇಲ್ಲಿ ಊಟದ ಮನೆ. ಜೊತೆಗೆ ರಜೆಗೆ ಬರೋ ನೆಂಟರು. ತಾವು ಮಕ್ಕಳ ಜೊತೆ ರಜೆಯ ತಿರುಗಾಟ ಹೀಗೆ.
ಮೊನ್ನೆ ಯಾವುದೋ ಕಾರ್ಯಕ್ರಮದಲ್ಲಿ ಎರಡು ಹೆಂಗಸರ ಸಂಭಾಷಣೆ ಕೇಳಿಸಿಕೊಂಡೆ. ಹಳ್ಳಿ ಮೊದಲಿಗಿಂತ ಅದೆಷ್ಟು ಬದಲಾಗಿದೆ ಅನ್ನಿಸಿತು.
ಹಿಗೊಂದು ಸಂಭಾಷಣೆ.
ಗೃಹಿಣಿ1 : ಹೇ ನಿಮ್ಮ ಬದಿ ಮಾವಿನ ಮಿಡಿ ಬೈಂದನೆ. ಹಾಕಿದ್ಯ?
ಗೃಹಿಣಿ 2 : ಹೇ ಸುಮ್ನಿರೆ ಮಾರಾಯ್ತಿ. ಪೇಟೆ ಶೇಷಮ್ಮಜ್ಜಿ ಹತ್ರ ಹೋದರೆ ಹೆಂಗಿದ್ದು ಬೇಕೋ ಹಂಗಿದ್ದು ಸಿಕ್ತು. ತಂದರಾತು. ತಿಂದ್ರಾತು.
ಗೃಹಿಣಿ1 : ಹೇ ಆದ್ರೂ ಮನೇಲಿ ಮಾಡಿದಷ್ಟು ರುಚಿ ಬರದಿಲ್ಯೆ.
ಗೃಹಿಣಿ2 : ಎಲ್ಲ ಬತ್ತೆ. ಮನೇಲಿ ಅದೆಲ್ಲ ಮಾಡಿಕೊಳ್ತಾ ಇರೋಕೆ ಯಾರಿಗೂ ಪುರಸೋತ್ತಿಲ್ಯೆ.
ಗೃಹಿಣಿ 1 : ಅದು ಹೌದು ಅನ್ನು. ಮತೆ ಹಪ್ಪಳ ಸಂಡಿಗೆ ಎಂತಾರು ಮಾಡಿದ್ಯನೆ. ತುಂಬಾ ಹಲಸಿನಕಾಯಿ ಬೈಂದು ಈ ಸಾರಿ.
ಗೃಹಿಣಿ 2 : ನಿಂಗೆ ಮಾಡಕೆ ಬೇರೆ ಕೆಲಸಿಲ್ಲೆ. ಸಾಗರ ಭಟ್ರ ಅಂಗಡಿಗೆ ಹೋದ್ರೆ ಯಾವ ತರದ ಹಪ್ಪಳ ಸಂಡಿಗೆ ಬೇಕೋ ಅದೆಲ್ಲ ಸಿಕ್ತು. ಹಲಸಿನ ಕಾಯಿ ಬಿಡಿಸಿ ಬೈಯಿಸಿ ಹಪ್ಪಳ ಯಾರು ಮಾಡ್ತವೇ. ಇಡೀ ದಿನ ಮೈ ತುಂಬಾ ಕೆಲಸ. ಬೇಜಾರು.
ಹಿಂಗೆಲ್ಲ ಮಾಡತ ಇರೋದು ಅಜ್ಜಿ, ಅಮ್ಮವರ ಕಾಲಕ್ಕೆ ಮುಗಿತೆ. ಅವಕೆಲ್ಲ ಹೊತ್ತು ಹೋಗ್ತಿರ್ಲೆ. ಮಾಡತಾ ಇರ್ತಿದ್ದ.
ಮೇಲಿನ ಸಂಭಾಷಣೆ ಯಾವುದೋ ಪೇಟೆಯದ್ದಲ್ಲ. ಹಳ್ಳಿಯದ್ದೇ. ಕಾಲ ಬದಲಾಗಿದೆ. ಮೊದಲಿನ ಹಾಗೆ ಇಲ್ಲ ಹಳ್ಳಿ. ಪೇಟೆಯಂತೆ ಇಲ್ಲೂ ರೆಡಿ ಐಟಮ್ ಸಿಗೋ ಕಾಲ ಬಂದಾಗಿದೆ. ಹಪ್ಪಳ ಸಂಡಿಗೆ ಇವೆಲ್ಲ ಹಳೆ ಕಾಲದವ್ರು ಮಾಡೋ ಕೆಲಸ ಅನ್ನೋ ಹಾಗೆ ಆಗಿದೆ.
ಹಿಂದಿನ ಕಾಲದಲ್ಲಿ ಬೇಸಿಗೆ ಬಂತು ಅಂದರೆ ಮಾವು ಹಲಸಿನದೆ ರಾಜ್ಯಭಾರ. ಮನೆಯಲ್ಲಿ ದನ ಕರು, ನೆಂಟರು, ಮಕ್ಕಳು ಅಂತ ಅದೆಷ್ಟೇ ಕೆಲಸ ಇದ್ದರೂ ಆಯಾ ಕಾಲಕ್ಕೆ ಆಗಬೇಕಾದ ಹೆಚ್ಚುವರಿ ಕೆಲಸಕ್ಕೆ ಹೆಂಗಸರು ರೆಡಿ. ಮಾವಿನ ಮಿಡಿ, ಮಾವಿನ ಕಾಯಿ ತೊಕ್ಕು. ಬೇರೆ ಬೇರೆ ಉಪ್ಪಿನ ಕಾಯಿ. ಮಾವಿನ ಕಾಯಿ ಬೇಯಿಸಿ ಇಡೋ ಕೊಜ್ಜಗಾಯಿ. ಇನ್ನು ವರ್ಷ ಪೂರ್ತಿ ಮಾವು ತಿನ್ನಲು ಏನೆಲ್ಲ ಬೇಕೋ ಅದೆಲ್ಲ ಸಿದ್ಧತೆ. ಜೊತೆಗೆ ಹಲಸಿನ ಚಿಪ್ಸ್. ಹಪ್ಪಳ. ಥರ ಥರದ ಸಂಡಿಗೆ. ಹೀಗೆ ಅಕ್ಕ ಪಕ್ಕ ಮನೆವರೆಲ್ಲ ಒಟ್ಟಿಗೆ ಸೇರಿ ಮಳೆಗಾಲಕ್ಕೆ ರುಚಿಯಾಗಿ ತಿನ್ನಲು ಬೇಕಾದ ಸಕಲ ಸಿದ್ಧತೆ ಮಾಡಿ ಕೊಳ್ಳುತ್ತಿದ್ದರು. ಅವರಿಗೆ ಅವೆಲ್ಲ ಕೆಲಸ ಅನ್ನಿಸ್ತಾನೆ ಇರಲಿಲ್ಲ. ಅದೊಂದು ಮನೋರಂಜನೆ. ಅದೊಂದು ಖುಷಿ. ಎಲ್ಲ ಸೇರಿ ಹರಟೆ ಹೊಡಿತ ಕಾಲ ಕಳಿಯೊ ಹೊತ್ತು ಅದು. ಹಾಗಾಗಿ ಅವೆಲ್ಲವನ್ನು ಅವರು ಪ್ರೀತಿ ಇಂದ ಮಾಡೋದಲ್ಲದೆ ಮನೆ ಹೆಣ್ಣು ಮಕ್ಕಳಿಗೆ, ನೆಂಟರಿಗೆ ಅಂತ ಹಂಚುವ ಗುಣ ಕೂಡ ಇತ್ತು.
ಈಗ ಒಂಟಿ ಮನೆ. ನಾವು ನಮ್ಮ ಮಕ್ಕಳು. ಮಾಡಕೆ ಕೆಲಸ ಇಲ್ಲ. ಕುಳಿತು ಮಾತಾಡೋಕೆ ಸಮಯವಿಲ್ಲ. ಮನೋರಂಜನೆಗೆ ಮೊಬೈಲ್ ಫೋನ್. ಟಿ.ವಿ. ಜೊತೆಗೆ ಹೊರಲಾರದ ಭಾರ ಹೊರೋ ಶಾಲೆಗೆ ಮಕ್ಕಳನ್ನು ಕಳುಹಿಸಿದ ತಪ್ಪಿಗೆ ರಜೆಲೂ ಅವರಿಗೆ ಟ್ಯೂಷನ್. ಹೋಮ್ ವರ್ಕ್. ಪ್ರೊಜೆಕ್ಟ್ ವರ್ಕ್. ಅದು ಸಾಲದ್ದಕ್ಕೆ ಸಮ್ಮರ್ ಕ್ಯಾಂಪ್. ಹೀಗೆ ನಮಗೆ ನಮ್ಮದೇ ಕೆಲಸಗಳು ನೂರಾರು.
ಮೊದಲೆಲ್ಲ ಊರಲ್ಲಿ ಯಾರ ಮನೆಯಲ್ಲೇ ಕಾರ್ಯಾಕ್ರಮ ಆದರೂ ಅದು ಎಲ್ಲರ ಮನೆಯ ಕಾರ್ಯ. ವಾರಕ್ಕೂ ಮೊದಲೇ ಅವರ ಮನೆಯಲ್ಲೇ ಕೆಲಸ. ದಿನಸಿ ಕ್ಲೀನ್ ಮಾಡೋದ್ರಿಂದ ಹಿಡಿದು, ಚಟ್ನಿ ಪುಡಿ , ಅಡಿಕೆ ಪುಡಿ, ಎಲ್ಲ ಕೆಲಸ ಊರಿನ ಹೆಂಗಸರದ್ದೇ. ಜೊತೆಗೆ ಕಾರ್ಯಕ್ರಮದಲ್ಲಿ ತಿಂಡಿ, ಊಟ ಎಲ್ಲ ಬಡಿಸಿ ಮಾರನೇ ದಿನ ಚಪ್ಪರ ತೆಗಿಯೊವರೆಗೂ ಊರಿನವರದ್ದೇ ಜವಾಬ್ದಾರಿ. ಈಗಲೂ ಕೆಲವು ಊರಲ್ಲಿ ಇದೆ ಪದ್ದತಿ. ಆದರೆ ಅದೆಷ್ಟೋ ಕಡೆ ಬದಲಾಗಿದೆ ಹಳ್ಳಿ. ವಾರಕ್ಕೆ ಮುಂಚೆ ಹೋಗೋದು ಬಿಡಿ. ಅವತ್ತಿನ ಊಟಕ್ಕೆ ಹೋಗಲು ಟೈಂ ಇಲ್ಲ. ಬ್ಯುಸಿ. ಹಾಗಾಗಿ ದುಡ್ಡು ಕೊಟ್ಟು ಬಡಿಸುವರನು ಕರೆಯೋ ಅನಿವಾರ್ಯತೆ ಬಂದಿದೆ. ಆತ್ಮೀಯತೆಯ ಬಂಧ ಎಲ್ಲೋ ಮೊದಲಿನಂತೆ ಬೆಸೆಯುತ್ತಿಲ್ಲವೇನೋ, ಯಾಂತ್ರಿಕವಾಗಿದ್ದೇವರೆನೋ ಅನ್ನಿಸುತ್ತಿದೆ.
ಬದಲಾವಣೆಯ ಗಾಳಿ ಸಹಜವೇ. ಅದು ಬಿರುಸಾಗದಿರಲಿ. ಹಳೆ ಬೇರು ಹೊಸ ಚಿಗುರು, ಮರ ಸೊಬಗು. ಹಳೆಯದನ್ನು ಬಿಡದೆ ಅದಕ್ಕೆ ಹೊಸತನ್ನು ಜೋಡಿಸಿಕೊಂಡು ಸಾಗೋಣ. ನಾವು ನಮ್ಮ ಅಜ್ಜನ ಮನೆಯಲ್ಲಿ ರಜೆಯ ಮಜಾ ಮಾಡಿದ ನೆನಪು, ಅಮ್ಮ ಮಾಡುತಿದ್ದ ಹಪ್ಪಳದ ಹಿಟ್ಟನ್ನು ಕದ್ದು ತಿನ್ನುತಿದ್ದ ನೆನಪು, ಮಳೆಗಾಲದಲ್ಲಿ ಶಾಲೆಯಿಂದ ಬಂದ ಕೂಡಲೇ ಬೂದಿಯಲ್ಲಿ ಸುಟ್ಟ ಹಪ್ಪಳವನ್ನ ಅಜ್ಜಿ ಕೊಡುತಿದ್ದ ನೆನಪು ಇನ್ನೂ ಹಸಿಯಾಗಿದೆ. ಆ ನೆನಪಿನ ಅಂಗಳ ನಮ್ಮ ಮಕ್ಕಳಲ್ಲೂ ಇರೋ ಹಾಗೆ ಮಾಡೋ ಜವಾಬ್ದಾರಿ ನಮ್ಮದು. ನಮ್ಮೂರೇ ನಮಗೆ ಚಂದ. ನಮ್ಮನೆ ಅಡುಗೆನೇ ನಮಗೆ ಸವಿ. ಹಳ್ಳಿಯ ಸೊಬಗನ್ನ ಸವಿಯೋಣ. ಹಂಚೋಣ.