‘ಪರೀಕ್ಷೆ’ ಹತ್ತಿರ ಬಂತೆಂದರೆ ನಮಗೆಲ್ಲ ಹೊಕ್ಕಳಬಳ್ಳಿಯಿಂದ ಛಳುಕೆದ್ದ ಅನುಭವವಾಗುತ್ತಿತ್ತು. ‘ಪರೀಕ್ಷೆಗೆ ಓದಲು ಬಿಡುವುದು’ ಎಂಬ ವಾಕ್ಯವನ್ನೇ ದ್ವೇಷಿಸುತ್ತಿದ್ದೆ ನಾನಾಗ. ಅದರಲ್ಲೂ ಹಿಂದಿ ಮತ್ತು ಗಣಿತವೆಂದರೆ ತುರಿಕೆಸೊಪ್ಪು ತಾಕಿಸಿಕೊಂಡಷ್ಟು ಅಲರ್ಜಿ. ಕಥೆಪುಸ್ತಕಗಳನ್ನು ಕಂಡರೆ ತಂಪೆನಿಸುವ ಹಾಗೆ ಶಾಲೆಯ ಪುಸ್ತಕಗಳ್ಯಾವುದೂ ಜೀವಕ್ಕೆ ತಂಪೆರೆಯಲಿಲ್ಲ. ಓದಲು ಕುಳಿತಾಗ ಕೈಗೆ ಸಿಗುವ ಸಣ್ಣಪುಟ್ಟ ಕಾಗದದ ಚೂರುಗಳಲ್ಲಿನ ಅಕ್ಷರಕ್ಷರವೂ ಪರಮಾದ್ಭುತವೆನಿಸುವ ಕಾಲವದು. ಮನೆಯಲ್ಲಿದ್ದರೆ ಪುಸ್ತಕದ ಮಧ್ಯೆ ಕಥೆಪುಸ್ತಕ ಸೇರಿಸಿ ಓದಿಬಿಡುತ್ತಾಳೆ ಎಂಬುದನ್ನು ಅರಿತ ಅಮ್ಮ, ಓದಲು ಬಿಟ್ಟಾಗಲೆಲ್ಲ ತೋಟಕ್ಕೆ ತೌರಿಬಿಡುತ್ತಿದ್ದಳು. ತೋಟಕ್ಕೆ ಓದಲು ಹೋಗುವ ನನ್ನ ತಯಾರಿ ಮಾತ್ರ ‘ಮಂತ್ರಕ್ಕಿಂತ ಉಗುಳೇ ಜಾಸ್ತಿ’ ಎನ್ನುವಂತಿರುತ್ತಿತ್ತು. ಸಣ್ಣ ಆರಾಮಖುರ್ಚಿ, ನೀರು, ಬಿಸ್ಕಿಟ್ ಪ್ಯಾಕೆಟ್, ಚಾಕ್ಲೇಟು, ಓದುವ ಟೈಂ ಟೇಬಲ್ ಪಟ್ಟಿ, ಗೈಡು, ಕಚ್ಚಾಪಟ್ಟಿ, ಪಕ್ಕಾಪಟ್ಟಿ, ಪೆನ್ನು-ಪೆನ್ಸಿಲ್ ಸಮೇತದ ಕಂಪಾಸು ಬಾಕ್ಸು ಹೀಗೆ ಎಲ್ಲವನ್ನೂ ಹಿಡಿದು ಒಳ್ಳೆ ಟೂರಿಗೆ ಹೊರಡುವಂತೆ ತೋಟಕ್ಕೆ ಹೊರಡುತ್ತಿದ್ದೆ. ಅಚ್ಚುಕಟ್ಟಾದ ಟೈಂ ಟೇಬಲ್ ನೋಡಿದ ಅಪ್ಪನಂತೂ ‘ಮಗ್ಳ್ ಹೀಂಗ್ ಓದ್ರೆ ಡಿಸ್ಟಿಂಕ್ಷನ್ ಬತ್ತನಾ ಈ ಸಲ’ ಅಂದ್ಕೊಂಡಿದ್ರಂತೆ. ಈಗ ಅದು ನನ್ನ ಕಾಲೆಳೆಯುವ ಹಾಸ್ಯಾಸ್ಪದ ವಸ್ತುಗಳಲ್ಲೊಂದು.
ತೂಗುವ ತೆಂಗಿನಸಾಲು, ನಲಿವ ಅಡಿಕೆಮರ, ಜೀಕುವ ಜಾಯಿಕಾಯಿ ಗಿಡ, ಗಾಳಿಯಲ್ಲಿ ತೇಲಿಬರುವ ಸುಗಂಧಿ ಪುಷ್ಪ-ನಿತ್ಯಪುಷ್ಪ-ಸೂಜಿ ಮಲ್ಲಿಗೆಯ ಘಮಲು, ಮತ್ತು ಬರಿಸುವ ಬಿಂಬ್ಲೆಕಾಯಿ-ಜಾಯಿಕಾಯಿ ಓಡು-ಸೂಜಿಮೆಣಸುಪ್ಪಿನ ಕಿಚಡಿ, ಲಯಬದ್ಧವಾಗಿ ಹರಿಯುವ ಪಕ್ಕದ ತೋಟದ ಝರಿ, ತೋಡಿನ ನೀರಲ್ಲಿ ಕಿತ್ತಾಡುವ ಜಗಳಗಂಟಿ ಮೀನುರಾಶಿ, ಹುಗಿಯುವ ಅರಲುಗದ್ದೆಯ ಮಣ್ಣಿನ ವಾಸನೆ, ಆಗಾಗ ಪಕ್ಕದಲ್ಲೇ ತಣ್ಣನೆ ಹರಿದು ಹೋಗುವ ಹಸಿರುಹಾವು-ಕೇರೆಹಾವು-ಒಳ್ಳೆಬೆಟ್ಟೆ ಹಾವು, ಶೆಟ್ರಮನೆ ಬೆಕ್ಕಿಗೂ ಭಟ್ರಮನೆ ನಾಯಿಗೂ ನಡೆಯುವ ದೃಷ್ಟಿಯುದ್ಧ, ತಮ್ಮನೆ ಗದ್ದೆ ನೀರು ಜಾಸ್ತಿಯಾದಾಗ ಬೇರೆಯವರ ಗದ್ದೆಗೆ ನೀರು ಬಿಡಲು ಕಳ್ಳಹೆಜ್ಜೆ ಹಾಕುತ್ತಾ ಬರುವ ಒಕ್ಕಲು ಮಂದಿ, ಗಜ್ನಿಯಿಂದ ಮೀನು ತರಲು ನೀಲಿಬಲೆ ಹಿಡಿದು ಹೊರಟು ಕುಪ್ಪುವಿನ ಗುಂಪು, ಹಣ್ಣೆಹೊರೆ ಹೊತ್ತು ಊರಮನೆ ಸುದ್ದಿ ಹಲುಬುವ ಗೌಡ್ತಿಯರು, ಆಚೆಕೇರಿಯಲ್ಲಿ ಶ್ರಾದ್ಧಕ್ಕೆಂದು ಕೂಗಲ್ಪಡುತ್ತಿರುವ ಕಾಗೆ, ಅಲ್ಲೆಲ್ಲೋ ಮಂಗಳಾರತಿಯ ನಾದ, ಸುಗ್ಗಿ ಹಬ್ಬಕ್ಕೆಂದು ತಯಾರಿ ಮಾಡಿಕೊಳ್ಳುತ್ತಿದ್ದ ಗೌಡರ ಕೇರಿಯಲ್ಲಿ ಕೇಳಿಬರುತ್ತಿದ್ದ ಗುಮಟೆಪಾಂಗಿಗೆ ಹೆಜ್ಜೆ ಹಾಕುವ ಗೆಜ್ಜೆಕಟ್ಟಿದ ಕಾಲ್ಗಳು, ಯಾರದ್ದೋ ಮನೆಯಲ್ಲಿ ಅಪ್ಪೆಹುಳಿಗೆ ಹಾಕಿದ ಬೆಳ್ಳುಳ್ಳಿ ಒಗ್ಗರಣೆಯ ಪರಿಮಳ, ಕೋಳಿಯಂಕದಲ್ಲಿ ಗೆದ್ದ ಜಟ್ಟುಗೌಡನ ಮನೆಯಲ್ಲಿನ ಕಲರವ, ಮೀಮೀ ಮಾಡಿಸುವಾಗ ಉಂಗೇಯೆಂದು ಗಂಟ್ಲುಬೀರಿ ಕೂಗುವ ಹಸುಗೂಸು, ತೋಟದಂಚಿಗೆ ಹಬ್ಬಿದ ಕುಸುಮಾಲೆ ಹಣ್ಣು, ಜಂಬೆಹಣ್ಣಿನ ಮರದಿಂದ ಉದುರಿದ ಹುಳಿ ಮಿಶ್ರಿತ ಸಿಹಿ ಗುಲಾಬಿ ಪಕಳೆ, ಗದ್ದೆಯಂಚಿಗೆ ಉದುರಿದ ರಾಜನೆಲ್ಲಿಕಾಯಿಯ ಹಸಿರುಹಾಸು, ಕಾಲಡಿಯ ಮಣ್ಣಲ್ಲಿ ಗೂಡುಕಟ್ಟಿ ಆಹಾರ ಸಂಗ್ರಹಿಸುವ ಇರುವೆ ಸಾಲು, ಗದ್ದೆಯ ನೀರಲ್ಲಿ ಮೀನು ಹಿಡಿಯಲು ಧ್ಯಾನಸ್ಥಳಾದ ಕೊಕ್ಕಾನಕ್ಕಿಯ ಗಾಂಭೀರ್ಯ, ಕಿಚಿಪಿಚಿಯೆಂದು ತಮ್ಮದೇ ಭಾಷೆಯಲ್ಲಿ ಹರಟುವ ಹಕ್ಕಿಹಿಂಡು, ನೋಡಲಾಗದ ಮೈಹೊತ್ತು ಗೂಂಕರಿಸುವ ಗೂಂಕನಕಪ್ಪೆ, ಧುತ್ತೆಂದು ಬಂದು ಹೆದರಿಸುವ ದುಂಬಿಯ ಝೇಂಕಾರ, ಗೊಂಡೆಹೂವಿನ ಮೇಲೆ ಕುಳಿತು ಬಳಕುವ ಪಾತರಗಿತ್ತಿಯರು, ಹೊನ್ನೆಮರವ ತೂತು ಮಾಡೇ ಸಿದ್ಧವೆನ್ನುತ್ತಾ ಕುಟ್ಟುತ್ತಿರುವ ಮರಕುಟಿಗ, ಆಡುಮುಟ್ಟದ ಸೊಪ್ಪನ್ನು ಮೂಸುತ್ತಾ ಮುಖಗಿಂಡುವ ಬುಚ್ಚಿಯಂಬೆ, ಹೀಗೇ ಪ್ರಕೃತಿಯ ಮಡಿಲಲ್ಲಿ ಕುಳಿತು ಅನುಭವಿಸುವ ಆ ಅನುಭೂತಿಯೇ ಸುಂದರ. ಕೈಯಲ್ಲಿ ಹಿಡಿದ ಶಾಲೆಪುಸ್ತಕವನ್ನು ಬಿಟ್ಟು ಜಗತ್ತಿನ ಎಲ್ಲ ವಿಷಯಗಳೂ ಆಸಕ್ತಿದಾಯಕವಾಗಿ ಕಾಣುವ ಸಮಯವೇ ಈ ಪರೀಕ್ಷಾಗಾಲ.
ಮಂಗನಂತೆ ಕುಣಿಯುವ ಮನಸ್ಸನ್ನು ಕಷ್ಟಪಟ್ಟು ಹತೋಟಿಗೆ ತಂದುಕೊಂಡು ಪುಸ್ತಕದ ಹಾಳೆಯೆರಡನ್ನು ತಿರುವಿದಾಗ ಅದೇಲ್ಲಿತ್ತೋ ಅರ್ಧಬರೆಸಿಕೊಂಡ ಕಥೆ ಧಿಂತಕಿಟ ದಿಗಡ್ತೊಂ ಎನ್ನುತ್ತಾ ವೇಷ ಧರಿಸಿಯೇ ರಂಗಕ್ಕಿಳಿಯಿತು. ಕಣ್ಣಲ್ಲಿ ಹತ್ತಾರು ಹಣತೆ ಹಚ್ಚಿದ ಬೆಳಕು. ಬೀಜಗಣಿತ ಬಿಡಿಸುವಾಗ ದಣಪೆದಾಟದೇ ಮುಷ್ಕರ ಹೂಡಿದ ಪೆನ್ನು, ಕಥೆ ಬರೆಯುವಾಗ ದಣಪೆಕೋಲು ತೆಗೆಯದೆಯೂ ಹಾರಿದಂತೆ ಓಡುತ್ತಿತ್ತು. ಆಗಲೇ ಹಳ್ಳಕೋಡ್ಲಿನ ಸಂಕದ ಬಳಿಬಂದ ತಂಗಿಯ ಸವಾರಿ ‘ಊಟಕ್ಕೆ ಎಲ್ಲಾರೂಊಊ ಬರಬೇಕಂತೇಏಏ…’ ಎಂದು ರಾಗವಾಗಿ ಕೂಗತೊಡಗಿದ್ದಳು. ಅಷ್ಟರವರೆಗೆ ತಣ್ಣಗಿದ್ದ ಹೊಟ್ಟೆ ಊಟದ ಹೆಸರು ಕಿವಿಗೆ ಬಿದ್ದೊಡನೆ ಮೃದಂಗವಾದನ ಶುರುಮಾಡಿತ್ತು. ಮೊಟ್ಟೆಕೆಸುವಿನ ಹಶಿ, ಬಸಳೆಸೊಪ್ಪಿನ ಹುಳಿ, ಅಪ್ಪೆಹುಳಿ, ಹಲಸಿನಕಾಯಿ ಹಪ್ಪಳ, ಅಪ್ಪೆಮಿಡಿಯುಪ್ಪಿನಕಾಯಿ ಜೊತೆ ಮೊಸರನ್ನವುಂಡು ಕೈತೊಳೆವಾಗ ಕಣ್ಮುಚ್ಚಿ ಬರುವಂತೆ ಆಕಳಿಕೆ. ‘ರಾಶಿ ಓದಿ ಸಾಕಾಜನ ಹನಿ ಮಲ್ಕಳಾ ಮಗ್ನೆ’ ಅಂದಳು ಅಜ್ಜಿ ಅದೇ ತುಂಟನಗುವಿನೊಂದಿಗೆ. ನಾನು ಅಲ್ಲಿ ಓದಿ ಕಟ್ಟಿಕಡಿದು ಹಾಕಿದ್ದರೆಲ್ಲದೂ ಅರಿವಿದ್ದ ಅವಳ ಕೀಟಲೆಯ ನಗುವಿಗೆ ಅಮ್ಮನಿಗೆ ಸಣ್ಣ ಗುಮಾನಿ. ಅದಕ್ಕೆ ಸಂಜೆ ಓದಿದ್ದೆಲ್ಲ ತಿರುಗಿ ಪಾಠ ಒಪ್ಪಿಸಬೇಕೆಂಬ ಮಾತು ಬಾಣದಂತೆ ತೂರಿಬಂದು ನಿದ್ರೆಯೆಲ್ಲ ಗಾಳಿಯಲ್ಲಿ ಹಾರಿಹೋಗಿ ತೆಂಗಿನಬೊಡ್ಡೆಯಲ್ಲಿ ಕುಳಿತು ಅಣಕಿಸುತ್ತಿತ್ತು. ಎಲ್ಲರೂ ಮಧ್ಯಾಹ್ನ ಮಲಗಿದಾಗ ಕಳ್ಳರಂತೆ ಎದ್ದು ಅಮ್ಮನಿಗೆ ತೋರಿಸಲೆಂಬಂತೆ ಒಂದಿಷ್ಟು ಪಾಠಗಳನ್ನು ಮುಗಿಸಿ ನಿಟ್ಟುಸಿರುಬಿಡುತ್ತಿದ್ದೆ.
ಒಟ್ಟಿನಲ್ಲಿ ಪರೀಕ್ಷೆಯೆಂಬ ಪೆಡಂಭೂತದ ಭಾರವನ್ನು ಹೆಗಲ ಮೇಲಿಂದಿಳಿಸಿ ಹಗುರಾಗಿ ಮನೆಯ ಅಟ್ಟದ ಮೇಲಿನ ಅಜ್ಜಿಯ ಟ್ರಂಕಿಗೆ ದಾಳಿ ಮಾಡಿದಾಗಲೇ ಮನಸ್ಸಿಗೆ ಸಮಾಧಾನ. ಸಾಯಿಸುತೆ, ಎಂ.ಕೆ. ಇಂದಿರಾ, ತ್ರಿವೇಣಿ ಮುಂತಾದವರನ್ನು ಕುರ್ಚಿಬಿಸಿ ಮಾಡುವಷ್ಟು ಕಾಲ ಓದಿಮುಗಿಸುತ್ತಿದ್ದೆ. ಪರೀಕ್ಷೆ ಮುಗಿಯುವ ತನಕದ ಸಮಯ ಕಠಿಣದ್ದಾದರೂ ಅದಾದಮೇಲಿನ ಸಮಯ ಇಷ್ಟದ್ದಾಗಿತ್ತು. ಈಗ ಜೀವನದ ಪರೀಕ್ಷೆಯನ್ನು ಬಿಟ್ಟರೆ ಕುಳಿತು ಓದಿ ಬರೆಯುವ ಪರೀಕ್ಷೆಗಳಿಲ್ಲ, ಆದರೂ ಕಥೆ ಪುಸ್ತಕಗಳನ್ನು ಓದಲೆಂದು ಕುಳಿತರೆ ಮಗ್ಗುಲಲ್ಲಿ ಮಲಗಿದವನಿಗೆ ಹೊಡೆದಂತೆ ಎಚ್ಚರವಾಗುತ್ತದೆ. ತುಂಬಾ ವರುಷದಿಂದ ಬಸಿರಾದ ಕಥೆಗಳಿಗಿನ್ನೂ ಹೆರಿಗೆ ಸಮಯವಾಗದೇ ಮುನಿಸಿಕೊಂಡಿದೆ. ಅದನ್ನು ಹೆರಿಗೆ ಮಾಡಿಸಲು ದಣಪೆ ದಾಟಿಸಬೇಕಿದೆ.