ಸಂಸ್ಕೃತದಲ್ಲಿ ಪ್ರತಿ ಅಕ್ಷರಗಳಿಗೂ ಅವುಗಳದೇ ಆದ ಒಂದು ಮಿತಿ. ಅಂದರೆ ಕೆಲವು ಓಷ್ಠದಿಂದ. ಕೆಲವು ಕಂಠದಿಂದ. ಕೆಲವು ಮೂರ್ಧನಿಯಿಂದ. ಕೆಲವು ದಂತದಿಂದ. ಇನ್ನು ಕೆಲವು ನಾಭಿಯಿಂದ. ಆ ಸ್ಥಾನವನ್ನು ಬಿಟ್ಟು ಬೇರೆ ಸ್ಥಾನದಿಂದ ನುಡಿದರೆ, ಅದು ಅಪಭ್ರಂಶವಾಗುತ್ತದೆ. ನೋಡುತ್ತಾ ಹೋದರೆ ಸೃಷ್ಟಿಯೇ ಹಾಗೆ. ಗ್ರಹಗಳಿಗೆ ಅವುಗಳದೇ ಆದ ಒಂದು ದಾರಿಯಿದೆ. ಆ ಕಕ್ಷೆಯನ್ನು ಬಿಟ್ಟು ಬೇರೆಡೆಗೆ ಸಾಗಿದರೆ ಪ್ರಕೃತಿ ವಿಕೋಪಗಳಾಗಬಹುದು. ನದಿ-ನದಗಳಿಗೊಂದು ಪರಿಧಿಯಿದೆ. ಅದನ್ನು ದಾಟಿ ಹರಿದರೆ, ಪ್ರವಾಹಗಳಾಗಬಹುದು. ಎಲ್ಲೆಯೇ ಇಲ್ಲದಂತೆ ಕಾಣುವ ವಿಶಾಲ ಶರಧಿಗೂ ಒಂದು ಕೊನೆಯಿದೆ. ಮೀರಿ ಹರಿದರೆ ಪ್ರಳಯವೇ ಆಗಬಹುದು. ಸೃಷ್ಟಿಯ ಮಿತಿಯನ್ನು ಭಗವಂತ ನಿರ್ಧರಿಸಬಹುದು. ಬುದ್ಧಿ-ಮನಸ್ಸುಗಳನ್ನು ಇತ್ತು, ಜೀವನ ನಡೆಸುವ ಸ್ವಾತಂತ್ರ್ಯ ಕೊಟ್ಟು ಸೃಷ್ಟಿಸಿದ ಈ ಮನುಷ್ಯ ಜೀವಿಯ ಮಿತಿಯ ನಿರ್ಧಾರ ಮಾಡುವರಾರು? ಹೀಗೆ ಇತಿ-ಮಿತಿಗಳ ವಿಚಾರ ತಲೆಯಲ್ಲಿ ನುಸುಳಿದಾಗ ಹೊರಟ ಭಾವಗಳಿವು.
ನನ್ನ ಹುಟ್ಟೂರಿನ ಕಡೆ ಎಲ್ಲ ಹಳ್ಳಿಗಳಲ್ಲೂ ಸಾಲು ಸಾಲು ಮನೆಗಳು. ಯಾವ ಮನೆಗಳಿಗೂ compound ಇಲ್ಲ. ಹಾಗೆಯೇ ಎಲ್ಲರ ತೋಟಗಳೂ ಸಾಲಾಗಿರುತ್ತವೆ ನಡುವೆ ಬೇಲಿಯಿಲ್ಲದೇ. ಅವರವರ ಮನೆಯ ಗಡಿ, ತೋಟದ ಗಡಿಯನ್ನು ಕೇಳಿದರೆ, ಸಾಮಾನ್ಯವಾಗಿ ಮಧ್ಯದಲ್ಲಿ ನೀರು ಹೋಗಲೆಂದು ಮಾಡಿದ ಒಂದು ಕಾಲುವೆಯನ್ನು ತೋರಿಸುತ್ತಾರೆ. ನಮ್ಮ ಗಡಿ ಕಾಲುವೆಯ ಅಡಕೆಯನ್ನು ಬೇರೆಯವರು ಹೆಕ್ಕಿಕೊಂಡರು ಎಂಬ ವಿಚಾರಕ್ಕೆ ಅನೇಕ ಕಲಹಗಳು ನಡೆದ ಉದಾಹರಣೆಗಳೂ ಇವೆ. ಹಾಗೆಯೇ ರಾಜ್ಯ-ರಾಜ್ಯಗಳ ನಡುವೆ, ದೇಶ-ದೇಶದ ನಡುವೆ ಒಂದು ಗಡಿರೇಖೆಯಿರುತ್ತದೆ. ಅವರವರ ಗಡಿ-ಮಿತಿಯನ್ನು ಮೀರದೇ ಇದ್ದರೆ ಎಲ್ಲರಿಗೂ ಕ್ಷೇಮ.
ಪುರಾಣದ ಕೆಲವು ಘಟನೆಗಳು ಕೂಡ ಇದನ್ನೇ ಹೇಳುತ್ತವೆ. ಶಿಶುಪಾಲನಿಗಿತ್ತು ನೂರು ತಪ್ಪುಗಳ ಗಡಿ. ಅದನ್ನವನು ದಾಟಿದಾಗ ತೂರಿ ಬಂತು ಸುದರ್ಶನ ಚಕ್ರ. ತುಂಡರಿಸಿತವನ ಶಿರಸ್ಸನ್ನು. ಶೂರ್ಪನಖಿ ತನ್ನ ಪರಿಧಿಯಲ್ಲಿ ಇಲ್ಲದೇ, ರಾಮನನ್ನೂ, ಲಕ್ಷ್ಮಣನನ್ನೂ ಕಾಡಿದಳು. ತಕ್ಕ ಶಾಸ್ತಿಯಾಯಿತು ಲಕ್ಷ್ಮಣನಿಂದ. ದ್ಯೂತದಲ್ಲಿ ಶಕುನಿಯ ಮೋಸದಿಂದ ಪಾಂಡವರು ಸೋತರು. ಧರ್ಮದ ಚೌಕಟ್ಟನ್ನು ಮೀರಿ ದ್ರೌಪದಿಯ ವಸ್ತ್ರಾಪಹರಣಕ್ಕೆ ಮುಂದಾದ ದುರ್ಯೋಧನ. ಅದರ ಪರಿಣಾಮವೇ ಅಲ್ಲವೇ ಕೌರವನಾಶ? ಮಹಾಭಾರತ ಧರ್ಮಯುದ್ಧ? ತನ್ನದಲ್ಲದ ಸ್ವರ್ಗದ ಸಿಂಹಾಸನಕ್ಕೆ ಆಸೆ ಪಟ್ಟು ಹೋದ ತ್ರಿಶಂಕು. ಕೆಳಕ್ಕೂ ಬೀಳಲಾಗದೇ ಮೇಲೂ ಏರಲಾಗದೇ ಮಧ್ಯದಲ್ಲಿಯೇ ಉಳಿಯಬೇಕಾಯಿತು.
ನಾವು ಮಾಡುವ ಕೆಲಸಗಳಿಗೂ, ನಮ್ಮ ಮನಸ್ಸಿನಲ್ಲೇಳುವ ಭಾವಗಳಿಗೂ ಒಂದು ಬೇಲಿ ಖಂಡಿತವಾಗಿ ಇರಬೇಕಲ್ಲವೇ ಅನ್ನಿಸಿತು. ಅದನ್ನೇ ಡಿ.ವಿ.ಜಿ. ಯವರು ಹೀಗೆ ಹೇಳಿದ್ದಲ್ಲವೇ?
ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ |
ಹಿತವಿರಲಿ ವಚನದಲಿ, ಋತವ ಬಿಡದಿರಲಿ ||
ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ |
ಅತಿ ಬೇಡವೆಲ್ಲಿಯುಂ – ಮಂಕುತಿಮ್ಮ ||
ಡಿ.ವಿ.ಜಿ. ಯವರ ಈ ಪಾಠವು ಪ್ರತಿಯೊಬ್ಬ ಜೀವಿಗೂ ಆದರೂ, ಅದೇಕೋ ಏನೋ ನಿಯಮಗಳು, ಕಟ್ಟುಪಾಡುಗಳು, ವ್ಯಕ್ತಿಸ್ವಾತಂತ್ರ್ಯ ಎಂಬ ವಿಷಯಗಳು ಮನಸ್ಸಿಗೆ ಬಂದಾಗ, ಹೆಣ್ಣೇ ಮೊದಲಿಗೆ ನೆನಪಾಗುತ್ತಾಳೆ.
ನನ್ನ ಅಪ್ಪನ ಮನೆಯ ಮೊಮ್ಮೊಕ್ಕಳಲ್ಲಿ ಹೆಣ್ಣು ಮಕ್ಕಳೇ ಜಾಸ್ತಿ. ರಜೆಯಲ್ಲಿ ನಾವೆಲ್ಲ ಸೇರಿ, ಮಾಳಿಗೆಯೇ ಹಾರಿ ಹೋಗುವಂತೆ ಬೊಬ್ಬಿಡುತ್ತಾ ನಕ್ಕರೆ, ಅಜ್ಜಿ “ಹೆಣ್ಣುಮಕ್ಕಳು ಅತಿಯಾಗಿ, ಜೋರಾಗಿ, ಸ್ವರ ಇನ್ನೊಬ್ಬರಿಗೆ ಕೇಳುವಂತೆ ನಗಬಾರದು” ಎನ್ನುತ್ತಿದ್ದರು.
ಹಿಂದಿನ ಕಾಲದಲ್ಲಿ ಮಹಿಳೆಗೆ ತುಂಬ ಕಟ್ಟುಪಾಡುಗಳಿದ್ದವಂತೆ. ಮನೆಯಲ್ಲಿ ಅಡುಗೆ ಮಾಡುವುದು, ಗಂಡ ಹಾಗೂ ಮಕ್ಕಳ ಸೇವೆ ಮಾಡುವುದೇ ಅವಳ ಕೆಲಸವಾಗಿತ್ತಂತೆ. ಗಂಡನ ಊಟ ಆದ ಮೇಲೆ, ಅದೇ ಎಂಜಲು ಬಾಳೆ ಎಲೆಯಲ್ಲಿಯೇ ಹೆಂಡತಿ ಊಟ ಮಾಡಬೇಕಿತ್ತಂತೆ. ನಾವು ತೊಡುವ ಉಡುಗೆಗಳಿಗೂ ನಿಯಮವಿತ್ತಂತೆ. ಇದು ಕೇವಲ ಪುರುಷಪ್ರಧಾನ ದೇಶವಾಗಿತ್ತಂತೆ. ಮನುವೇ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ ಎಂದಿದ್ದಾನಂತೆ. ಆದರೆ ಸಮಯ ಹಾಗೆಯೇ ಇಲ. ಈಗ ನಮಗೂ ಮಾತನಾಡುವ ಸ್ವಾತಂತ್ರ್ಯವಿದೆ. ಬರೆಯುವ ಸ್ವಾತಂತ್ರ್ಯವಿದೆ. ಎಲ್ಲಿಗೆ ಬೇಕೆಂದರಲ್ಲಿ ಹೋಗುವ ಸ್ವಾತಂತ್ರ್ಯವಿದೆ. ನಮಗೆ ಬೇಕಾದ್ದನ್ನು, ಬೇಕಾದ ಹಾಗೆ, ಬೇಕಾದ ಹೊತ್ತಿನಲ್ಲಿ ತಿನ್ನುವ ಸ್ವಾತಂತ್ರ್ಯವಿದೆ. ಈಗ ಮಹಿಳೆಯೂ ಪುರುಷನನ್ನು ಮೀರಿ ದುಡಿಯುತ್ತಾಳೆ. ಎಲ್ಲ ವಿಷಯಗಳಲ್ಲಿಯೂ ಆಕೆ ಪುರುಷನಿಗೆ ಸಮಾನಳು. ಆದರೂ ಈ ಇತಿ-ಮಿತಿ ಎಂಬುದೆಲ್ಲ ಕೇವಲ ಹೆಣ್ಣಿಗೆ ಮಾತ್ರ ಯಾಕೆ? ಎಂಬ ಭಾವ ಅನೇಕ ಬಾರಿ ಮೆದುಳೊಳಗೆ ನುಸುಳಿದ್ದಿದೆ.
ಹಾಗೆ ನೋಡಿದರೆ, ಸ್ತ್ರೀಯನ್ನು ಅತ್ಯಂತ ಗೌರವಯುತವಾಗಿ ಕಂಡ ಸಂಸ್ಕೃತಿ ನಮ್ಮದು. ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ಎಂದು ನಂಬಿದ ದೇಶ ನಮ್ಮದು. ಸನಾತನ ಭಾರತದಲ್ಲಿ ಹುಡುಕಿಕೊಂಡು ಹೋದರೆ, ದೇವಹೂತಿ, ಲೋಪಾಮುದ್ರಾ, ಗಾರ್ಗಿ, ಮೈತ್ರೇಯಿ, ಉಭಯಭಾರತೀ ಅನೇಕ ಸ್ತ್ರೀರತ್ನಗಳು ಸಿಕ್ಕುತ್ತವೆ. ಇನ್ನು ರಾಜರಿಗಿಂತ ಚೆನ್ನಾಗಿ ರಾಜ್ಯಭಾರ ಮಾಡಿದ ಲಕ್ಷ್ಮೀಬಾಯಿ, ಕಿತ್ತೂರು ಚೆನ್ನಮ್ಮರಂತಹ ರಾಣಿಯರಿಗೂ ನಮ್ಮ ದೇಶದ ಇತಿಹಾಸದಲ್ಲಿ ಕೊರತೆಯಿಲ್ಲ. ತ್ಯಾಗ ಬಲಿದಾನ ನಿಷ್ಠೆಗಳ ಪಾಠ ಕಲಿಸಿದ ವೀರವನಿತೆ ಒನಕೆ ಓಬವ್ವನೂ ನಮ್ಮವಳೇ. ನಮ್ಮ ನಡುವೆ ಈಗಲೂ ಎಷ್ಟೆಷ್ಟೋ ಸಾಧಕಿಯರಿದ್ದಾರೆ. ಎತ್ತರಕ್ಕೇರಲು ಸ್ವತಂತ್ರರಾಗಿ ಸ್ವಾಭಿಮಾನಿಗಳಾಗಿದ್ದರೆ ಸಾಕು. ಕಾರಣವಿಲ್ಲದೇ ಕಂಡದ್ದೆಲ್ಲವನ್ನೂ ವಿರೋಧಿಸುವ ಸ್ವೇಚ್ಛಾಚಾರದ ಅಗತ್ಯವಿಲ್ಲ ಅಲ್ಲವೇ?
ಈ ವಿಷಯ ಸಮಾನತೆಯ ಬಗ್ಗೆಯಾಗಲೀ, ಯಾರು ಹೆಚ್ಚು, ಯಾರು ಕಡಿಮೆ ಎಂಬುದಾಗಲೀ ಅಲ್ಲ. ಒಂದು ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಸಲು ಎಲ್ಲರಿಗೂ ಅನೇಕ ಅಲಿಖಿತ ನಿಯಮಗಳು ಇರುತ್ತವೆ. ಅದು ಕೇವಲ ಮಹಿಳೆಗೆಂದಷ್ಟೇ ತಿಳಿದುಕೊಳ್ಳಬೇಕಿಲ್ಲ. ಮಕ್ಕಳಿಗೆ ಒಂದು ರೀತಿ, ಮಹಿಳೆಯರಿಗೆ ಒಂದು ರೀತಿ ಹಾಗೂ ಪುರುಷರಿಗೆ ಒಂದು ರೀತಿ ಮತ್ತು ವೃದ್ಧರಿಗೆ ಒಂದು ರೀತಿ. ಹೀಗೆ ಎಲ್ಲರಿಗೂ ನಿಯಮಗಳು ಅನ್ವಯವಾಗುತ್ತದೆ. ಕಾಲಕಾಲಕ್ಕೆ ತಕ್ಕಂತೆ, ಪೀಳಿಗೆಯಿಂದ ಪೀಳಿಗೆಗೆ ಆ ನಿಯಮಗಳು ಬದಲಾಗಲೂಬಹುದು. ಬದಲಾವಣೆಯೇ ಜಗದ ನಿಯಮ ಹಾಗೂ ಅತ್ಯಗತ್ಯ. ಆದರೆ ಅದು ಧನಾತ್ಮಕವಾಗಿದ್ದರಾಯಿತು. ಸಮಾಜದ ಆರೋಗ್ಯವನ್ನು ಹದಗೆಡಿಸದಿದ್ದರೆ ಸಾಕು.
ಒಂದೊಂದು ಮನೆಯಲ್ಲಿ ಒಂದೊಂದು ರೀತಿಯ ನಿಯಮಗಳು. ಒಂದೊಂದು ಸಮುದಾಯದಲ್ಲಿ ನಿರ್ಧರಿಸಲಾದ ನಿಯಮಗಳು. ಹಾಗೆಯೇ ನಮ್ಮ ಸಂಸ್ಕೃತಿಯಲ್ಲಿ ಹೇಳಿದ ಅನೇಕ ನಿಯಮಗಳಿಗೆ ಏನೋ ಒಂದು ಕಾರಣವಿದ್ದೇ ಇರಬಹುದು. ದೇಶ, ಕಾಲ ಮತ್ತು ಹಳೆಯ ಅನುಭವಗಳ ಮಾಪನದಿಂದ ಅಳೆದು ನಿರ್ಧರಿಸಿದ್ದಾಗಿರಬಹುದು. ಸ್ವತಂತ್ರಕ್ಕೆ ಹಾಗೂ ಸ್ವೇಚ್ಛೆಗೆ ಒಂದು ನಿರ್ದಿಷ್ಟವಾದ ವ್ಯಾಖ್ಯಾನ ನೀಡುವುದು ಕೊಂಚ ಕಷ್ಟವೇ. “ಇದು ನನ್ನ ಇಷ್ಟ. ಈ ಕೆಲಸ ಮಾಡಲು ನನಗೆ ಸ್ವಾತಂತ್ರ್ಯವಿದೆ” ಎಂದುಕೊಂಡು ಮಾಡುವುದು ಬೇರೆಯವರಿಗೆ ಸ್ವೇಚ್ಛಾಚಾರ ಅನ್ನಿಸಬಹುದು. ಅಥವಾ ಬೇರೆಯವರ ಹವ್ಯಾಸಗಳು, ಆಚರಣೆಗಳು ಹಾಗೂ ಜೀವನಶೈಲಿ ನಮಗೆ ಸ್ವೇಚ್ಛಾಚಾರ ಅನ್ನಿಸಬಹುದು.
ದೇವರು ಕೊಟ್ಟ ಸ್ವಾತಂತ್ರ್ಯ, ಸಂವಿಧಾನ ಕೊಡುವ ಸ್ವಾತಂತ್ರ್ಯಗಳನ್ನು ಯಾರೂ ತಡೆಯಬಾರದು. ಆದರೆ ನಮ್ಮ ಮಿತಿಯನ್ನು ನಾವೇ ಅರಿತುಕೊಳ್ಳಬೇಕು. ನನಗೆ ಬರೆಯುವ ಸ್ವಾತಂತ್ರ್ಯವಿದೆ ಎಂದು ಅನ್ನಿಸಿದ್ದನ್ನೆಲ್ಲ ಗೀಚುತ್ತಾ ಹೋಗುವುದಲ್ಲ. ಮಾತನಾಡುವ ಸ್ವಾತಂತ್ರ್ಯವಿದೆ ಎಂದು ಮನಸ್ಸಿಗೆ ಬಂದಿದ್ದನ್ನೆಲ್ಲ ನಾಲಿಗೆಯಲ್ಲಿ ಆಡಿಬಿಡುವುದಲ್ಲ. ಎಲ್ಲಿ ಬೇಕಾದರೂ ಹೋಗುವ ಸ್ವಾತಂತ್ರ್ಯವಿದೆ ನಿಜ. ಒನ್ ವೇ ಅಲ್ಲಿ ಗಾಡಿಯನ್ನು ಓಡಿಸಿದರೆ ಅಪಘಾತವಾದೀತು ಎಂಬ ಅರಿವಿರಬೇಕು. ನಾವು ಚಿಕ್ಕವರಿದ್ದಾಗ ನಾವು ಕೇಳಿದ್ದೆಲ್ಲವವನ್ನೂ ಕೂಡಲೇ ಕೊಡಿಸಿದ್ದಾರೆಯೇ? ಅಥವಾ ನಮ್ಮ ಮಕ್ಕಳನ್ನು ಎಲ್ಲ ವಿಷಯಗಳಲ್ಲಿ ಅವರ ಇಷ್ಟ ಬಂದಂತೆ ಇರಲು ಬಿಡುತ್ತೇವೆಯೇ? ಮಗು ಚಾಕೊಲೇಟು ಎಂದರೆ ಇಷ್ಟ ಎಂದು ಎಷ್ಟಾದರೂ ತಿನ್ನಲು ಕೊಡುತ್ತೇವೆಯೇ? ಬೆಳೆದ ಮೇಲೆ ನಾವು ಸ್ವತಂತ್ರರು ಎಂಬ ಕಾರಣಕ್ಕೆ ಎಲ್ಲರೂ ಅವರವರ ಮನ ಬಂದಂತೆ ನಡೆದುಕೊಂಡರೆ ಎಷ್ಟು ಸರಿ ಎಂದು ಯೋಚಿಸಬೇಕಾಗಿದೆ. ನಿಯಮಗಳನ್ನು ಮುರಿಯುವುದೇ ಗುರಿಯನ್ನಾಗಿಸಿಕೊಂಡರೆ ಉನ್ನತಿಯೆಡೆಗೆ ಸಾಗಲು ಸಾಧ್ಯವೇ? ಎಂದು ಪ್ರಶ್ನಿಸಿಕೊಳ್ಳಬೇಕಿದೆ. ವ್ಯಕ್ತಿಸ್ವಾತಂತ್ರ್ಯ, ಸಮಾನತೆ ಎಂಬ ಹೆಸರಿನಲ್ಲಿ ಇತ್ತೀಚೆಗೆ ಸಮಾಜದ ಸ್ವಾಸ್ಥ್ಯ ಹದಗೆಡುತ್ತಿದೆಯೇನೋ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಎಲ್ಲ ಸಂದರ್ಭದಲ್ಲಿಯೂ ಸ್ವ ಇಚ್ಛೆಯಂತೇ ಮಾಡುವ ಮೊದಲು ಅದರ ಪರಿಣಾಮಗಳ ಕುರಿತು ಯೋಚಿಸಬೇಕಲ್ಲವೇ?
ಕೊನೆಹನಿ: ಆ ಸರ್ವಸ್ವತಂತ್ರನು ನಮಗಿತ್ತ ಸ್ವಾತಂತ್ರ್ಯವನ್ನು ಸದುಪಯೋಗಪಡಿಸಿಕೊಳ್ಳೋಣ. ಮನಸ್ಸಿನ ಸ್ವಾಸ್ಥ್ಯವನ್ನೂ, ಸಮಾಜದ ಸ್ವಾಸ್ಥ್ಯವನ್ನೂ ಕೆಡಿಸಬಹುದಾದ ಸ್ವೇಚ್ಛೆಗಳಿಗೆ ಕಡಿವಾಣ ಹಾಕಿಕೊಳ್ಳೋಣ. ಸ್ವತಂತ್ರರಾಗೋಣ. ಸಾಧನೆಯ ಹಾದಿಯಲ್ಲಿ ಎತ್ತರಕ್ಕೇರೋಣ. ಜೀವನಕ್ಕೊಂದು ನಿಯಮವಿರಲಿ. ಸ್ವೇಚ್ಛೆಗೊಂದು ಎಲ್ಲೆಯಿರಲಿ.