ಸಾರ್ಥಕವಾಯುತು ಶ್ರೀ ಅಖಿಲಹವ್ಯಕ ಮಹಾಸಭೆಯ ಸಂಸ್ಥಾಪನೋತ್ಸವ

ಸುದ್ದಿ

ಬೆಂಗಳೂರು: ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ಸಂಸ್ಥಾಪನೋತ್ಸವ, ಹವ್ಯಕ ವಿಶೇಷ ಪ್ರಶಸ್ತಿ, ಪಲ್ಲವ ಪುರಸ್ಕಾರ ಪ್ರದಾ‌ನ ಸಮಾರಂಭವು ಸಂಭ್ರಮದಿಂದ ಜರುಗಿತು. ಸಮಾರಂಭದ ಅಭ್ಯಾಗತರಲ್ಲಿ ಒಬ್ಬರಾದ ಸಾಹಿತಿ ಶ್ರೀಮತಿ ಎ.ಪಿ.ಮಾಲತಿ, ಇಂದಿನ ಮೊಬೈಲ್ ಕಾಲದಲ್ಲೂ ನಮ್ಮ ಸಮಾಜದಲ್ಲಿನ ಪ್ರತಿಭೆಗಳು ಹೊರ ಬರುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು. ಹವ್ಯಕ ಮಹಾಸಭೆಯು ಎಲೆಮರೆಕಾಯಿಯಂತಿದ್ದ ಪ್ರತಿಭೆಗಳನ್ನು ಗುರುತಿಸಿ ಇಂದು ಸನ್ಮಾನಿಸುತ್ತಿರುವುದು ಶ್ಲಾಘನೀಯ. ಯುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪುರಸ್ಕರಿಸಲಾಗುತ್ತಿದೆ. ಇದು ಅವರ ಸಾಧನೆಯ ಶಿಖರಕ್ಕೆ ಮತ್ತಷ್ಟು ಸ್ಫೂರ್ತಿಯಾಗಿದೆ ಎಂದು ಅಭಿಪ್ರಾಯವನ್ನು ಹಂಚಿಕೊಂಡರು.

 

ಕೆನರಾ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ವಿ.ಶಾಸ್ತ್ರಿ ಅವರು ಮಾತನಾಡಿ, ಇದೊಂದು ಸಣ್ಣ ಸಮೂಹವಾದರೂ ಅದಕ್ಕೆ ದೊಡ್ಡ ಸಂಸ್ಕೃತಿ ಇದೆ. ಮಹಾಸಭೆಯು ಸಾವಿರಾರು ಸದಸ್ಯರನ್ನು ಹೊಂದಿದೆ, ಇನ್ನು ಹೆಚ್ಚು ಹೆಚ್ಚಾಗಿ ಬೇರನ್ನು ಗಟ್ಟಿಗೊಳಿಸಿಕೊಳ್ಳಬೇಕು ಎಂದರು.

 

ಅಧ್ಯಕ್ಷತೆ ವಹಿಸಿದ್ದ ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ ಕಜೆ ಮಾತನಾಡಿ, ನಮ್ಮ ಸಮಾಜದ ವಂಶವಾಹಿಯಲ್ಲೇ ಗಟ್ಟಿತನ ಇದೆ. ಹವ್ಯಕ ಸಮಾಜ ಬುದ್ಧಿವಂತ ಸಮಾಜ, ಪ್ರಜ್ಞಾವಂತ ಸಮಾಜ ಎಂದು ಹೇಳಲಾಗುತ್ತದೆ. ಇದಕ್ಕೆ ಕಾರಣ ನಮ್ಮ ಪೂರ್ವಜರಿಂದ ನಮಗೆ ಬಂದ ವಂಶವಾಹಿಯೇ ಆಗಿದೆ. ಎಂದು ಅಭಿಪ್ರಾಯಪಟ್ಟರು. ನಮ್ಮಲ್ಲಿ ಅರ್ಜಿಯನ್ನು ಹಾಕಿ, ರಾಜಕೀಯ ಮಾಡಿ ಪ್ರಶಸ್ತಿ ಪಡೆಯುವ ಕ್ರಮ ಇಲ್ಲ. ಸಮಾಜದಿಂದ ನಾಮನಿರ್ದೇಶನ ಪಡೆದು, ಸಾಧಕರನ್ನು ಗುರುತಿಸಲಾಗುತ್ತಿದೆ. ಪ್ರತಿಭೆಗಳನ್ನು, ಸಾಧಕರನ್ನು ಗುರುತಿಸುವುದು ಒಂದು ಉದ್ದೇಶವಾದರೆ, ಸಮಾಜದಲ್ಲಿ ಸಾಗರೋಪಾದಿಯಲ್ಲಿ ಸಾಧಕರಿದ್ದಾರೆ ಎಂದು ಜಗತ್ತಿಗೆ ತಿಳಿಸುವುದು ಮತ್ತೊಂದು ಉದ್ದೇಶ ಎಂದು ಕಾರ್ಯಕ್ರಮದ ಔಚಿತ್ಯವನ್ನು ತಿಳಿಸಿದರು. ಮಹಾಸಭೆಯು ಸ್ಥಾಪನೆಯಾಗಿ 76 ವರ್ಷಗಳು ಪೂರ್ಣಗೊಂಡಿದೆ. ಸದಸ್ಯತ್ವವನ್ನು ಹೆಚ್ಚಿಸುವ ಕಡೆ ಹೆಚ್ಚಿನ ಗಮನವಹಿಸಲಾಗುವುದು ಎಂದು ತಿಳಿಸಿದರು.

 

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಪಿ. ನಾರಾಯಣ ಭಟ್ಟ, ಸಿಆರ್ ಪಿಎಫ್, ಐಜಿಪಿ(ಮೆಡಿಕಲ್), ಮನೆಬಿಟ್ಟು ಹೋದವವನನ್ನು ಮರಳಿ ಮನೆಗೆ ಕರೆದುಕೊಂಡು ಬಂದಾಗ ಆಗುವಷ್ಟು ತೋಷವಾಗಿದೆ. ಇಂದು ಪಡೆದ ಪ್ರಶಸ್ತಿ ರಾಷ್ಟ್ರಪತಿಗಳಿಂದ ಪಡೆದಷ್ಟು ಸಂತೋಷವಾಯಿತು ಎಂದರು. ಇಂದು ಪ್ರಶಸ್ತಿ ಪಡೆದದ್ದು ಬೆಲೆ ಕಟ್ಟಲಾರದಂತ ಉಡುಗೊರೆ ಸಿಕ್ಕಂತಾಗಿದೆ. ಮಹಿಳೆಗೆ ತವರು‌ ಮನೆಯಿಂದ ಉಡುಗೊರೆ ಪಡೆದಷ್ಟು ಖುಷಿಯಾಗಿದೆ. ಇಡೀ ಹವ್ಯಕ ಕುಟುಂಬವೆ ನನಗೆ ಪ್ರಶಸ್ತಿ ಕೊಟ್ಟಂತಾಗಿದೆ ಎಂದು ಸುಧಾ‌ ಶರ್ಮಾ ಚವತ್ತಿ ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥಾಪನೋತ್ಸವ ಸಮಿತಿ ಸಂಚಾಲಕ ಮುಗಲೋಡಿ ಕೃಷ್ಣಮೂರ್ತಿ ಅವರು ಅಖಿಲ ಹವ್ಯಕ‌ ಮಹಾಸಭಾ ನಡೆದು ಬಂದ ದಾರಿಯ ಬಗ್ಗೆ ವಿವರಿಸಿದರು. ಅನಂತರ ಪ್ರಶಸ್ತಿ ಪುರಸ್ಕೃತರ ಕಿರುಚಿತ್ರಗಳನ್ನು ತೋರಿಸಲಾಯಿತು. ಪ್ರಧಾನ ಕಾರ್ಯದರ್ಶಿ ಸಿಎ ವೇಣುವಿಘ್ನೇಶ ಸಂಪ, ಉಪಾಧ್ಯಕ್ಷರಾದ ಕೆಕ್ಕಾರು ಶ್ರೀಧರ ಭಟ್ಟ, ಕಾರ್ಯಕ್ರಮದ ಸಂಚಾಲಕ ರವಿನಾರಾಯಣ ಪಟ್ಟಾಜೆ ಸೇರಿದಂತೆ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸಂಚಾಲಕರು ಸಂಪಾದಕರು ಉಪಸ್ಥಿತರಿದ್ದರು. ಸಾಧಕರಿಗೆ ಹವ್ಯಕ ವಿಶೇಷ ಪ್ರಶಸ್ತಿ ಯಕ್ಷಗಾನ ಕಲಾವಿದ ಹೊನ್ನಾವರದ ನಾರಾಯಣ ಹಾಸ್ಯಗಾರ ಅವರಿಗೆ ಹವ್ಯಕ ವಿಭೂಷಣ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಕಾಸರಗೋಡಿನ ಗೋವಿಂದ ಭಟ್ಟ, ಸಿಆರ್ ಪಿಎಫ್ ಐಜಿಪಿ (ಆರೋಗ್ಯ)ಸುಳ್ಯದ ಡಾ.ನಾರಾಯಣ್ ಭಟ್ಟ ಅವರಿಗೆ ಹವ್ಯಕ ಭೂಷಣ ಹಾಗೂ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಗರದ ಅನನ್ಯ ಭಾರ್ಗವ ಬೇದೂರು, ಮಾಧ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯಲ್ಲಾಪುರದ ಸುಧಾ ಶರ್ಮಾ ಚವತ್ತಿ, ಬುದ್ದಿಮಾಂದ್ಯ ಮಕ್ಕಳ ಶಾಲಾ ಸಂಸ್ಥಾಪಕಿ ಸಾಗರದ ಶಾಂತಲಾ ಸುರೇಶ ಮುಂಗರವಳ್ಳಿ ಅವರಿಗೆ ಹವ್ಯಕ ಶ್ರೀ ಪ್ರಶಸ್ತಿ ನೀಡಲಾಯಿತು.
ಹವ್ಯಕ‌ ಪಲ್ಲವ ಪುರಸ್ಕಾರದಲ್ಲಿ ಈ ಬಾರಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹದಿನೈದು ಯುವ ಸಾಧಕರಿಗೆ ಹವ್ಯಕ ಪಲ್ಲವ ಪುರಸ್ಕಾರ ನೀಡಲಾಯಿತು.

 

ಉತ್ಸವದ ಅಂಗವಾಗಿ ಯಕ್ಷಗಾನ ತಾಳಮದ್ದಲೆ “ಸುಧನ್ವ ಮೋಕ್ಷ” ನಡೆಯಿತು. ಹಿಮ್ಮೇಳದಲ್ಲಿ ಕೊಳಗಿ ಕೇಶವ ಹೆಗಡೆ, ನಾರಾಯಣ ಹೆಬ್ಬಾರ, ಲಕ್ಷ್ಮಿ ನಾರಾಯಣ ಸಂಪ ಹಾಗೂ ಮುಮ್ಮೇಳದಲ್ಲಿ ಮೋಹನ್ ಭಾಸ್ಕರ್ ಹೆಗಡೆ, ವಿದ್ವಾನ್ ಗಣಪತಿ ಹೆಗಡೆ ಸುಂಕದಗುಂಡಿ, ಹರೀಶ್ ಬೋಳಂತಿಮೊಗರು ನಡೆಸಿಕೊಟ್ಟರು.

Leave a Reply

Your email address will not be published. Required fields are marked *