ನಂತೂರು : ಮಂಗಳೂರು ವಾಮಂಜೂರು ಪಚ್ಚನಾಡಿಯ ಮಂದಾರ ಎಂಬಲ್ಲಿ ಮೊನ್ನೆಯ ಭಾರೀ ಮಳೆಗೆ ಡಂಪಿಂಗ್ ಯಾರ್ಡ್ ಕುಸಿದು ಹತ್ತಿರದ ಮನೆಗಳಿಗೆ ಅಪಾಯಕಾರಿ ವಾತಾವರಣ ಸೃಷ್ಟಿಸಿತ್ತು. ಕಸದ ರಾಶಿ ಸುಮಾರು 2 ಕಿಮೀ ದೂರ ಸಂಚರಿಸಿತ್ತೆನ್ನಲಾಗಿದೆ.
ಆ ಡಂಪಿಂಗ್ ಯಾರ್ಡ್ ನಲ್ಲಿ ಕಸ, ಪ್ಲಾಸ್ಟಿಕ್ ರಾಶಿ ಹಾಕಲಾಗಿದೆ. ಧಾರಾಕಾರವಾಗಿ ಸುರಿದ ಮಳೆಗೆ ಕಸದ ರಾಶಿ ನಿಧಾನವಾಗಿ ಕುಸಿದು ಬಂದಿರುವುದನ್ನು ಗಮನಿಸಿದ ರಕ್ಷಣಾಪಡೆ ಅಲ್ಲಿನ 27 ಕುಟುಂಬಗಳನ್ನು ಸ್ಥಳಾಂತರಿಸಿತ್ತು. ಅದಾಗಲೇ ಕೆಲವೊಂದು ಮನೆಗಳು ನೆಲಸಮವಾಗಿದ್ದರೆ, ಮತ್ತೆ ಕೆಲವು ಬಿರುಕುಬಿಟ್ಟಿತ್ತು. 3000ಕ್ಕೂ ಅಧಿಕ ಅಡಿಕೆ ಮರ, ತೆಂಗು ಇತ್ಯಾದಿ ಕೃಷಿ ಭೂಮಿ ಈ ಗಲೀಜಿನಲ್ಲಿ ಮುಳುಗಿಯಾಗಿತ್ತು. ಸುಮಾರು 27 ಮನೆಗಳಲ್ಲಿ ನಾಲ್ಕಾರು ನಾಶವಾಗಿದ್ದವು. ಇನ್ನುಳಿದವು ಮತ್ತೆಯೂ ಇರಲಾರವು.
ಆದರೆ ಕೆಲವೊಂದು ಮನೆಗಳಿಗೆ ಕಸದ ರಾಶಿ ತಲುಪುವ ಮೊದಲೇ ಸಂತ್ರಸ್ತರ ವಸ್ತುಗಳನ್ನು ಉಪಕರಣಗಳನ್ನು ಸ್ಥಳಾಂತರಗೊಳಿಸಬೇಕಾಗಿತ್ತು. ದುರ್ವಾಸನೆ, ಗಲೀಜು ನೀರು ಸಾಗುವ ದಾರಿಯಲ್ಲಿ ನಮ್ಮ ಯೋಜನಾಧಿಕಾರಿ ಅಶೋಕ್ ಎಸ್. ನೇತೃತ್ವದಲ್ಲಿ ಎನ್ನೆಸ್ಸೆಸ್ ಸ್ವಯಂಸೇವಕರು ರವಿವಾರವಿಡೀ ದಿನ ಸಂತ್ರಸ್ತರಿಗೆ ಸಹಾಯ ಮಾಡಿದರು. ಬಳಿಕ ರಸ್ತೆಯೂ ಬ್ಲಾಕ್ ಆಗಿ ವಾಹನ ಸಂಚಾರವೂ ಸ್ಥಗಿತಗೊಂಡಿತು. ಆ ತನಕವೂ ಶ್ರೀ ಭಾರತೀ ಸಮೂಹ ಸಂಸ್ಥೆಯ ವಿದ್ಯಾರ್ಥಿಗಳು ದುರ್ವಾಸನೆಯ ನಡುವೆ, ಗಲೀಜು ಜಾಗದಲ್ಲಿ, ಕಸದರಾಶಿ ಮುನ್ನುಗ್ಗುವ ಭಯದ ನಡುವೆ ಮಾಡಿದ ಸೇವೆ ಶ್ಲಾಘನೆಗೆ ಪಾತ್ರವಾಗಿದೆ.
ವಿಶೇಷವೆಂದರೆ ಈ ಜಾಗ ಗಲೀಜಾಗಿರುವುದರಿಂದ ಅಲ್ಲಿಗೆ ಸುಲಭವಾಗಿ ತೆರಳಲಾಗುವುದಿಲ್ಲ. ನಿನ್ನೆ ಎನ್ನೆಸ್ಸೆಸ್ ತಂಡವು ಸಂತ್ರಸ್ತರ ವಸ್ತುಗಳನ್ನು ಅಲ್ಲಿಯ ಮನೆಗಳಿಂದ ಸ್ಥಳಾಂತರಿಸಿತು. ಇದೀಗ ಆ ಮನೆಗಳು ಕಸದ ರಾಶಿಯಲ್ಲಿ ಮುಳುಗಿ ಮಾಯವಾಗಿವೆ. ಅಂದರೆ ಆ ಪರಿಸರದ ಗಂಭೀರತೆಯನ್ನು ಊಹಿಸಬಹುದು.
ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ನೆರೆ ಸಂತ್ರಸ್ತರಿಗೆ ಸ್ಪಂದಿಸಲು ಕರೆ ನೀಡುತ್ತಿದ್ದಂತೆ ಶ್ರೀ ಮಠದ ಅಂಗಸಂಸ್ಥೆಯ ಎನ್ನೆಸ್ಸೆಸ್ ಸ್ವಯಂಸೇವಕರು ಅಧಿಕೃತವಾಗಿ ಸತ್ಕಾರ್ಯಕ್ಕಿಳಿದು ವ್ಯಾಪಕ ಶ್ಲಾಘನೆಗೆ ಪಾತ್ರರಾದರು.
ಕಸದ ರಾಶಿ ಎಷ್ಟು ಅಪಾಯಕಾರಿಯಾಗಿ ಪರಿಣಮಿಸುತ್ತದೆ ಎನ್ನುವುದಕ್ಕೆ ಮಂದಾರ ವೆಂಬ ಊರೇ ಮಾಯವಾಗಿರುವುದು ಸಾಕ್ಷಿ. ಆದುದರಿಂದ ಸಮಾಜ ಎಚ್ಚತ್ತುಕೊಳ್ಳದೇ ಇದ್ದರೆ, ಪರಿಸರ ರಕ್ಷಣೆಗೆ ಕೈಜೋಡಿಸದೇ ಇದ್ದರೆ ಭವಿಷ್ಯದ ಅನಾಹುತಗಳನ್ನು ಊಹಿಸುವುದೂ ಅಸಾಧ್ಯ.