ಗುರುರಾಜ ಪಟ್ಟ ಭದ್ರ

ಅಂಕಣ ಆ ಕಣ್ಣಿಂದ : ಮೋಹನ ಭಾಸ್ಕರ ಹೆಗಡೆ ಹೆರವಟ್ಟ

ನಮ್ಮ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು  ಯಾವತ್ತೂ ಪೀಠಕ್ಕೆ ಬಂದು ಆಸೀನರಾಗುವಾಗ ಅವರನ್ನು ಬಹುಪರಾಕಿನಿಂದ ಬರ ಮಾಡಿಕೊಳ್ಳಲಾಗುತ್ತದೆ.  ಗೌರವಿಸಲಾಗುತ್ತದೆ. ಆದರಿಸಲಾಗುತ್ತದೆ. ಹಾಗೆ ಹೇಳುವಾಗ ಆ ಪರಾಕಿಗೊಂದು ವಿಶೇಷವಾದ ಮೆರಗಿದೆ. ಇಡೀ ವಾತಾವರಣ ಶ್ರೀಸಂಸ್ಥಾನದವರ ಎತ್ತರ, ಮಹತ್ತ್ವಗಳನ್ನು ಭಕ್ತಿಪರವಶತೆಯಿಂದ ಕಾಣುತ್ತಾರೆ. ಕಣ್ಮುಚ್ಚಿ ಅವರನ್ನು ಧ್ಯಾನಿಸುತ್ತಾರೆ.

 

ಹಾಗಿದ್ದರೆ ಏನಿದು ಪರಾಕು? ಇದು ಕೇವಲ ಹೊಗಳುವಿಕೆಯಲ್ಲ. ಇದರ ಹಿಂದೆ ಅಪಾರವಾದ ಅರ್ಥವಿದೆ. ಇದು ಸುಮ್ಮ- ಸುಮ್ಮನೆ ಪೋಣಿಸಿದ ಶಬ್ದಗಳಲ್ಲ. ಇದು ಸಾಧಿಸಿ ಗಳಿಸಿಕೊಂಡ ಸಿದ್ಧಿ.  ಇದರಲ್ಲಿ ಎಂತಹ ಅಪಾರವಾದಂತಹ ಗುರು-ಶಿಷ್ಯ ಬಂಧವಿದೆ ಎಂದರೆ, ಗುರುವು ಧ್ಯಾನಸ್ಥರಾಗಿ ಶಿಷ್ಯಸ್ತೋಮದ, ಸಮಾಜದ ಒಳಿತಿಗಾಗಿ, ಕಠಿಣ ಅನುಷ್ಠಾನಗಳಲ್ಲಿ ನಿಮಗ್ನರಾಗಿರುವವರು. ಅವರು ಪಾರಮಾರ್ಥಿಕ ಚಿಂತನೆಯನ್ನು ಲೌಕಿಕ ಹಿತಕ್ಕೋಸ್ಕರ ಮಾಡುವವರು.  ಯಾಕೆಂದರೆ ವೈಯುಕ್ತಿಕವಾಗಿ ಅವರಿಗಾಗಿ ಯಾವ ಹಿತವನ್ನೂ ಮಾಡಿಕೊಳ್ಳಬೇಕಾಗಿ ಇರುವುದಿಲ್ಲ. ಅಂತಹ ತುರೀಯ ಆಶ್ರಮವನ್ನು ಅವರು ಈಗಾಗಲೇ ಸೇರಿಯಾಗಿದೆ. ಅವರ ಕಾಯಕವೇನಿದ್ದರೂ ಅದು ಲೌಕಿಕರಿಗಾಗಿ. ಅಂದರೆ ನಮ್ಮಂಥವರಿಗಾಗಿ. ಅಂತಹ ಪರಮಹಂಸರು, ಪರಮಾನಂದದ ಸ್ಥಿತಿಯಲ್ಲಿ ಇರುವವರು, ಪರಮೋನ್ನತ ಪೀಠದಲ್ಲಿರುವಾಗಲೂ ಅದೇ ರೀತಿ ಅಂತರ್ಮುಖಿಗಳಾಗಿ ಪಾರಮಾರ್ಥಿಕ ಚಿಂತನೆಯಲ್ಲಿಯೇ ತೊಡಗಿರುತ್ತಾರೆ ಎನ್ನುವುದು ಅಂತಹ ಪೀಠವನ್ನು ಅಲಂಕರಿಸುವವರಿಗೆ ಸ್ಪಷ್ಟ ಗೊತ್ತಿರುತ್ತದೆ.  ಅಂತಹ ಪರಮಪೂಜ್ಯರು ಭಕ್ತಾದಿಗಳನ್ನು ಹರಸುವುದಕ್ಕಾಗಿ, ಆಶೀರ್ವದಿಸುವುದಕ್ಕಾಗಿ, ಅವರ ಕಷ್ಟಸುಖಗಳನ್ನು ಕೇಳುವುದಕ್ಕಾಗಿ, ಅವರಿಗೆ ಒಳಿತನ್ನು ಮಾಡುವುದಕ್ಕಾಗಿ, ಬಂದು ದರ್ಶನವನ್ನು ಕೊಡುವುದು. ಅವರನ್ನು ನಾವು ನೋಡುತ್ತಿದ್ದೇವೆ ಎನ್ನುವುದು ಅದರ ಅರ್ಥವಲ್ಲ. ಅವರನ್ನು ದರ್ಶಿಸುವುದು ಅಂದರೆ ಆ ದಿವ್ಯತೇಜಸ್ಸನ್ನು ನಾವು ಆರಾಧಿಸುವುದು. ಆ ದಿವ್ಯತೇಜಪ್ರಖರತೆಯಿಂದ ಮೈಮನಗಳಲ್ಲಿ ಚೈತನ್ಯವನ್ನು ತಂದುಕೊಳ್ಳುವಂತಹದ್ದು, ಜಾಡ್ಯತೆಯನ್ನು ಹೋಗಲಾಡಿಸಿಕೊಳ್ಳುವುದು ಎಂಬ ಅರ್ಥದಿಂದ.  ಹೀಗೆಯೇ ಅವರುಗಳನ್ನು ದರ್ಶಿಸಬೇಕೇ ಹೊರತು ಅವರು ನಮ್ಮೆಡೆಗೆ ನಗು ಬೀರಿದರು ಎಂದ ಮಾತ್ರಕ್ಕೆ ನಾವು ಮೈಮರೆಯುವುದಲ್ಲ, ನಮ್ಮಲ್ಲಿ ವಿನೋದವನ್ನು ವ್ಯಕ್ತಪಡಿಸಿದರು ಎಂದ ಮಾತ್ರಕ್ಕೆ ನಾವು ಮೈಮರೆಯಬಾರದು. ನಾವು ಇನ್ನೂ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಅವರು ಪರಮಹಂಸರು. ಅವರು ನಮಗೆ ದರ್ಶನ ಕೊಡುವಾಗ ಆ ಮನಃಸ್ಥಿತಿಯಲ್ಲಿಯೇ ಅದನ್ನು ಕೊಡುತ್ತಿರುತ್ತಾರೆ. ಇದನ್ನು ಮನಗಾಣಬೇಕು. ಹಾಗೆ ಬಂದು ಅವರ ದರ್ಶನವನ್ನು ಮಾಡುವಾಗ ಅಂತರ್ಮುಖಿಗಳಾಗಿದ್ದಂತಹ ಅವರನ್ನು “ನಮ್ಮೆಡೆಗೆ ನೋಡಿ,  ಬಹಿರ್ಮುಖರಾಗಿ” ಅಂತ ಹೇಳುವ, ಅವರನ್ನು ಈ ಕಡೆಗೆ ಕರೆದುಕೊಂಡು ಬರುವ, ಆಗ್ರಹ ಪೂರ್ವಕವಾಗಿ, ನಿರ್ಮಲ ಮನಸ್ಸಿನಿಂದ ಅವರನ್ನು ನಮ್ಮೆಡೆಗೆ ಕರೆತಂದು ನಮ್ಮ ಕಷ್ಟಕೋಟಲೆಗಳನ್ನು ಭಗವಂತನಿಗೆ ತಲುಪಿಸಿ ಮಾರ್ಗದರ್ಶನವನ್ನು ನೀಡುವ, ಅನುಗ್ರಹವನ್ನು ನೀಡುವ, ಹಾಗೆ ನೀಡಿ ನಮ್ಮನ್ನು ಉದ್ಧರಿಸುವ ಕಾಯಕವಾಗುವಂತೆ ಮಾಡಲು ಹೇಗೆ ಸಾಧ್ಯ? ಅದು ಅವರನ್ನು ಹೊಗಳುವುದರಿಂದ ಸಾಧ್ಯ. ಪರಾಕೆಯನ್ನು ಹೇಳುವುದರಿಂದ ಸಾಧ್ಯ. ಭೋಪಾರಕ್, ಭೋಪರಾಕ್ ಎಂದು ಅವರನ್ನು ಅನನ್ಯ ಭಕ್ತಿಯಿಂದ ಕೂಗಿ ಕರೆಯುವುದರಿಂದ ಸಾಧ್ಯ. ಕೂಗಿ ಕರೆದರೆ ಬಾರದಿರನೇ ಮಹದೇವ ಅಂದಹಾಗೆ, ಕೂಗಿ ಕರೆದರೆ ಬಾರದಿರನೇ ಮಹಾಗುರು ಎನ್ನುವದನ್ನು ನಾವು ತಿಳಿದುಕೊಳ್ಳಬೇಕು.

 

ಹಾಗೆ ಕೂಗಿ ಕರೆಯುವುದು  ಕೃತ್ರಿಮವಾಗಬಾರದು. ಕೃತಕವಾಗಬಾರದು. ಅದು ಹೃದಯದ ಭಾಷೆಯಾಗಬೇಕು. ಅದು ಹೃದಯದಿಂದ ಹೃದಯಕ್ಕೆ  ಸ್ಪಷ್ಟವಾಗಿ ತಟ್ಟುವ ಭಾಷೆಯಾಗಬೇಕು. ಹಾಗಾದಾಗ ಮಾತ್ರ ಅದಕ್ಕೊಂದು ಮಹತ್ತ್ವಪೂರ್ಣವಾದ ಅರ್ಥ ಬರುತ್ತದೆ.  ಏನದು ಹಾಗೆ ಸಾಧ್ಯ ಎಂದು ಕೇಳಿದರೆ ಅನುಷ್ಠಾನಪರರಾಗಿ, ನಿತ್ಯಾನುಷ್ಠಾನನಿಷ್ಠರಾಗಿ, ದೇವದೇವತೆಗಳನ್ನೆಲ್ಲ ಆರಾಧಿಸಿ, ಭಕ್ತರಿಗಾಗಿ ಮನಸ್ಸು ಮಿಡಿಯುತ್ತ, ಬಂದು ಪೀಠಸ್ಥರಾದಾಗ ಅವರು ಮಾಡಿದ ಸಾಧನೆಗಳನ್ನು ನೆನಪಿಸಿಕೊಳ್ಳುತ್ತ ಅವರನ್ನು ಈ ಲೋಕಕ್ಕೆ ಕರೆತರುವ ಈ ಕೆಲಸಕ್ಕೆ ‘ಬಹುಪರಾಕ್’ ಎಂದು ಹೆಸರು.

 

ನಮ್ಮ ಈ ಅವಿಚ್ಛಿನ್ನ ಪರಂಪರೆಯ ಶಂಕರಾಚಾರ್ಯ ಪೀಠಕ್ಕೆ  ಮೊಟ್ಟಮೊದಲನೆಯ ಪರಾಕು ಸಲ್ಲುವುದು ಹೀಗೆ- ‘ಗುರುರಾಜ ಪಟ್ಟಭದ್ರ’.

ನಾಲ್ಕು ಶಬ್ದಗಳಿಂದ ಕೂಡಿದ ಈ ಮಾತನ್ನು ಸ್ವಲ್ಪ ಮಟ್ಟಿಗೆ ಕಾಣುವ ಪ್ರಯತ್ನ ಮಾಡೋಣ.

 

ಗುರು ಎಂದರೇ ಮಹತ್ತು. ನೀವು ಯಾರು ನಮಗೆ ಅಂತ ಹೇಳುವಾಗ ನಮ್ಮ ಸ್ಥಾನವನ್ನೂ ನಾವು ನಿವೇದಿಸಿಕೊಳ್ಳುತ್ತ  ಅವರ ಸ್ಥಾನವನ್ನು ನಾವು ಅರಿತಿದ್ದೇವೆ ಅಂಥ ತಿಳಿಯುವುದಕ್ಕಿರುವ ಶಬ್ದ. ಮಹತ್ತು ಎನ್ನುವುದನ್ನು ನಾವು ಇಲ್ಲಿ ನಿವೇದಿಸುತ್ತೇವೆ. ನೀನೇ ಗುರು, ನೀನೇ ಮಹತ್ತು, ನೀನೇ ಶ್ರೇಷ್ಠ, ನೀನೇ ಸರ್ವೋತ್ಕೃಷ್ಟ ಎಂದು  ಪ್ರಾಂಜಲಭಾವದಿಂದ ಒಪ್ಪಿಕೊಂಡು ಇದೋ ನಿನ್ನೆದುರಿಗೆ ಎಲ್ಲರೂ ಇದ್ದೇವೆ. ಈ ಕಡೆ ಕಣ್ತೆರೆ ಎಂದು ಹೇಳುವುದಕ್ಕಿರುವುದು ಈ ಪದ.

 

ಎರಡನೆಯ ಶಬ್ದ ರಾಜ. ರಾಜ ಅಂದರೆ ಪ್ರಜೆಗಳ ಕಷ್ಟ-ಸುಖಗಳನ್ನು ಪರಾಂಬರಿಸುವವನು. ಸರ್ವಸ್ವವನ್ನೂ ತಿಳಿದುಕೊಂಡವನು. ಅವರಿಗಾಗಿಯೇ  ಅವರ ಆಳಾಗಿ ದುಡಿಯುವಂತಹ ಅರಸ. ‘ನಾವಿಷ್ಣೋಃ ಪೃಥಿವೀಪತಿಃ’ ಅಂದರೆ ಪೃಥಿವೀಪತಿಯಲ್ಲಿ ಅಂದರೆ ಮಹಾರಾಜರಲ್ಲಿ  ಸಾಕ್ಷಾತ್ ನಾರಾಯಣನ ಅಂಶವನ್ನೇ ನಾವು ಕಾಣುತ್ತೇವೆ.  ಭೂಮಿಯಲ್ಲಿ ಸರ್ವಭೋಗಭಾಗ್ಯಗಳನ್ನು ಅನುಭವಿಸುವ ಅರ್ಹತೆ ಮತ್ತು ಶಕ್ತಿ  ಇದ್ದರೂ ಕೂಡ ಅದೆಲ್ಲವನ್ನೂ ಪ್ರಜಾವರ್ಗಕ್ಕಾಗಿ ವಿನಿಯೋಗಿಸುವ ಒಂದು ಹಿರಿದಾದ ಸ್ಥಾನ ಅದು. ನಮ್ಮ ಗುರುವೂ ನೀನು, ನಾರಾಯಣನ ಸ್ವರೂಪವೇ ಆದ ರಾಜನೂ ಹೌದು ಎಂದು ಬಿನ್ನವಿಸುವ ಪದ ಎರಡನೆಯ ‘ರಾಜ’ ಪದ.

 

ಪಟ್ಟ ಎನ್ನುವುದು ಮೂರನೆಯ ಪದ. ಮೊದಲೆರಡರಲ್ಲಿ ವ್ಯಕ್ತಿಯನ್ನು ಕಂಡದ್ದು. ಮೂರನೆಯದು ಅವರು ಕುಳಿತುಕೊಳ್ಳುವ ಸ್ಥಾನವನ್ನು ಕಂಡಿದ್ದು. ಅದು ಪಟ್ಟ.  ಅದು ಪೀಠ. ಪಟ್ಟಕ್ಕೂ ಪೀಠಕ್ಕೂ ಬಹಳ ವ್ಯತ್ಯಾಸವೇನಿಲ್ಲ. ಎರಡೂ ಪೀಠವೇ. ಎರಡೂ ಸಿಂಹವಿಷ್ಟರವೇ. ಅವರು ಕುಳಿತಾಗ ಎರಡೂ ಕಡೆ ಕೈಇಡುವುದು ಸಿಂಹದ ಮುಖಮುದ್ರೆಯ ವಿಷ್ಟರದಲ್ಲಿ. ಅಂದರೆ ಸಿಂಹವು ಅಡವಿಯ ರಾಜನೇ ಆದರೂ, ಅದು ಧರ್ಮದ ಕೈಗಳ ಕೆಳಗೆ, ರಾಜನ ಕರಗಳ ಕೆಳಗೆ ಇದೆ. ಅದನ್ನು ನಾನು ಮೆಟ್ಟಿ ನಿಂತಿದ್ದೇನೆ. ಅದೂ ಕೂಡ ನಮ್ಮೆದುರಿನಲ್ಲಿ ಸೌಮ್ಯವಾಗಿದೆ. ಸಾಧುವಾಗಿದೆ ಎಂದು ಪ್ರಜೆಗಳು ತಿಳಿಯುವುದಕ್ಕೆ ಸಾಧ್ಯ. ಸಿಂಹಸದೃಶರಾದರೂ ಕೂಡ ನಿಮ್ಮ ವಿಷಯದಲ್ಲಿ ತನ್ನ ಅಂಕೆಯೊಳಗೆ ಆ ಕಾಠಿಣ್ಯ ಅಡಗಿದೆ. ಕರುಣಾಮುಖ ಮಾತ್ರ ನಿಮಗಾಗಿ ತೆರೆದಿದೆ. ನಿಸ್ಸಂಕೋಚವಾಗಿ, ನಿಸ್ಸಂದೇಹವಾಗಿ ನೀವಿರಿ. ನಿರ್ಭೀತಿಯಿಂದ ನೀವಿರಿ ಎನ್ನುವುದನ್ನು ಅದು ಹೇಳುತ್ತದೆ. ಹಾಗೆ ಪಟ್ಟ ಇರುವುದು ಅದರ ಮೇಲೆ ಇರುವ  ವ್ಯಕ್ತಿಯ ಹಿರಿಮೆ-ಗರಿಮೆಗಳಿಂದ, ಘನತೆ- ಗೌರವಗಳಿಂದ. ಅದು ಬರುವುದು ಸಿದ್ಧಿ-ಸಾಧನೆಗಳಿಂದ. ಗುರುವೂ ಕೂಡ ಸಿದ್ಧಿ-ಸಾಧನೆ-ಅನುಷ್ಠಾನಗಳಿಂದ ಆ ಪೀಠದ ತೇಜಸ್ಸನ್ನು ಮೈಗೂಡಿಸಿಕೊಳ್ಳುತ್ತಾನೆ, ವೃದ್ಧಿಸಿಕೊಳ್ಳುತ್ತಾನೆ. ಆ ಪೀಠದ ಶಕ್ತಿಯನ್ನು ಕೂಡ ಇಮ್ಮಡಿಗೊಳಿಸುತ್ತಾನೆ. ನೂರ್ಮಡಿಗೊಳಿಸುತ್ತಾನೆ. ಅದೇ ದೃಷ್ಟಿಯಿಂದ ರಾಜನೂ ಸಹ ತನ್ನ ಸೇವೆ, ತನ್ನ ದೂರದೃಷ್ಟಿ ಯೋಜನೆಗಳಿಂದ, ಅಭಿವೃದ್ಧಿ ಕಾರ್ಯಗಳಿಂದ ಪ್ರಜಾರಂಜಕನಾಗುತ್ತಾನೆ. ಆ ಪೀಠಕ್ಕೆ, ಆ ಪಟ್ಟಕ್ಕೆ ಹಿರಿತನವನ್ನು ತಂದುಕೊಡುತ್ತಾನೆ. ಶ್ರೇಷ್ಠತೆಯನ್ನು, ಪಾವಿತ್ರ್ಯವನ್ನು ತಂದುಕೊಡುತ್ತಾನೆ.

 

ನಾಲ್ಕನೆಯ ಶಬ್ದ ಭದ್ರ. ಅಂದರೆ ಮಂಗಲವಾಗಲಿ, ಒಳ್ಳೆಯದು ಎಂಬರ್ಥದಲ್ಲಿ. ಯಾರಿಗೆ ಎಂಬ ಪ್ರಶ್ನೆ ಬಂದರೆ ಅದರ ಹಿಂದಿನ ಈರ್ವರು ವ್ಯಕ್ತಿಗಳಿಗೂ.ಗುರುವಿಗಾಗಲೀ ರಾಜನಿಗಾಗಲೀ. ಅದು ಅವರಿಗೆ ಅಂತಲ್ಲ. ಪ್ರಜೆಗಳಿಗೆ ಶಿಷ್ಯರಿಗೆ ಭಕ್ತರಿಗೆ ಮಂಗಲವಾಗಲಿ ಎಂದು.

 

ಹಾಗಾದರೆ ಈ ನಾಲ್ಕನ್ನೂ ಜೋಡಿಸಿ ಯೋಚಿಸಿದರೆ ‘ಗುರುರಾಜ ಪಟ್ಟಭದ್ರ’. ಗುರುವು ರಾಜನೂ, ರಾಜನು ಗುರುವೂ  ಯಾವ ಪೀಠದಲ್ಲಿದ್ದಾರೋ ಯಾವ ಪಟ್ಟದಲ್ಲಿದ್ದಾರೋ ಅಲ್ಲಿಂದ ಹೊರಡುವುದೆಲ್ಲವೂ ಅಲ್ಲಿಂದ ಹರಿಯುವುದೆಲ್ಲವೂ ಮಂಗಲಕರವಾದದ್ದು. ಶುಭಪ್ರದವಾದದ್ದು ಎಂಬ ಒಂದರ್ಥ.  

 

ಎಂತಹ ಸುಂದರವಾದ ಪದಜೋಡಣೆ ನೋಡಿ.  ಗುರು ಪಟ್ಟ ಭದ್ರ, ರಾಜ ಪಟ್ಟಭದ್ರ, ಗುರುರಾಜ ಪಟ್ಟ ಭದ್ರ ಹೀಗೆ ಹೇಗೆ ಈ ಶಬ್ದವನ್ನು ಜೋಡಿಸಿದರೂ ಎಲ್ಲವೂ ಅತ್ಯಂತ ಶುಭಕರವಾದ ಶುಭಪ್ರದವಾದ ಅರ್ಥವನ್ನೇ ಕೊಡುತ್ತವೆ. ನಮ್ಮ ರಾಮಚಂದ್ರಾಪುರಮಠದ ಈ ರಾಜಗುರು ಪೀಠಕ್ಕೆ, ಈ ಗುರುರಾಜ ಪೀಠಕ್ಕೆ,  ಭದ್ರ ಪೀಠಕ್ಕೆ, ಸದಾ ಸರ್ವದಾ ಭದ್ರತೆಯನ್ನು ಕರುಣಿಸುವ ಪೀಠಕ್ಕೆ ಇದಕ್ಕಿಂದ ಹೆಚ್ಚಿನ ಇನ್ನೊಂದು ಪರಾಕು ಇದೆಯೇ?

 

ಈಗ ವರ್ತಮಾನದ ಶ್ರೀಗಳವರನ್ನು ನಾವು ಕಾಣುವಾಗ ಈ ಎಲ್ಲ ಗುಣಗಳು ಎಷ್ಟು ಸಮೃದ್ಧವಾಗಿ ಹಾಸುಹೊಕ್ಕಾಗಿದೆ  ಇದನ್ನು ಅರ್ಥೈಸಿಕೊಳ್ಳಬೇಕು. ಅವರು ಪಟ್ಟ(ಪೀಠ)ದಲ್ಲಿ ಇದ್ದಾಗ ಆಡುವ ಮಾತೆಲ್ಲವೂ ಅನುಗ್ರಹವೇ ಆಗುತ್ತದೆ. ಮಂಗಲಕರವೇ ಆಗುತ್ತದೆ. ಇದು ಹಲವು ಶಿಷ್ಯರ ಅನುಭವ ಕೂಡ. ಅಲ್ಲಿದ್ದಾಗ ತಾನಾಡುವ ಮಾತು ಮಂಗಲಕರವಾಗುತ್ತದೆ ಎನ್ನವುದು ಸ್ವತಃ ಶ್ರೀಸಂಸ್ಥಾನಕ್ಕೂ ಗೊತ್ತು. ಆದುದರಿಂದಲೇ ಶಿಷ್ಯರ ವಿಷಯದಲ್ಲಾಗಲೀ ಯಾರ ವಿಷಯದಲ್ಲೇ ಆಗಲೀ, ಮನಸ್ಸು ವ್ಯತ್ಯಸ್ಥವಾಗುತ್ತದೆ ಎಂದು ಕಂಡು ಬಂದಾಗ ಅವರು ಪೀಠದಿಂದ ಎದ್ದು, ಮೆಟ್ಟಿಲಿನಲ್ಲಿಯೇ ನಿಂತು ಮಾತುಗಳನ್ನಾಡುತ್ತಾರೆ. ಆಗ ಅದು ಪೀಠದ ಮಾತಾಗುವುದಿಲ್ಲ. ಈ ಕಾಳಜಿಯನ್ನು ಗಮನಿಸಬೇಕು. ಇದರ ಹಿಂದಿರುವ ಅವರ ಮನಸ್ಸಿನ ಆ ಶ್ರೇಷ್ಠಭಾವವನ್ನು ಗಮನಿಸಬೇಕು.  ಅವರೆಂದೂ ಪೀಠದಲ್ಲಿ ಕುಳಿತು ಯಾರನ್ನೂ ಹೀಗಳೆದದ್ದಿಲ್ಲ. ಅನ್ಯರನ್ನು ಅಲ್ಪರನ್ನಾಗಿಸಿದ್ದಿಲ್ಲ. ಎಂತಹ ಅಲ್ಪನನ್ನೇ ಆದರೂ ಮಹತ್ತನ್ನಾಗಿಸಿದ್ದಿದೆಯೇ ಹೊರತು ಅಲ್ಪರನ್ನಾಗಿಸಿದ್ದಿಲ್ಲ. ಅವರೆಂದೂ ತಮ್ಮ ಗುರುವನ್ನು ವಿಶ್ಲೇಷಿಸುವುದಕ್ಕೆ ತೊಡಗಿದ್ದಿಲ್ಲ. ಶಿಷ್ಯರನ್ನು ಅಭಿನಂದಿಸುವುದಕ್ಕೆ ಮರೆತದ್ದಿಲ್ಲ. ಇದರ ತಾತ್ಪರ್ಯಗಳನ್ನು ಗಮನಿಸಬೇಕು.

 

ಇತ್ತೀಚಿನ ಕೆಲವು ಸಂದರ್ಭಗಳಲ್ಲಿ ನಾವು ಅನ್ಯಾನ್ಯ ಕೆಲವು ಪೀಠಾಧೀಶರನ್ನು ಗಮನಿಸುತ್ತೇವೆ. ಅವರಲ್ಲಿ ಹಲವರಿಗೆ ಪೀಠದ ಮಹಿಮೆ ತಿಳಿದಿಲ್ಲವೋ ಎಂಬ ಸಂದೇಹ ಮೂಡುವಂತಾಗುತ್ತದೆ. ಆಡುವ ಮಾತಿನಲ್ಲಿ ಗುರುತ್ವ ಕಾಣುವುದಿಲ್ಲ. ರಾಜತ್ವವು ಇಲ್ಲವೇ ಇಲ್ಲ. ಅದು ಭದ್ರವಾಗಬೇಕು ಎನ್ನುವ ಆಶಯ ಮೊದಲೇ ಕಳೆದು ಹೋದಂತಿರುತ್ತದೆ.  ಇನ್ನು ಕೆಲವು ಶಿಷ್ಯರೂ ಕೂಡ ತಾನು ಓದಿಕೊಂಡಿದ್ದೇನೆ, ತಿಳಿದುಕೊಂಡಿದ್ದೇನೆ ಎನ್ನುವ ಒಂದೇ ಕಾರಣಕ್ಕೆ ಗುರುತ್ವವನ್ನೂ, ರಾಜತ್ವವನ್ನೂ, ಗುರುರಾಜಪೀಠದ ಮಹಿಮೆಯನ್ನು ಮರೆತವರಂತೆ ಅದನ್ನು ವಿಮರ್ಶಿಸುವ, ವಿಶ್ಲೇಷಿಸುವ, ತಾನು ಸರಿ ಎಂದು ತಿಳಿದವರಂತೆ ನಡೆದುಕೊಳ್ಳುವ ಪ್ರಕ್ರಿಯೆಯನ್ನು ಗಮನಿಸುತ್ತೇವೆ. ಇದು ಆಯಾಯಾ ಬುದ್ಧಿಯ ಬಡತನ ಎಂತಲೇ ಹೇಳಬೇಕಾಗುತ್ತದೆ. ಅನೂಚಾನವಾಗಿ ಬಂದ ಈ ರಾಜಗುರು ಪೀಠದ ಪರಮಹಂಸರನ್ನು ಕಾಣುವಾಗ, ಅವರು ಬಂದು ಪೀಠಸ್ಥರಾಗಿ ಕುಳಿತಾಗ, ಅವರು ಹೇಳುವುದನ್ನು ಕೇಳುವುದಕ್ಕೆ ಕಣ್ಣುಗಳನ್ನು ಅರಳಿಸಿ, ಕಿವಿಗಳನ್ನಗಲಿಸಿ ನಾವು ಕುಳಿತಿರಬೇಕಾಗುತ್ತದೆಯೇ ಹೊರತು ಅವರ ಎದುರಿನಲ್ಲಿ ನಾವು ನಮ್ಮತನವನ್ನು ತೋರುವ, ದರ್ಪವನ್ನು ಮೆರೆಯುವ ಕೃತಿಗೆ ಮುಂದಾಗಬಾರದು. ಅವರ ವಿನೋದಕ್ಕೆ  ನಾವೂ ವಿನೋದವನ್ನಾಡುತ್ತಾ ಮುಂದೆ ಹೋಗುವುದು ಶುಭಲಕ್ಷಣವಾಗಲಾರದು. ಅವರ ಮಾತಿನ ಅರ್ಥ-ಮರ್ಮ ತಿಳಿಯದೇ ವ್ಯವಹರಿಸುವುದು ಸರಿಯಾದ ಉಪಕ್ರಮವೆನಿಸಲಾರದು. ಅಷ್ಟೇನು, ಅವರ ಮಾತೂ ಆ ಮಾತಿನ ಹಿಂದಿನ ಮರ್ಮ, ಅದಾವುದೋ ಒಳಮೂಲೆಯಲ್ಲಿ ಅಡಕವಾಗಿರುವಂಥ ಅದರ ಸಂದೇಶ ಇವುಗಳನ್ನು ಕಣ್ಣು ಕಾಣುವ, ಕಂಡು ಅರಗಿಸಿಕೊಳ್ಳುವ ಶಕ್ತಿ ಖಚಿತವಾಗಿ ಪಾಮರರಿಗಾಗಲೀ, ವಿದ್ವಾಂಸರಿಗಾಗಲೀ, ಶಾಸ್ತ್ರವೇತ್ತರಿಗಾಗಲೀ ಇಲ್ಲ. ಅದು ಪರಮಹಂಸ ಸ್ಥಿತಿಯಲ್ಲಿ ಇದ್ದ, ಅಷ್ಟೇ ಸಾಧನೆಗಳನ್ನು ಗೈಯುತ್ತಿರುವ ವ್ಯಕ್ತಿಗಳಿಗೆ, ಪರಿವ್ರಾಜಕರಿಗೆ ಇರಬಹುದೇನೋ.

 

ಆದುದರಿಂದ ಮೊದಲನೆಯ ‘ಗುರುರಾಜ ಪಟ್ಟ ಭದ್ರ’ ಎನ್ನುವ ಭೋಪರಾಕು ಪ್ರತಿಯೊಬ್ಬರ ಮೈಮನಗಳಲ್ಲಿ ಬೆಳಗುವ ಬಹುಪರಾಕ್ ಆಗಲಿ. ಪರಾಕು ನಮ್ಮನ್ನು ಸದಾ ಅನುಗ್ರಹಿಸುತ್ತಿರಲಿ, ಆಶೀರ್ವದಿಸುತ್ತಿರಲಿ. ಆ ಕೃಪಾದೃಷ್ಟಿಗೆ  ಈ ಜನಸ್ತೋಮ ಸದಾ ಶಿರಬಾಗಿ ಕಾಯುತ್ತಿರಲಿ.

 

ಇದನ್ನು ಆ ಕಣ್ಣಿಂದ ಕಾಣುವ ಪ್ರಯತ್ನ ಮಾಡಿದ್ದೇನೆ.

Leave a Reply

Your email address will not be published. Required fields are marked *