ಭಾರತೀಯರು ಬ್ರಿಟೀಷರ ದಾಸ್ಯವನ್ನು ಅನುಭವಿಸುತ್ತಿದ್ದಾಗ ಮೊಟ್ಟ ಮೊದಲು ಬ್ರಿಟೀಷರ ವಿರುದ್ಧ ಸಿಡಿದೇಳುವಂತೆ ಮಾಡಿದ್ದು ಗೋವು. ಅದು ಮೊದಲ ಸ್ವಾತಂತ್ರ್ಯ ಸಂಗ್ರಾಮದ ಕಾಲ, ಹಿಂದೂಗಳನ್ನು ಅವಮಾನಿಸಲು ಕಾಡತೂಸುಗಳಿಗೆ ಗೋವಿನ ಕೊಬ್ಬನ್ನು ಸವರಿ ಕೊಡುತ್ತಿದ್ದ ಬ್ರಿಟೀಷರ ವಿರುದ್ಧ ಮೊದಲಿಗೆ ತಿರುಗಿ ಬಿದಿದ್ದು ಮಂಗಲ್ ಪಾಂಡೆ. ಅದೇ ಬಂದೂಕು ಮೊದಲ ಬಲಿ ಪಡೆದಿದ್ದು ಬ್ರಿಟೀಷರನ್ನೇ. ಹೀಗೆ ಸ್ವಾತಂತ್ರ್ಯದ ಕಿಚ್ಚು ಹೆಚ್ಚಾಗಿ ವ್ಯವಸ್ಥಿತ ಹೋರಾಟ ರೂಪುಗೊಂಡಿತು.
ನಮ್ಮ ದೇಶಕ್ಕೆ ಗೋರಾಷ್ಟ್ರದೇಶ ಎಂದು ಹೇಳುವುದು ಗೋವುಗಳೇ ಭಾರತದ ಸಂಪತ್ತು ಎಂಬ ಕಾರಣದಿಂದಿರಬಹುದು. ಗೋವುಗಳು ಸಮೃದ್ಧಿಯ ಮೂಲ, ಅವುಗಳು ಹೆತ್ತ ತಾಯಿಗಿಂತ ಶ್ರೇಷ್ಠ ಎಂದು ಮಹಾತ್ಮ ಗಾಂಧೀಜಿ ಹೇಳುತ್ತಾರೆ. ಭಾರತ ಭಾರತವಾಗಲು ಗೋವೇ ಕಾರಣ ಎಂಬ ದೃಷ್ಟಿಯಿಂದ ಗೋವು ಭಾರತದ ಪ್ರಾಣ ಎನ್ನಬಹುದು
ನಿಜ, ಗೋವು ಕೇವಲ ಪ್ರಾಣಿಯಲ್ಲ, ಗೋವು ಈ ದೇಶದ ಪ್ರಾಣ, ಹಾಗಾಗಿಯೇ ನಮ್ಮ ಸಂಸ್ಕೃತಿಯಲ್ಲಿ ಗೋವಿಗೆ ಮಾತೆಯ ಸ್ಥಾನ ಕೊಡಲಾಗಿದೆ. ಅನಾದಿ ಕಾಲದಿಂದಲೂ ನಮ್ಮದು ಗೋಪೂಜಕರ, ಗೋರಕ್ಷಕರ ದೇಶ.
ಗೋವು ಹಾಲು ಕೊಡುವಾಗ ಯಾವ ಧರ್ಮ, ಜಾತಿ, ಪಂಥ ಎಂದು ನೋಡುವುದಿಲ್ಲ , ಹಾಗಾಗಿ ಗೋವನ್ನು ವಿಶ್ವದ ಮಾತೆ ಎಂದು ಕರೆದರು ನಮ್ಮ ಪೂರ್ವಜರು.
ನಾಲ್ಕು ಗೋ-ಗಳನ್ನು ಕರುಣಿಸುವ ಗೋವುಗಳು
• ಗೋದುಗ್ಧ – ಹಾಲು
ತನ್ಮೂಲಕ ಮೊಸರು, ಬೆಣ್ಣೆ, ಮಜ್ಜಿಗೆಗಳನ್ನು ಒದಗಿಸಿ ನಮ್ಮನ್ನು ಪೋಷಿಸುತ್ತದೆ.
• ಗೋಘೃತ – ತುಪ್ಪ
ಯಜ್ಞ-ಯಾಗಾದಿಗಳಲ್ಲಿ ತುಪ್ಪವನ್ನು ಬಳಸಿದಲ್ಲಿ ಪರಿಸರದಲ್ಲಿನ ಆಮ್ಲಜನಕ ಪ್ರಮಾಣ ವೃದ್ಧಿಸುತ್ತದೆ ಎಂದು ವಿಜ್ಞಾನ ಹೇಳಿದೆ.
• ಗೋಮಯ – ಸಗಣಿ
ಇಂಧನವಾಗಿ, ಬೆರಣಿ ಮತ್ತು ಗೋಬರ್ ಅನಿಲದ ರೂಪದಲ್ಲಿ ಬಳಸಬಹುದು.
• ಗೋಮೂತ್ರ – ಔಷಧ
ನೂರಾರು ರೋಗಗಳಿಗೆ, ಕೀಟನಾಶಕ, ಜೀವಾಮೃತ, ಬೀಜಾಮೃತ ಸೇರಿದಂತೆ ವಿವಿಧ ರೂಪದಲ್ಲಿ ಕೃಷಿಯಲ್ಲಿ ಬಳಸಲಾಗುತ್ತದೆ.
ಹೋರಿಗಳನ್ನು ಕೃಷಿಯಲ್ಲಿ ಉಳುಮೆ ಮಾಡಲು, ಗಾಣಗಳಲ್ಲಿ ಮತ್ತು ಸಾಮಾನು ಸಾಗಾಣಿಕೆ ಮಾಡಲು ಬಳಸುತ್ತಾರೆ.
ಹೀಗೆ ಮನುಷ್ಯನ ಜೀವನಕ್ಕೆ ಸಂಪೂರ್ಣವಾಗಿ ಕೊಡುಗೆಯನ್ನು ಗೋವು ಕೊಡುತ್ತದೆ. ಇದಕ್ಕೆ ಪ್ರತಿಯಾಗಿ ಮನುಷ್ಯರು 3 ಕರ್ತವ್ಯಗಳನ್ನು ಮಾಡಬೇಕೆಂದು ವೇದ ಹೇಳುತ್ತದೆ.
1. ಗೋಸೇವೆ: ಭಗವಾನ್ ಶ್ರೀಕೃಷ್ಣ ವೃಂದಾವನದಲ್ಲಿ ಯಾವ ರೀತಿಯಲ್ಲಿ ಗೋಸೇವೆ ಮಾಡಿದ್ದನೋ ಅದೇ ರೀತಿಯಲ್ಲಿ ನಾವು ಗೋಸೇವೆ ಮಾಡಬೇಕು ಎನ್ನುತ್ತಾರೆ ಬಲ್ಲವರು. ದಿನನಿತ್ಯ ಗೋವುಗಳಿಗೆ ಅಗತ್ಯ ಇರುವ ಆಹಾರ, ಆಶ್ರಯ, ಹೀಗೆ ಇನ್ನಿತರ ಸೇವೆಗಳನ್ನು ಮಾಡುವ ಮೂಲಕ ಗೋವುಗಳನ್ನು ಪ್ರೀತ್ಯಾದರಗಳಿಂದ ನೋಡಿಕೊಳ್ಳುವುದು.
‘ಸ್ಕಂದ ಪುರಾಣದ ಪ್ರಕಾರ, ಗೋವುಗಳನ್ನು ಗೌರವಾದರಗಳಿಂದ ನೋಡಿಕೊಂಡರೆ ನಮ್ಮ ಪಾಪಗಳೆಲ್ಲ ನಾಶವಾಗುತ್ತವೆ. ಗೋವುಗಳ ಸೇವೆ ಮಾಡಿದವರನ್ನು ಭಗವಾನ್ ಶ್ರೀಕೃಷ್ಣ ಎಂದಿಗೂ ಮರೆಯುವುದಿಲ್ಲವಂತೆ.’
2. ಗೋಪೂಜೆ: ಗೋವಿನಿಂದ ಬರುವ ಎಲ್ಲ ಪದಾರ್ಥಗಳನ್ನು ನಾವು ಬಳಸುತ್ತೇವೆ ಆದ್ದರಿಂದ ಗೋವು ಪವಿತ್ರ ಎಂದು ಅಲ್ಲ, ಬದಲಿಗೆ ಪವಿತ್ರವಾದ ಗೋವಿನಿಂದ ಬರುವ ಎಲ್ಲ ಪದಾರ್ಥಗಳನ್ನು ನಾವು ಬಳಸುತ್ತೇವೆ.
ಸ್ವತಃ ದೈವಸ್ವರೂಪಿಣಿಯಾಗಿ, ಅಷ್ಟೇ ಅಲ್ಲದೇ ತನ್ನಲ್ಲಿ 33ಕೋಟಿ ದೇವತೆಗಳನ್ನು ಹೊಂದಿರುವ ಗೋವು ನಡೆದಾಡುವ ದೇವಾಲಯ. ಗೋವೊಂದಕ್ಕೆ ಪೂಜೆ ಮಾಡಿದರೆ ಆ ಎಲ್ಲ ದೇವತೆಗಳಿಗೆ ಪೂಜೆ ಮಾಡಿದಂತೆ ಎಂಬ ನಂಬಿಕೆ ಇದೆ. ಗೋವಿಗೆ ಆಹಾರ (ಗೋಗ್ರಾಸ) ನೀಡಿದರೆ ಆ ಎಲ್ಲ ದೇವತೆಗಳಿಗೆ ನೈವೇದ್ಯ ಮಾಡಿದಂತೆ.
ಭಾಗವತದಲ್ಲಿ ಕೃಷ್ಣ ಹೇಳಿದ್ದಾನೆ ‘ಗೋವಿಗೆ ಪೂಜೆ ಮಾಡಿ, ಗೋಗ್ರಾಸ ಅರ್ಪಿಸಿದರೆ ಅದು ನನಗೆ ಪೂಜೆ ಮಾಡಿದಂತೆಯೇ ಸಮ’ ಎಂದು.
‘ಕನಿಷ್ಠ ಒಂದು ಬಾರಿ ಗೋಪೂಜೆ ಮಾಡಿದವನಿಗೂ, ಅದರ ಫಲ, ಅವನ ಸಾವಿನ ಅನಂತರ ನರಕದಿಂದ ಆತನನ್ನು ಪಾರು ಮಾಡುತ್ತದೆ’ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.
3. ಗೋರಕ್ಷಣೆ : ಗೋವು ನಮ್ಮೆಲ್ಲರ ಮಾತೆ ಎಂದಾದಮೇಲೆ ಅವುಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ ಆಗಿರುತ್ತದೆ.
ಸತ್ತ್ವಗುಣದ ಮಹತ್ತ್ವವನ್ನು ಭಗವದ್ಗೀತೆ ಸಾರುತ್ತದೆ. ಗೋಪೂಜೆ ಮಾಡುವುದರಿಂದ ನಮ್ಮಲ್ಲಿನ ಸತ್ತ್ವಗುಣ ಅಧಿಕವಾಗುತ್ತದೆ ಎಂದು ವೈಜ್ಞಾನಿಕ ಸಂಶೋಧನೆಗಳು ದೃಢಪಡಿಸಿವೆ. ಸತ್ತ್ವಗುಣದಿಂದ ನಮ್ಮ ನೆಮ್ಮದಿ, ಸಂತೋಷ ವೃದ್ಧಿಯಾಗುತ್ತದೆ.
ತಮ್ಮ ಆಹಾರದ ಹಕ್ಕು, ತಾವು ಬದುಕುವ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯ ಇವುಗಳ ಬಗ್ಗೆ ಮಾತನಾಡುವ ಕೆಲವರು ತಮ್ಮಂತೆಯೇ (ತಮಗಿಂತ ಪವಿತ್ರವಾದ) ಇನ್ನೊಂದು ಜೀವಿಯ ಬದುಕುವ ಹಕ್ಕಿನ ಕುರಿತು ಏಕೆ ಯೋಚಿಸುವುದಿಲ್ಲ? ಕೇವಲ ಮನುಷ್ಯರಿಗೆ ಜೀವಿಸುವ ಹಕ್ಕು ಎಂದು ದೇವರು ಬರೆದು ಕಳಿಸಿದ್ದಾನೆಯೇ? ಇಲ್ಲವಲ್ಲ. ಗೋವುಗಳಿಗೆ ಬದುಕುವ ಹಕ್ಕಿದೆ, ಅದನ್ನು ಅದರ ಪಾಡಿಗೆ ಬದಕಲು ಬಿಡಬೇಕು.
ಗೋವು ಸಾಯುವುದಕ್ಕಿಂತ ಗೋವು ಜೀವಂತ ಇರುವಾಗಲೇ ಅದರಿಂದ ಉಪಯೋಗ ಹೆಚ್ಚು, ಉತ್ಪನ್ನವೂ ಹೆಚ್ಚು. ಅನುಪಯುಕ್ತ ಗೋವುಗಳನ್ನು ಸಾಕಲಾಗದ ರೈತರು ಏನು ಮಾಡಬೇಕು ಎಂದು ಬೊಬ್ಬೆಹೊಡೆದ ಇವರಿಗೆ ಗೋವನ್ನು ಸಾಕುವ ಕಲೆಯೇ ಗೊತ್ತಿಲ್ಲದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಗೋವನ್ನು ಸರಿಯಾಗಿ ನೋಡಿಕೊಂಡರೆ ನಾವು ಗೋವನ್ನು ಸಾಕುವುದಲ್ಲ, ಗೋವೇ ನಮ್ಮನ್ನು ಸಾಕುತ್ತವೆ. ನಿರುಪಯುಕ್ತ ಗೋವು ಎಂಬುದೇ ದೊಡ್ಡ ಅನರ್ಥ, ಗೋವು ಗಂಡಿರಲಿ~ಹೆಣ್ಣಿರಲಿ, ಕರುವಿರಲಿ~ಗೊಡ್ಡಿರಲಿ, ಸಾಯುವ ಕೊನೆಯ ಕ್ಷಣದವರೆಗೂ ಸಗಣಿ ಮತ್ತು ಮೂತ್ರವನ್ನು ಕೊಡುತ್ತದೆ. ನಿಮಗೆ ಗೊತ್ತಿರಲಿ, ಹಾಲಿಗಿಂತ ಹೆಚ್ಚು ಬೆಲೆಬಾಳುತ್ತದೆ ದೇಸಿಗೋವುಗಳ ಮೂತ್ರ.
ಗೋವು ನಿಜವಾದ ಭಾರತೀಯರಿಗೆ ಪೂಜನೀಯ ಮಾತೆ. ಅವಳಿಗೆ ಅಪಮಾನ ಮಾಡುವ ಮೂಲಕ ಭಾರತೀಯರ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದು ತರವಲ್ಲ. ಜಾಗತಿಕ ತಾಪಮಾನದ ಏರಿಕೆಗೆ ಗೋಮಾಂಸ ದೊಡ್ದ ಕೊಡುಗೆ ನೀಡುತ್ತದೆ ಎಂದು ಸಂಶೋಧನೆಗಳು ಹೇಳಿವೆ. ಸದೃಢ ಭಾರತ, ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಗೋವುಗಳನ್ನು ಬದುಕಲು ಬಿಡೋಣ.
ಆದರೆ ಇಂದು ವಿದೇಶೀ ತಳಿಗಳ ಆರ್ಭಟದಿಂದಾಗಿ, ದೇಶೀ ಸಂಸ್ಕೃತಿ, ರೈತರ ಕುರಿತಾದ ಸರಕಾರದ ಉಡಾಫೆಯಿಂದಾಗಿ ಪವಿತ್ರ ಗೋಮಾತೆ ಅಳಿವಿನ ಅಂಚಿನಲ್ಲಿದ್ದಾಳೆ, ಇದು ಹೀಗೆ ಮುಂದುವರಿದಲ್ಲಿ ನಮ್ಮ ದೇಸಿ ಗೋವುಗಳನ್ನು ಕೇವಲ ಚಿತ್ರ~ವಿಗ್ರಹಗಳಲ್ಲಿ ನೋಡುವ ಪರಿಸ್ಥಿತಿ ಬರಬಹುದು. ಗೋವು ಉಳಿದರೆ ಮಾತ್ರ ನಮ್ಮ ಉಳಿವು, ಗೋವಿಲ್ಲದೇ ನಾವಿಲ್ಲ. ನಮ್ಮ ಮುಂದಿನ ಪೀಳಿಗೆಗಳಿಗೆ ನಾವು ಮಾಡಬಹುದಾದ ಬಹುದೊಡ್ಡ ಉಪಕಾರ ಅಂದರೆ ಗೋವಂಶವನ್ನು ಉಳಿಸಿಕೊಡುವುದು. ಇದೇ ನಾವು ಗೋಮಾತೆಗೆ ಸಲ್ಲಿಸಬಹುದಾದ ಅತ್ಯಲ್ಪ ಕೃತಜ್ಞತೆ.
ನಮ್ಮ ಉಳಿವಿಗಾಗಿ ಗೋವುಗಳನ್ನು ಉಳಿಸಿಕೊಳ್ಳುವುದು ಅನಿವಾರ್ಯ!
ಬನ್ನಿ, ಗೋರಾಷ್ಟ್ರ ದೇಶದಲ್ಲಿ ಗೋವುಗಳು ನಲಿವಿನಿಂದ ನಲಿಯುವಂತೆ ಮಾಡೋಣ.