ಶ್ರೀರಾಮಾನುಜಾಚಾರ್ಯರಿಗೆ ಅನೇಕ ಶಿಷ್ಯರಿದ್ದರು. ಒಬ್ಬ ಶಿಷ್ಯ ಯಾವತ್ತೂ ಯಾವುದೇ ಮಾತನಾಡದೇ ಸದಾ ಮೌನಿಯಾಗಿ ದಡ್ಡನಂತೆ ತರಗತಿಗಳಲ್ಲಿ ಕುಳಿತಿರುತ್ತಿದ್ದ. ಅವನ ಸಹಪಾಠಿಗಳು ಕಲಿತು ಮುಂದೆ ಹೋದರೂ ಇವನು ಮಾತ್ರ 3-4 ಬಾರಿ ಒಂದೇ ತರಗತಿಯಲ್ಲಿ ಕುಳಿತಿರುತ್ತಿದ್ದ.
ಒಮ್ಮೆ ರಾಮಾನುಜಾಚಾರ್ಯರು ಶಿಷ್ಯರನ್ನು ಪರೀಕ್ಷೆ ಮಾಡಲು ಒಂದು ಪ್ರಶ್ನೆಯನ್ನು ಕೇಳುತ್ತಾರೆ. ಯಾರೂ ಉತ್ತರಿಸುವುದಿಲ್ಲ. ಆಗ ಸದಾ ಮೌನವಾಗಿರುತ್ತಿದ್ದ ಶಿಷ್ಯ ನಾನು ಹೇಳುತ್ತೇನೆ ಎನ್ನುತ್ತಾನೆ.
ಆಗ ಉಳಿದ ಶಿಷ್ಯರೆಲ್ಲ ಹಾಸ್ಯದಿಂದ, “ಇವನು ಗೋಡೆಯಿದ್ದಂತೆ; ಪಾಠವನ್ನೆಲ್ಲ ಗೋಡೆಗೆ ಹೇಳಿದಂತೆ ಇವನು ಕೇಳಿದ್ದಾನೆ” ಎನ್ನುತ್ತಾರೆ.
ಆಗ ಆ ಶಿಷ್ಯ, ಆಚಾರ್ಯರ ಹತ್ತಿರ, “ಈ ಪ್ರಶ್ನೆಗೆ ನೀವು ಯಾವ ಬ್ಯಾಚಿನಲ್ಲಿ ಕೊಟ್ಟ ವಿವರಣೆಯನ್ನು ಹೇಳಬೇಕು?” ಎಂದು ಕೇಳುತ್ತಾನೆ.
ಆಗ ಆಚಾರ್ಯರು, “ನೀನು ಕೇಳಿರುವುದನೆಲ್ಲವನ್ನೂ ಹೇಳು” ಎಂದು ಕೇಳುತ್ತಾರೆ.
ಆಗ ಇವನು, ಮೊದಲನೆಯ ಬ್ಯಾಚಿನಿಂದ ಪ್ರಾರಂಭಿಸಿ ನಾಲ್ಕನೆಯ ಬ್ಯಾಚಿನವರೆಗೂ ಕೇಳಿದ ವಿವರಗಳನ್ನು ಕ್ರಮಪ್ರಕಾರವಾಗಿ ಹೇಳುತ್ತಾನೆ. ಅವನ ಉತ್ತರವನ್ನು ಕೇಳಿದ ಸಹಪಾಠಿಗಳು ಅವರೇ ಗೋಡೆಯಂತೆ ಸ್ತಬ್ಧರಾಗುತ್ತಾರೆ.
ಆದ್ದರಿಂದ ಮೌನವಾಗಿದ್ದ ಮಾತ್ರಕ್ಕೆ ‘ದಡ್ಡ’ ಎಂದು ಅರ್ಥೈಸಲಾಗದು. ಅಳೆದು, ತೂಗಿ ಮಾತನಾಡಿದಾಗ ಅದಕ್ಕೆ ಒಂದು ಬೆಲೆ ಬರುತ್ತದೆ. ‘ಮಾತು ಬೆಳ್ಳಿಯಾದರೆ ಮೌನ ಬಂಗಾರ.’