ಒಂದು ಊರಿನಲ್ಲಿ ಒಬ್ಬ ಲೋಭಿ ಇದ್ದ. ಅವನ ಬಳಿ ಸಾಕಷ್ಟು ಹಣ-ಆಸ್ತಿ ಇದ್ದರೂ, ‘ಇನ್ನಷ್ಟು ಬೇಕು’ ಎಂದು ಬಯಸುತ್ತಿದ್ದ.
ಒಂದು ದಿನ ಆ ಊರಿನ ರಾಜನನ್ನು ಭೇಟಿಯಾಗಿ- “ನನಗೊಂದಿಷ್ಟು ಆಸ್ತಿ ಕೊಡಿ” ಎಂದು ಬೇಡಿಕೊಳ್ಳುತ್ತಾನೆ.
ರಾಜ ಅವನನ್ನೊಮ್ಮೆ ಅವಲೋಕಿಸಿ- “ನಾಳೆ ಸೂರ್ಯೋದಯಕ್ಕೆ ಇಲ್ಲಿಗೆ ಬಾ; ಇಲ್ಲಿಂದ ಎಷ್ಟು ದೂರ ಸಾಧ್ಯ ಅಷ್ಟು ದೂರ ಕ್ರಮಿಸು; ಸೂರ್ಯಾಸ್ತದ ಒಳಗೆ ನೀನು ಪ್ರಾರಂಭಿಸಿದ ಸ್ಥಳಕ್ಕೆ ಬಂದು ತಲುಪಬೇಕು. ಆಗ ನೀನು ಕ್ರಮಿಸಿದಷ್ಟು ದೂರದ ಭೂಮಿ ನಿನ್ನದಾಗುತ್ತದೆ” ಎನ್ನುತ್ತಾನೆ.
ಈ ಲೋಭಿ ಮನೆಗೆ ಹೋದ. ಅನಂತರ ಬೆಳಗಿನ ಜಾವವೇ ಎದ್ದು ಸರಿಯಾಗಿ ಆಹಾರವನ್ನು ತೆಗೆದುಕೊಳ್ಳದೇ ರಾಜ ಹೇಳಿದ ಸ್ಥಳಕ್ಕೆ ಬಂದು, ಸೂರ್ಯೋದಯವಾಗುವುದನ್ನೇ ಕಾಯುತ್ತಿದ್ದು, ಸೂರ್ಯ ಉದಯಿಸಿದ ಕೂಡಲೇ ಹೆಚ್ಚು ಭೂಮಿ ಪಡೆಯುವ ದುರಾಶೆಯಿಂದ ಓಡಲು ಆರಂಭಿಸುತ್ತಾನೆ. ಮಧಾಹ್ನದ ವೇಳೆಗೆ ತುಂಬಾ ದೂರ ಬಂದಿರುತ್ತಾನೆ. ಈಗ ಹಿಂತಿರುಗಿ ಬಂದ ಸ್ಥಳಕ್ಕೆ ಹೋಗಬೇಕು. ಆದರೆ ಅವನು ಹಸಿವು, ನೀರಡಿಕೆ, ಆಯಾಸದಿಂದ ಬಳಲುತ್ತಿರುತ್ತಾನೆ. ಒಂದೊಂದು ಹೆಜ್ಜೆ ಇಡುವುದೂ ಕಷ್ಟವಾಗುತ್ತದೆ. ತೀವ್ರವಾದ ನೋವು, ಬಳಲಿಕೆ, ಆಯಾಸಗಳಿಂದ ದುರ್ಬಲನಾದ ಅವನು ಹೇಗೋ ಕಷ್ಟಪಟ್ಟು ಸೂರ್ಯಾಸ್ತ ಆಗುವ ಹೊತ್ತಿಗೆ ಅಲ್ಲಿಗೆ ಬಂದು ತಲುಪಿ, ತಲೆ ಸುತ್ತಿ ನೆಲದ ಮೇಲೆ ಬಿದ್ದು ಬಿಡುತ್ತಾನೆ. ಬಿದ್ದಲ್ಲೇ ಅವನ ಪ್ರಾಣಪಕ್ಷಿ ಹಾರಿ ಹೋಗಿರುತ್ತದೆ.
ಅಲ್ಲಿಗೆ ಬಂದ ರಾಜ ಸೇವಕರಿಗೆ ಹೇಳುತ್ತಾನೆ- “ಈ ವ್ಯಕ್ತಿಯನ್ನು ಅಲ್ಲಿಯೇ ಹೂತುಬಿಡಿ. ಅವನಿಗೆ ಬೇಕಾಗಿದ್ದ ಭೂಮಿ 3 ಅಡಿ ಅಗ ಮತ್ತು 6 ಅಡಿಗಳಷ್ಟು ಉದ್ದ ಮಾತ್ರ ಎನ್ನುತ್ತಾನೆ.
ಇವನಂತೆ ನಾವೂ ಕೂಡ ನಮಗೆಷ್ಟು ಬೇಕೆಂಬ ಅರಿವಿಲ್ಲದೇ ಆಸ್ತಿ-ಪಾಸ್ತಿ ಸಂಪಾದಿಸಲು ಧಾವಂತ ಪಟ್ಟು ಇಲ್ಲದ ರೋಗ-ರುಜಿನಗಳನ್ನು ಬರಮಾಡಿಕೊಳ್ಳುತ್ತೇವೆ. ಅನಂತರ ಪಡಬಾರದ ಪಾಡು ಪಡುತ್ತೇವೆ. ಆದ್ದರಿಂದ ಯಾವುದನ್ನೇ ಆಗಲಿ ಪಡೆಯುವುದಕ್ಕಿಂತ ಮುಂಚೆ ಅದರ ಅವಶ್ಯಕತೆ ನಮಗುಂಟೇ ಎಂದು ಆಲೋಚಿಸಿದರೆ ಅನೇಕ ಸಮಸ್ಯೆಗಳು ಕಡಿಮೆಯಾಗುತ್ತದೆ.