ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ
ನೆಮ್ಮದಿ
ಒಮ್ಮೆ ಒಬ್ಬ ರೈತ ಒಂದು ಬೃಹದಾಕಾರದ ಉಗ್ರಾಣದಲ್ಲಿ ತನ್ನ ಕೈಗಡಿಯಾರವನ್ನು ಕಳೆದುಕೊಳ್ಳುತ್ತಾನೆ. ಎಷ್ಟು ಹುಡುಕಿದರೂ ಸಾಮಾನು ಸರಂಜಾಮುಗಳ ರಾಶಿಯಲ್ಲಿ ಅವನ ಕೈಗಡಿಯಾರ ಸಿಗುವುದೇ ಇಲ್ಲ. ಆಗ ಅವನು ಅಲ್ಲಿಯೇ ಆಟವಾಡುತ್ತಿದ್ದ ಹತ್ತಾರು ಮಕ್ಕಳನ್ನು ಕರೆದು ‘ಕೈಗಡಿಯಾರವನ್ನು ಹುಡುಕಿ ಕೊಟ್ಟವರಿಗೆ ಒಂದು ಬಹುಮಾನ ಕೊಡುತ್ತೇನೆ’ ಎಂದು ಹೇಳುತ್ತಾನೆ.
ಆ ಮಕ್ಕಳು ಬಹುಮಾನದ ಆಸೆಯಿಂದ ಉಗ್ರಾಣದ ಒಳಗೆ ಹೋಗಿ, ಎಲ್ಲ ವಸ್ತುಗಳನ್ನು ಜಾಲಾಡಿ ಕೈಗಡಿಯಾರ ಸಿಗದೇ ನಿರಾಶರಾಗಿ ಹೊರಗೆ ಬರುತ್ತಾರೆ. ಆಗ ಅಲ್ಲಿಯೇ ಇದ್ದ ಒಬ್ಬ ಪುಟ್ಟ ಹುಡುಗ ನಾನು ಪ್ರಯತ್ನಿಸುತ್ತೇನೆ ಎಂದು ಹೇಳಿ, ಉಗ್ರಾಣದ ಒಳಗೆ ಹೋಗಿ ಕೆಲವೇ ನಿಮಿಷಗಳಲ್ಲಿ ಕೈಗಡಿಯಾರವನ್ನು ಹಿಡಿದುಕೊಂಡು ಬರುತ್ತಾನೆ.
ಎಲ್ಲರಿಗೂ ಆಶ್ಚರ್ಯ. ನಾವು ಇಷ್ಟು ಹೊತ್ತು ಹುಡುಕಿದರೂ ಸಿಗದೇ ಇರುವುದು ಈ ಪುಟ್ಟ ಹುಡುಗನಿಗೆ ಅದು ಹೇಗೆ ಸ್ವಲ್ಪವೇ ಸಮಯಲ್ಲಿ ಸಿಕ್ಕಿತು! ಎಂದು.
ರೈತ ಕೇಳುತ್ತಾನೆ ‘ನೀನೇನು ಮಾಡಿದೆ?’
ಆಗ ಆ ಹುಡುಗ ಹೇಳುತ್ತಾನೆ,
‘ನಾನು ಉಗ್ರಾಣದ ಒಳಗೆ ಹೋಗಿ ಸ್ವಲ್ಪ ಹೊತ್ತು ಸುಮ್ಮನೇ ಕುಳಿತುಕೊಂಡು ಗಮನವಿಟ್ಟು ಕೇಳಿದಾಗ ಟಿಕ್ ಟಿಕ್ ಎಂಬ ಸದ್ದು ಕೇಳಿತು. ಆ ಶಬ್ದ ಬರುವ ಸ್ಥಳಕ್ಕೆ ಹೋದಾಗ ಇದು ಸಿಕ್ಕಿತು’ ಎಂದು.
ಈ ಕಥೆಯ ಸಾರವೆಂದರೆ, ನಾವು ನಮ್ಮ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ಹುಡುಕಿಕೊಂಡು ಎಲ್ಲಿ ಎಲ್ಲಿಯೋ ಅಲೆಯುತ್ತೇವೆ. ಆದರೆ ಅದು ನಮ್ಮಲ್ಲಿಯೇ ಇರುತ್ತದೆ. ನಾವು ಮೌನವಾಗಿ ಕುಳಿತು ಆಲೋಚಿಸಿದಾಗ ಅದು ಹೊಳೆಯುತ್ತದೆ.