ಒಂದು ಊರಿನಲ್ಲಿ ಮಹಾಪರಾಕ್ರಮಿಯಾದ ಒಬ್ಬ ರಾಜನಿದ್ದ. ಅವನಿಗೊಬ್ಬ ವೈರಿ ರಾಜನಿದ್ದ. ಅವನು ಇವನಷ್ಟು ಬಲಶಾಲಿಯಲ್ಲ. ಆದರೆ ಆತನಿಗೆ ಈ ಬಲಿಷ್ಠ ರಾಜನನ್ನು ಹೇಗಾದರೂ ಮಾಡಿ ಸೋಲಿಸಬೇಕೆಂಬ ಹಠ ಉಂಟಾಗುತ್ತದೆ. ಅವನು ಬಹಳ ಆಲೋಚಿಸುತ್ತಾನೆ. ಯುದ್ಧದಿಂದ ಗೆಲ್ಲಲಾರದ್ದನ್ನು ಯುಕ್ತಿಯಿಂದ ಗೆಲ್ಲಬೇಕು ಎಂದು ಒಂದು ಉಪಾಯ ಮಾಡುತ್ತಾನೆ.
ತನ್ನ ರಾಜ್ಯದಲ್ಲಿರುವ ಒಬ್ಬ ಪ್ರಸಿದ್ಧ ಜ್ಯೋತಿಷಿಯನ್ನು ಆಸ್ಥಾನಕ್ಕೆ ಕರೆಸಿಕೊಂಡು, ಅವನಿಗೆ ಕೆಲವು ಸೂಚನೆಗಳನ್ನು ಕೊಟ್ಟು, ಆ ವೈರಿ ರಾಜನಲ್ಲಿಗೆ ಕಳುಹಿಸುತ್ತಾನೆ. ಜ್ಯೋತಿಷ್ಯದಲ್ಲಿ ಅಪಾರ ನಂಬಿಕೆಯಿದ್ದ ಆ ರಾಜನು ಈ ಜ್ಯೋತಿಷಿಯನ್ನು ಆದರದಿಂದ ಸತ್ಕರಿಸುತ್ತಾನೆ. ಅನಂತರ ತನ್ನ ಭವಿಷ್ಯವನ್ನು ಕೇಳುತ್ತಾನೆ. ಜ್ಯೋತಿಷಿಯು ಅವನ ಪರಾಕ್ರಮ, ಪ್ರಜೆಗಳ ಬಗ್ಗೆ ಅವನ ಕಳಕಳಿ ಎಲ್ಲವನ್ನೂ ಪ್ರಶಂಸಿಸುತ್ತಾನೆ. ಕೊನೆಯಲ್ಲಿ ನಿನ್ನ ಆಯಸ್ಸು ಇನ್ನು ಕೆಲವು ದಿನಗಳು ಮಾತ್ರ ಎನ್ನುತ್ತಾನೆ. ಆದರೆ ರಾಜ ತಾನು ಬಲಿಷ್ಠನಾಗಿರುವುದರಿಂದ ಈ ಮಾತಿಗೆ ಏನೂ ಮಹತ್ತ್ವ ಕೊಡಬೇಕಾಗಿಲ್ಲ ಎಂದುಕೊಂಡು ಜ್ಯೋತಿಷಿಯನ್ನು ಕಳುಹಿಸುತ್ತಾನೆ. ತನ್ನ ಕೆಲಸವಾದ ಅನಂತರ ಜ್ಯೋತಿಷಿ ತನ್ನ ರಾಜ್ಯಕ್ಕೆ ಹಿಂತಿರುಗುತ್ತಾನೆ.
ಜ್ಯೋತಿಷಿಯನ್ನು ಕಳುಹಿಸಿದ ಅನಂತರ ರಾಜನ ಮನಸ್ಸಿನೊಳಗೆ ಒಂದು ಸಣ್ಣ ಭಯ ಆವರಿಸುತ್ತದೆ. ಮೇಲ್ನೋಟಕ್ಕೆ ‘ತಾನು ಬಲಿಷ್ಠ; ಏನೂ ಆಗುವುದಿಲ್ಲ; ತನ್ನನ್ನು ಸೋಲಿಸುವವರಂತೂ ಯಾರೂ ಇಲ್ಲ’ ಎಂದು ಎಷ್ಟೇ ಅಂದುಕೊಂಡರೂ ಮನಸ್ಸಿನ ಒಳಗಿನ ಭಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತದೆ. ಇದರಿಂದಾಗಿ ರಾಜ ರಾಜ್ಯಭಾರದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾನೆ. ಊಟ, ತಿಂಡಿ ರುಚಿಸುವುದಿಲ್ಲ. ದಿನ ಕಳೆದಂತೆ ರಾಜ ಕೃಶನಾಗುತ್ತಾ ಕೆಲವೇ ದಿನಗಳಲ್ಲಿ ಚಿಂತೆಯಿಂದಲೇ ಪ್ರಾಣ ಬಿಡುತ್ತಾನೆ. ಸಾವಿಗಿಂತಲೂ ಸಾವಿನ ಭಯವೇ ಅವನನ್ನು ಕೊಲ್ಲುತ್ತದೆ.
ಎಂತಹ ಬಲಿಷ್ಠ ವ್ಯಕ್ತಿಯಾದರೂ ಭಯ ಆವಸಿರಿದರೆ ನಾಶ ಹೊಂದುತ್ತಾನೆ. ಧೈರ್ಯದಂತಹ ಮಿತ್ರನಿಲ್ಲ, ಭಯದಂತಹ ಶತ್ರುವಿಲ್ಲ. ನಮ್ಮ ಜೀವನದಲ್ಲಿ ಪ್ರತಿದಿನ ಎಷ್ಟೋ ಕಷ್ಟಕಾರ್ಪಣ್ಯಗಳನ್ನು ಎದುರಿಸಬೇಕಾಗುತ್ತದೆ. ಭಯಪಟ್ಟರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ‘ಧೈರ್ಯಂ ಸರ್ವತ್ರ ಸಾಧನಂ’ ಎಂಬಂತೆ ವ್ಯಕ್ತಿ ದೈಹಿಕವಾಗಿ ಬಲಿಷ್ಠನಾಗದಿದ್ದರೂ ಮಾನಸಿಕವಾಗಿ ಬಲಿಷ್ಠನಾದಾಗ ಏನನ್ನು ಬೇಕಾದರೂ ಸಾಧಿಸಬಹುದು. ಆದ್ದರಿಂದ ನಾವು ಭಯವಂತರಾಗದೆ ಧೈರ್ಯವಂತರಾಗಬೇಕು.